ಕನ್ನಡಿಗರಿಂದ ಚರಿತ್ರೆಯ ನಿರ್ಲಕ್ಷ್ಯ

7

ಕನ್ನಡಿಗರಿಂದ ಚರಿತ್ರೆಯ ನಿರ್ಲಕ್ಷ್ಯ

Published:
Updated:

ಬೆಳಗಾವಿ: ‘ಕನ್ನಡಿಗರಿಂದ ಚರಿತ್ರೆಯ ನಿರ್ಲಕ್ಷ್ಯವಾಗಿದೆ. ಬರೀ ಕಲ್ಪನೆ, ಪುರಾಣಗಳು, ಕಥೆಗಳಿಗೆ ಮಾನ್ಯತೆ ಸಿಕ್ಕಿದೆ. ನಮ್ಮ ಸಾಹಿತಿಗಳು, ಓದುಗರು ಅದಕ್ಕೆ ಹೆಚ್ಚಿನ ಮಹತ್ವ ನೀಡಿದ ಕಾರಣಕ್ಕೆ ಅವೆಲ್ಲ ಹೆಚ್ಚಿನ ಪ್ರಚಾರವನ್ನೂ ಪಡೆದುಕೊಳ್ಳುತ್ತಿದೆ’ ಎಂದು ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಂ.ಎಂ. ಕುಲಬುರ್ಗಿ ಸೋಮವಾರ ಇಲ್ಲಿ ತಿಳಿಸಿದರು.ಕೆಎಲ್‌ಇ ಪ್ರಸಾರಾಂಗ ಹೊರತಂದಿರುವ ಡಿ.ಸಿ.ಪಾವಟೆ ಹಾಗೂ ಗುದ್ಲೆಪ್ಪ ಹಳ್ಳಿಕೇರಿ ಅವರ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು. ಚಾರಿತ್ರಿಕ ಘಟನೆಗಳ ಹಿಂದೆ ಸಾಧನೆ, ತ್ಯಾಗ, ಬಲಿದಾನಗಳಿರುತ್ತವೆ. ಅವುಗಳನ್ನು ಈಗಿನ ಪೀಳಿಗೆಯವರು ಓದಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅದನ್ನು ಬಿಟ್ಟು, ಕಪೋಲ ಕಲ್ಪಿತ ಸಾಹಿತ್ಯವನ್ನು ಓದಿ ಕಲ್ಪನೆಯಲ್ಲಿ ತೇಲುವುದಲ್ಲ ಎಂದು ಹೇಳಿದರು.ಚರಿತ್ರೆಗಳಿಗೆ ಪ್ರಾಮುಖ್ಯತೆ ಕೊಟ್ಟು ಅವನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ನಡೆಯಬೇಕು. ಓದುಗರು ಚರಿತ್ರೆಯನ್ನು ಅಭ್ಯಾಸ ಮಾಡುತ್ತ ಬೆಳೆಯಬೇಕು. ಮಹಾನ್ ವ್ಯಕ್ತಿಗಳಾಗ ಬೇಕು ಎಂದು ಅವರು ಮನವಿ ಮಾಡಿಕೊಂಡರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ವಹಿಸಿದ್ದರು. ಡಿ. ಸಿ.ಸಿ.ಪಾವಟೆ ಅವರ ‘ಶೈಕ್ಷಣಿಕ ಆಡಳಿತದ ನನ್ನ ನೆನಪುಗಳು, ರಾಜ್ಯಪಾಲ ಅವಧಿಯ ನನ್ನ ಅನುಭವಗಳು’ ಹಾಗೂ ಗುದ್ಲೆಪ್ಪ ಹಳ್ಳಿಕೇರಿ ಅವರ ‘ಡೈರೀಸ್ ಆಫ್ ಎ. ಫ್ರೀಡಂ ಫೈಟರ್’ ಕೃತಿಯನ್ನು ಅವರು ಬಿಡುಗಡೆ ಮಾಡಿದರು.ಕೃತಿಗಳ ಕುರಿತು ಡಾ.ಎಚ್.ಎಸ್. ಪಾಟೀಲ, ಶಿವಕುಮಾರ ಪಾವಟೆ, ಆರ್.ವಿ. ಹೊರಡಿ, ಡಾ. ಧೀನಬಂಧು ಹಳ್ಳಿಕೇರಿ ಮಾತನಾಡಿದರು. ಸುನೀತಾ ಪಾಟೀಲ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕೆಎಲ್‌ಇ ಪ್ರಸಾರಾಂಗ ವಿಭಾಗದ ಮುಖ್ಯಸ್ತ ಡಾ.ಬಿ.ಎಸ್.ಗವಿಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಗುರುದೇವಿ ಹುಲೆಪ್ಪನವರಮಠ, ಡಾ. ಮಹೇಶ ಗುರುನಗೌಡರ್ ಕಾರ್ಯಕ್ರಮ ನಿರ್ವಹಿಸಿದರು. ಮಹೇಶ ಗುರುನಗೌಡರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry