ಶುಕ್ರವಾರ, ಮೇ 14, 2021
31 °C
ಮಾಸ್ತಿ ಪ್ರಶಸ್ತಿ ಪ್ರದಾನ

ಕನ್ನಡಕ್ಕೆ ತೊಂದರೆ: ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ವಿದೇಶಿಯರು ನಮ್ಮನ್ನು ಆಳುತ್ತಿದ್ದಾಗ ಕನ್ನಡ ಭಾಷೆಗೆ ತೊಂದರೆ ಇರಲಿಲ್ಲ. ಅವರು ಯಾವ ಭಾಷೆಯನ್ನೂ ಕೊಲ್ಲಲಿಲ್ಲ. ನಮ್ಮವರೇ ಆಳುತ್ತಿರುವಾಗ ಕನ್ನಡ ಭಾಷೆಗೆ ತೊಂದರೆ ಎದುರಾಗಿದೆ' ಎಂದು ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ಆಕ್ರೋಶ ವ್ಯಕ್ತಪಡಿಸಿದರು.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ ಸಮಿತಿ ಹಾಗೂ ಕೋಲಾರದ ಡಾ.ಮಾಸ್ತಿ ಟ್ರಸ್ಟ್ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಮಾಸ್ತಿ ಪ್ರಶಸ್ತಿ' ಸ್ವೀಕರಿಸಿ ಅವರು ಮಾತನಾಡಿದರು.`ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ನೀಲೇಶ್ವರದ ಆಚೆಗೂ ಇತ್ತು. ಈಗ ದ.ಕ. ಜಿಲ್ಲೆ ಕಿರಿದಾಗಿದೆ. ಕಾಸರಗೋಡಿನಲ್ಲಿ ಮಲಯಾಳಂ ಭಾಷೆ ಕಡ್ಡಾಯ ಮಾಡಲಾಗಿದೆ. ಕನ್ನಡ ಪ್ರದೇಶವನ್ನು ನಮ್ಮವರು ಕೇರಳಕ್ಕೆ ಬಿಟ್ಟುಕೊಟ್ಟಿದ್ದಾರೆ' ಎಂದು ಕಿಡಿಕಾರಿದರು.`ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣ ಗುಣಮಟ್ಟ ಕಳೆದುಕೊಂಡಿದೆ. ಶಾಲೆಗಳಲ್ಲಿ ಸರಿಯಾದ ಶಿಕ್ಷಕರು ಇಲ್ಲ. ಸರ್ಕಾರ ಶಾಲಾ ಗ್ರಂಥಾಲಯಗಳಿಗೆ ಅಪಾರ ಅನುದಾನ ನೀಡುತ್ತಿದೆ. ಆದರೆ, ಗ್ರಂಥಾಲಯಗಳಲ್ಲಿ ಅಡುಗೆ, ಮದರಂಗಿ ಪುಸ್ತಕಗಳೇ ಇವೆ. ಶಾಲೆಗಳಲ್ಲಿ ಮಕ್ಕಳಿಗೆ ಕಥೆ ಓದಿಸುತ್ತಿಲ್ಲ' ಎಂದು ಅವರು ಬೇಸರ ವ್ಯಕ್ತಪಡಿಸಿದರು.ಹಿರಿಯ ಸಾಹಿತಿ ಕೋ.ಚೆನ್ನಬಸಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, `ನಮ್ಮ ನಾಲಿಗೆಯಲ್ಲಿ ಕನ್ನಡ ಇರಬೇಕು. ಆಗ ಕನ್ನಡ ಉಳಿಯುತ್ತದೆ. ಕನ್ನಡ ಶಾಲೆಗಳನ್ನು ಉಳಿಸುವ ಕೆಲಸವನ್ನು ನಾವೆಲ್ಲ ಒಟ್ಟಾಗಿ ಮಾಡಬೇಕು' ಎಂದು ಕಿವಿಮಾತು ಹೇಳಿದರು.ಹಿರಿಯ ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್, `ವಿಮರ್ಶಕನಿಗೆ ಸೂಕ್ಷ್ಮ ಸಂವೇದನೆ, ಪ್ರಾಮಾಣಿಕತೆ ಇರಬೇಕು. ಸತ್ಯಪೂರ್ಣ ತೀರ್ಮಾನಗಳು ಆತನಿಂದ ಬರಬೇಕು. ಆದರೆ, ಸತ್ಯಪೂರ್ಣ ವಿಮರ್ಶೆ ವ್ಯಕ್ತಿಗೆ ಮಾಡಲು ಸಾಧ್ಯವೇ ಎಂಬ ಸಂಶಯ ಕಾಡುತ್ತಿದೆ. ಗ್ರಹಿಕೆ ಸದಾ ಅಪರಿಪೂರ್ಣ ಆಗಿರುತ್ತದೆ' ಎಂದರು.ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ, `ಭಾರತೀಯ ಸಾಹಿತ್ಯ ಕಥನ ಪ್ರಕಾರ. ಕಥನದಿಂದ ರಸಾನುಭೂತಿ ಸಾಧ್ಯ. ಮಾಸ್ತಿ ಅವರು ಕಥನ ಸಾಹಿತ್ಯದ ದೊಡ್ಡ ಶಕ್ತಿ. ಕನ್ನಡದ ದೊಡ್ಡ ಆಸ್ತಿ' ಎಂದರು.ವಿಮರ್ಶಕ ಎಸ್.ಆರ್.ವಿಜಯಶಂಕರ ಅಭಿನಂದನಾ ಭಾಷಣ ಮಾಡಿ, `ಸಾರಾ ಅಬೂಬಕ್ಕರ್ ಮಾನವೀಯ ಅನುಕಂಪದ ಲೇಖಕಿ. ಸಿದ್ದರಾಮಯ್ಯ ನೆಲಮೂಲದ ಕವಿ. ರಾಮಚಂದ್ರನ್ ಮಂಡನೆಯ ಕ್ರಮದ ಮೂಲಕ ಸತ್ಯಶೋಧನೆಯಲ್ಲಿ ತೊಡಗುವ ನಮ್ಮ ನಡುವಿನ ದೊಡ್ಡ ವಿಮರ್ಶಕ' ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಕೆ.ಆರ್.ರಾಮಕೃಷ್ಣ ಕಥಾ ಪುರಸ್ಕಾರ ಪ್ರದಾನ ಮಾಡಿದರು.

ಮಾಸ್ತಿ ಪ್ರಶಸ್ತಿ ಪುರಸ್ಕೃತರು

-ಡಾ.ಸಿ.ಎನ್.ರಾಮಚಂದ್ರನ್

-ಸಾರಾ ಅಬೂಬಕ್ಕರ್

-ಪ್ರೊ.ಎಸ್.ಜಿ.ಸಿದ್ದರಾಮಯ್ಯ.

ಕಥಾ ಪುರಸ್ಕಾರ ಪುರಸ್ಕೃತರು

-ಸಿ.ಎನ್.ರಾಮಚಂದ್ರ (ಸುಮುಖ ಪ್ರಕಾಶನ, ಬೆಂಗಳೂರು)

-ಅನುಪಮಾ ಪ್ರಸಾದ್ (ಪಲ್ಲವ ಪ್ರಕಾಶನ, ಬಳ್ಳಾರಿ)

-ಡಾ.ಚಿಂತಾಮಣಿ ಕೊಡ್ಲೆಕೆರೆ (ಅಂಕಿತ ಪುಸ್ತಕ, ಬೆಂಗಳೂರು)

ಮಾಸ್ತಿ ಭವನಕ್ಕೆ ಜಾಗ

`ನಗರದ ಜ್ಞಾನಗಂಗೋತ್ರಿಯ ಬಳಿ ಉಳ್ಳಾಲ ಮುಖ್ಯ ರಸ್ತೆಯಲ್ಲಿ ಮಾಸ್ತಿ ಭವನ ನಿರ್ಮಾಣಕ್ಕೆ ಬಿಡಿಎಯಿಂದ ಜಾಗ ದೊರಕಿದೆ' ಎಂದು ಮಾಸ್ತಿ ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ತಿಳಿಸಿದರು.ಸಮಾರಂಭದಲ್ಲಿ ಮಾತನಾಡಿದ ಅವರು, ಮಾಸ್ತಿ ಭವನದಲ್ಲಿ 300-400 ಮಂದಿ ಕುಳಿತುಕೊಳ್ಳಬಹುದಾದ ಸಭಾಂಗಣ, ಗ್ರಂಥಾಲಯ, ಮಾಸ್ತಿ ಪ್ರತಿಮೆ ಸ್ಥಾಪನೆ ಮಾಡಲಾಗುವುದು. ಇದಕ್ಕೆ ಸರ್ಕಾರ ಹಾಗೂ ಜನರ ಸಹಕಾರ ಅಗತ್ಯ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.