ಶುಕ್ರವಾರ, ಮಾರ್ಚ್ 5, 2021
27 °C

ಕನ್ನಡ ಕಲಿತ ಮಕ್ಕಳ ಭವಿಷ್ಯ ಅತಂತ್ರ: ಉಗ್ರ ಹೋರಾಟ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಕಲಿತ ಮಕ್ಕಳ ಭವಿಷ್ಯ ಅತಂತ್ರ: ಉಗ್ರ ಹೋರಾಟ ಎಚ್ಚರಿಕೆ

ರಾಯಚೂರು: `ಕನ್ನಡ ಸಾಕು. ತೆಲುಗು ಬೇಕು. ದಶಕಗಳ ಕಾಲ ಕರ್ನಾಟಕ ಸರ್ಕಾರಕ್ಕೆ ಅಂಗಲಾಚಿದ್ದು ಸಾಕು. ಈ ಶಾಲೆ ಮುಚ್ಚಿ. ತೆಲುಗಿನಲ್ಲಿಯೇ ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿ.~ಒಂದರಿಂದ ಹತ್ತನೆ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದಿದ್ದಾರೆ. ಇದೇ ಅವರಿಗೆ ಈಗ ಮುಳುವಾಗಿದೆ. ಉನ್ನತ ಶಿಕ್ಷಣ ಪಡೆಯಲು ಅತ್ತ ಕರ್ನಾಟಕದಲ್ಲೂ ಅವಕಾಶವಿಲ್ಲ. ಇತ್ತ ಆಂಧ್ರಪ್ರದೇಶದಲ್ಲೂ ಪ್ರವೇಶ ದೊರಕುತ್ತಿಲ್ಲ. ಕರ್ನಾಟಕ ಸರ್ಕಾರವು 13 ಗ್ರಾಮಗಳನ್ನು ಗಡಿನಾಡು ಗ್ರಾಮಗಳು ಎಂದು ರಾಜ್ಯ ಪ್ರಪತ್ರದಲ್ಲಿ (ಗೆಜೇಟಿಯರ್) ಘೋಷಣೆ ಮಾಡದಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ.ಇವು ಬುಧವಾರ ರಾಯಚೂರಿಗೆ ಸಮೀಪದಲ್ಲಿರುವ ಹಾಗೂ ಆಂಧ್ರಪ್ರದೇಶದ ಮಾಗನೂರು ಮಂಡಲ ವ್ಯಾಪ್ತಿಯಲ್ಲಿ ಕನ್ನಡ ಭಾಷಿಕರೇ ಹೆಚ್ಚಾಗಿರುವ ಕೃಷ್ಣಾ ಗ್ರಾಮ ಸೇರಿದಂತೆ ಹದಿಮೂರು ಗ್ರಾಮಗಳ ಗಡಿನಾಡ ಕನ್ನಡಿಗರ ಅಸಹಾಯಕ ನುಡಿಗಳು.ಮೂರು ದಿನಗಳಿಂದ ಶಾಲೆ ಮುಚ್ಚಿ ಪ್ರತಿಭಟನೆ ನಡೆಸಿದ್ದ ಇವರು ಬುಧವಾರ ಉಪವಾಸ ಧರಣಿ ನಡೆಸಿದರು.

ಧರಣಿ ಸ್ಥಳಕ್ಕೆ ಧಾವಿಸಿದ ಅಲ್ಲಿನ ತಹಸೀಲದಾರ ಸುದರ್ಶನರೆಡ್ಡಿ ಹಾಗೂ ನಾರಾಯಣಪೇಟೆಯ ಉಪಶಿಕ್ಷಣಾಧಿಕಾರಿ ಲಕ್ಷ್ಮೀನಾರಾಯಣ ಅವರು ಧರಣಿ ನಿರತರೊಂದಿಗೆ ಚರ್ಚಿಸಿದರು.ಇದು ಮಕ್ಕಳ ಭವಿಷ್ಯದ ವಿಷಯ. ಮೆಹಬೂನಗರ ಜಿಲ್ಲಾಧಿಕಾರಿಗಳು ಹಾಗೂ ರಾಯಚೂರು ಜಿಲ್ಲಾಧಿಕಾರಿಗಳು ಈ ಬಗ್ಗೆ ಚರ್ಚಿಸಿ ಶೀಘ್ರ ನಿರ್ಧಾರ ಪ್ರಕಟಿಸುವರು. ನಿಮ್ಮ ಸಮಸ್ಯೆಗೆ ಪರಿಹಾರ ದೊರಕಬಹುದು. ಸದ್ಯ ಶಾಲೆ ಮುಚ್ಚುವುದರಲ್ಲಿ ಅರ್ಥವಿಲ್ಲ. ಈ ಶಾಲೆಯಲ್ಲಿ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಪಠ್ಯ ಬೋಧನೆ ಮಾಡಲು ಅವಕಾಶ ಮಾಡಿಕೊಡಲಾಗುವುದು. ನಾಳೆಯಿಂದ ಶಾಲೆ ಆರಂಭಿಸಲು ಅವಕಾಶ ಕೊಡಿ ಎಂದು ನಾರಾಯಣಪೇಟೆಯ ಉಪಶಿಕ್ಷಣಾಧಿಕಾರಿ ಲಕ್ಷ್ಮೀನಾರಾಯಣ ಧರಣಿ ನಿರತರಿಗೆ ಮನವಿ ಮಾಡಿದರು.ಕೆಲ ಹೊತ್ತಿನ ಬಳಿಕ ಧರಣಿ ನಿರತರು ಧರಣಿ ವಾಪಸ್ ಪಡೆದರು. ನಮ್ಮ ಸಮಸ್ಯೆಗೆ ಪರಿಹಾರ ಶೀಘ್ರ ದೊರಕಬೇಕು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದು ಅತಂತ್ರವಾಗಿರುವ ಮಕ್ಕಳ ಭವಿಷ್ಯ ಹಾಳಾಗಬಾರದು. ಆ ದಿಶೆಯಲ್ಲಿ ನಿರ್ಧಾರ ತೆಗೆದುಕೊಳ್ಳಲು ಉನ್ನತ ಅಧಿಕಾರಿಗಳ ಗಮನಕ್ಕೆ ತರಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. ಗಡಿನಾಡು ಕನ್ನಡ ಸಂಘದ ಭೀಮಸಿ, ರಜನಿಕಾಂತ್, ಮುನಾಫ್, ಡಿ.ಕೆ ಕಿಷ್ಟಪ್ಪ, ಪಂಚಾಯಿತಿ ಉಪಾಧ್ಯಕ್ಷ ಬಿ ಶಂಕರಪ್ಪ ಮತ್ತಿತರರು ಧರಣಿ ನೇತೃತ್ವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.