ಭಾನುವಾರ, ಏಪ್ರಿಲ್ 18, 2021
33 °C

ಕಬಡ್ಡಿ: ಕರ್ನಾಟಕ ತಂಡಗಳಿಗೆ ಮಿಶ್ರಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೈಂದೂರು: ವಿಶ್ವಕಪ್ ಕ್ರಿಕೆಟ್ ಜ್ವರ ಎಲ್ಲಡೆ ಹರಡಿದ್ದಂತೆ ಕರಾವಳಿಯ ಈ ಪುಟ್ಟ ಪಟ್ಟಣದಲ್ಲಿ ಈಗ ಕಬಡ್ಡಿ ಜ್ವರಶುರುವಾಗಿದೆ. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರ ಬೆಂಬಲ ಪಡೆದ ಆತಿಥೇಯ ಕರ್ನಾಟಕ ತಂಡ, 58ನೇ ಸೀನಿಯರ್ ರಾಷ್ಟ್ರೀಯ ಸೂಪರ್ ಲೀಗ್ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿತು.‘ಡಿ’ ಗುಂಪಿನ ಉದ್ಘಾಟನಾ ಪಂದ್ಯದಲ್ಲಿ ಕರ್ನಾಟಕ ತೀವ್ರ ಹೋರಾಟದ ನಂತರ ಹರಿಯಾಣ ತಂಡವನ್ನು 26-23ರಲ್ಲಿ ಮೂರು ಪಾಯಿಂಟ್‌ಗಳಿಂದ ಸೋಲಿಸಿತು.ಗಾಂಧಿ ಮೈದಾನದಲ್ಲಿ ಗುರುವಾರ ನಡೆದ ಈ ಪಂದ್ಯದಲ್ಲಿ ವಿರಾಮದ ವೇಳೆ ಸ್ಕೋರ್ 7-7 ರಲ್ಲಿ ಸಮನಾಗಿತ್ತು. ಆದರೆ ಕರ್ನಾಟಕ ಮಹಿಳೆಯರ ತಂಡ ‘ಸಿ’ ಗುಂಪಿನ ಪಂದ್ಯದಲ್ಲಿ ಹಿಮಾಚಲ ಪ್ರದೇಶಕ್ಕೆ ಶರಣಾಯಿತು. ಪಂದ್ಯವನ್ನು 26-17 ರಲ್ಲಿ ಗೆದ್ದ ಹಿಮಾಚಲ ಪ್ರದೇಶ ವಿರಾಮದ ವೇಳೆ ಕೇವಲ ಒಂದು ಪಾಯಿಂಟ್‌ನ (10-9) ಅಂತರದಲ್ಲಿ ಮುಂದಿತ್ತು.ಪುರುಷರ ವಿಭಾಗದ ‘ಎ’ ಗುಂಪಿನ ಪಂದ್ಯದಲ್ಲಿ ಇಂಡಿಯನ್ ರೈಲ್ವೇಸ್ 25-10 ಪಾಯಿಂಟ್‌ಗಳಿಂದ ಪಂಜಾಬ್ ತಂಡವನ್ನು ಸೋಲಿಸಿತು.ಮಿಂಚಿದ ಮಮತಾ: ಮಹಿಳೆಯರ ವಿಭಾಗದ ‘ಸಿ’ ಗುಂಪಿನ ಪಂದ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ಪ್ರಶಸ್ತಿ ಗೆಲ್ಲುತ್ತ ಬಂದಿರುವ ಪ್ರಬಲ ಇಂಡಿಯನ್ ರೈಲ್ವೇಸ್ ತಂಡ 57-8 ಪಾಯಿಂಟ್‌ಗಳಿಂದ ಮಣಿಪುರ ತಂಡವನ್ನು ಸುಲಭವಾಗಿ ಮಣಿಸಿತು. ವಿರಾಮದ ವೇಳೆಯೇ ರೈಲ್ವೇ 26-6 ಪಾಯಿಂಟ್‌ಗಳ ಭಾರಿ ಮುನ್ನಡೆ ಸಾಧಿಸಿತ್ತು. ಕಾರ್ಕಳ ಮೂಲದ ಅಂತರರಾಷ್ಟ್ರೀಯ ಆಟಗಾರ್ತಿ ಮಮತಾ ಪೂಜಾರಿ ತವರಿನ ಪ್ರೇಕ್ಷಕರನ್ನು ನಿರಾಸೆಗೊಳಿಸಲಿಲ್ಲ. ಉಳಿದವರೂ ಖ್ಯಾತಿಗೆ ತಕ್ಕಂತೆ ಆಡಿದರು.ಸಭಾ ಕಾರ್ಯಕ್ರಮಕ್ಕೆ ಮೊದಲು ಕೊಲ್ಲೂರಿನ ಮೂಕಾಂಬಿಕಾ ಸನ್ನಿಧಿಯಿಂದ ಕ್ರೀಡಾ ಜ್ಯೋತಿಯನ್ನು ಏಷ್ಯನ್ ಕ್ರೀಡೆಯಲ್ಲಿ ಚಿನ್ನ ಗೆದ್ದ ತಂಡದ ಆಟಗಾರ್ತಿ ಮಮತಾ ಪೂಜಾರಿ ನೇತ್ರತ್ವದಲ್ಲಿ ಕ್ರೀಡಾಂಗಣಕ್ಕೆ ತರಲಾಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ತಂಡಗಳೆಲ್ಲ ಸಮವಸ್ತ್ರದಲ್ಲಿ ಕಾಣಿಸಿಕೊಂಡರೆ, ಆತಿಥೇಯ ಕರ್ನಾಟಕ ತಂಡಗಳು ಸಾದಾ ಉಡುಪು ಧರಿಸಿ ಭಾಗವಹಿಸಿದ್ದೂ ಅಚ್ಚರಿಗೆ ಕಾರಣವಾಯಿತು.ಉದ್ಘಾಟನಾ ಸಮಾರಂಭದಲ್ಲಿ ಸಂಸದ ಬಿ.ವೈ ರಾಘವೇಂದ್ರ, ರಾಷ್ಟ್ರೀಯ ಕಬಡ್ಡಿ ಸಂಸ್ಥೆಯ ಅಧ್ಯಕ್ಷ ಜೆ.ಎಸ್ ಗೆಹ್ಲೋಟ್, ಶಾಸಕ ಕೆ.ಲಕ್ಷ್ಮೀನಾರಾಯಣ, ಜಯಾನಂದ ಹೋಬಳಿದಾರ, ರಾಜೇಂದ್ರ ಸುವರ್ಣ, ಕಬಡ್ಡಿ ಫೇಡರೇಶನ್‌ನ ಸೀತಾರಾಮ ಮುಂತಾದವರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.