ಗುರುವಾರ , ಜೂಲೈ 2, 2020
22 °C

ಕನಸು ನನಸಾದ ಖುಷಿ ಸವಿಯುತ್ತಿದ್ದೇನೆ

ಕೆ.ಓಂಕಾರ ಮೂರ್ತಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಸು ನನಸಾದ ಖುಷಿ ಸವಿಯುತ್ತಿದ್ದೇನೆ

ಬೆಂಗಳೂರು: ಈ ಬಾರಿಯ ಐಪಿಎಲ್‌ನಲ್ಲಿ ಜಹೀರ್ ಖಾನ್, ಬ್ರೆಟ್ ಲೀ, ಡಗ್ ಬೊಲಿಂಜರ್, ಮಾರ್ನ್ ಮಾರ್ಕೆಲ್, ಡೇಲ್ ಸ್ಟೇನ್ ಅವರಂಥ ವಿಶ್ವದರ್ಜೆಯ ವೇಗದ ಬೌಲರ್‌ಗಳನ್ನು ಮೀರಿಸಿ ನಿಂತಿದ್ದು ಉದ್ಯಾನ ನಗರಿಯ ಹುಡುಗ ಎಸ್.ಅರವಿಂದ್.ಲಸಿತ್ ಮಾಲಿಂಗ (28 ವಿಕೆಟ್) ಹಾಗೂ ಮುನಾಫ್ ಪಟೇಲ್ (22) ಅವರ ಬಳಿಕ ಅತಿ ಹೆಚ್ಚು ವಿಕೆಟ್ ಗಳಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಡಗೈ ವೇಗಿ ಅರವಿಂದ್ ಅವರತ್ತ ಈಗ ಎಲ್ಲರ ಚಿತ್ತ ಹರಿಯುತ್ತಿದೆ. ಈ ಟೂರ್ನಿಯಲ್ಲಿ ಅವರು 21 ವಿಕೆಟ್ ಕಬಳಿಸಿದ್ದೇ ಅದಕ್ಕೆ ಕಾರಣ. ಜೊತೆಗೆ ಚಾಲೆಂಜರ್ಸ್ ಫೈನಲ್ ತಲುಪಲು ಇವರ ಬೌಲಿಂಗ್ ನೆರವಾಯಿತು.`ಟೂರ್ನಿಯಲ್ಲಿ ವಿಶ್ವಶ್ರೇಷ್ಠ ಆಟಗಾರರಿದ್ದರು. ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಿದ್ದರು. ಅತ್ಯುತ್ತಮ ಬೌಲರ್‌ಗಳಿದ್ದರು. ಇವರ ನಡುವೆ ನಾನು ಮಿಂಚಿದ್ದು ತುಂಬಾ ಖುಷಿ ನೀಡಿದೆ. ಈ ರೀತಿ ಸಾಧನೆಯ ಕನಸು ಕಂಡಿದ್ದ ನಾನು ಅದನ್ನೀಗ ನನಸಾಗಿಸಿ ಖುಷಿಪಡುತ್ತಿದ್ದೇನೆ~ ಎಂದು ಅರವಿಂದ್ ನುಡಿದಿದ್ದಾರೆ.ಕರ್ನಾಟಕ ರಣಜಿ ತಂಡದ ಪ್ರಮುಖ ಬೌಲರ್ ಆಗಿರುವ ಅರವಿಂದ್ ಈ ಹಿಂದಿನ ಐಪಿಎಲ್ ಟೂರ್ನಿಗಳಲ್ಲಿ ಕೂಡ ಚಾಲೆಂಜರ್ಸ್ ತಂಡದಲ್ಲಿದ್ದರು. ಆದರೆ ಆಗ ಅವರಿಗೆ ಅವಕಾಶ ಲಭಿಸಿರಲಿಲ್ಲ. ಈ ಬಾರಿ ಲಭಿಸಿದ ಅವಕಾಶವನ್ನು ಎರಡು ಕೈಗಳಿಂದ ಬಾಚಿ ತಬ್ಬಿಕೊಂಡಿದ್ದಾರೆ.ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರು 20 ಪಂದ್ಯಗಳಿಂದ 68 ಕಬಳಿಸಿದ್ದಾರೆ. 2009-10ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ಫೈನಲ್ ತಲುಪಲು ಈ ಬೌಲರ್ ಕೂಡ ಕಾರಣ.ಐಪಿಎಲ್ ಟೂರ್ನಿಯ ಅನುಭವದ ಬಗ್ಗೆ 27 ವರ್ಷ ವಯಸ್ಸಿನ ಅರವಿಂದ್ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ್ದಾರೆ.* ಐಪಿಎಲ್‌ನಲ್ಲಿ ಪ್ರಮುಖ ಬೌಲರ್‌ಗಳ ನಡುವೆಯೂ ನೀವು ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದೀರಿ. ಈ ಬಗ್ಗೆ?ಇದೊಂದು ನನ್ನ ಜೀವನದಲ್ಲಿ ಮರೆಯಲಾಗದ ಟೂರ್ನಿ. ಟರ್ನಿಂಗ್ ಪಾಯಿಂಟ್ ಕೂಡ. ಪ್ರತಿಕ್ಷಣವನ್ನು ತುಂಬಾ ಖುಷಿಯಿಂದ ಕಳೆದಿದ್ದೇನೆ. ಪ್ರಮುಖ ಆಟಗಾರರ ನಡುವೆ ಉತ್ತಮ ಪ್ರದರ್ಶನ ತೋರಿ ಮೆಚ್ಚುಗೆ ಗಳಿಸಿದ್ದೇನೆ. ಹಿರಿಯ ಆಟಗಾರರಿಂದ ಹಲವು ವಿಷಯ ಕಲಿತಿದ್ದೇನೆ. ಕುಂಬ್ಳೆ ಸರ್, ವೆಂಕಿ (ವೆಂಕಟೇಶ್ ಪ್ರಸಾದ್) ಸರ್ ಹಾಗೂ ಜಹೀರ್ ನನ್ನತ್ತ ಹೆಚ್ಚು ಗಮನ ಹರಿಸುತ್ತಿದ್ದರು. * ಐಪಿಎಲ್‌ನಲ್ಲಿ ಯಾರ ವಿಕೆಟ್ ಹೆಚ್ಚು ಖುಷಿ ಕೊಟ್ಟಿದೆ?

ಎಲ್ಲಾ ವಿಕೆಟ್‌ಗಳು ನನಗೆ ಖುಷಿ ನೀಡಿವೆ. ಏಕೆಂದರೆ ಟೂರ್ನಿಯಲ್ಲಿ ಅಂತರರಾಷ್ಟ್ರೀಯ ದರ್ಜೆಯ ಆಟಗಾರರಿದ್ದರು.  ಇವರ ನಡುವೆ ನಾನು ಮಿಂಚಿದ್ದು ತುಂಬಾ ಖುಷಿ ತಂದಿದೆ. ಇಂತಹ ಸಾಧನೆ ಮಾಡಬೇಕು ಎಂಬ ಕನಸು ಹೊಂದಿದ್ದೆ. ಅದೀಗ ನನಸಾಗಿದೆ.* ಜಹೀರ್ ಜೊತೆ ಚೆಂಡು ಹಂಚಿಕೊಳ್ಳುವ ಅವಕಾಶ ಲಭಿಸಿತ್ತು. ಇಂತಹ ಅವಕಾಶ ನಿರೀಕ್ಷಿಸಿದ್ದೀರಾ?

ಆರಂಭದಲ್ಲಿ ಅಂತಹ ನಿರೀಕ್ಷೆ ಇರಲಿಲ್ಲ. ಆದರೆ ಒಮ್ಮೆಲೇ ನನ್ನ ಅದೃಷ್ಟ ಬದಲಾಯಿತು. ನನ್ನ ನೆಚ್ಚಿನ ಹೀರೊ ಜಹೀರ್ ಜೊತೆ ಬೌಲಿಂಗ್ ಮಾಡುವ ಅವಕಾಶ ಲಭಿಸಿತು. ಆರಂಭದ ಓವರ್‌ಗಳನ್ನು ಮಾಡಲು ನಾಯಕ ವೆಟೋರಿ ನನಗೆ ಚೆಂಡು ನೀಡುತ್ತಿದ್ದರು.* ಗೇಲ್, ದಿಲ್ಶಾನ್, ಡಿವಿಲಿಯರ್ಸ್, ವೆಟೋರಿ ಅವರೊಂದಿಗಿನ ಒಡನಾಟ ಹೇಗಿತ್ತು?

ಎಲ್ಲಾ ಹಿರಿಯ ಆಟಗಾರರು ನೆಟ್ಸ್‌ನಲ್ಲಿ ಮಾರ್ಗದರ್ಶನ ನೀಡುತ್ತಿದ್ದರು. ಜೊತೆಗೆ ಅಭ್ಯಾಸದ ವೇಳೆ      ಗೇಲ್‌ಗೆ ಬೌಲಿಂಗ್ ಮಾಡುತ್ತಿದ್ದೆ. ಒತ್ತಡದ ಸನ್ನಿವೇಶದಲ್ಲಿ ಯಾವ ರೀತಿ ಬೌಲಿಂಗ್ ಮಾಡಬೇಕು ಎಂಬುದನ್ನು ಜಹೀರ್ ಹೇಳುತ್ತಿದ್ದರು. ಇದೊಂದು ವಿಶೇಷ ಅನುಭವ.* ನಿಮ್ಮ ಪ್ರದರ್ಶನ ಮಟ್ಟದಲ್ಲಿ ಕಳೆದ ಐಪಿಎಲ್‌ಗೂ ಈ ವರ್ಷದ ಟೂರ್ನಿಗೂ ಏನು ವ್ಯತ್ಯಾಸವಿದೆ?

ಕಳೆದ ಐಪಿಎಲ್‌ನಲ್ಲಿ ಹೆಚ್ಚು ಅವಕಾಶ ಸಿಕ್ಕಿರಲಿಲ್ಲ. ತುಂಬಾ ಮಂದಿ ಬೌಲರ್‌ಗಳಿದ್ದರು. ಆದರೆ ಈ ಬಾರಿ ತಂಡ ಬದಲಾಯಿತು. ಹೆಚ್ಚು ಅವಕಾಶ ಲಭಿಸಿತು. ನನ್ನ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಂಡೆ.

 

* ನಿಮ್ಮ ಪ್ರದರ್ಶನಕ್ಕೆ ಯಾವ ರೀತಿ ಮೆಚ್ಚುಗೆ ವ್ಯಕ್ತವಾಯಿತು?

ಚೆನ್ನಾಗಿ ಬೌಲಿಂಗ್ ಮಾಡುತ್ತ್ದ್ದಿದೀಯಾ ಎಂದು ಕುಂಬ್ಳೆ, ಜಹೀರ್ ಹೇಳಿದಾಗ ತುಂಬಾ ಖುಷಿಯಾಯಿತು. ವೀಕ್ಷಕ ವಿವರಣೆಗಾರರು, ಕ್ರಿಕೆಟ್ ವಿಶ್ಲೇಷಕರು, ಮಾಜಿ ಕ್ರಿಕೆಟಿಗರು  ಕೂಡ ಮೆಚ್ಚುಗೆಯ ಮಾತು ಹೇಳಿದರು.

* ಎರಡು ವರ್ಷಗಳಿಂದ ರಣಜಿಯಲ್ಲೂ ನೀವು ಕರ್ನಾಟಕದ ಪ್ರಮುಖ ಬೌಲರ್. ಯಾವ ರೀತಿ ಸುಧಾರಣೆ ಕಂಡಿದ್ದೀರಿ?

ಖಂಡಿತ ತುಂಬಾ ಸುಧಾರಣೆ ಕಂಡಿದ್ದೇನೆ. ಅನುಭವಿ ಆಟಗಾರರ ಒಡೆನಾಟ ಹಾಗೂ ಅವರ ಮಾರ್ಗದರ್ಶನ ನೆರವಿಗೆ ಬರುತ್ತಿದೆ. ಈಗಿನ ಪ್ರದರ್ಶನವನ್ನು ಕಾಯ್ದು ಕೊಂಡು ಹೋಗಬೇಕು ಅಷ್ಟೆ.* ಭಾರತ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸವಿದೆಯೇ?

ಕಠಿಣ ಪ್ರಯತ್ನ ಹಾಕಿ ಆಡುವುದಷ್ಟೆ ನನ್ನ ಕೆಲಸ. ಉಳಿದಿದ್ದು ಆಯ್ಕೆದಾರರಿಗೆ ಬಿಟ್ಟಿದ್ದು. ಆದರೆ ಭರವಸೆಯ ಕೈಬಿಡಬಾರದು ಎಂಬುದನ್ನು ನಾನು ಇಷ್ಟು ದಿನಗಳಲ್ಲಿ ಕಲಿತುಕೊಂಡಿದ್ದೇನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.