ಶುಕ್ರವಾರ, ಜೂನ್ 25, 2021
23 °C

ಕತೆ ಇಲ್ಲದ ಮೇಲೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಅಮ್ಮಾ... ನಂಗೊಂದು ಕತೆ ಹೇಳ್ತೀಯಾ...~ ಅಮ್ಮನ ಸಾಮೀಪ್ಯ ಅನುಭವಿಸುತ್ತ ಮಗು ಪುಟ್ಟದೊಂದು ಬೇಡಿಕೆ ಇರಿಸುತ್ತದೆ. ಬಟ್ಟಲು ಕಂಗಳ ಪಿಳಕಿಸುತ್ತ, ನಿದ್ದೆ ಹೋದರೆ ಮತ್ತೆ ಬೆಳಕಾದೀತು... ಅಮ್ಮ ಹೋದಾಳು ಎಂಬ ಆತಂಕದೊಂದಿಗೆ... ಪ್ರಶ್ನೆ ಅಮ್ಮನತ್ತ ತೂರುತ್ತದೆ.ಬೆಳಗಿನ ಧಾವಂತದಿಂದ ಬಸವಳಿದ ಜೀವ, ಹಾಸಿಗೆಗೆ ಬೆನ್ನು ತೋರಿ, ಹೊದಿಕೆ ಹೊದ್ದು ಕಣ್ಮುಚ್ಚಿದರೆ ಸಾಕು ಎಂಬ ನಿರೀಕ್ಷೆಯಲ್ಲಿರ್ತಾಳೆ ಅಮ್ಮ. ಅದೇ ಹೊದಿಕೆಯೊಳಗೆ ಮಗುವ ಸೆಳೆದಪ್ಪಿ ಮಲಗಲು ಯತ್ನಿಸುತ್ತಾಳೆ ಅಮ್ಮ. ಬೆಂಗಳೂರಿನ ಆಕಾಶದಲ್ಲಿ ಕಾಣದ ನಕ್ಷತ್ರಗಳೆರಡು, ಹೊದಿಕೆಯಡಿಯಲ್ಲಿಯೇ ಫಳಫಳ ಹೊಳೆಯುತ್ತವೆ. ನಿದ್ದೆ ಬರುವುದೇ ಇಲ್ಲ.

ಇದೇ ಪ್ರಶ್ನೆ ಅಪ್ಪನತ್ತ ಹೊರಳಿದರೆ ಅಲ್ಲಿ, `ಇವೊತ್ತೊಂದಿನ ಸ್ಟೋರಿ ಬುಕ್ ನೋಡ್ಕೊ, ನಾಳೆ ಓದಿ, ಶನಿವಾರ ಹೇಳ್ತೇನೆ~ ಎಂಬ ಉತ್ತರ.ಇದು ನಗರದಲ್ಲಿರುವ ಬಹುತೇಕ ಮನೆಗಳ ಕತೆ. ಇಷ್ಟಕ್ಕೂ ರಾತ್ರಿ ಕತೆ ಯಾಕೆ ಹೇಳಬೇಕು?

ಅಪ್ಪ ಅಥವಾ ಅಮ್ಮನ ತೋಳಿನ ಮೇಲೆ ತಲೆ ಇಟ್ಟು, ಹೂಂಗುಡುವ ಮಕ್ಕಳು ತಮ್ಮ ಪುಟ್ಟ ಲೋಕದೊಳಗೊಂದು ಕಲ್ಪನಾ ಪ್ರಪಂಚವನ್ನೇ ಬಿಚ್ಚಿಡುತ್ತವೆ. ಹಾಗೆ ಹೂಂಗುಡುತ್ತಲೇ ಅವರ ಯೋಚನಾಲಹರಿ ಸಾಗುತ್ತದೆ. ಮನಸು ನಿರಾಳವಾಗುತ್ತ, ನೆಮ್ಮದಿಯ ನಿದ್ದೆಯತ್ತ ಜಾರುತ್ತವೆ. ತಮ್ಮಂದಿಗೆ ಮಾತ್ರ ಅಪ್ಪ-ಅಮ್ಮ ಆ ಕ್ಷಣದಲ್ಲಿ ಮಾತಾಡ್ತಾರೆ ಎಂಬ ಭಾವ ಅವರಿಗೆ ಬೇಕು.ಆ ಖಾತರಿ ಸಿಗುವುದೇ ಕತೆ ಹೇಳುವ ಸಮಯದಲ್ಲಿ. ಹಾಗಾಗಿ ಪ್ರತಿ ರಾತ್ರಿಯೂ ಒಂದು ಸಣ್ಣ ಕತೆಯಾದರೂ ಹೇಳು ಅಂತ ಕಾಡದ ಮಕ್ಕಳು ಇಲ್ಲವೇ ಇಲ್ಲವೇನೋ?

ಆದರೆ ಕತೆ ಹೇಳುವ ಮನಸ್ಥಿತಿ ನಗರದ ಭರಾಟೆಯ ಜೀವನಶೈಲಿಯಿಂದಾಗಿ ಕಡಿಮೆಯಾಗುತ್ತಿದೆ ಎನ್ನಲಾಗಿದೆ. ಲಂಡನ್‌ನ ಮನಃಶಾಸ್ತ್ರಜ್ಞ ರಿಚರ್ಡ್ ವೂಲ್ಫ್ಸನ್ ಕೈಗೊಂಡಿರುವ ಅಧ್ಯಯನದಲ್ಲಿ 2000 ಪಾಲಕರು ಪಾಲ್ಗೊಂಡಿದ್ದರು.ಅವರಲ್ಲಿ ಶೇ 10ರಷ್ಟು ಜನ ತಿಂಗಳಿಗೊಮ್ಮೆಯಾದರೂ ತಮ್ಮ ಮಕ್ಕಳಿಗಾಗಿ ಒಂದು ಕತೆಯನ್ನೋದಿ, ಹೇಳುವ ಪ್ರಯತ್ನ ಮಾಡುತ್ತಾರಂತೆ. ಇನ್ನೊಂದು ಆತಂಕದ ವಿಷಯವೆಂದರೆ ಪ್ರತಿ ಹತ್ತರಲ್ಲಿ ಒಬ್ಬರು ಮಕ್ಕಳಿಗೆ ಒಂದೂ ಕತೆಯನ್ನೇ ಹೇಳುವುದಿಲ್ಲವಂತೆ. ಒಂದನೇ ಮೂರರಷ್ಟು ಜನ ಪೋಷಕರು ಕತೆ ಹೇಳಲು ಸಹ ಕೆಲಸಗಾರರನ್ನೇ ನೇಮಿಸಿದ್ದಾರಂತೆ.ಆಯಿ, ದಾಯಿಗಳ ಪೋಷಣೆಯೊಂದಿಗೆ ಮಲಗುವ ಹೊತ್ತಿನ ಕತೆಯೂ ಹೇಳಲು ಸಜ್ಜಾಗುತ್ತಿದ್ದಾರೆ. ಅದಕ್ಕಾಗಿ ಅವರು ಹಣ ನೀಡುವುದಾಗಿಯೂ ಪೋಷಕರು ತಿಳಿಸಿದ್ದಾರೆ.

ಬೆಲೆ ಏರಿಕೆಯೊಂದಿಗೆ ಜೀವನವನ್ನು ಸರಿದೂಗಿಸಲು ಹೆಚ್ಚುವರಿ ಕೆಲಸ ಮಾಡುವುದು ಅಗತ್ಯವಾಗಿದೆ. ಹೀಗಾಗಿ ಮಕ್ಕಳಿಗೆ ಕತೆ ಹೇಳಲು ಸಮಯ ನಿರ್ವಹಿಸುವುದೇ ಕಷ್ಟವಾಗಿದೆ ಎಂದೇ ಅರ್ಧಕ್ಕಿಂತ ಹೆಚ್ಚು ಜನ ಪೋಷಕರು ಕಾರಣ ನೀಡಿದ್ದಾರೆ.

 

`ಸತತ ಒತ್ತಡ~ವನ್ನು ಅನುಭವಿಸುವುದರಿಂದ ಕತೆ ಹೇಳುವುದು ಅಸಾಧ್ಯ ಎಂದೂ ಅಭಿಪ್ರಾಯ ಪಟ್ಟಿದ್ದಾರೆ.  ಕಳೆದ ಒಂದು ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಜೀವನ ನಿರ್ವಹಣೆ ಇನ್ನೂ ಕಷ್ಟಕರ ಎನಿಸುತ್ತಲಿದೆ. ವೆಚ್ಚ ಮತ್ತು ಗಳಿಕೆಯನ್ನು ಹೊಂದಿಸುವಲ್ಲಿ ನಿರಂತರ ಮಾನಸಿಕ ಒತ್ತಡ ಹಾಗೂ ಧಾವಂತದಿಂದಲೇ ಬದುಕು ಮುನ್ನುಗ್ಗುತ್ತಿದೆ. ಮಕ್ಕಳೊಂದಿಗೆ ಸಂತಸದಿಂದ ಕಾಲ ಕಳೆಯುವುದೇ ದುಸ್ತರವಾಗಿದೆ ಎಂದು ಪಾಲಕರು ಹೇಳಿದ್ದಾರೆ.ಬಾಲ್ಯದ ಬೆಳವಣಿಗೆಗೆ ಕತೆಯ ಕಾಲ ಬಲು ಮುಖ್ಯವಾದುದು. ಈ ಕತೆಯೊಂದಿಗೆ ಮಕ್ಕಳು ಪಾಲಕರೊಂದಿಗೆ ಗಟ್ಟಿಯಾದ ಬಾಂಧವ್ಯವನ್ನೂ ಬೆಳೆಸಿಕೊಳ್ಳುತ್ತವೆ. ಕತೆ ಹೇಳುವ ಸಮಯದಲ್ಲಿ ಮಕ್ಕಳಿಗೆ ಇಲ್ಲಿ ಅಪ್ಪ-ಅಮ್ಮಂದಿರೇ ನಿರ್ಣಾಯಕರಂತೆ ತೋರುವುದು ಸಹಜವಾಗಿದೆ. ಈ ಸಮಯದಿಂದಲೇ ಅವರಿಬ್ಬರ ನಡುವೆ ಗಟ್ಟಿ ಬಾಂಧವ್ಯ ಬೆಳೆಯುತ್ತದೆ. ಆದರೆ ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ ಕತೆ ಹೇಳುವ ಕೊಂಡಿಯೇ ಕಳಚಿದಂತಾಗುತ್ತಿದೆ ಎಂದೂ ರಿಚರ್ಡ್ ಆತಂಕ ವ್ಯಕ್ತಪಡಿಸಿದ್ದಾರೆ.`ಸಾಧ್ಯವಿದ್ದಾಗಲೆಲ್ಲ ಮಕ್ಕಳಿಗೆ ಕತೆ ಹೇಳಿ. ಕತೆ ಹೇಳುವುದರಿಂದ ನಿಮ್ಮಳಗೂ ಹೊಸ ವಿಶ್ವಾಸ ಮೂಡುತ್ತದೆ. ನಿಮ್ಮ ಬಾಂಧವ್ಯವೂ ಗಟ್ಟಿಯಾಗುತ್ತದೆ. ನಿಮಗೂ ನಿಮ್ಮ ಮಕ್ಕಳಿಗೂ ಒತ್ತಡದ ಬದುಕಿನಿಂದ ನಿರಾಳವಾಗುವ ಸಮಯ ಅದಾಗುತ್ತದೆ ಎಂದು ಅಧ್ಯಯನಕ್ಕೆ ಒಳಗಾದ ಪಾಲಕರಿಗೆ ರಿಚರ್ಡ್ ಕಿವಿಮಾತು ಹೇಳಿದ್ದಾರೆ.ಬೆಂಗಳೂರಿನ ಬದುಕು ಇವರಿಗಿಂತ ಭಿನ್ನವಾಗಿಲ್ಲ. ಇಲ್ಲಿ ಮನೆ ಮುಟ್ಟಲು ರಸ್ತೆಯಲ್ಲಿಯೇ ಗಂಟೆಗಟ್ಟಲೆ ಕಾಲಹರಣವಾಗುತ್ತದೆ. ಮನೆಗೆ ಮುಟ್ಟಿದ ಮೇಲೆ ಅಪ್ಪ-ಅಮ್ಮನ ಪ್ರೀತಿ-ವಾತ್ಸಲ್ಯಗಳಿಗಿಂತ ಜವಾಬ್ದಾರಿಯೇ ಒಂದು ತೂಕ ಹೆಚ್ಚಾಗುತ್ತದೆ. ಹೋದೊಡನೆ ಶಾಲೆಯ ಹೋಂ ವರ್ಕ್ ಪರಿಶೀಲಿಸುವ, ಡೈರಿಗೆ ಸಹಿ ಹಾಕುವ, ಮರುದಿನದ ಸಮವಸ್ತ್ರವನ್ನು ಇಸ್ತ್ರಿ ಮಾಡಿಡುವ ಕರ್ತವ್ಯಗಳನ್ನೆಲ್ಲ ನಿರ್ವಹಿಸುವಲ್ಲಿ ಅಪ್ಪ ಅಮ್ಮ ನಿರತರಾಗುತ್ತಾರೆ. ಮಕ್ಕಳನ್ನು ಬೆಳೆಸುತ್ತ ತಾವೂ ಬೆಳೆಯುವುದನ್ನು ಮರೆತು ಬಿಡುತ್ತಾರೆ.

ಮಕ್ಕಳು ಮಾತ್ರ ಇದ್ಯಾವುದರ ಅರಿವೂ ಇಲ್ಲದೇ ಪ್ರತಿರಾತ್ರಿಯೂ ಒಂದೇ ಪ್ರಶ್ನೆ ಕೇಳುತ್ತಾರೆ- `ಇವೊತ್ತು ಕತೆ ಹೇಳ್ತೀಯಾ?~

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.