ಭಾನುವಾರ, ಮೇ 22, 2022
27 °C

ಒಳ್ಳೆಯ ಪಾತ್ರಗಳೇ ಗ್ಲಾಮರ್

ಎಚ್.ಎಸ್. ರೋಹಿಣಿ Updated:

ಅಕ್ಷರ ಗಾತ್ರ : | |

~ಪಾರ್ವತಿ ಪರಮೇಶ್ವರ’ದ ಪಿನ್ ಪಾಯಿಂಟ್ ವೈಶಾಲಿ, ‘ಮುತ್ತಿನ ತೋರಣ’ದ ಸುಮ, ‘ರಂಗೋಲಿ’ಯ ಅಂಜಲಿ ಪಾತ್ರಗಳಿಗೆ ಜೀವ ತುಂಬುತ್ತಿರುವ ನಟಿ ನಿರ್ಮಲಾ. ಚಟಪಟ ಮಾತನಾಡುವ ಇವರು ರಂಗಾಯಣದ ಕೂಸು.ಇದುವರೆಗೂ ಹದಿನೈದಕ್ಕೂ ಹೆಚ್ಚು ನಾಟಕಗಳು ಮತ್ತು ಹದಿನೈದಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಪ್ರಧಾನ ಪಾತ್ರ ನಿರ್ವಹಿಸಿರುವ ಅವರು ಡಬ್ಬಲ್ ಸ್ನಾತಕೋತ್ತರ ಪದವಿ ಗಳಿಸಿರುವ ಜಾಣೆ. ಬೆಂಗಳೂರಿನ ಹುಡುಗಿಯಾದ ನಿರ್ಮಲಾ ಶಾಲಾ ದಿನಗಳಿಂದಲೂ ವಿಪರೀತ ಚಟುವಟಿಕೆಯ ಹುಡುಗಿ.ಎಸ್‌ಜೆಪಿ ಕಾಲೇಜು ಮೆಟ್ಟಿಲು ಏರಿದ ಮೇಲೆ ರಜೆಯಲ್ಲಿ ‘ಬೆನಕ’ ನಾಟಕ ತಂಡದಲ್ಲಿ ತೊಡಗಿಸಿಕೊಂಡ ಅವರಿಗೆ ರಂಗಾಯಣದ ಗುಂಗು ಹತ್ತಿತು.ರಂಗಕರ್ಮಿ ರಘುನಂದನ್ ಅವರ ಕಾರ್ಯಾಗಾರದಲ್ಲಿ ಭಾಗವಹಿಸಿದ ನಂತರ ನಟನೆ ಬದುಕಾಯಿತು. ಮನೆಯವರ ಆಸೆಯಂತೆ ಶಿಕ್ಷಣದ ಜೊತೆಜೊತೆಗೆ ನಟನೆಯನ್ನು ನಿಭಾಯಿಸಿಕೊಂಡು ಬಂದ ಅವರು ಪ್ರಬುದ್ಧ ನಟಿ ಎನಿಸಿಕೊಳ್ಳುವ ಹಂಬಲ ಬೆಳೆಸಿಕೊಂಡವರು.ಶಾಲೆಯಲ್ಲಿ ಥ್ರೋಬಾಲ್, ಖೋಖೋ, ಕಬ್ಬಡಿ ಚಾಂಪಿಯನ್ ಆಗಿದ್ದ ನಿರ್ಮಲಾ ಏನೇ ಮಾಡಿದರೂ ಶ್ರದ್ಧೆಯಿಂದ ಮಾಡಬೇಕು ಎಂಬ ಮನಸ್ಥಿತಿಯವರು. 

ಬಸವಲಿಂಗಯ್ಯ, ಎನ್.ಮಂಗಳಾ, ಕೃಷ್ಣಮೂರ್ತಿ ಕವತ್ತಾರ್, ನಾಗಾಭರಣ ಅವರ ಮತ್ತು ರಂಗಶಂಕರ ಸೇರಿದಂತೆ ಹಲವು ತಂಡಗಳಲ್ಲಿ ಕೆಲಸ ಮಾಡಿರುವ ನಿರ್ಮಲಾ ನಾಟಕ ಸ್ಪರ್ಧೆಯಲ್ಲಿ ‘ಹಿಟ್ಟಿನ ಹುಂಜ’ ನಾಟಕದ ಪಾತ್ರಕ್ಕಾಗಿ ಮುಂಬೈ ಮತ್ತು ಬೆಂಗಳೂರಿನಲ್ಲಿ ಶ್ರೇಷ್ಠ ನಟಿ ಪ್ರಶಸ್ತಿ ಪಡೆದರು.ಮುಂಬೈನ ನೀರಜ್ ಕಭಿ ನಿರ್ದೇಶನದ ‘ರೋಮಿಯೋ ಜೂಲಿಯಟ್’ ನಾಟಕದಲ್ಲಿ ಜೂಲಿಯಟ್ ಪಾತ್ರ ಮಾಡಿದ್ದ ಅವರು ‘ಚಾಣಕ್ಯ’ ನಾಟಕದ ಅಲಕಾ ಪಾತ್ರಕ್ಕೆ ಬಂದ ಪ್ರಶಸ್ತಿ ಬಗ್ಗೆಯೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.ಪುತಿನಾ ಅವರ ಗೀತರೂಪಕ ‘ಹರಿಣಾ ಅಭಿಸರಣ’ದಲ್ಲಿ ಸೀತೆ ಮತ್ತು ‘ಧರೆಯೊಳಗಿನ ರಾಜಕಾರಣ’ ನಾಟಕದ ದ್ರೌಪದಿ ಪಾತ್ರಗಳಿಗೆ ಬಂದಿರುವ ಪ್ರತಿಕ್ರಿಯೆಗಳ ಬಗ್ಗೆ ಸಂತಸದಿಂದ ಹೇಳಿಕೊಳ್ಳುವ ನಿರ್ಮಲಾ, ‘ಸಜೆವಾನ್‌ನಗರದ ಸಾಧ್ವಿ’, ‘ಗೋಕುಲ ನಿರ್ಗಮನ’, ‘ಜೋಕುಮಾರಸ್ವಾಮಿ’, ‘ಆಕಾಶಬುಟ್ಟಿ’, ‘ಅಲೆಗಳಲ್ಲಿ ರಾಜಹಂಸ’ ಮುಂತಾದ ನಾಟಕಗಳಿಗೆ ಬಣ್ಣಹಚ್ಚಿದವರು. ಅವರ ಪ್ರತಿಭೆಯನ್ನು ವೇದಿಕೆಯಲ್ಲಿ ಕಂಡ ಕೆ.ಎಂ.ಚೈತನ್ಯ ತಮ್ಮ ‘ಕುಸುಮಬಾಲೆ’ ಸಾಕ್ಷ್ಯಚಿತ್ರದ ಪಾತ್ರಕ್ಕೆ ಅವರನ್ನು ಕರೆದರು. ಆ ಮೂಲಕ ನಿರ್ಮಲಾ ಕಿರುತೆರೆಗೆ ಪ್ರವೇಶ ಪಡೆದರು.‘ಕಿಚ್ಚು’, ‘ಅನುಪಮ’, ‘ಕದನ’, ‘ಅಪ್ಪ’, ‘ಕಾಲದ ಕಡಲು’, ‘ಕಾಮಧೇನು’, ‘ಮುತ್ತಿನ ತೆನೆ’, ‘ಅಮೃತಧಾರೆ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿರುವ ನಿರ್ಮಲಾಗೆ ಒಳ್ಳೆಯ ಅವಕಾಶ ಸಿಕ್ಕರೆ ಸಿನಿಮಾದಲ್ಲಿಯೂ ನಟಿಸುವಾಸೆ. ‘ಹಾರು ಹಕ್ಕಿಯನೇರಿ’ ಎಂಬ ಕಲಾತ್ಮಕ ಸಿನಿಮಾದಲ್ಲಿ ನಟಿಸಿರುವ ಅವರದು ಪಾತ್ರಗಳನ್ನು ತೂಗಿ ಅಳೆದು ಒಪ್ಪಿಕೊಳ್ಳುವ ವ್ಯಕ್ತಿತ್ವ.‘ಗುಂಡ್ರಗೋವಿ’ ಚಲನಚಿತ್ರದ ನಾಯಕ ಸತ್ಯ ನಿರ್ಮಲಾ ಅವರ ಪತಿ. ಬೆನಕ ತಂಡದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಅವರದು ಎಂಟು ವರ್ಷಗಳ ಗೆಳೆತನ.‘ಸತ್ಯ ನನ್ನ ಪತಿ ಎನ್ನುವುದಕ್ಕಿಂತ ಮುಂಚೆ ಅವರೊಬ್ಬ ಒಳ್ಳೆಯ ನಟ. ಅವರ ಪ್ರತಿಭೆಯನ್ನು ಉದ್ಯಮ ಗುರುತಿಸುವಂತಾಗಬೇಕು’ ಎನ್ನುವ ನಿರ್ಮಲಾ ಗ್ಲಾಮರ್‌ಗೆ ಪ್ರಾಮುಖ್ಯತೆ ನೀಡದ ನಟಿ. ‘ಒಳ್ಳೆಯ ಪಾತ್ರಗಳೇ ನಟಿಯ ಗ್ಲಾಮರ್’ ಎನ್ನುವುದು ನಿರ್ಮಲಾ ನಂಬಿಕೆ.‘ಎರಡು ದೃಶ್ಯದಲ್ಲಿ ನಟಿಸಿ, ನರ್ತಿಸಿ ಹೋಗುವ ಪಾತ್ರ ಮಾಡಲಾರೆ. ನಾನು ಮಾಡುವ ಪಾತ್ರ ನನಗೆ ತೃಪ್ತಿ ನೀಡಬೇಕು. ನನಗೆ ದುಡ್ಡು ಕಾಸು ಮಾಡುವಾಸೆ ಇದ್ದರೆ ಬೇರೆ ಕೆಲಸ ಹುಡುಕಿಕೊಳ್ಳಬಹುದಿತ್ತು. ನನ್ನ ಮನಸ್ಸಿಗೆ ಸಂತೋಷ ನೀಡುವ ಅಭಿನಯವೇ ನನಗಿಷ್ಟ’ ಎನ್ನುವ ಅವರು ಯಾವುದೇ ಪಾತ್ರವಾದರೂ ಸರಿ ನೂರಕ್ಕೆ ನೂರರಷ್ಟು ನ್ಯಾಯ ಒದಗಿಸುವ ಆತ್ಮವಿಶ್ವಾಸ ಹೊಂದಿದ್ದಾರೆ.‘ಒಬ್ಬೊಬ್ಬ ನಿರ್ದೇಶಕರ ಕೈಕೆಳಗೆ ಒಬ್ಬ ನಟ ಒಂದೊಂದು ರೀತಿ ನಟಿಸಿರುತ್ತಾನೆ. ನಿರ್ದೇಶಕರ ಕಲ್ಪನೆಗೆ ನ್ಯಾಯ ಒದಗಿಸಬೇಕು. ಅನುಕರಣೆ ಮಾಡಬಾರದು. ನಮ್ಮ ಜೀವನದಲ್ಲಿ ನಡೆಯದ ಪಾತ್ರಗಳಲ್ಲಿ ನಟಿಸುವ ಅವಕಾಶ ಬಂದಾಗ ಪುಸ್ತಕ ಮತ್ತು ಸಿನಿಮಾಗಳನ್ನು ನೋಡಿದ್ದು ಉಪಯುಕ್ತವಾಗುತ್ತದೆ’ ಎನ್ನುವ ನಿರ್ಮಲಾಗೆ ಸಣ್ಣ-ದೊಡ್ಡ ಪಾತ್ರ ಎಂಬ ಭೇದವಿಲ್ಲ. ನಾಲ್ಕು ದೃಶ್ಯಗಳಿದ್ದರೂ ಮಾಡುವ ಪಾತ್ರ ಜನರ ಮನಸ್ಸಿನಲ್ಲಿ ಉಳಿಯಬೇಕು ಎಂಬ ಆಸೆ ಅವರದು.‘ನಾನು ಮಾಡುವ ಪಾತ್ರ ಬೇರೆಯವರಿಗೆ ಕನಸಿನ ಪಾತ್ರವಾಗಬೇಕು’ ಎಂಬಾಸೆ ಹೊತ್ತಿರುವ ನಿರ್ಮಲಾ, ನಟಿಸಲು ಮಿತಿ ಇರಬಾರದು ಎನ್ನುತ್ತಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.