ಗುರುವಾರ , ಮೇ 13, 2021
34 °C

ಕಡೂರು: ವಿಜೃಂಭಣೆಯ ವೀರಭದ್ರಸ್ವಾಮಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡೂರು: ಪಟ್ಟಣದ ದೊಡ್ಡಪೇಟೆಯ ಛತ್ರದ ಬೀದಿಯಲ್ಲಿರುವ ವೀರಭದ್ರಸ್ವಾಮಿ ರಥೋತ್ಸವ ಸೋಮವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.ಸಂಪ್ರದಾಯದಂತೆ ರಥೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಗ್ರಾಮದೇವತೆ ಕೆಂಚಾಂಬ, ಮಲ್ಲೇಶ್ವರದ ಸ್ವರ್ಣಾಂಬ, ಬನಶಂಕರಿ ಮತ್ತು ಚೌಡ್ಲಾಪುರದ ಅಮ್ಮ ಅವರನ್ನು ವೀರಭದ್ರಸ್ವಾಮಿ ಮತ್ತು ಭದ್ರಕಾಳಿ ಅಮ್ಮನವರ ನೇತೃತ್ವದಲ್ಲಿ ವೀರಗಾಸೆ, ಡೊಳ್ಳುಕುಣಿತ, ಸಿಡಿಮದ್ದುಗಳ ಪ್ರದರ್ಶನದ ಮೂಲಕ ಮೆರವಣಿಗೆಯಲ್ಲಿ ಗ್ರಾಮದೇವತೆ ಕೆಂಚಾಂಬ ದೇವಿಯವರ ದೇವಾಲಯದ ಆವರಣಕ್ಕೆ ಕರೆತರಲಾಯಿತು. ಕೆಂಚಾಂಬ ದೇವಾಲಯದ ಬಳಿ ವೀರಭದ್ರಸ್ವಾಮಿ ಮತ್ತು ಭದ್ರಕಾಳಿ ಅಮ್ಮನವರನ್ನು ಸಿಂಗರಿಸಿದ ರಥದಲ್ಲಿ ಪ್ರತಿಷ್ಠಾಪಿಸಿ ಬಾಳೆಯ ಕಂದು ಕಡಿಯಲಾಯಿತು.ವೀರಭದ್ರಸ್ವಾಮಿ ಸನ್ನಿಧಾನದಲ್ಲಿ ದೀಕ್ಷೆಯಲ್ಲಿದ್ದ ಬಾಳೆಹೊನ್ನೂರು ಮಠದ ಮೂಲದ ಹೊಸಳ್ಳಿ ಕುಮಾರಸ್ವಾಮಿ ಅವರನ್ನು ಮೆರವಣಿಗೆಯಲ್ಲಿ ವಾದ್ಯಗಳ ಸಮೇತ ಕರೆತಂದು ರಥಕ್ಕೆ ಏರಿಸಿದ ಬಳಿಕ ಬಾವುಟದ ಹರಾಜು ನಡೆಯಿತು. ಕಡೂರು ಹಳೇಪೇಟೆ ಸಿದ್ದಯ್ಯ ಎಂಬವರು ಬಾವುಟವನ್ನು 75ಸಾವಿರ ರೂಗಳಿಗೆ ಬಿಡ್‌ಮಾಡಿ ಪಡೆದರು. ಕುಮಾರಸ್ವಾಮಿ ಅವರು ರಥದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕ ರಥವನ್ನು ಭಕ್ತರ ಜಯಘೋಷಗಳ ನಡುವೆ ವೀರಭದ್ರಸ್ವಾಮಿ ದೇವಾಲಯದವರೆಗೆ ಎಳೆದು ತರಲಾಯಿತು. ಭಕ್ತರು ರಥಕ್ಕೆ ಬಾಳೆಹಣ್ಣು ಎಸೆದು ಹರಕೆ ತೀರಿಸಿದರು. ದೇವಾಲಯ ಸಮಿತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಹೊಸದಾಗಿ ಮದುವೆಯಾದ ಅನೇಕ ಜೋಡಿಗಳು ದೇವರ ದರ್ಶನ ಪಡೆದು ಉತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ದೇವಾಲಯ ಸಮಿತಿಯ ಹನ್ನೆರಡು ಹರಿವಾಣದ ಬುಡಕಟ್ಟಿನ ಗೌಡರಾದ ಕೆ.ಎಂ.ಕೆಂಪರಾಜು, ಸಮಿತಿ ಸದಸ್ಯರಾದ ಜನರಲ್ ತಿಮ್ಮಯ್ಯ, ಹೂವಿನ ಗೋವಿಂದಪ್ಪ, ಪುರಸಭೆ ಸದಸ್ಯರಾದ ಲೋಕೇಶ್, ರಮೇಶ್, ಮೋಹನ್ ಕುಮಾರ್, ಸೋಮಶೇಖರ್, ಸರಸ್ವತಿಕೃಷ್ಣಮೂರ್ತಿ ಮತ್ತು ಮುಖಂಡರಾದ ಕೆ.ಜಿ.ಲೋಕೇಶ್, ಶರತ್‌ಕೃಷ್ಣಮೂರ್ತಿ, ಎಚ್.ಎಂ.ಲೋಕೇಶ್ ಮುಂತಾದವರು ನೇತೃತ್ವ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.