ಕಣ್ಣು ಕುಕ್ಕಿದ ಲೇಸರ್ ಶೋ
ಲಕ್ಕುಂಡಿ (ಗದಗ): ಲಕ್ಕುಂಡಿ ಉತ್ಸವದ ಅಂಗವಾಗಿ ಅತ್ತಿಮಬ್ಬೆ ವೇದಿಕೆಯಲ್ಲಿ ಭಾನುವಾರ ಸಂಜೆ ರಾಜ್ಯ ವಾರ್ತಾ ಇಲಾಖೆ ಏರ್ಪಡಿಸಿದ್ದ ಲೇಸರ್ ಶೋ ಜನರ ಮನರಂಜಿಸಿತು.
ಬಣ್ಣದ ಕಿರಣಗಳ ಲೋಕ ಸೃಷ್ಟಿಯಾಗಿತ್ತು. ಮಿಂಚಿನಂತೆ ಕಿರಣಗಳು ಆಕಾಶಕ್ಕೆ ನೆಗೆದು ಜನಸಮೂಹದ ಮಧ್ಯೆ ಹಾಯ್ದು ಮಾಯವಾದಾಗ ಜನ ಕಣ್ಣರಳಿಸಿ ನೋಡಿ ಹರ್ಷಪಟ್ಟರು.
ಸರ್ಕಾರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಚುಟುಕಾಗಿ ಹಾಗೂ ನವಿರಾಗಿ ತಿಳಿಸಿದ ಈ ಕಾರ್ಯಕ್ರಮದಲ್ಲಿ ಭಾಗ್ಯಲಕ್ಷ್ಮೀ, ಸಂಧ್ಯಾ ಸುರಕ್ಷಾ, ಆರೋಗ್ಯ ಕವಚ, ಹೈನುಗಾರಿಕೆ ನೆರವು, ಉಚಿತ ವಿದ್ಯುತ್ ಪೂರೈಕೆ, ಕಲಿಯುವ ಮಕ್ಕಳಿಗೆ ಬೈಸಿಕಲ್, ವಿವಿಧ ಮಾಸಾಶನ, ಮೂಲ ಸೌಕರ್ಯ ಮತ್ತು ಗ್ರಾಮೀಣ ಅಭಿವೃದ್ಧಿ ಕುರಿತ ಆಕರ್ಷಕ ಲೇಸರ್ ಶೋ ಜನಮನ ಸೆಳೆಯಿತು.
ಲೇಸರ್ ಬೀಮ್ ಕಿರಣಗಳ ಮೂಲಕ ವಿಸ್ಮಯ ಲೋಕವನ್ನು ಸೃಷ್ಟಿಸಲಾಯಿತು. ಡಾ. ರಾಜಕುಮಾರ ಅವರ ‘ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಲೇಸರ್ ಬೀಮ್ ವೇದಿಕೆ ತುಂಬ ಪ್ರದರ್ಶಿಸಿದಾಗ ಜನ ಚಪ್ಪಾಳೆ ತಟ್ಟಿದರು.
ವಂದೇ ಮಾತರಂ ದೇಶಭಕ್ತಿ ಗೀತೆಗೆ ವರ್ಣರಂಜಿತ ಲೇಸರ್ ಕಿರಣಗಳು ವೇದಿಕೆಯ ಸುತ್ತಮುತ್ತ ಚಿತ್ತಾರ ಮೂಡಿಸಿ ತ್ರಿವರ್ಣಗಳು ವೇದಿಕೆಯಲ್ಲಿ ಮೂಡಿದವು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ , ಶಾಸಕ ಶ್ರೀಶೈಲಪ್ಪ ಬಿದರೂರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚಂಬವ್ವ ಪಾಟೀಲ, ಜಿಲ್ಲಾಧಿಕಾರಿ ಎಸ್. ಶಂಕರನಾರಾಯಣ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವೀರಣ್ಣ ತುರಮರಿ ಹಾಜರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.