ಚಿತ್ರ: ಕಹಾನಿ (ಹಿಂದಿ)
ಸಶಕ್ತ ಕಥೆಯ ತಳಹದಿಯಲ್ಲಿ ಪ್ರತಿ ಸನ್ನಿವೇಶದಲ್ಲೂ ಕುತೂಹಲ, ರೋಚಕತೆಯನ್ನು ಕಟ್ಟಿಕೊಡುವ ಚಿತ್ರ `ಕಹಾನಿ~. `ಇಷ್ಕಿಯಾ~, `ನೋ ಒನ್ ಕಿಲ್ಡ್ ಜೆಸ್ಸಿಕಾ~ ಮತ್ತು `ದಿ ಡರ್ಟಿ ಪಿಕ್ಚರ್~ ಚಿತ್ರಗಳ ಬಳಿಕ ವಿದ್ಯಾಬಾಲನ್ ಮನೋಜ್ಞ ಅಭಿನಯವಿರುವ ಮತ್ತೊಂದು ಮಹಿಳಾ ಪಾತ್ರ ಕೇಂದ್ರಿತ ಚಿತ್ರವಿದು.

ಕ್ಷಣ ಕ್ಷಣದಲ್ಲೂ ಕೌತುಕ ಹುಟ್ಟಿಸುವ ಕಥೆಯನ್ನು ನಿರ್ದೇಶಕ ಸುಜೋಯ್ ಘೋಷ್ ಅತಿ ಸರಳ ಮತ್ತು ಸಮರ್ಥವಾಗಿ ಚಿತ್ರಿಸಿದ್ದಾರೆ. ತೀರಾ ಸಾಧಾರಣ ಕಥೆಯೆಂಬಂತೆ ತೆರೆದುಕೊಳ್ಳುವ ಚಿತ್ರದಲ್ಲಿ, ಅದರೊಳಗೊಂದು ಸಸ್ಪೆನ್ಸ್ ಇದೆ ಎಂಬ ಸಣ್ಣ ಅನುಮಾನವೂ ಬಾರದಂತೆ ಚಿತ್ರಕಥೆ ಹೆಣೆಯಲಾಗಿದೆ. ಕಥೆಯ ಆಳ, ನಿರೂಪಣಾ ಶೈಲಿ, ಪ್ರತಿ ಸನ್ನಿವೇಶದಲ್ಲೂ ತುಳುಕುವ ಜೀವಂತಿಕೆ, ಗರ್ಭಿಣಿಯಾಗಿ ಕಾಣಿಸಿಕೊಳ್ಳುವ ವಿದ್ಯಾಬಾಲನ್ ಪ್ರಬುದ್ಧ ನಟನೆ ಚಿತ್ರದ ಗುಣಮಟ್ಟವನ್ನು ಹೆಚ್ಚಿಸಿರುವ ಪ್ರಧಾನ ಅಂಶಗಳು.

ಕಳೆದುಹೋದ ಪತಿಯನ್ನರಸಿ ಕೋಲ್ಕತ್ತಾಕ್ಕೆ ಕಾಲಿಡುವ ಗರ್ಭಿಣಿ ಸ್ತ್ರೀ ತನ್ನ ಪ್ರಯತ್ನದಲ್ಲಿ ಸಾಗುತ್ತಿದ್ದಂತೆ ಒಂದೊಂದೇ ಕುತೂಹಲದ ಎಳೆಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ತನಗೆ ನೆರವಾಗುವ ಪೊಲೀಸ್ ಅಧಿಕಾರಿಯಿಂದ `ಕಳ್ಳತನ~ವನ್ನೂ ಮಾಡಿಸುವ ಆಕೆಗೆ ಪತಿಯ ಕಣ್ಮರೆ ಜೊತೆ ತಳುಕು ಹಾಕಿಕೊಂಡ ಅನೇಕ ಸಂಗತಿಗಳು ಬಯಲಾಗತೊಡಗುತ್ತದೆ. ಕಥೆಯ ಮಿತಿಯೊಳಗೆ ಲವಲವಿಕೆ ಕಾಯ್ದುಕೊಳ್ಳುವ ಸನ್ನಿವೇಶಗಳು ಕಥೆಯ ಗಾಂಭೀರ್ಯವನ್ನು ಅಂತ್ಯದವರೆಗೂ ಉಳಿಸುತ್ತದೆ. ವಿದ್ಯಾ ಎಂಬ ಹೆಸರನ್ನು `ಬಿದ್ಯಾ~ ಎಂದು ಉಚ್ಚರಿಸುವ ಬಂಗಾಳಿಗಳ ಅಣಕವೂ ಇಲ್ಲಿದೆ.

ರಹಸ್ಯ ಕಾಪಾಡಬೇಕಾದ ಇಲಾಖೆಯೊಳಗಿನ ಭ್ರಷ್ಟಾಚಾರ, ಅಲ್ಲೇ ರಕ್ಷಣೆ ಪಡೆದಿರುವ ಕೊಲೆಗಡುಕರು, ಪೊಲೀಸರ ಅಸಹಾಯಕತೆ ಹೀಗೆ ಪತಿಯ ಕಣ್ಮರೆ ಹಿಂದಿನ ಅನೇಕ ಮುಖಗಳು ಗೋಚರವಾಗುತ್ತಾ ಹೋಗುತ್ತದೆ. ಪತಿಯ ಮುಖವನ್ನೇ ಹೋಲುವ ಅಪರಾಧಿಯ ಮತ್ತೊಂದು ಕಥೆ ಎದುರಾಗುತ್ತದೆ. ಅದರ ಹಿಂದೆ ಅಡಗಿರುವ ಸತ್ಯ ಒಂದೊಂದೇ ಬೆಳಕಿಗೆ ಬಂದಂತೆ ರೋಚಕತೆಯನ್ನು ಹುಟ್ಟುಹಾಕುವ ತಿರುವುಗಳು ಪ್ರೇಕ್ಷಕನ ಊಹೆಯನ್ನು ಅಂತ್ಯದಲ್ಲಿ ತಲೆಕೆಳಗಾಗಿಸುತ್ತದೆ. ಪತಿಯನ್ನು ಹುಡುಕುವ ನೆಪದಲ್ಲಿ ಪೊಲೀಸರನ್ನೇ ಬಳಸಿಕೊಂಡು ಸೇಡು ತೀರಿಸಿಕೊಳ್ಳುವ ಆಕೆಯ ಉದ್ದೇಶ ಸಫಲವಾಗುತ್ತದೆ.

ಬಂಗಾಳಿ ನಟರನ್ನೇ ಚಿತ್ರಕ್ಕೆ ಬಳಸಿಕೊಂಡಿರುವುದು ಚಿತ್ರದ ಸಹಜತೆಗೆ ಇಂಬು ನೀಡಿದೆ. ಪರಂಬ್ರತಾ ಚಟರ್ಜಿ ಯುವ ಪೊಲೀಸ್ ಅಧಿಕಾರಿಯಾಗಿ ನಗುವಿನಷ್ಟೇ ಸಹಜ ಅಭಿನಯ ನೀಡಿದ್ದಾರೆ. ನವಾಜುದ್ದೀನ್ ಸಿದ್ದಿಕಿ, ಶಾಶ್ವತ ಚಟರ್ಜಿ ಪಾತ್ರಗಳ ಹೊರತಾಗಿ ಉಳಿದ ಪಾತ್ರಗಳಿಗೆ ಹೆಚ್ಚಿನ ಮಹತ್ವವಿಲ್ಲ. ಅನಗತ್ಯ ಸನ್ನಿವೇಶ, ಹಾಡುಗಳನ್ನು ತುರುಕದ ಚಿತ್ರ ಮೈ ನವಿರೇಳಿಸುವ ಕಥೆಯ ನಡುವೆಯೂ ಭಾವನಾತ್ಮಕವಾಗಿಯೂ ಸೆಳೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.