ಶುಕ್ರವಾರ, ಜನವರಿ 24, 2020
21 °C

ಕಠಿಣ ‘ಪಯಣ’

ಶ್ಯಾಮ್‌ Updated:

ಅಕ್ಷರ ಗಾತ್ರ : | |

ಕಠಿಣ ‘ಪಯಣ’

ನಾನು ಸಲಿಂಗಿ ಎಂದು ತಿಳಿದಾಗ ನನ್ನನ್ನು ನಾನೇ ನಂಬಲಿಲ್ಲ. ಇದು ವಾಸ್ತವಕ್ಕೆ ವಿರುದ್ಧ­ವಾಗಿದ್ದರಿಂದ ವಿಚಲಿತ­ನಾದೆ. ನನ್ನಲ್ಲೇನೋ ದೋಷ­­ವಿದೆ ಎಂದು ದೇವರ ಮೊರೆ ಹೋದೆ.ನಂತರ ನನಗೆ ವಾಸ್ತವದ ಅರಿವಾಯಿತು. ನನ್ನ ಬಯಕೆಗಳು ಹುಟ್ಟಿನಿಂದ ಬಂದಿದ್ದು ಎಂದು ಅರ್ಥ­ವಾಯಿತು. ಆಗ ನನ್ನ  ಬಯಕೆಗಳಿಗೆ ಸರಿ ಹೊಂದುವ ಸಂಗಾತಿ­ಯ ಹುಡುಕಾಟ ಆರಂಭಿಸಿದೆ. ಆದರೆ ಕದ್ದು ಮುಚ್ಚಿ ಹುಡುಕುವುದು ಎಷ್ಟು ದಿನ? ಹೀಗಾಗಿ ನನ್ನನ್ನು ನಾನು ಹೊರ ಜಗತ್ತಿಗೆ ತೆರೆದು­ಕೊಳ್ಳುವ ಪ್ರಯತ್ನಕ್ಕೆ ಕೈಹಾಕಿದೆ. ಮಾಧ್ಯಮಗಳ ಮೂಲಕ ನನ್ನ ಪರಿಚಯ ಮಾಡಿಕೊಂಡೆ. ಆ ಮೂಲಕವಾದರೂ ನನ್ನಂತಿರುವ ಇತರರು ಹೊರ ಜಗತ್ತಿನೊಂದಿಗೆ ಗುರುತಿಸಿಕೊಂಡಾರು ಎಂಬುದು ನನ್ನ ಬಯಕೆಯಾಗಿತ್ತು.ದಿನ ಕಳೆದಂತೆ ನನ್ನ ಬಗ್ಗೆ ಅರಿತ ನನ್ನ ಬಾಲ್ಯದ ಸ್ನೇಹಿತರು ನನ್ನಿಂದ ದೂರವಾದರು. ನನ್ನಂತೆಯೇ ಬಯಕೆ ಹೊಂದಿದ ಹೊಸ ಸ್ನೇಹಿತರ ಗುಂಪು ಬೆಳೆಯಿತು. ನನ್ನ ಅಕ್ಕನೇ ಗೂಂಡಾಗಳನ್ನು ಬಿಟ್ಟು ನನ್ನನ್ನು ಹೊಡೆಸುವ ಬೆದರಿಕೆಯೊಡ್ಡಿದಳು. ನನ್ನ ಬಾಲ್ಯ ಸ್ನೇಹಿತರಲ್ಲಿ ತೀರಾ ಹತ್ತಿರವಾಗಿದ್ದ ಕೆಲವರು ನನ್ನ ಈಗಿನ ಸ್ಥಿತಿಗೆ ಹೊಸ ಸ್ನೇಹಿತರೇ ಕಾರಣ ಎಂದು ಅವರ ಮೇಲೆ ಹಲ್ಲೆ ಮಾಡಿದ ಕಹಿ ನೆನಪುಗಳೂ ಇವೆ.ಈ ನೆಲದ ಬಹು ದೊಡ್ಡ ಸಮಸ್ಯೆ ಎಂದರೆ ಸಲಿಂಗಿಗಳು ಎಂದರೆ ಅವರು ಲೈಂಗಿಕ ಅಲ್ಪಸಂಖ್ಯಾತರು ಅಥವಾ ಹಿಜಡಾಗಳು ಎಂಬ ಭಾವನೆ ಇದೆ. ಆದರೆ ಅವರಿಗಿಂತ ಭಿನ್ನ ಎಂಬುದು ಅರ್ಥ ವಾಗಬೇಕಿದೆ. ಈ ಕುರಿತು ಅರಿವು ಮೂಡಿಸುವ ಸಲುವಾಗಿ ‘ಪಯಣ’ ಎಂಬ ಸ್ವಯಂ ಸೇವಾ ಸಂಸ್ಥೆಯೊಂದನ್ನು ಕಟ್ಟಕೊಂಡಿದ್ದೇನೆ. ಸಲಿಂಗಿಗಳ ಹಕ್ಕುಗಳಿಗಾಗಿ ಹೋರಾಡುವುದು ಹಾಗೂ ಸಮುದಾ­ಯವನ್ನು ಗಟ್ಟಿಗೊಳಿಸುವುದು ಇದರ ಮುಖ್ಯ ಉದ್ದೇಶ.  ಸಲಿಂಗರತಿ ಒಂದು ಅಪರಾಧ ಎಂದು ನ್ಯಾಯಾಲಯ ಎಂದು ಕೊಂಡರೆ ಅದು ನ್ಯಾಯಾಲಯದ ಸಮಸ್ಯೆಯೇ ಹೊರತು ನನ್ನಂತಹವರದ್ದಲ್ಲ. ಹಾಗೆಂದು ನಾವು ಸುಮ್ಮನಿರುವುದೂ ಅಸಾಧ್ಯ.ಭಾರತದ ಇತರ ರಾಜ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕ­ದಲ್ಲಿ ಸಲಿಂಗಿಗಳು ತೀರಾ ಶೋಷಣೆಗೆ ಒಳಗಾಗಿದ್ದಾರೆ. ಐಪಿಸಿ 377ನೇ ಸೆಕ್ಷನ್‌ ಜತೆಗೆ ಕರ್ನಾಟಕ ಪೊಲೀಸ್‌ ಕಾಯ್ದೆ 36‘ಎ’ ಅನ್ವಯ ಇದು ಹುಟ್ಟು ಅಪರಾಧ ಎಂದೇ ಹೇಳಿದೆ. ಇಷ್ಟು ಸಾಲದು ಎಂಬಂತೆ ಪೊಲೀಸರಿಗೆ ಸಲಿಂಗಿಗಳು ಹಾಗೂ ಲೈಂಗಿಕ ಅಲ್ಪ­ಸಂಖ್ಯಾತರ ನಡುವಿನ ವ್ಯತ್ಯಾಸದ ಅರಿವಿನ ಕೊರತೆ ಇರುವು­ದರಿಂದಲೂ ಸಲಿಂಗಿಗಳು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ.ವೃತ್ತಿ ಜೀವನದಲ್ಲಿ ಹಾಗೂ ಕೆಲವೆಡೆ ಅವಮಾನ ಅನುಭವಿಸ­ಬೇಕಾಗಿದೆ. ಕೆಲವರು ನನ್ನನ್ನು ಗೇಲಿ ಮಾಡುತ್ತಾರೆ. ಆದರೆ  ಯಾವುದಕ್ಕೂ ನಾನು ಮುಜುಗರಪಟ್ಟುಕೊಂಡಿಲ್ಲ. ನಾಲ್ಕು ತಿಂಗಳ ಹಿಂದೆ ನನಗೂ ಒಬ್ಬ ಸಂಗಾತಿ ಸಿಕ್ಕಿದ್ದಾನೆ. ಬದುಕು ಸಾಗುತ್ತಿದೆ.(ನಿರೂಪಣೆ: ಇ.ಎಸ್‌. ಸುಧೀಂದ್ರ ಪ್ರಸಾದ್‌)

ಪ್ರತಿಕ್ರಿಯಿಸಿ (+)