ಶನಿವಾರ, ಮೇ 8, 2021
20 °C

ಕಂದಕ ಸೃಷ್ಟಿಸಿದ ಮೋದಿ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಮುಂಬರುವ ಲೋಕಸಭಾ ಚುನಾವಣೆಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ ಬೆನ್ನಲ್ಲೇ ವಿಭಿನ್ನ ವ್ಯಾಖ್ಯಾನ, ರಾಜಕೀಯ ವಿಶ್ಲೇಷಣೆಗಳು ಹೊರಬೀಳತೊಡಗಿವೆ.ಬಿಜೆಪಿಯೊಳಗಿನ ಈ ಬೆಳವಣಿಗೆ `ತಲೆಮಾರುಗಳ ಬದಲಾವಣೆ' ಮಾತ್ರವಲ್ಲ, ಪಕ್ಷದೊಳಗಿನ `ಗುಂಪುಗಾರಿಕೆ'ಗೆ ಸ್ಪಷ್ಟ ನಿದರ್ಶನ. ಬಿಜೆಪಿ ಒಳಗಿನ ಈ ಬೆಳವಣಿಗೆ ದೇಶದ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.ಇದು ತಲೆಮಾರುಗಳ ಅಂತರ ಅಥವಾ ಬದಲಾವಣೆ ಅಲ್ಲ. ಏಕೆಂದರೆ ಮೋದಿ ಚಿಕ್ಕವರೇನಲ್ಲ. ಅವರಿಗೆ 62 ವರ್ಷ ವಯಸ್ಸಾಗಿದೆ. ಬಿಜೆಪಿಯ ಇತರ ನಾಯಕರೂ ಅದೇ ವಯೋಮಾನದವರಾಗಿದ್ದಾರೆ ಎಂದು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕಿ ಜೋಯಾ ಹಸನ್ ಅಭಿಪ್ರಾಯಪಟ್ಟಿದ್ದಾರೆ.`ಮೋದಿ ಅವರಿಗೆ ಬಡ್ತಿ ನೀಡಿರುವುದು ಪಕ್ಷದ ಆಂತರಿಕ ವಿಚಾರವಾದರೂ ಈ ದೇಶದ ದೊಡ್ಡ ಶಕ್ತಿಯಾಗಿರುವ ಬಹು ಸಂಸ್ಕೃತಿ ಮತ್ತು ನ್ಯಾಯಕ್ಕೆ ಮಾರಕವಾಗಲಿದೆ' ಎಂದು ಅವರು ಹೇಳಿದ್ದಾರೆ.`ಮೋದಿ ನೇಮಕ ಬಿಜೆಪಿಯಲ್ಲಿಯ ಗುಂಪುಗಾರಿಕೆ ತೀವ್ರತೆಯನ್ನು ಸಂಕೇತಿಸುತ್ತಿದೆ. ಅಡ್ವಾಣಿ ಪರ ಗುಂಪು ಗೋವಾ ಕಾರ್ಯಕಾರಿಣಿಯಿಂದ ದೂರ ಉಳಿದಿದ್ದು, ಅಧಿಕಾರ ಹಸ್ತಾಂತರ ಸುಗಮವಾಗಿ ಆಗಲಾರದು ಎಂದು ತೋರುತ್ತದೆ' ಎಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ನಿಸಾರ್ ಉಲ್-ಹಕ್ ವಿಶ್ಲೇಷಿಸುತ್ತಾರೆ.ಇದಕ್ಕೆ ವ್ಯತಿರಿಕ್ತವಾದ ವಾದ ಮಂಡಿಸಿರುವ ರಾಜಕೀಯ ವಿಶ್ಲೇಷಕ ಭಾಸ್ಕರ್ ರಾವ್, `ಇದೊಂದು ತಲೆಮಾರುಗಳ ಬದಲಾವಣೆ. ಪಕ್ಷದಲ್ಲಿ ಹೊಸ ಯುಗವೊಂದಕ್ಕೆ ಮೋದಿ ನೇಮಕ ನಾಂದಿ ಹಾಡಲಿದೆ' ಎಂದಿದ್ದಾರೆ.`ಈ ಅನಿರೀಕ್ಷಿತ ಬದಲಾವಣೆಯ ಪರಿಣಾಮದ ಫಲಿತಾಂಶ ಸ್ಪಷ್ಟವಾಗಿ ಗೋಚರಿಸಲು ಇನ್ನೂ ಕೆಲವು ದಿನಗಳು ಬೇಕಾಗಬಹುದು. ಬಹುತೇಕ 8-10 ತಿಂಗಳಲ್ಲಿ ಬದಲಾವಣೆ ಪಕ್ಷಕ್ಕೆ ಯಾವ ರೀತಿ ರಾಜಕೀಯ ಲಾಭ ತರಬಹುದು ಎಂಬ ಕುರಿತು ಸುಳಿವು ದೊರೆಯಲಿದೆ. ಮೋದಿ ನೇಮಕದಿಂದಲೇ ಬಿಜೆಪಿ 2014ರ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಭಾರಿಸುತ್ತದೆ ಎಂದು ಭಾವಿಸಲಾಗದು. ಕೆಲವು ರಾಜ್ಯಗಳಲ್ಲಿ ಹೊರತು ಪಡಿಸಿದರೆ ಉಳಿದ ರಾಜ್ಯಗಳಲ್ಲಿ ಬಿಜೆಪಿಗೆ ಮೋದಿ ನೇಮಕ ಹೇಳಿಕೊಳ್ಳುವಂತಹ ದೊಡ್ಡ ಲಾಭವನ್ನೇನೂ ತಂದು ಕೊಡಲಾರದು' ಎಂಬುವುದು ಹಸನ್ ಅನಿಸಿಕೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.