ಸೋಮವಾರ, ಏಪ್ರಿಲ್ 19, 2021
29 °C

ಕಡಲೆ ಬೆಳೆಗೆ ಕೀಟಬಾಧೆ

ಪ್ರಜಾವಾಣಿ ವಾರ್ತೆ/ ಚಂದ್ರಕಾಂತ ಬಾರಕೇರ Updated:

ಅಕ್ಷರ ಗಾತ್ರ : | |

 ಗಜೇಂದ್ರಗಡ: ಹಿಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆ ಎಂದೇ ಪರಿಗಣಿತವಾದ `ಕಡಲೆ~ ಬೆಳೆಗೆ ಕೀಟಬಾಧೆ ವ್ಯಾಪಕವಾಗಿದೆ. ಕೀಟಬಾಧೆಯಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ರಾಸಾಯನಿಕ ಹಾಗೂ ರಾಸಾಯನಿಕ ಸಿಂಪಡಣೆ ಯಂತ್ರಗಳಿಗೆ ಮೊರೆ ಹೋಗಿದ್ದಾರೆ.ಎರಿ (ಕಪ್ಪು ಮಣ್ಣು) ಪ್ರದೇಶದಲ್ಲಿ ಹೇರಳವಾಗಿ ಬೆಳೆಯಲಾಗುವ `ಕಡಲೆ~ ಹಿಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆಯಾಗಿ ಹೊರಹೊಮ್ಮಿದೆ. ಬೆಳೆಗೆ ಕೀಟಬಾಧೆ ಕಾಡದಿದ್ದರೆ, ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ನೀಡುವ ಬೆಳೆ ಇದಾಗಿದೆ. ಆದರೆ, ಈ ಬೆಳೆಗೆ ಬೇರೆ ಯಾವ ರೋಗ, ರುಜಿನಗಳು ತಾಗದಿದ್ದರೂ ಪ್ರತಿ ವರ್ಷ ಕೀಟಬಾಧೆ ರೈತರನ್ನು ಕಂಗಾಲಾಗಿಸುತ್ತದೆ. ಪ್ರಸಕ್ತ ವರ್ಷವೂ ಕಡಲೆಗೆ ಕೀಟಬಾಧೆ ವ್ಯಾಪವಾಗಿದ್ದು, ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.ನಿರಂತರ ಬರದ ಮಧ್ಯೆಯೂ ಪ್ರಸಕ್ತ ವರ್ಷ 33,316 ಹೆಕ್ಟೇರ್ ಪ್ರದೇಶದಲ್ಲಿ ಕಡಲೆಯನ್ನು ಬೆಳೆಯಲಾಗಿದೆ. ಬಿತ್ತನೆ ಮಾಡಿದ ಆರಂಭದ ದಿನಗಳಲ್ಲಿ ತೀವ್ರ ತೇವಾಂಶದ ಕೊರತೆಯನ್ನು ಎದುರಿಸುತ್ತಿದ್ದ `ಕಡಲೆ~ ಬೆಳೆ ಕಮರಿ ಹೋಗುವ ಭೀತಿಯಲ್ಲಿತ್ತು. ಆದರೆ,  `ನೀಲಂ~ ಚಂಡ ಮಾರುತದ ಪರಿಣಾಮವಾಗಿ ನಿರಂತರ ಎರಡು ದಿನಗಳ ಕಾಲ ಬೆಂಬಿಡದೆ ಸುರಿದ ಜಡಿ ಮಳೆಯಿಂದಾಗಿ ಕಡಲೆಗೆ ಅಗತ್ಯವಿರುವ ತೇವಾಂಶ ದೊರಕಿತು.ಪರಿಣಾಮ ರೈತರನ್ನು ಕಾಡುತ್ತಿದ್ದ ತೇವಾಂಶದ ಕೊರತೆ ದೂರವಾಗಿ ನೆಮ್ಮದಿಯ ನಿಟ್ಟುಸಿರು ಹಾಕಿದ್ದ ರೈತರಿಗೀಗ ಕೀಟಬಾಧೆ ಮಾರಕವಾಗಿ ಪರಿಣಮಿಸಿದೆ. ಕೀಟಬಾಧೆ ನಿಯಂತ್ರಣ ಕಷ್ಟಸಾಧ್ಯವಾದ್ದರಿಂದ ಕಡಲೆ ಬೆಳೆದ ತಪ್ಪಿಗಾಗಿ ರೈತರು ಕೈಕೈಹಿಸುಕಿ ಕೊಳ್ಳುವಂತಾಗಿದೆ. ಯಂತ್ರದ ಕಾರ್ಯವೇನು?: ಈ ಮೊದಲು 10 ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಫೈಬರ್ ಟ್ಯಾಂಕ್ ಭಾರವಾಗುತ್ತದೆ ಎಂಬ ಕಾರಣಕ್ಕೆ ಈಗ ಸ್ಪ್ರೇ ಪಂಪ್‌ಗಳನ್ನು ಬಳಸಲಾಗುತ್ತಿದೆ. ಇದಕ್ಕೆ 7 ರಿಂದ 8 ಕೆ.ಜಿ ತೂಕದ ಚಾರ್ಜ್ ಬ್ಯಾಟರಿ, 5 ಲೀಟರ್ ನೀರು ಸಾಮರ್ಥ್ಯದ ಫೈಬರ್ ಟ್ಯಾಂಕ್, 4 ಅಡಿ ನೀರು ಸರಬರಾಜು ಪೈಪ್ ಇದೆ. ಬ್ಯಾಟರಿಗೆ ಸಂಪರ್ಕಿಸಿ ಟ್ಯಾಂಕ್‌ನಲ್ಲಿ ರಾಸಾಯನಿಕ ಔಷಧಿ ಬೆರೆಸಿದರೆ 2 ಗಂಟೆಯಲ್ಲಿ 5 ಎಕರೆ ಕಡಲೆ ಪ್ರದೇಶಕ್ಕೆ ಸಿಂಪಡಿಸ ಬಹುದು. ಹಾಗಾಗಿ ಈ ಯಂತ್ರಗಳಿಗೆ ಮಾರು ಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ.ಕಡಲೆ ಬಿತ್ತಿದ ರೈತರು ಬ್ಯಾಟರಿ ಸ್ಪ್ರೇ ಪಂಪ್‌ಗಳನ್ನು 1,250 ರೂಪಾಯಿಗೆ ಖರೀದಿಸುತ್ತಿದ್ದಾರೆ. ಖರೀದಿಸ ಲಾಗದ ಸಣ್ಣ ಹಿಡುವಳಿದಾರರು ದಿನಕ್ಕೆ 60 ರಿಂದ 80 ರೂಪಾಯಿ ಬಾಡಿಗೆ ನೀಡಿ ಔಷಧಿ ಸಿಂಪಡಿ ಸುತ್ತಿದ್ದಾರೆ. ಬಾಡಿಗೆಗೆ ಪಂಪ್ ಪಡೆಯುವಾಗ ಮಾಲೀಕರ ಮುಂದೆ ಯಂತ್ರ ಚನ್ನಾಗಿ ಕಾರ್ಯ ನಿರ್ವಹಿಸುತ್ತಿದೆಯೋ, ಇಲ್ಲವೋ ಎಂಬುದನ್ನು ಖಚಿತ ಪಡಿಸಿಕೊಂಡೇ ರೈತರು ಹೊಲಗಳಿಗೆ ತೆರಳುತ್ತಿದ್ದಾರೆ. ಮಧ್ಯದಲ್ಲಿ ಕೈಕೊಟ್ಟರೆ ದಿನದ ಬಾಡಿಗೆ ಹಾಗೂ ಕೂಲಿ ವ್ಯರ್ಥವಾಗುತ್ತದೆ ಎನ್ನುತ್ತಾರೆ ಕಡಲೆ ಬೆಳೆದ ರೈತ ಹನುನಪ್ಪ ವಜ್ಜಲ, ದ್ಯಾಮಣ್ಣ ಉಳ್ಳಾಗಡ್ಡಿ. ಅಗ್ರೋ ಕೇಂದ್ರಗಳಿಗೆ ಲಾಭ: ಕೀಟಬಾಧೆ ಹತೋಟಿಗೆ ಯಂತ್ರ, ಔಷಧಿ ಖರೀದಿಸುತ್ತಿರುವ ರೈತರ ದುಸ್ಥಿತಿಯನ್ನು ಅರಿತ ಅಗ್ರೋ ಕೇಂದ್ರಗಳು ತನ್ನಲ್ಲಿ ದಾಸ್ತಾನಿರುವ ಔಷಧಿಗಳನ್ನು ವಿತರಿಸುತ್ತಿದ್ದಾರೆ. ಕೀಟಗಳ ಹಾವಳಿ ನಿಯಂತ್ರಣಕ್ಕೆ ಬರುತ್ತದೆ. ಉತ್ತಮ ಔಷಧಿ ಎಂದೆಲ್ಲ ಸುಳ್ಳು ಹೇಳುತ್ತಿದ್ದಾರೆ. ರೈತರೂ ಲಭ್ಯವಿರುವ ಯಂತ್ರ, ಔಷಧಿಗಳನ್ನು ಖರೀದಿ ಸುತ್ತಿದ್ದಾರೆ. ಹೀಗಾಗಿ ಅಗ್ರೋ ಕೇಂದ್ರಗಳಿಗೆ ಭರ್ಜರಿ ಲಾಭ.ಕೀಟ ನಿಂತ್ರಣ ಕ್ರಮಗಳು: ಪ್ರೋಪೋನಾಫಾಸ್ ಎಂಬ ರಾಸಾಯನಿಕ ಔಷಧಿಯನ್ನು 1 ಎಕರೆಗೆ 300 ರಿಂದ 350 ಎಂ.ಎಲ್ ಪ್ರಮಾಣದಲ್ಲಿ ಸಿಂಪಡಿಸಬೇಕು. ಇದರಿಂದ ಕೀಟಗಳೊಂದಿಗೆ ತತ್ತಿಗಳೂ ನಾಶ ವಾಗುತ್ತದೆ.  ಮೋಡ ಕವಿಯುವ ಆಧಾರದ ಮೇಲೆ ಕನಿಷ್ಠ 4 ರಿಂದ 5 ಸಲ ಸಿಂಪಡಿಸಬೇಕು.ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ದೊರೆಯುವ ರಾಸಾಯನಿಗಳನ್ನು ಸಿಂಪಡಿಸಬೇಕು. ಅಗ್ರೋ ಕೇಂದ್ರಗಳು ನೀಡುವ ರಾಸಾಯನಿಗಳನ್ನು ಸಿಂಪಡಿಸ ಕೂಡದು ಎಂದು ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಎಸ್.ಎ.ಸೂಡಿಶೆಟ್ಟರ್ `ಪ್ರಜಾವಾಣಿ~ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.