ಸೋಮವಾರ, ಜನವರಿ 20, 2020
21 °C

ಕನ್ನಡದ ನೆಲೆಯಲ್ಲಿ ವಿಶ್ವ ಚರಿತ್ರೆಯ ನೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಮರ್ಶೆ

ಚರಿತ್ರೆಯ ಬರವಣಿಗೆ ಹಾಗೂ ಅಧ್ಯಯನಕ್ಕೆ ಸಂಬಂಧಿಸಿದಂತೆ, ಶೈಕ್ಷಣಿಕ ಸಮುದಾಯಗಳನ್ನು ಹಾಗೂ ಸಮಾಜಗಳನ್ನು ಕಾಡಿರುವ ಸಮಸ್ಯೆ- ನಿರಂತರವಾಗಿ ರಚನೆಗೊಳ್ಳುತ್ತಿರುವ ವಸಾಹತುಶಾಹಿ ಪ್ರಭಾವಿತ ಚರಿತ್ರೆಗಳು.19ನೇ ಶತಮಾನದಿಂದೀಚೆಗೆ ರಚನೆಯಾದ ಜಾಗತಿಕ ಚರಿತ್ರೆಗಳೆಲ್ಲವೂ, ವಸಾಹತುಶಾಹಿ ಧೋರಣೆಗಳ ಮೂಲಕ ನೋಡಿರುವ ಪ್ರಯತ್ನಗಳು. ಏಷ್ಯಾ, ಆಫ್ರಿಕ, ಉತ್ತರ ಹಾಗೂ ದಕ್ಷಿಣ ಅಮೆರಿಕಾ, ಆಸ್ಟ್ರೇಲಿಯ- ಈ ಖಂಡಗಳ ಚರಿತ್ರೆ ರಚನೆಯಲ್ಲಿ ವಸಾಹತು ದೃಷ್ಟಿಕೋನ ಪ್ರಬಲವಾಗಿದೆ. ಇದರಿಂದ ಆಯಾ ಸಮಾಜಗಳು, ಸಮುದಾಯಗಳು ತಮ್ಮ ಅನನ್ಯತೆಯನ್ನು ತಮ್ಮದೇ ಅನುಭವಗಳ ಮುಖೇನ ಪ್ರಾದೇಶಿಕ ಸಂಪ್ರದಾಯಗಳ ಮೂಲಕ ಕಟ್ಟಿಕೊಳ್ಳುವುದಕ್ಕೆ ಬದಲಾಗಿ ಯುರೋ-ಅಮೆರಿಕನ್ನರ ಧ್ವನಿಗಳಲ್ಲಿ ಕಟ್ಟಲಾಗಿದೆ. ಇದರಿಂದಾಗಿರುವ ಬೃಹತ್ ನಷ್ಟವೆಂದರೆ, ಈ ಎಲ್ಲ ಪ್ರದೇಶಗಳ ಚಾರಿತ್ರಿಕ ಅಭಿವ್ಯಕ್ತಿಯಲ್ಲಿ ಬಂದಿರುವ ವ್ಯಕ್ತಿಗತ ಮೌಲ್ಯಮಾಪನ.ಒಂದು ರೀತಿಯ (ಠ್ಠಚ್ಜಿಛ್ಚಿಠಿಜಿಛಿ ಚ್ಞಚ್ಝಜಿ) ಅಭಿವೃದ್ಧಿ, ಸಾಮಾಜಿಕ ವ್ಯವಸ್ಥೆಗಳು, ರಾಜಕೀಯ ಸಂಪ್ರದಾಯಗಳು, ಧಾರ್ಮಿಕ ಚೌಕಟ್ಟುಗಳು, ನಗರೀಕರಣ, ಚಾರಿತ್ರಿಕ ಚಳವಳಿಗಳು, ಬೌದ್ಧಿಕ ವಲಯಗಳು, ಎಲ್ಲವುಗಳನ್ನೂ ನಿರಂತರವಾಗಿ ವಸಾಹತುಶಾಹಿ ಶಕ್ತಿಗಳ ಅನನ್ಯತೆಗೆ ಒರೆಹಚ್ಚಿ ನೋಡಿ ಅತ್ಯಂತ ಸ್ವಷ್ಟವಾದ ಸಬ್ಜೆಕ್ಟಿವ್ ನಿಲುವುಗಳು ಮೂಡಿ ಬಂದಿರುವುದು, ಆಧುನಿಕ ಚರಿತ್ರೆ ಬರವಣಿಗೆಯ ದೊಡ್ಡ ವಿಪರ್ಯಾಸ.ಈ ನಿಲುವುಗಳು ಎಷ್ಟು ಶಿಷ್ಟ ಸಂಪ್ರದಾಯವಾಗಿ ವ್ಯಾಪಕವಾಗಿದೆಯೆಂದರೆ, ಚರಿತ್ರೆಯ ಆಧಾರಿತವಾಗಿ ಬರುವ ದೃಶ್ಯ ಮಾಧ್ಯಮಗಳೂ ಇವಕ್ಕೆ ಹೊರತಾಗಿಲ್ಲ. ಎರಡನೇ ಮಹಾಯುದ್ಧಕ್ಕೆ ಸಂಬಂಧಿಸಿದ ಹಾಲಿವುಡ್ ಸಿನಿಮಾಗಳಿಂದ ಹಿಡಿದು, ಆಫ್ಘಾನಿಸ್ತಾನ, ಇರಾಕ್, ಅಥವಾ ಜಾಸ್‌ಮೈನ್ ರೆವೆಲ್ಯೂಷನ್ ಬಿತ್ತರಿಸಿದ ದೂರದರ್ಶನದ ಚಾನೆಲ್‌ಗಳ ತನಕ ಆಯಾ ಪ್ರದೇಶದ ಅಥವಾ ಭಾಗಿಗಳ ನಿರೂಪಣೆ ಕೇಳುವುದು ಸೀಮಿತ. ಎರಡನೇ ಮಹಾಯುದ್ಧದ ನಂತರ ಅರ್ಧಶತಮಾನದವರೆಗೂ, ಸರಿಸುಮಾರು ಯುದ್ಧದ ಬಗೆಗಿನ ಸಂವೇದನೆಗಳೆಲ್ಲಾ ವಸಾಹತುಶಾಹಿ ಬರವಣಿಗೆಗಳು ಅಮೆರಿಕಾದ ಹಾಲಿವುಡ್ ಸಿನಿಮಾಗಳಿಂದ ರೂಪಿತಗೊಂಡವು ಎಂದರೆ ಅತಿಶಯೋಕ್ತಿಯಲ್ಲ.ಈಗಲೂ ಯುದ್ಧದ ಬಗ್ಗೆ ಹಾಲಿವುಡ್‌ನ `ಪರ್ಲ್ ಹಾರ್ಬರ್~ ಸಿನಿಮಾಕ್ಕೆ ದೊರೆತ ಭರ್ಜರಿ ಯಶಸ್ಸು, ಜಪಾನಿ ದೃಷ್ಟಿಕೋನದ `ಲೆಟರ್ಸ್‌ ಫ್ರಂ ಇವೋ ಜಿಮಾ~ಗೆ (ಇದೂ ಕೂಡ ಹಾಲಿವುಡ್‌ನ ನಿರ್ಮಾಣ) ದೊರೆಯಲೇ ಇಲ್ಲ. ಪ್ರತಿಯೊಂದು ಪ್ರದೇಶದ ಚಾರಿತ್ರಿಕ ಅನನ್ಯತೆ ಆ ಪ್ರದೇಶದ ನಿರ್ದಿಷ್ಟ ಅನುಭವಗಳಿಂದ ಹೊರಹೊಮ್ಮುವುದರಿಂದ ಮೇಲ್ದರ್ಜೆ, ಕೆಳದರ್ಜೆ, ಉತ್ಕೃಷ್ಟ, ಉತ್ಕೃಷ್ಟವಲ್ಲದ್ದು ಎಂಬಂತಹ `ಹೋಲಿಕೆ~ ಇತಿಹಾಸಕ್ಕೆ ಸ್ಥಳಾವಕಾಶ ಇರುವುದು ಸಾಧ್ಯವಿಲ್ಲ.ಈ ವಸಾಹತು ದೃಷ್ಟಿಕೋನಗಳು ಒಂದೆಡೆಯಾದರೆ, ಸಾಹಿತ್ಯ ಮಾಪನದಿಂದ, ಸಾಹಿತ್ಯಕ ನಿಟ್ಟಿನಿಂದ ನಡೆಯುವ ಚರಿತ್ರೆಯ ಬರವಣಿಗೆ ಮತ್ತು ವಿಶ್ಲೇಷಣೆ, ಚರಿತ್ರೆ ಅಧ್ಯಯನಕ್ಕೆ ಬಂದಿರುವ ಮತ್ತೊಂದು ಸಮಸ್ಯೆ. ಪ್ರತಿಯೊಂದು ಶೈಕ್ಷಣಿಕ ಸಂವಾದಕ್ಕೂ ಅದರದೇ ಆದ ಶೈಕ್ಷಣಿಕ ತೀವ್ರತೆಯಿರುತ್ತದೆ. ಸೈದ್ಧಾಂತಿಕ ನೆಲೆಗಳಿರುತ್ತವೆ. ಬರವಣಿಗೆಯ ತಾಂತ್ರಿಕ ವಿನ್ಯಾಸಗಳು, ಮೂಲಾಧಾರಗಳ ಗುರುತಿಸುವಿಕೆ ಮತ್ತು ಬಳಕೆ, ಎಲ್ಲವೂ ಶಿಸ್ತುಗಳ ಚೌಕಟ್ಟಿನಲ್ಲಿ ಒಳಪಟ್ಟಿರುತ್ತವೆ. ಎಲ್ಲಕ್ಕಿಂತ ಮಿಗಿಲಾಗಿ ಆ ಶೈಕ್ಷಣಿಕ ಶಿಸ್ತಿಗೇ ನಿರ್ದಿಷ್ಟವಾದ `ಭಾಷೆ~ಯೆಂಬುದೊಂದಿರುತ್ತದೆ.ಅಂತರಶಿಸ್ತೀಯ ಅಧ್ಯಯನದ ಒತ್ತಡಗಳಲ್ಲಿ ಈ ಎಲ್ಲೆಗಳನ್ನು ಅಳಿಸಿದರೆ ಆಯಾ ಅನನ್ಯತೆಗಳೆಲ್ಲವೂ ತೊರೆದು ಹೋಗಿ, ಸಮಾಜಗಳ, ಸಮುದಾಯಗಳ ಅಭಿವ್ಯಕ್ತಿಗಳು ಹಾಗೂ ಚರಿತ್ರೆ, ಸಾರಹೀನವಾಗಿ ಪರಿಣಮಿಸುತ್ತದೆ. ಉದಾಹರಣೆಗೆ ಸಾಹಿತ್ಯದಲ್ಲಿರುವ ನವ್ಯೋತ್ತರಪಂಥ ವಾದಗಳನ್ನು ಯಥಾವತ್ತಾಗಿ ಚರಿತ್ರೆಯ ಅರ್ಥೈಸುವಿಕೆಯಲ್ಲಿ ಬಳಸಲಾಗುವುದಿಲ್ಲ. ಇತಿಹಾಸದ ಅಧ್ಯಯನದ ಪ್ರಕ್ರಿಯೆಯಲ್ಲಿ ಈ ಪಂಥದ ವಾದಗಳು ಬೇರೆಯದೇ ಸ್ವರೂಪ ಪಡೆಯುತ್ತವೆ.ಆದ್ದರಿಂದ ಕೆಲಮಟ್ಟಿಗಾದರೂ ಶೈಕ್ಷಣಿಕ ಅಧ್ಯಯನಗಳಲ್ಲಿ ಆಯಾ ಆಯಾಮಗಳನ್ನು ಗಮನದಲ್ಲಿಡುವುದು ಅಗತ್ಯವಾಗಿದೆ.ಇವೆಲ್ಲವುಗಳ ಹಿನ್ನಲೆಯಲ್ಲಿ ಹಂಪಿಯ `ಕನ್ನಡ ವಿಶ್ವವಿದ್ಯಾಲಯ~ದ ಚರಿತ್ರೆ ವಿಭಾಗವು ಪ್ರಕಟಿಸಿರುವ ಎಂಟು ಚರಿತ್ರೆ ಸಂಪುಟಗಳು ಅತ್ಯಂತ ಗಮನಾರ್ಹ ಕೊಡುಗೆಯಾಗಿದೆ. ಡಾ. ವಿಜಯ ಪೂಣಚ್ಚ ತಂಬಂಡರವರ ಪ್ರಧಾನ ಸಂಪಾದಕತ್ವದಲ್ಲಿರುವ ಈ ಸಂಪುಟಗಳು, ಹಲವು ಕಾರಣಗಳಿಂದ ಚರಿತ್ರೆಯ ವಿದ್ವಾಂಸರಿಗೆ, ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ಬಹಳ ಬೇಕಾದ ಕೃತಿಗಳಾಗಿ ಹೊರಹೊಮ್ಮಿವೆ. ಮೊಟ್ಟ ಮೊದಲನೆಯದಾಗಿ ಚರಿತ್ರೆಯ ಅಧ್ಯಯನದ ಬಹು ಜನಪ್ರಿಯ ಮುಖವಾದ ಘಟನಾಧಾರಿತ ಕ್ರಮಕ್ಕಿಂತ ಭಿನ್ನವಾಗಿ, ವಿವಿಧ ಆಯಾಮಗಳ ಮುಖೇನ ನೋಡುವ ಪ್ರಯತ್ನ ಹೆಚ್ಚು ಸೂಕ್ತವಾಗಿದೆ.

 

ಹೀಗಾಗಿ ಘಟನೆಗಳು ಕೇವಲ ಪ್ರಾತಿನಿಧೀಕರಣದ ತಂತುಗಳಾಗಿವೆ. ಇದರಿಂದ ಆಯ್ದ ಪ್ರದೇಶದ ಚಾರಿತ್ರಿಕ ಮಜಲುಗಳೂ, ಚಿಂತನೆಗಳೂ, ಚಳವಳಿಗಳೂ, ತಾತ್ವಿಕ ಚರ್ಚೆಗಳು ಪದರುಗಳಾಗಿ ತೆರೆದುಕೊಂಡು ಆ ಪ್ರದೇಶದ, ಜನಾಂಗದ ಪ್ರಜ್ಞೆಯನ್ನು ಬಿಂಬಿಸಿವೆ.

ನಾಲ್ಕು ಸಂಪುಟಗಳು ಖಂಡಗಳ ಅಧ್ಯಯನದಲ್ಲಿದ್ದು, ಯೂರೋಪ್, ಏಷ್ಯಾಕ್ಕೆ ಕೆ.ಮೋಹನ್ ಕೃಷ್ಣ ರೈ ಸಂಪುಟ ಸಂಪಾದಕರಾದರೆ, ಅಮೆರಿಕ ಸಂಪುಟಕ್ಕೆ ವಿರೂಪಾಕ್ಷಿ ಪೂಜಾರಹಳ್ಳಿ ಸಂಪಾದಕರು.ಯುರೋಪ್ ಸಂಪುಟ, ಪ್ರಾಚೀನ ಗ್ರೀಕ್ ಚಿಂತನೆ, ಬುಡಕಟ್ಟು ಜನಾಂಗಗಳ ಪ್ರತಿರೋಧ, ಮಧ್ಯಮ ಯುರೋಪಿನ ಸಂಸ್ಥೆಗಳು, ಪದ್ಧತಿಗಳು, ರಾಜ್ಯ ಹಾಗೂ ಧರ್ಮ ಸಂಬಂಧಗಳ ವ್ಯಾಖ್ಯಾನ, ಆಧುನಿಕ ಯುರೋಪಿನ ಆಳ್ವಿಕೆಯ ವಿವಿಧ ಮಾದರಿಗಳು, ರಷ್ಯಾದ ಮಹಾಕ್ರಾಂತಿಯ ಸ್ವರೂಪ, ಸೋವಿಯತ್ ವಿಘಟನೆ, ಕುಸಿತ ಹಾಗೂ ಚೇತರಿಕೆ, ಜಾಗತೀಕರಣದ ಇತ್ತೀಚಿನ ಆಯಾಮಗಳು ಮತ್ತು ತಾತ್ವಿಕ ಚರ್ಚೆಗಳನ್ನು ಒಳಗೊಂಡಿದೆ. ಆಧುನಿಕ ಯುಗದ ಚರಿತ್ರೆಯ ಅಧ್ಯಯನಕ್ಕೆ ಬೇಕಾದ ವಸಾಹತುಶಾಹಿ ಹಿನ್ನಲೆಯ ನೋಟಗಳು ಈ ಸಂಪುಟದಲ್ಲಿ ಸಾಕಷ್ಟಿರುವುದಲ್ಲದೇ, 90ರ ದಶಕದಿಂದೀಚೆ ಯುರೋಪಿನಲ್ಲಿ ನಡೆದಿರುವ ಚರ್ಚೆಗಳು ಮತ್ತು ಚಿಂತನೆಗಳ ಬಗ್ಗೆ ದೀರ್ಘ ಪ್ರಸ್ತಾಪವಿದೆ.

 

ಇದಕ್ಕಿಂತ ಭಿನ್ನವಾಗಿ ಬಂದಿರುವ ಆಫ್ರಿಕಾ ಸಂಪುಟ ಈಜಿಪ್ಟಿನ ನಾಗರಿಕತೆಯಿಂದ ಪ್ರಾರಂಭವಾದರೂ, ಯಾವೊಂದು ನಿರ್ದಿಷ್ಟ ಪ್ರದೇಶ ಆಥವಾ ದೇಶದ ಇತಿಹಾಸದ ನಿರೂಪಣೆಯಾಗದೆ, ಇಡೀ ಖಂಡದ ಸಾಂಸ್ಕೃತಿಕ ದ್ವಂದ್ವ, ನಾಗರಿಕತೆ, ವಸಾಹತುಶಾಹಿತ್ವ, ರಾಷ್ಟ್ರೀಯ ಚಳವಳಿಗಳು, ವಸಾಹತೋತ್ತರ ಆಫ್ರಿಕದ ವೀಕ್ಷಣೆಯಾಗಿದೆ. ಜನಾಂಗೀಯ ಘರ್ಷಣೆ, ಜಾಗತೀಕರಣದಡಿಯಲ್ಲಿ ಆಫ್ರಿಕಾ, ರಫ್ತು ಕುಸಿತ, ಬ್ಲಡ್ ಡೈಮಂಡ್ ಗೊಂದಲಗಳು ಮುಂತಾದ ಹಲವು ವಿಚಾರಗಳ, ವಿವರವಾದ ಬರಹ ಈ ಸಂಪುಟದ ಆಕರ್ಷಣೆಯಾಗಿದೆ.ವಸಾಹತು ಪೂರ್ವ, ವಸಾಹತುಶಾಹಿತ್ವದ ಅಡಿಯಲ್ಲಿ ಮತ್ತು ವಸಾಹತು ನಂತರದ ಅಧ್ಯಯನ, ಏಷ್ಯಾ ಖಂಡದ ಸಂಪುಟದಲ್ಲಿ ತೀಕ್ಷ್ಣವಾಗಿ ಮೂಡಿದೆ. ಚೀನಾ, ಇರಾನ್, ಇಂಡೋನೇಶಿಯಾದ ರಾಷ್ಟ್ರೀಯ ಆಂದೋಲನಗಳ ಜೊತೆಗೆ ಸಾಮ್ರಾಜ್ಯಶಾಹಿ, ವಸಾಹತುಶಾಹಿತ್ವ ಮತ್ತು ನಿರ್ವಸಾಹತೀಕರಣ, ನವ ವಸಾಹತುಶಾಹಿ ಪದ್ಧತಿ, ಜಿಯೋನಿಸಂ, ಇಸ್ರೇಲ್ ಪ್ಯಾಲೆಸ್ತೇನಿ ಅರಬ್ಬರ ರಾಷ್ಟ್ರೀಯ ಹೋರಾಟಗಳನ್ನು ಒಳಗೊಂಡಿರುವ ಈ ಸಂಪುಟ, ಏಷ್ಯಾ ಅಧ್ಯಯನಕ್ಕೆ ಗಮನಾರ್ಹ ಸೇರ್ಪಡೆ. ಉತ್ತರ ಹಾಗೂ ದಕ್ಷಿಣ ಅಮೆರಿಕಾ ಎರಡೂ ಖಂಡಗಳ ಅಧ್ಯಯನ ಅಮೆರಿಕಾ ಸಂಪುಟದಲ್ಲಿದೆ.

 

ಇದು ಅಮೆರಿಕಾ ಇತಿಹಾಸದ ಲೀನಿಯರ್ ನಿರೂಪಣೆಯಾಗದೆ, ಅಲ್ಲಿನ ಅಮೆರಿಕನ್ ಇಂಡಿಯನ್ನರ ಪ್ರತಿಭಟನೆ, ಸಂರಕ್ಷಣಾ ಶಿಬಿರಗಳು, ಗುಲಾಮಗಿರಿ, ವರ್ಣಭೇದ ನೀತಿ, ಜಾಗತೀಕರಣದ ಜೊತೆಗೆ ಲ್ಯಾಟಿನ್ ಅಮೆರಿಕಾ, ಕೆನಡಾ, ದಕ್ಷಿಣ ಅಮೆರಿಕಾದ ಸಮಕಾಲೀನ ರಾಜಕೀಯ ಸ್ಥಿತ್ಯಂತರಗಳನ್ನು ನೋಡಿರುವುದು ಉಪಯುಕ್ತವಾಗಿದೆ.ಚರಿತ್ರೆ ಸಂಪುಟಗಳ ಕಾರ‌್ಯದಲ್ಲಿ ಖಂಡಗಳ ಚರಿತ್ರೆಯಾಚೆ ನೋಡಿರುವ ಇನ್ನೂ ನಾಲ್ಕು ಸಂಪುಟಗಳು ಅತ್ಯಂತ ಪ್ರಸ್ತುತವಾಗಿವೆ. ವಿಜಯ ಪೂಣಚ್ಚ ತಂಬಂಡರವರ ಸಂಪುಟ ಸಂಪಾದಕತ್ವದಲ್ಲಿರುವುದು ಎರಡು ಸಂಪುಟಗಳು, ಭಾರತದ ಉಪಖಂಡದ ಆಧುನಿಕ ಪೂರ್ವ ಚರಿತ್ರೆ ಮತ್ತು ಆಧುನಿಕ ಚರಿತ್ರೆ.

 

ಪೂರ್ವೇತಿಹಾಸದಿಂದ ಪ್ರಾರಂಭವಾಗಿ, 20ನೇ  ಶತಮಾನದ ಅಂತ್ಯಕ್ಕೆ ಕೊನೆಗೊಳ್ಳುವ ಸಂಪುಟ ಅನೇಕ ಕಾರಣಗಳಿಂದ ಗಮನ ಸೆಳೆಯುತ್ತದೆ. ಯಾವುದೇ ರಾಜವಂಶಗಳ ಅಧ್ಯಯನಗಳ ಅಥವಾ ರೂಢಿಯಲ್ಲಿರುವ ಕಾಲಘಟ್ಟಗಳ ಅಪ್ರೋಚನ್ನು ಬಳಸದೆ, ಇಪ್ಪತ್ತೊಂದನೇ ಶತಮಾನದ ಉತ್ತರಾರ್ಧದಲ್ಲಿ ಪ್ರಚಲಿತಕ್ಕೆ ಬಂದ, ಭಾರತ ಉಪಖಂಡದ ಅಧ್ಯಯನಕ್ಕೆ ಸಂಬಂಧಿಸಿದ ಅನೇಕ ಚರ್ಚೆಗಳ ಬಗ್ಗೆ ವಿವರವಾದ ವಿರ್ಮಶಾತ್ಮಕ ಪ್ರಬಂಧಗಳಿವೆ. ವೈದಿಕ ಆರ್ಯರು, ಪ್ರಾಚೀನ ರಾಜ್ಯ ಪದ್ಧತಿಯ ನಿರ್ಮಾಣ ಪ್ರಕ್ರಿಯೆ, ಪ್ರಾಚೀನ ಭಾರತೀಯ ಚಿಂತನೆಗಳು, ರಾಜ್ಯನಿರ್ಮಾಣ ಮತ್ತು ನಗರೀಕರಣ, 1857ರ ಹೋರಾಟದ ಚರ್ಚೆಗಳು, ಯುರೋಪ್ ಸಾಮ್ರಾಜ್ಯಶಾಹಿ ಯುಗದಂತಹ ವಿದ್ವತ್ಪೂರ್ಣ ಬರಹಗಳು ಈ ಸಂಪುಟದ ಕೇಂದ್ರ ಆಸಕ್ತಿಗಳಾಗಿವೆ.ಉಪಖಂಡದ ಆಧುನಿಕ ಚರಿತ್ರೆ ಮೂರನೇ ಸಂಪುಟವಾಗಿದ್ದು, ವಸಾಹತುಶಾಹಿ ಮತ್ತು ಕಾಂಗ್ರೆಸ್ ಪ್ರಭಾವಿ ಆಧುನಿಕ ಭಾರತದ ಚರಿತ್ರೆ ರಚನಾ ಕ್ರಮದಿಂದ ಸಂಪೂರ್ಣ ಹೊರತಾಗಿರುವ ಈ ಸಂಪುಟ ಭಾರತದ ಆಧುನಿಕ ಚರಿತ್ರೆಯನ್ನು ಕಾನ್ಸೆಪ್ಟ್ ಇಶ್ಯೂಸ್ ಮೂಲಕ ಕಟ್ಟಿಕೊಡುವುದರಿಂದ ಒಂದು ರೀತಿಯ ಸಂವಾದಿ ಪ್ರಕ್ರಿಯೆಯಾಗಿ ಬಂದಿದೆ. ಕಾಂಗ್ರೆಸ್ ಗಾಂಧಿಯುಗದೊಟ್ಟಿಗೆ, ಕೋಮು ರಾಜಕೀಯ, ಕ್ರಾಂತಿಕಾರಿಗಳು, ದೇಶ ವಿಭಜನೆ, ರಾಷ್ಟ್ರೀಯ ಹೋರಾಟದ ವಿವಿಧ ನೆಲೆಗಳು, ರೈತ ಸಂಘಟನೆ ಮತ್ತು ಭಾರತದ ಎಡಪಂಥೀಯ ರಾಜಕಾರಣ, ತೆಲಂಗಾಣ ಹೋರಾಟ, ಏಕೀಕರಣ ಚಳವಳಿಗಳು, ಸ್ವತಂತ್ರ ಭಾರತದ ರಾಷ್ಟ್ರೀಯತೆಯ ಪ್ರಶ್ನೆಗಳು, ಐಡೆಂಟಿಟಿ ಮತ್ತು ವಿಮೋಚನೆ, ಭಾರತದಲ್ಲಿನ ಪ್ರತ್ಯೇಕ ರಾಷ್ಟ್ರ ಮತ್ತು ರಾಜ್ಯ ಹೋರಾಟಗಳು- ಇವೆಲ್ಲ ಚರ್ಚೆಗಳೂ ಈ ಸಂಪುಟದ ಭೂಮಿಕೆಗಳಾಗಿವೆ.19, 20ನೇ ಶತಮಾನದಲ್ಲಿ ಇತಿಹಾಸದ ಬಗ್ಗೆ, ಅದರ ಅಧ್ಯಯನಕ್ಕೆ ಸಂಬಂಧಿಸಿದಂತೆ ಕಾಡಿರುವ ಅತ್ಯಂತ ಕ್ಲಿಷ್ಟ ಸಮಸ್ಯೆ- ಚರಿತ್ರೆ ಬರವಣಿಗೆಯ ಕ್ರಮಗಳು ಮತ್ತು ಸಂಶೋಧನಾ ವಿಧಾನ. ಇದೇ ಶೀರ್ಷಿಕೆಯಲ್ಲಿ ಇರುವುದು ತಂಬಂಡ ಮತ್ತು ಪೂಜಾರಹಳ್ಳಿಯವರ ಸಂಪಾದಕತ್ವದಲ್ಲಿರುವ ಒಂದನೇ ಸಂಪುಟ, ಇಡೀ ಚರಿತ್ರೆ ಸಂಪುಟ ಪ್ರಕ್ರಿಯೆಗೆ ಬುನಾದಿಯಂತಿರುವ ಈ ಸಂಪುಟ, ಚರಿತ್ರೆ ಬರವಣಿಗೆಯ ಕ್ರಮ ಮತ್ತು ಸೈದ್ಧಾಂತಿಕ ಒಲವುಗಳ ಮಿಶ್ರಣವಾಗಿದೆ. ಸಬಾಲ್ಟರ್ನ್‌, ಮೌಖಿಕ ಇತಿಹಾಸ, ನವಚಾರಿತ್ರಿಕವಾದ, ನಗರಚರಿತ್ರೆ, ಸ್ತ್ರೀವಾದಿ ಚರಿತ್ರೆ- ಇವುಗಳ ತಾತ್ವಿಕ ಸ್ವರೂಪಗಳನ್ನು ಗುರುತಿಸುತ್ತ, ಇತಿಹಾಸದ ಸಂವೇದನೆಗಳು, ಗ್ರಹಿಕೆಗಳು, ಬರವಣಿಗೆ ಹಾಗೂ ವಿಧಾನ ಕ್ರಮಗಳ ನಡುವಿನ ಘರ್ಷಣೆಗಳನ್ನು ಚರ್ಚಿಸಲಾಗಿದೆ.ಯುರೋ - ಅಮೆರಿಕನ್ ಮೂಲದಿಂದ ಬಂದ ಹಲವು ಸೈದ್ಧಾಂತಿಕ ನೆಲೆಗಳನ್ನು ಅಂರ್ತಗತಗೊಳಿಸಿಕೊಂಡು ದೇಶಿ ಚರಿತ್ರೆಯನ್ನು ನೋಡುವುದು ಒಂದು ಕ್ರಮ. ಭಿನ್ನ ಸಾಂಸ್ಕೃತಿಕ ಬೇರುಗಳಿಂದ ಬಂದ ಈ ಸಿದ್ಧಾಂತಗಳ ಮೂಲಕ ದೇಶಿ ಚರಿತ್ರೆಯ ವಿಮರ್ಶಾತ್ಮಕ ಅಧ್ಯಯನ ಎಷ್ಟು ಸಮಂಜಸ ಎಂದು ಪ್ರಶ್ನಿಸುವ ಧೋರಣೆ ಇನ್ನೊಂದು ಕ್ರಮ. ಇವೆರಡೂ ನೆಲೆಗಳಲ್ಲಿಯೇ ಇರುವುದು ಸೋಸಲೆಯವರ ಸಂಪಾದಕತ್ವದಲ್ಲಿರುವ 6ನೇ ಸಂಪುಟ. ಸಮಕಾಲೀನ ಕರ್ನಾಟಕ, ಚಳವಳಿಗಳ ಮೂಲಕ ಪ್ರಾದೇಶಿಕ ಚರಿತ್ರೆಯನ್ನು ಕಟ್ಟುವ ಪ್ರಯತ್ನವಿದು. ರಾಜಕೀಯ, ಸಾಹಿತ್ಯಿಕ, ಕಾರ್ಮಿಕ, ಮಹಿಳಾ, ರೈತ, ಪರಿಸರ, ಚಳವಳಿಗಳು ಪ್ರಧಾನವಾಗಿರುವ ಈ ಸಂಪುಟ, ಸಮಕಾಲೀನ ಕರ್ನಾಟಕ ಅಧ್ಯಯನದಲ್ಲಿದ್ದ ಕೊರತೆಯನ್ನು ಸ್ವಲ್ಪ ಮಟ್ಟಿಗೆ ನೀಗಿಸಿದೆ.ಪಾಶ್ಚಿಮಾತ್ಯರು ಭಾರತದ ಚರಿತ್ರೆಯನ್ನು ನೋಡಿರುವಂತೆ, ನಮ್ಮ ಅನುಭವಗಳಿಂದ ಬಂದಿರುವ ತಾತ್ವಿಕ ನೆಲೆಯಲ್ಲಿ ಪಾಶ್ಚಾತ್ಯರ, ಆಫ್ರಿಕಾದ, ಏಷ್ಯಾದ ಚರಿತ್ರೆಯನ್ನು ನೋಡಬೇಕಾದ್ದು ಅತ್ಯವಶ್ಯಕ. ಕನ್ನಡದ ಮಟ್ಟಿಗಂತೂ ಇದು ಇನ್ನೂ ಸಂಕೀರ್ಣವಾಗಿದೆ. ಕನ್ನಡ ಭಾಷಾ ಸಂಸ್ಕೃತಿಯ ಒರೆಯಿಂದ ಜಾಗತಿಕ ಇತಿಹಾಸ ನೋಡುವುದಿರಲಿ, ಜಗತ್ತಿನ ಬೇರೆ ಭಾಗಗಳಲ್ಲಿ ನಡೆಯುವ ಚರಿತ್ರೆಯ ಕುರಿತ ಚರ್ಚೆ, ಚಿಂತನೆಗಳು, ಇರುವ ಇತಿಹಾಸಗಳು, ಕನ್ನಡದಲ್ಲಿ ಲಭ್ಯವಿರುವುದು ಕಡಿಮೆ. ಇದೇ ವಿಶ್ವವಿದ್ಯಾಲಯ 2001ರಲ್ಲಿ ಪ್ರಕಟಿಸಿದ `ಚರಿತ್ರೆ ವಿಶ್ವಕೋಶ~ ಈ ನಿಟ್ಟಿನಲ್ಲಿದ್ದರೂ, ಅದರ ವ್ಯಾಪ್ತಿ ಮತ್ತು ಹರಹು ಸೀಮಿತವಾಗಿತ್ತು. ಆದ್ದರಿಂದ, ನೋಡುವ ನೆಲೆಗಳಲ್ಲಿ ವ್ಯತ್ಯಾಸಗಳಿದ್ದರೂ, ಇಷ್ಟು ಸಮಗ್ರವಾದ ಸಂಪುಟಗಳು ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಬಂದಿರುವುದು ಅಭಿನಂದನೀಯ.

 

ಕನ್ನಡ ವಿಶ್ವವಿದ್ಯಾಲಯ ಚರಿತ್ರೆ ಸಂಪುಟಗಳು

ಪ್ರಧಾನ ಸಂಪಾದಕರು: ವಿಜಯ್ ಪೂಣಚ್ಚ ತಂಬಂಡ

ಬೆಲೆ: 8 ಸಂಪುಟಗಳ ಒಟ್ಟು ಮೊತ್ತ, ರೂ. 2550

ಪ್ರ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.-

ಪ್ರತಿಕ್ರಿಯಿಸಿ (+)