ಗುರುವಾರ , ಜನವರಿ 30, 2020
22 °C

ಕಡಿಮೆ ಬೆಲೆಗೆ ತಂಬಾಕು ಖರೀದಿ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್.ಡಿ.ಕೋಟೆ: ಕಡಿಮೆ ಬೆಲೆಗೆ ತಂಬಾಕು ಖರೀದಿಸುತ್ತಿರುವುದನ್ನು ವಿರೋಧಿಸಿ ಹಾಗೂ ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಾಲ್ಲೂಕಿನ ತಂಬಾಕು ಬೆಳೆಗಾರರ ಸಂಘ, ಕರ್ನಾಟಕ ರೈತ ಸಂಘ, ದಲಿತ ಸಂಘರ್ಷ ಸಮಿತಿ ಹಾಗೂ ತಂಬಾಕು ಬೆಳೆಗಾರರು ತಾಲ್ಲೂಕಿನ ಶಾಂತಿಪುರ ಗ್ರಾಮದಲ್ಲಿರುವ ತಂಬಾಕು ಹರಾಜು ಮಂಡಳಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.ತಂಬಾಕು ಬೆಳೆಗಾರ ಮತ್ತು ಟಿಎಪಿಸಿಎಂಎಸ್ ಅಧ್ಯಕ್ಷ ಮೊತ್ತ ಬಸವರಾಜಪ್ಪ ಮಾತನಾಡಿ, ಆಂಧ್ರ ರಾಜ್ಯದ ತಂಬಾಕು ಬೆಲೆಗಿಂತ ಶೇ 30ರಷ್ಟು ಕಡಿಮೆ ಬೆಲೆಗೆ ತಂಬಾಕನ್ನು ಖರೀದಿಸಲಾಗುತ್ತಿದೆ ಎಂದು ಆರೋಪಿಸಿದರು.ತಂಬಾಕಿನ ಬೆಲೆ ದಿನೇ ದಿನೇ ಕುಸಿಯುತ್ತಿದೆ. ಪ್ರತಿ ದಿನ ಸೌದೆ ಸೇರಿದಂತೆ ಇತರೆ ವೆಚ್ಚಗಳೂ ದಿನೇ ದಿನೇ ಏರಿಕೆಯಾಗುತ್ತಿದೆ ಎಂದರು.

ಎರಡು ತಿಂಗಳ ಹಿಂದೆ ತಂಬಾಕು ಮಾರುಕಟ್ಟೆ ಪ್ರಾರಂಭವಾದಾಗ, ಮಂಡಳಿ ಅಧ್ಯಕ್ಷ ಗೋಪಾಲ್ ಉತ್ತಮ ಬೆಲೆ ನೀಡುವ ಭರವಸೆ ಕೊಟ್ಟಿದ್ದರು. ಆದರೆ, ಅವರ ಭರವಸೆ ಸುಳ್ಳಾಗಿದೆ. ಮಂಡಳಿ ಅಧ್ಯಕ್ಷರಾಗಲಿ,  ಸಂಬಂಧಿಸಿದ ಅಧಿಕಾರಿಗಳಾಗಲಿ ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದರು.ಆಂಧ್ರದಲ್ಲಿ ಪ್ರತಿ ಕೆಜಿ ತಂಬಾಕಿಗೆ 200 ರೂ ಇದ್ದರೆ, ಇಲ್ಲಿ 120 ರಿಂದ 140 ರೂ. ವರೆಗೆ ಕೊಳ್ಳಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಮಧ್ಯ ಪ್ರವೇಶಿಸಿ ರೈತರಿಗೆ ಆಗುತ್ತಿರುವ ನಷ್ಟ ತಪ್ಪಿಸಲು ನೆರವಾಗಬೇಕು. ಇಲ್ಲದಿದ್ದಲ್ಲಿ ನಿರಂತರವಾಗಿ ಧರಣಿ ನಡೆಸಬೇಕಾಗುತ್ತದೆ ಎಂದರು.ತಂಬಾಕಿಗೆ ಸರಾಸರಿ ಬೆಲೆ 150 ರಿಂದ 160 ದೊರೆಯಬೇಕು,  ಬೆಳೆಗಾರರ ಸಾಲ ಮನ್ನಾ ಮಾಡಬೇಕು, ಆಂಧ್ರದ ಮಾದರಿಯಲ್ಲಿ ಪ್ಯಾಕೇಜ್‌ ನೀಡಬೇಕು. ಮಂಡಳಿ ಮುಖಾಂತರವೇ ಸಿಎನ್ ವಿತರಣೆ ಆಗಬೇಕು, ತಂಬಾಕು ರೈತರಿಗೆ ದಂಡ ವಿಧಿಸಬಾರದು ಎಂದು ಒತ್ತಾಯಿಸಿದರು. ಕುಮಾರ್,  ಬಸವರಾಜು, ರೈತ ಸಂಘದ ಅಧ್ಯಕ್ಷ ಪಳನಿಸ್ವಾಮಿ, ಬಸವರಾಜು, ಪುಟ್ಟಯ್ಯ, ರಾಜಣ್ಣ, ಕೆಂಡಗಣ್ಣಸ್ವಾಮಿ, ನೀಲಪ್ಪ ಹಾಜರಿದ್ದರು.

ಪ್ರತಿಕ್ರಿಯಿಸಿ (+)