ಬುಧವಾರ, ಜನವರಿ 22, 2020
25 °C

ಕಟ್ಟಡ ತೆರವಿಗೆ ವ್ಯಾಪಾರಿಗಳ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆ.ಆರ್‌.ಮಾರುಕಟ್ಟೆ ಪಶ್ಚಿಮ­ದ್ವಾರದ ಸೇತುರಾವ್‌ ರಸ್ತೆ ಬಳಿಯ ‘ನೈರುತ್ಯ ತಿರುವಿನ ಹೊಸ ಮಾರುಕಟ್ಟೆಯ ಮಳಿಗೆ’ (ಎಸ್‌ಡಬ್ಲ್ಯು­ಸಿಎನ್‌ಸಿಎಸ್‌) ಕಟ್ಟಡ­ವನ್ನು ತೆರವು­ಗೊಳಿಸಲು ಮಳಿಗೆಯ ವ್ಯಾಪಾರಿಗಳು ವಿರೋಧ ವ್ಯಕ್ತ­ಪಡಿಸಿದ್ದಾರೆ. ‘ಕಟ್ಟಡದಲ್ಲಿ ಒಟ್ಟು 17 ಮಳಿಗೆ­ಗಳಿವೆ.

ಇಲ್ಲಿನ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಕಟ್ಟಡ ತೆರವುಗೊಳಿಸಲು ಬಿಬಿಎಂಪಿ ಮುಂದಾ­ಗಿದೆ. ಅಲ್ಲದೆ ಕಾರ್ಯಾಚರಣೆಗೆ ಮುನ್ನ ನಮಗೆ ಯಾವುದೆ ನೋಟಿಸ್‌ ನೀಡಿಲ್ಲ. ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೂ ಕಾರ್ಯಾಚರಣೆ ನಡೆಯಲು  ಬಿಡು­ವುದಿಲ್ಲ’ ಎಂದು ವ್ಯಾಪಾರಿ ಮಹೇಶ್‌ ಹೇಳಿದರು.ಈ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಎಂ.ಲಕ್ಷ್ಮೀನಾರಾಯಣ, ‘ಸುಮಾರು ಐವತ್ತು ವರ್ಷದ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಕಟ್ಟಡ ಕೆಡವದೇ ಇದ್ದರೆ ಅದು ಕುಸಿದು ಬಿದ್ದು ಪ್ರಾಣ­ಹಾನಿ­ಯಾಗುವ ಸಂಭವವಿದೆ. ಈ ಬಗ್ಗೆ ಕಟ್ಟಡದಲ್ಲಿರುವ ವ್ಯಾಪಾರಿಗಳಿಗೂ ತಿಳಿಸಲಾಗಿದೆ. ಕಟ್ಟಡದಲ್ಲಿರುವ ವ್ಯಾಪಾರಿ­­­ಗಳಿಗೆ ಮಾರುಕಟ್ಟೆಯ ಬೇರೆ ಕಡೆ ಮಳಿಗೆಗಳ ವ್ಯವಸ್ಥೆ ಮಾಡ­ಲಾಗುವುದು’ ಎಂದರು.‘ಸೋಮವಾರ ರಾತ್ರಿ ಕಾರ್ಯಾ­ಚರಣೆ ನಡೆಸಿ ಸೇತುರಾವ್‌ ರಸ್ತೆಯ ಪಾದಚಾರಿ ಮಾರ್ಗದ ಗ್ರಿಲ್‌ ತೆರವುಗೊಳಿಸಲಾಗಿದೆ. ಮಂಗಳವಾರ ಕಟ್ಟಡ ತೆರವು ಕಾರ್ಯಾಚರಣೆಗೆ ಸಿದ್ಧತೆ ನಡೆಸಲಾಗಿತ್ತು. ಆದರೆ, ವ್ಯಾಪಾರಿಗಳ ವಿರೋಧದ ಕಾರಣದಿಂದ ಕಾರ್ಯಾ­ಚರಣೆ­ಯನ್ನು ತಾತ್ಕಾಲಿಕ­ವಾಗಿ ನಿಲ್ಲಿಸ­ಲಾಗಿದೆ. ವ್ಯಾಪಾರಿಗಳ ಮನವೊಲಿಸಿ ಕಟ್ಟಡ ತೆರವುಗೊಳಿಸಲಾಗುವುದು’ ಎಂದು ಅವರು ತಿಳಿಸಿದರು.‘ಸೇತುರಾವ್‌ ರಸ್ತೆಯನ್ನು ಕಾಂಕ್ರಿಟ್‌ ರಸ್ತೆ­ಯಾಗಿ ಅಭಿವೃದ್ಧಿ ಪಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಇದ­ಕ್ಕಾಗಿ ರಸ್ತೆಯ ಒಂದು ಭಾಗದ ಪಾದಚಾರಿ ಮಾರ್ಗ ತೆರವುಗೊಳಿಸು­ವುದು ಅನಿವಾರ್ಯ. ಈ ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ಮಾರು­ಕಟ್ಟೆಯ ಪಕ್ಕದ ರಸ್ತೆಯ ಬದಿಯಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ’ ಎಂದು ಹೇಳಿದರು.ಪಾದಚಾರಿ ಮಾರ್ಗದ ಗ್ರಿಲ್‌ ತೆರವುಗೊಳಿಸಿದ್ದನ್ನು ವಿರೋಧಿಸಿ ಬೀದಿ ಬದಿ ವ್ಯಾಪಾರಿಗಳು ಮಂಗಳವಾರ ಕೆಲ ಕಾಲ ಪ್ರತಿಭಟನೆ ನಡೆಸಿದರು. ವ್ಯಾಪಾರಿ­ಗಳನ್ನು ಒಕ್ಕಲೆಬ್ಬಿಸು­ವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈ ಬಿಟ್ಟರು.

ಪ್ರತಿಕ್ರಿಯಿಸಿ (+)