ಸೋಮವಾರ, ಜೂನ್ 21, 2021
28 °C

ಓಕುಳಿ ಪಾರ್ಟಿ

–ರೋಹಿಣಿ ಮುಂಡಾಜೆ Updated:

ಅಕ್ಷರ ಗಾತ್ರ : | |

ಪ್ರೇಮಿಗಳ ಮಾಸವನ್ನು ಹಿಂದೊತ್ತಿ ಬಂದ ಮಾರ್ಚ್‌, ಹಬ್ಬಗಳ ಮೆರವಣಿಗೆಗೆ ಮುನ್ನುಡಿ ಹಾಡಿದೆ.  ಪ್ರಕೃತಿಗೆ ನವಯೌವ್ವನ ತುಂಬುವ ಯುಗದ ಆದಿಯ ಹಬ್ಬದ ಸಡಗರ ಶುರುವಾಗಿರುವಾಗಲೇ ಬಣ್ಣದ ಮಳೆಯಲ್ಲಿ ತೋಯಲು ನಗರ ಸಜ್ಜಾಗಿದೆ.ಫಾಲ್ಗುಣ ಮಾಸದ ಹುಣ್ಣಿಮೆಗೆ ಹೋಳಿಹಬ್ಬದ ಹೆಗ್ಗಳಿಕೆ. ನಾಳೆ, ಮಾ.16ರ ಭಾನುವಾರದಿಂದ ಮುಂದಿನ ವಾರದವರೆಗೂ ಈ ಬಣ್ಣದ ಹಬ್ಬ ನಡೆಯಲಿದೆ. ಎಲ್ಲೆಲ್ಲೂ ಕಂಡುಬರುವ ಬಣ್ಣದ ಬುಟ್ಟಿಗಳು ಹೋಳಿಯ ಬಣ್ಣದಲ್ಲಿ ಮಿಂದೆದ್ದು ಸಂಭ್ರಮಿಸುವಂತೆ ಆಹ್ವಾನ ನೀಡುವಂತಿವೆ. ವಾರದ ರಜಾ ದಿನವೇ ಹಬ್ಬ ಬಂದಿರುವುದರಿಂದ ಕೂಲಿ ಕಾರ್ಮಿಕರಿಗೂ ಹಬ್ಬವನ್ನು ಭರ್ಜರಿಯಾಗಿ ಆನಂದಿಸಲು ಸಾಧ್ಯವಾಗಿದೆ.ಬರಿಯ ಬಣ್ಣಗಳ ಎರಚಾಟದಿಂದ ಹಬ್ಬಕ್ಕೆ ರಂಗು ಬರುವುದಿಲ್ಲ. ಪಾರ್ಟಿ ಮಾಡಿದರೇ ಹಬ್ಬವಾಗುವುದು ಎನ್ನುವವರ ಖುಷಿಗಾಗಿ ನಗರದ ಹತ್ತಾರು ಕಡೆ ‘ಹೋಳಿ ಫೆಸ್ಟಿವಲ್‌ ಪಾರ್ಟಿ’ಗಳು ಏರ್ಪಾಡಾಗಿವೆ. ಹೌದಲ್ಲ? ಆಪ್ತೇಷ್ಟರಿಗೆ, ಬಂಧುಮಿತ್ರರಿಗೆ ಕೊನೆಗೆ ಕಣ್ಣಿಗೆ ಬಿದ್ದವರಿಗೆಲ್ಲ ಬಣ್ಣ ಬಳಿದು, ಓಕುಳಿ ಎರಚಿ ಸಂಭ್ರಮಿಸುತ್ತಿದ್ದ ಹಬ್ಬವೊಂದು ಪ್ರತ್ಯೇಕ ಗುಂಪು ಕಟ್ಟಿಕೊಂಡು ‘ಸಮಾನ ಮನಸ್ಕರ’ ಸಾಂಗತ್ಯದಲ್ಲಿ ಮೋಜು–ಮಸ್ತಿ ಮಾಡುವ ಹಬ್ಬವಾಗಿ ಪರಿಣಮಿಸುತ್ತಿದೆ.ರಂಗ್‌ ಬರ್‌ಸಾ...

ನಿಗದಿತ ಶುಲ್ಕ ಪಾವತಿಸಿ ನಾಲ್ಕರಿಂದ ಆರು ಗಂಟೆ ಅವಧಿ ನಡೆಯುವ ಪಾರ್ಟಿಗಳಲ್ಲಿ ನೈಸರ್ಗಿಕ ಬಣ್ಣಗಳನ್ನು ಬಳಸುವುದು ಒಂದು ವಿಶೇಷ. ಓಕುಳಿಯಾಡಿದ ನಂತರ ‘ರೇನ್‌ ಡ್ಯಾನ್ಸ್‌’ (ಕೃತಕ ಮಳೆಯಲ್ಲಿ ನರ್ತಿಸುವುದು) ಪ್ರಮುಖ ಆಕರ್ಷಣೆ. ಇದಾದ ಬಳಿಕ ಸ್ನಾನ ಮಾಡಲು, ಬಟ್ಟೆ ಬದಲಾಯಿಸಲು ಪ್ರತ್ಯೇಕ ಕೊಠಡಿಗಳ ವ್ಯವಸ್ಥೆಯೂ ಇರುತ್ತದೆ. ಒಬ್ಬೊಬ್ಬರೂ ಇಲ್ಲವೇ ಗುಂಪಿನಲ್ಲಿ ನೋಂದಣಿ ಮಾಡಿಕೊಂಡಿದ್ದರೆ ಅಷ್ಟೂ ಮಂದಿ ಒಂದೇ ಲಾಕರ್‌ನಲ್ಲಿ ತಮ್ಮ ವಸ್ತುಗಳನ್ನು ಇರಿಸಿ, ನೆಮ್ಮದಿಯಿಂದ ಓಕುಳಿಯಾಡಿ ಮಳೆಗೆ ಮೈಯೊಡ್ಡಿ ಮುಂದಿನ ಹಂತವಾದ ಕುಡಿತ/ಕುಣಿತ/ಭೋಜನಕ್ಕೆ ಅಣಿಯಾಗಬಹುದು. ಕುಡಿತ/ಕುಣಿತದ ಲಗಾಮು ಹಿಡಿಯಲು ಹೆಸರಾಂತ ಡಿಜೆಗಳು, ಕಾರ್ಯಕ್ರಮ ನಿರೂಪಕರು ಇರುತ್ತಾರೆ. ರಂಗ್‌ ಬರ್‌ಸಾ... ಈ ಪಾರ್ಟಿಗಳಿಗೆ ವಾರಕ್ಕೂ ಮೊದಲೇ ಬುಕಿಂಗ್‌ ಶುರುವಾಗಿದೆ. ಪಾರ್ಟಿ ಆಯೋಜಕರು ಒದಗಿಸುವ ಸೌಕರ್ಯಗಳಿಗೆ ಸರಿಯಾಗಿ ಶುಲ್ಕ ನಿಗದಿಯಾಗಿರುತ್ತದೆ. ಕೆಲವು ಕಡೆ ಶುಲ್ಕ 500/600 ರೂಪಾಯಿಗಳಿಂದ ಆರಂಭವಾದರೆ, ಇನ್ನು ಕೆಲವು ಕಡೆ ಸಾವಿರದ ಗಡಿ ದಾಟಿದೆ.ನಾಗವಾರ ರಿಂಗ್‌ ರಸ್ತೆಯಲ್ಲಿರುವ ಮಾನ್ಯತಾ ಟೆಕ್‌ಪಾರ್ಕ್‌ನೊಳಗೆ ಮ್ಯಾನ್‌ಫೋ ಕನ್ವೆನ್ಷನ್‌ ಹಾಲ್‌ನಲ್ಲಿ ಇಂತಹುದೊಂದು ಭರ್ಜರಿ ಹೋಳಿ ಪಾರ್ಟಿ ಭಾನುವಾರ ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ ನಡೆಯಲಿದೆ. ‘ಸಾಕೆನ್ನುವಷ್ಟು ಪೇಯಗಳನ್ನು ಕುಂತಲ್ಲಿಗೆ ನಿಂತಲ್ಲಿಗೆ ಒದಗಿಸುವ, ಬೇಕೆನ್ನುವ ಸ್ನ್ಯಾಕ್ಸ್‌ ಮತ್ತು ಇತರ ಖಾದ್ಯಗಳನ್ನು ಪೂರೈಸುವ ಸೌಕರ್ಯವೂ ಇದೆ. ಬಾಲಿವುಡ್‌ ಹಾಡುಗಳಿಗೆ ನೃತ್ಯ ಮಾಡಬಹುದು. ಮೋಜಿನ ಆಟಗಳನ್ನು ಆಡುತ್ತಾ ಕೃತಕ ಕೊಳದಲ್ಲಿ ಕೃತಕ ಮಳೆಯಲ್ಲಿ ತೋಯುತ್ತಾ ಢೋಲ್‌ ನಗಾಡದ ಅಬ್ಬರದಲ್ಲಿ ಈ ಎಲ್ಲಾ ಮನರಂಜನೆಯನ್ನು ಅನುಭವಿಸುವುದು ಅಪೂರ್ವ ಅನುಭವವಾಗಲಿದೆ’ ಎಂದಿದ್ದಾರೆ ಮ್ಯಾನ್‌ಫ್ಹೋ ಕನ್ವೆನ್ಷನ್ ಸೆಂಟರ್‌ನ ಅರ್‌ವಿಂದ್ ಪರೇಖ್.ಮಾರತ್ತಹಳ್ಳಿಯ ಚಿನ್ನಪ್ಪಹಳ್ಳಿಯಲ್ಲಿರುವ ಇ–ಜೋನ್‌ ಕ್ಲಬ್‌ ಪ್ರೈವೇಟ್‌ ಲಿಮಿಟೆಡ್‌ ಭಾನುವಾರ ವಿದ್ಯಾರ್ಥಿಗಳಿಗಾಗಿಯೇ ಹೋಳಿ ಪಾರ್ಟಿ ಆಯೋಜಿಸಿದೆ. ‘ರಂಗೀಲಾ 2014’ ಹೆಸರಿನ ಈ ಮೋಜಿನ ಉತ್ಸವದಲ್ಲಿ ಡೋಲು, ಡೊಳ್ಳು ಕುಣಿತ, ಮಳೆನೃತ್ಯ ಮತ್ತು ಆಧುನಿಕ ಲೈಫ್‌ಸ್ಟೈಲ್‌ಗೆ ಬೇಕುಬೇಕಾದ ವಸ್ತುಗಳನ್ನು ಮಾರಾಟ ಮಾಡುವ ಫ್ಲೀ ಮಾರ್ಕೆಟ್‌ ಕೂಡ ಇರುತ್ತದೆ. ಡಿಜೆ ಸಮೀರ್‌ ಝೈನಿ ಅವರು ಬಾಲಿವುಡ್‌ ಹಾಡುಗಳನ್ನು ಪ್ಲೇ ಮಾಡುತ್ತಾ ಡಾನ್ಸ್ ಫ್ಲೋರ್‌ಗೆ ಜೋಶ್‌ ತುಂಬಲಿದ್ದಾರೆ.

ವಿದ್ಯಾರ್ಥಿಗಳು ಒಂಟಿಯಾಗಿ, ಜಂಟಿಯಾಗಿ ಇಲ್ಲವೇ ಮೂವರು ಹುಡುಗರು ಮತ್ತು ಇಬ್ಬರು ಹುಡುಗಿಯರ ಜತೆ ನೋಂದಣಿ ಮಾಡಿಸಿಕೊಳ್ಳುವ ಅವಕಾಶವನ್ನು ರಿಯಾಯಿತಿ ದರದಲ್ಲಿ ಪಡೆಯಬಹುದಂತೆ. ಒಂದೊಂದು ವಿಭಾಗಕ್ಕೂ ಪ್ರವೇಶ ಶುಲ್ಕ 550ರಿಂದ 2,750 ರೂಪಾಯಿವರೆಗೂ ನಿಗದಿಯಾಗಿದೆ.ಇದು ಕೆಲವು ಸ್ಯಾಂಪಲ್‌ಗಳಷ್ಟೇ. ಓಕುಳಿಯಾಟವನ್ನು ವರ್ಷದ ಸ್ಮರಣೀಯ ದಿನವಾಗಿ ಅನುಭವಿಸಲು ಹೋಳಿಪ್ರಿಯರು ಎಲ್ಲಾ ಕಡೆ ಸಜ್ಜಾಗಿದ್ದಾರೆ. ಪೌರಾಣಿಕ ಕಥೆಯಂತೆ, ಸಾಂಪ್ರದಾಯಿಕ ರೀತಿಯಂತೆ ಓಕುಳಿಯಾಡಿ ಕಾಮನ ಪ್ರತಿಕೃತಿ ದಹಿಸಿ ಹಬ್ಬದೂಟಕ್ಕೆ ಅಣಿಯಾಗುವ ಸಿದ್ಧ ಮಾದರಿಯ ಹಬ್ಬದಾಚರಣೆಗಿಂತ ಹೀಗೆ ಎಲ್ಲ ಮತದ ಹೊಟ್ಟ ತೂರಿ ಹಬ್ಬದ ಬಣ್ಣವನ್ನು ಮೈಮನಕ್ಕೆ ಏರಿಸಿಕೊಳ್ಳುವುದೇ ಅಚ್ಚುಮೆಚ್ಚಾಗಿದೆ. ಹಿರಿಯರಿಗೆ ಹಬ್ಬದ ಶುಭಾಶಯ ಕೋರಿ, ಆಶೀರ್ವಾದದೊಂದಿಗೆ ಉಡುಗೊರೆಯನ್ನೂ ಗಿಟ್ಟಿಸಿಕೊಂಡು ಸಂಭ್ರಮಿಸುವ ಜಮಾನ ಇದಲ್ಲ ಎನ್ನುತ್ತಾರೆ ಪಾರ್ಟಿವಾಲಾಗಳು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.