ಕಟ್ಟೆ ಹೂಳು ತೆಗೆದ ಮಹಿಳೆಯರು

ಮಳವಳ್ಳಿ: ಮಹಿಳೆ ಮನೆಗೆಲಸಕ್ಕೂ ಸೈ, ಹೊರಗಿನ ಕೆಲಸಕ್ಕೂ ಸೈ ಎನ್ನುವುದನ್ನು ತಾಲ್ಲೂಕಿನ ನೆಲಮಾಕನಹಳ್ಳಿ ಗ್ರಾಮದ ಕೂಲಿ ಕಾರ್ಮಿಕ ಮಹಿಳೆಯರು ಸಾಬೀತು ಮಾಡಿದ್ದಾರೆ.
ಗ್ರಾಮದ ಹೊರವಲಯದಲ್ಲಿರುವ ಕೆಂಪಣ್ಣನಕಟ್ಟೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಹೂಳು ತೆಗೆದು ಕಟ್ಟೆಗೆ ಮರು ಜೀವ ನೀಡಿದ್ದಾರೆ. 50 ಮಹಿಳೆಯರು ಸೇರಿ 20 ದಿನಗಳ ಕಾಲ ಕೆಲಸ ಮಾಡಿ ಹೂಳು ತೆಗೆದು ಸಂಪೂರ್ಣ ಸ್ವಚ್ಛ ಮಾಡಿದ್ದಾರೆ.
ಈ ಕಟ್ಟೆಯಲ್ಲಿ ಮಾರ್ಚ್ 19ರಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸದಸ್ಯರು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಮಹಿಳಾ ಅಧಿಕಾರಿಗಳು, ಜನವಾದಿ ಮಹಿಳಾ ಸಂಘಟನೆಯ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ಈ ಆಚರಣೆ ಮೂಲಕ ಶ್ರಮದಾನ ಮಾಡಿರುವವರಿಗೆ ಕೃತಜ್ಞತೆ ಸಲ್ಲಿಸಿದಂತೆಯೂ ಆಗುತ್ತದೆ ಎಂಬುದು ಸಂಘಟಕರ ಅಭಿಪ್ರಾಯ.
‘ಮಹಿಳೆಯರೇ ಸೇರಿ ಕೆರೆಯನ್ನು ಸ್ವಚ್ಛ ಮಾಡಿರುವುದು ವಿಶೇಷ. ಹೀಗಾಗಿ ಅರ್ಥಪೂರ್ಣವಾಗಿ ಕಟ್ಟೆಯಲ್ಲೇ ಮಹಿಳಾ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ’ ಎಂದು ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ದೇವಿ ತಿಳಿಸಿದರು.
ಕಳೆದ ವರ್ಷ ಮಳೆ ಬಾರದೇ ಕೂಲಿ ಕೆಲಸ ಹುಡುಕಿಕೊಂಡು ಗುಳೆ ಹೋಗುತ್ತಿದ್ದ ಸಂದರ್ಭದಲ್ಲಿ ನೆಲಮಾಕನಹಳ್ಳಿಯ ಕೂಲಿ ಕಾರ್ಮಿಕ ಮಹಿಳೆಯರು ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಬಳಸಿಕೊಂಡರು. ಜೀವ ಜಲ ರಕ್ಷಣೆಗೆ ಪೂರಕವಾಗಿ ಕಟ್ಟೆಯಲ್ಲಿನ ಹೂಳು ತೆಗೆದು ಸಾರ್ಥಕತೆ ಮೆರೆದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.