ಶುಕ್ರವಾರ, ಮೇ 27, 2022
27 °C

ಕನಕಪುರದಲ್ಲಿ ರಸ್ತೆ ಒತ್ತುವರಿ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಪಟ್ಟಣದಲ್ಲಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಮನೆಯ ಮುಂದೆ ನಿರ್ಮಾಣ ಮಾಡಿಕೊಂಡಿದ್ದ ಮೇಲ್ಛಾವಣಿ, ಪೆಟ್ಟಿಗೆ ಅಂಗಡಿ, ತರಕಾರಿ, ಹೂವಿನ ಅಂಗಡಿಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಶುಕ್ರವಾರ ಕೈಗೊಂಡಿದ್ದ ಕಾರ್ಯಾಚರಣೆ ಸಣ್ಣಪುಟ್ಟ ವಿರೋಧವನ್ನು ಹೊರತು ಪಡಿಸಿ ಬಹುತೇಕ ಯಶಸ್ವಿಯಾಗಿ ನಡೆಯಿತು.ಎಂ.ಜಿ.ರಸ್ತೆಯು ಅತ್ಯಂತ ಕಿರಿದಾಗಿದಾಗಿರುವುದರಿಂದ ಅದನ್ನು ಇತ್ತೀಚೆಗೆ ವಿಸ್ತರಣೆ ಮಾಡಿ ಪಟ್ಟಣದುದ್ದಕ್ಕೂ ಜೋಡಿ ರಸ್ತೆ ಮಾಡಲಾಗಿತ್ತು. ಆದರೆ ಫುಟ್‌ಪಾತ್ ವ್ಯಾಪಾರಿಗಳು ಅದನ್ನು ಒತ್ತುವರಿ ಮಾಡಿಕೊಂಡು ಅಂಗಡಿಗಳನ್ನು ಇಟ್ಟುಕೊಂಡಿದ್ದರು. ರಸ್ತೆ ಬದಿಯ ಮನೆಯವರು ಫುಟ್‌ಪಾತ್ ಜಾಗವನ್ನು ಸೇರಿಸಿಕೊಂಡು ಮೇಲ್ಛಾವಣಿ ನಿರ್ಮಿಸಿಕೊಂಡಿದ್ದರು. ಇದರಿಂದ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.ಈ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಗುರುವಾರ ಸಭೆ ನಡೆಸಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಪಟ್ಟಣ ಪ್ರದೇಶದ ಒತ್ತುವರಿ ಜಾಗವನ್ನು ತೆರವುಗೊಳಿಸಲು ಚಿಂತನೆ ನಡೆಸಿತ್ತು.ಅದರಂತೆ ಪುರಸಭೆ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು. ಬೆಳಿಗ್ಗೆ 9 ಗಂಟೆಗೆ ಸೀಮೆಎಣ್ಣೆ ಬಂಕ್‌ನಿಂದ ಪ್ರಾರಂಭಗೊಂಡ ತೆರವು ಕಾರ್ಯ ಅಯ್ಯಪ್ಪಸ್ವಾಮಿ ದೇವಾಲಯ, ಬೂದಿಕೆರೆ ರಸ್ತೆ, ಬಸ್ ನಿಲ್ದಾಣದ ರಸ್ತೆಗಳ ಅಂಗಡಿಗಳ ಮುಂದೆ ಅಕ್ರಮವಾಗಿ ನಿರ್ಮಿಸಿದ್ದ ಮೆಟ್ಟಿಲು, ಮೇಲ್ಛಾವಣಿ, ಪೆಟ್ಟಿಗೆ ಅಂಗಡಿಗಳನ್ನು ಜೆ.ಸಿ.ಬಿ.ಯಂತ್ರಗಳನ್ನು ಬಳಸಿ ತೆರವುಗೊಳಿಸಲಾಯಿತು.ಕೋಡಿಹಳ್ಳಿಯ ಮುಖ್ಯ ರಸ್ತೆ ಕೆ.ಎನ್.ಎಸ್ ವೃತ್ತದಿಂದ ಕುರುಪೇಟೆವರೆಗೆ ಮತ್ತು ರಾಮನಗರ ರಸ್ತೆ ಎಂ.ಜಿ.ರಸ್ತೆಯಿಂದ ಮಸೀದಿ ಮಾರ್ಗವಾಗಿ ಮೆಳೆಕೋಟೆವರೆಗೂ ಇನ್ನೂ ತೆರವು ಕಾರ್ಯ ಬಾಕಿ ಉಳಿದಿದೆ. ಅದನ್ನು ಸೋಮವಾರ ತೆರವುಗೊಳಿಸಲಾಗುವುದು. ವ್ಯಾಪಾರಿಗಳು ತಾವಾಗಿಯೇ ತೆರವುಗೊಳಿಸಿದರೆ ಒಳ್ಳೆಯದು ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಮಾಯಣ್ಣಗೌಡ ತಿಳಿಸಿದ್ದಾರೆ.

ಆಕ್ರೋಶ: ರಾಘವೇಂದ್ರ ಕಾಲೊನಿ ಬಳಿ ಅಂಗಡಿಯೊಂದರ ಮುಂದೆ ನಿರ್ಮಾಣ ಮಾಡಿದ್ದ ಮೇಲ್ಛಾವಣಿಯನ್ನು ತೆರವುಗೊಳಿಸುವ ಸಂದರ್ಭದಲ್ಲಿ ಮನೆಯ ಮಾಲೀಕರು ಯಾವುದೇ ಮುನ್ಸೂಚನೆ ಇಲ್ಲದೆ ಏಕಾ-ಏಕಿ ತೆರವುಗೊಳಿಸಿ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಮಾತಿನ ಚಕಮಕಿ: `ಅಂಗಡಿಗಳ ಮೇಲ್ಛಾವಣಿಯನ್ನು ತೆರವುಗೊಳಿಸಲು ಮುಂದಾದಾಗ ವ್ಯಾಪಾರಿಗಳು ತೆರವಿಗೆ ಅವಕಾಶ ನೀಡುವುದಿಲ್ಲ. ರಸ್ತೆ ವಿಸ್ತರಣೆ ಸಂದರ್ಭದಲ್ಲಿ ನಮ್ಮ ಜಾಗವನ್ನೇ ಬಿಟ್ಟು ಕೊಟ್ಟಿದ್ದೇವೆ. ಅದರ ಪರಿಹಾರ ಹಣ ಈವರೆಗೂ ನಮ್ಮಗೆ ತಲುಪಿಲ್ಲ. ಮೊದಲು ಪರಿಹಾರ ನೀಡಿ ನಂತರ ತೆರವು ಗೊಳಿಸಿ' ಎಂದು ಅಧಿಕಾರಿಗಳನ್ನು ಆಗ್ರಹಿಸಿದರು.ಪುರಸಭೆ ಅಧಿಕಾರಿ ಕೆ. ಮಾಯಣ್ಣ ಗೌಡ ಮಾತನಾಡಿ, `ಜಿಲ್ಲಾಡಳಿತಕ್ಕೆ ನ್ಯಾಯಾಲಯ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ತೆರವು ಮಾಡಲಾಗುತ್ತಿದೆ. ಫುಟ್‌ಪಾತ್ ಜಾಗವನ್ನು ಒತ್ತುವರಿ ಮಾಡಿಕೊಳ್ಳುವುದು ಕ್ರಿಮಿನಲ್ ಅಪರಾಧ. ಆದರೂ ನಿಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳದೆ ಕೇವಲ ತೆರವು ಕಾರ್ಯ ಮಾಡುತ್ತಿದ್ದೇವೆ. ದಯವಿಟ್ಟು ಸಹಕರಿಸಿ' ಎಂದು ಮನವಿ ಮಾಡಿದರು.ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ಮಾತನಾಡಿ, ಸರ್ಕಾರದ ಕಾರ್ಯಾಚರಣೆಗೆ ಅಡ್ಡಿಪಡಿಸುವುದು ಕಾನೂನು ಬಾಹಿರ. ನೀವು ಕಳೆದುಕೊಂಡಿರುವ ಜಾಗಕ್ಕೆ ಶೀಘ್ರವೇ ಪರಿಹಾರ ಒದಗಿಸಿ, ಬದಲಿ ನಿವೇಶನವನ್ನು ನೀಡಲಾಗುವುದು. ತೆರವು ಕಾರ್ಯಾಚರಣೆಗೆ ಸಹಕರಿಸುವಂತೆ ಮನವೊಲಿಸಿ ನಂತರ ಕಾರ್ಯಾಚರಣೆ ಮುಂದುವರಿಸಿದರು.ಧರಣಿ: `ಫುಟ್‌ಪಾತ್ ವ್ಯಾಪಾರವನ್ನೇ ನಂಬಿಕೊಂಡು ನೂರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಹೀಗೆ ಅನಿರೀಕ್ಷಿತವಾಗಿ ತೆರವುಗೊಳಿಸಿದರೆ ಜೀವನ ನಿರ್ವಹಣೆ ಮಾಡುವುದಾದರೂ ಹೇಗೆ. ವ್ಯಾಪಾರಿಗಳಿಗೆ ಕೂಡಲೇ ಬದಲಿ ವ್ಯವಸ್ಥೆ ಕಲ್ಪಿಸಬೇಕು' ಎಂದು ಬಿ.ಎಸ್.ಪಿ. ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ್ ಒತ್ತಾಯಿಸಿದರು.ಪುಟ್‌ಪಾತ್ ಅಂಗಡಿಯನ್ನು ತೆರವುಗೊಳಿಸಿರುವುದರ ವಿರುದ್ಧ ವ್ಯಾಪಾರಿಗಳು ಪುರಸಭೆ ಕಚೇರಿ ಮುಂಭಾಗದ ರಸ್ತೆಯಲ್ಲಿ ನಡೆಸಿದ ಧರಣಿಯ ನೇತೃತ್ವ ವಹಿಸಿ ಅವರು ಮಾತನಾಡಿದರು.ಫುಟ್‌ಪಾತ್ ವ್ಯಾಪಾರಿಗಳಿಗೆ ಸೂಕ್ತ ವ್ಯಾಪಾರ ಸ್ಥಳವನ್ನು ಇದುವರೆಗೂ ಪುರಸಭೆಯಾಗಲಿ, ತಾಲ್ಲೂಕು ಆಡಳಿತವಾಗಲಿ ನೀಡಿಲ್ಲ. ಹೀಗಿರುವಾಗ ಇದಕ್ಕಿದ್ದಂತೆ ತೆರವು ಮಾಡುವುದು ಎಷ್ಟು ಸಮಂಜಸ ಎಂದು ಅವರು ಪ್ರಶ್ನಿಸಿದರು.ವ್ಯಾಪಾರಿಗಳ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಸ್ಥಳೀಯ ಶಾಸಕರು ಮತ್ತು ತಾಲ್ಲೂಕು ದಂಡಾಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಸ್ಥಳಾವಕಾಶ ಒದಗಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು  ಪುರಸಭೆ ಮುಖ್ಯಾಧಿಕಾರಿ ಕೆ.ಮಾಯಣ್ಣಗೌಡ ಭರವಸೆ ನೀಡಿದ ನಂತರ ವ್ಯಾಪಾರಿಗಳು ಧರಣಿ ಅಂತಿಮಗೊಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.