ಮಂಗಳವಾರ, ಜೂನ್ 22, 2021
24 °C

ಕಬ್ಬು ಬೆಳೆದು ಕಹಿವುಂಡವರ ಸಿಟ್ಟು ನೆತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ: ಮಾರ್ಚ್ 16 ರ ಭಾನುವಾರ ಸಂಜೆ 5 ಗಂಟೆಗೆ ಅಥಣಿ ತಾಲ್ಲೂಕಿನ ಐನಾಪುರ ಗ್ರಾಮದ ಟೀ ಅಂಗಡಿ ಮುಂದೆ ಕುಳಿತಿದ್ದೆ. ಬೆಳಿಗ್ಗೆಯಿಂದ ಚಿಕ್ಕೋಡಿ ಕ್ಷೇತ್ರದಲ್ಲಿ ಸುತ್ತಾಡಿ ಬರೆದುಕೊಂಡಿದ್ದ ಟಿಪ್ಪಣಿ ಮೇಲೆ ಕಣ್ಣಾಡಿಸುತ್ತಾ, ಸಕ್ಕರೆ ಲಾಬಿ, ಹೊಂದಾಣಿಕೆ ರಾಜಕೀಯ, ಜಾತಿ, ಹಣಬಲ, ಪಕ್ಷಕ್ಕಿಂತ ವ್ಯಕ್ತಿಗಳ ಪ್ರಭಾವವೇ ಹೆಚ್ಚು ಎಂದು ಬರೆದು ನನ್ನ ಸುತ್ತ ಇದ್ದ ಆ ಹಿರಿಯರ ಮುಖವನ್ನು ನೋಡಿದೆ. ಅವರು ಸರಿ ಎನ್ನುವಂತೆ ನಸುನಕ್ಕರು.ಅಲ್ಲಿಂದ ಪ್ರಯಾಣ ಚಿಕ್ಕೋಡಿಯತ್ತ ಸಾಗಿತು. ದೂರದಲ್ಲಿ ಚಿಮಣಿ ಕಾಣಿಸಿತು. ಅತ್ತ ಹೋಗುತ್ತಿದ್ದಾಗ ರಸ್ತೆಯ ಎರಡೂ ಬದಿಯಲ್ಲಿಯೂ ವಿಶಾಲವಾದ ಬಯಲಲ್ಲಿ ಕಬ್ಬು ಬೆಳೆದುನಿಂತಿತ್ತು. ಕಾರ್ಖಾನೆಗಳಿಗೆ ಕಬ್ಬು ಸಾಗಿಸುವ ಟ್ರ್ಯಾಕ್ಟರ್‌ಗಳ ಮೆರವಣಿಗೆ ಮುಂದೆಯೇ ಸಾಗುತ್ತಿತ್ತು. ಕಾರ್ಖಾನೆ ಹೊಗೆ ಉಗುಳುತ್ತಿತ್ತು. ಈ ಹೊಗೆಯ ಒಳಗೆ ಹೊಕ್ಕರೆ ಚುನಾವಣೆಯ ಒಗಟನ್ನು ಬಿಡಿಸಿಕೊಳ್ಳಬಹುದೇನೋ ಎಂದು ಅತ್ತ ಕಡೆ ಹೊರಟೆ. ಅಲ್ಲಿಗೆ ಹೋದಾಗ ‘ಉಗಾರ ಸಕ್ಕರೆ ಕಾರ್ಖಾನೆ’ ಎನ್ನುವ ನಾಮಫಲಕವೇ ತನ್ನ ಪರಿಚಯವನ್ನು ಹೇಳಿಕೊಂಡಿತು.‘ಈ ಬಾರಿಯ ಎಲೆಕ್ಷನ್‌ನಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ, ಬೆಲೆ ನಿಗದಿ ಖಂಡಿತ ಪ್ರಮುಖ ವಿಷಯವಾಗುತ್ತದೆ. ಪ್ರಚಾರ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಬಿಸಿ ಮುಟ್ಟಿಸಲು ಸಿದ್ಧವಾಗಿದ್ದೇವೆ’ ಎಂದು ಕಾರ್ಖಾನೆ ಮುಂದೆ ನಿಂತಿದ್ದವರು ಹೇಳಿದರು.ರಾಜ್ಯದಲ್ಲಿ ಬೆಳಗಾವಿ ಜಿಲ್ಲೆ ಹೆಚ್ಚು ಕಬ್ಬು ಬೆಳೆಯುತ್ತದೆ.

ಇದೇ ಜಿಲ್ಲೆಗೆ ಸೇರಿದ ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಂದಾಜು 40 ರಿಂದ 45 ಸಾವಿರ ಹೆಕ್ಟೇರ್‌ನಲ್ಲಿ 52 ಲಕ್ಷ ಟನ್‌ಗಳಷ್ಟು ಕಬ್ಬು ಬೆಳೆಯಲಾಗುತ್ತದೆ. ಇದರಲ್ಲಿ 45 ರಿಂದ 50 ಲಕ್ಷ ಟನ್‌ಗಳಷ್ಟು ಕಬ್ಬನ್ನು ಇಲ್ಲಿಯೇ ನುರಿಯಲಾಗುತ್ತದೆ. 5 ಲಕ್ಷ ರೈತರು ಕಬ್ಬು ಬೆಳೆಯುತ್ತಿದ್ದಾರೆ. 20 ರಿಂದ 25 ಸಾವಿರ ಕಾರ್ಮಿಕರು ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದಾರೆ. ಕೂಲಿ ಕಾರ್ಮಿರ ಸಂಖ್ಯೆಯೂ ದೊಡ್ಡದಿದೆ.ಜನರ ಆರ್ಥಿಕ ಸ್ಥಿತಿಗತಿಯು ಕಾರ್ಖಾನೆಗಳು ಪ್ರತಿ ಟನ್‌ಗೆ ನೀಡುವ ಬೆಲೆ ಮೇಲೆ ಹೆಚ್ಚು ಕಡಿಮೆ ಆಗುತ್ತದೆ ಎನ್ನುವ ಮಾಹಿತಿ ಸಿಕ್ಕಿತು. ಚಿಕ್ಕೋಡಿ­ಯಲ್ಲಿರುವ ದ್ವಿಚಕ್ರ ವಾಹನ ಮಾರಾಟ ಮಳಿಗೆಗೆ ಹೋಗಿ ವಿಚಾರಿಸಿದಾಗ ರೈತರ ಮಾತು ಸತ್ಯ ಎನಿಸಿತು. ಏಕೆಂದರೆ ಕಬ್ಬಿಗೆ ಬಂಪರ್‌ ಬೆಲೆ ಬಂದಾಗ ಬೈಕ್‌ಗಳ ಮಾರಾಟವೂ ಹೆಚ್ಚಾಗುತ್ತದೆ.ರಾಜಕಾರಣಿಗಳ ಹಿಡಿತ: ಬೆಳಗಾವಿ ಜಿಲ್ಲೆಯಲ್ಲಿ 22 ಸಕ್ಕರೆ ಕಾರ್ಖಾನೆಗಳಿವೆ. ಇವುಗಳಲ್ಲಿ 12 ಇದೇ ಕ್ಷೇತ್ರದಲ್ಲಿವೆ. ಇವುಗಳಲ್ಲಿ ಹೆಚ್ಚಿನವು­ಗಳಿಗೆ ರಾಜಕಾರಣಿಗಳೇ ಮಾಲೀಕರು. ಇನ್ನು ಕೆಲವು ರಾಜಕಾರಣಿಗಳ ಹಿಡಿತದಲ್ಲಿವೆ.ಬೆಳಗಾವಿ ಅಧಿವೇಶನದ ಸಮಯ­ದಲ್ಲಿ ವಿಠಲ ಭೀಮಪ್ಪ ಅರಭಾವಿ ಎನ್ನುವ ರೈತ ಕ್ರಿಮಿನಾಶಕ ಔಷಧ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು. ಆಗ ಸರ್ಕಾರ ಪ್ರತಿ ಟನ್‌ ಕಬ್ಬಿಗೆ ₨ 2,650 ಬೆಲೆಯನ್ನು ನಿಗದಿಪಡಿಸಿತು. ಇದರಲ್ಲಿ ₨ 150 ಬೆಂಬಲ ಬೆಲೆಯೂ ಸೇರಿತ್ತು. ಆದರೆ, ಸಕ್ಕರೆ ಕಾರ್ಖಾನೆಗಳು ಸರ್ಕಾರದ ಆದೇಶಕ್ಕೆ ಸವಾಲು ಹಾಕಿ, ನ್ಯಾಯಾಲಯದ ಮೊರೆ ಹೋದವು. ಬಿಜೆಪಿ ಶಾಸಕ, ವಿಶ್ವನಾಥ ಶುಗರ್ಸ್‌ನ ಮಾಲೀಕ ಉಮೇಶ್‌ ಕತ್ತಿ, ‘ಸರ್ಕಾರ ಜೈಲಿಗೆ ಹಾಕಿದರೆ ಹೋಗಲೂ ಸಿದ್ಧ. ಆದರೆ ಸರ್ಕಾರ ನಿಗದಿ ಪಡಿಸಿದಷ್ಟು ದರ ನೀಡುವುದಿಲ್ಲ’ ಎಂದು ಹಟ ಹಿಡಿದಿದ್ದಾರೆ.ನಿಗದಿತ ಬೆಲೆ ಕೊಡುವುದಾಗಿ ಕಬ್ಬು ಬೆಳೆಗಾರರ ಸಂಘಕ್ಕೆ ಲಿಖಿತವಾಗಿಯೇ ಭರವಸೆ ನೀಡಿದ್ದ ಶ್ರೀಮಂತ ಪಾಟೀಲರು ಮಾತು ಮರೆತಿದ್ದಾರೆ. ಇವರು ಈಗ ಜೆಡಿಎಸ್‌ ಅಭ್ಯರ್ಥಿ. ಪ್ರಕಾಶ್ ಹುಕ್ಕೇರಿ ಸಕ್ಕರೆ ಸಚಿವರಾಗಿದ್ದರೂ ಬೆಲೆ ಕೊಡಿಸಲು ಆಗಲಿಲ್ಲ. ಈಗ ಇವರು ಕಾಂಗ್ರೆಸ್‌ ಅಭ್ಯರ್ಥಿ.‘ಕಬ್ಬಿನ ಬೆಲೆ ಚುನಾವಣೆಯಲ್ಲಿ ಗಂಭೀರ ವಿಷಯವಾಗಿದೆ. ಸರ್ಕಾರ ನಿಗದಿ ಪಡಿಸಿದಂತೆ ಕಾರ್ಖಾನೆಗಳು ಇನ್ನೂ ₨ 500 ಬಾಕಿ ಕೊಡಬೇಕು. ಈ ವಿಷಯವಾಗಿ  ರೈತರು ಅಭ್ಯರ್ಥಿಗಳ ಬೆವರಿಳಿಸುವುದು ಗ್ಯಾರಂಟಿ’ ಎನ್ನುತ್ತಾರೆ ಬೆಳಗಾವಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್‌ರಾವ್‌ ಶಹಾ.ಹೊಂದಾಣಿಕೆಯಲ್ಲಿ ಸುಖ: ಹೊಂದಾಣಿಕೆ ರಾಜಕೀಯದಲ್ಲಿ ಅಧಿಕಾರವಿದೆ ಎನ್ನುವು­ದನ್ನು ಇಲ್ಲಿನ ಎಲ್ಲ ಪಕ್ಷಗಳ ರಾಜಕಾರಣಿಗಳು ಕಂಡುಕೊಂಡಿದ್ದಾರೆ. ಹಳ್ಳಿಯೊಂದರ ಸಹಕಾರ ಸಂಘ, ಗ್ರಾಮ ಪಂಚಾಯಿತಿ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆ ತನಕ ಮ್ಯಾಚ್‌ ಫಿಕ್ಸ್, ಸ್ಪಾಟ್ ಫಿಕ್ಸ್ ಆಗಿಯೇ ತೀರುತ್ತದೆ. ಯಾರು, ಯಾವ ಚುನಾವಣೆಯಲ್ಲಿ ಗುಲಾಲ್‌ (ವಿಜಯೋತ್ಸವ) ಎರಚಿಸಿಕೊಳ್ಳಬೇಕು, ಯಾರ ಕಣ್ಣಿಗೆ ಮಣ್ಣು ಎರಚಬೇಕು ಎನ್ನುವುದು ಮೊದಲೇ ನಿರ್ಧಾರವಾಗಿರುತ್ತದೆ.ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯೊಂದಿಗೆ ಮಾತನಾಡುವುದಿತ್ತು. ಆದರೆ ಅವರು ಮಾತನಾಡಲು ಹಿಂದೇಟು ಹಾಕಿದರು. ಮತ್ತೊಬ್ಬರು ಮೂರು ದಶಕಗಳಿಂದ ರಾಜಕೀಯದಲ್ಲಿ ಇದ್ದಾರೆ. ಅವರು ಮಾತನಾಡಿದರು. ಆದರೆ ತಮ್ಮ ಊರು, ಹೆಸರು ಹಾಕಬಾರದು ಎನ್ನುವ ಷರತ್ತು ವಿಧಿಸಿದರು. ಏಕೆಂದರೆ ಇವರಿಗೆ ಹಲವು ರೀತಿ ‘ಸಂಕಟ’ಗಳು ಇದ್ದವು!ಲಿಂಗಾಯತರ ಪ್ರಾಬಲ್ಯ: ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿ ಲಿಂಗಾಯತರು ಇದ್ದಾರೆ. ನಂತರದಲ್ಲಿ ಕುರುಬರು, ದಲಿತರು, ಜೈನರು ಬರುತ್ತಾರೆ. ಆದರೂ ಎಲ್ಲಿ ಎಷ್ಟು ಸಾಧ್ಯವೋ ಅಷ್ಟೂ ಜಾಗಗಳಲ್ಲೂ ಲಿಂಗಾಯತರೇ ಅಧಿಕಾರ ಹಿಡಿದಿದ್ದಾರೆ. ಆಮೇಲೆ ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಗಳೇ ಪ್ರಭಾವಿಗಳು. ಇವರು ಯಾವುದೇ ಪಕ್ಷದ ಚಿಹ್ನೆಯಿಂದ ನಿಂತರೂ ಗೆಲುವಿನ ನಗೆ ಬೀರುತ್ತಾರೆ.ಜಾತ್ರೆಯಲ್ಲಿ ಸುತ್ತಾಟ: ಅಥಣಿ ತಾಲ್ಲೂಕು ಐಗಳಿ ಕ್ರಾಸ್ ಸಮೀಪಿಸುತ್ತಿದ್ದಂತೆ ಗುಲಗಂಜಿ ಗುಡ್ಡ ಪ್ರತ್ಯಕ್ಷವಾಯಿತು. ಹತ್ತಿರ ಹೋಗು­ತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಜನ, ಜಾನುವಾರುಗಳು ಇರುವುದು ಕಾಣಿಸಿತು. ಅದು ಮಾಣಿಕಪ್ರಭು ದನಗಳ ಜಾತ್ರೆಯಾಗಿತ್ತು. ಭರ್ಜರಿ ಜೋಡೆತ್ತುಗಳ ಜೊತೆ ನಿಂತಿದ್ದ ವೃದ್ಧ ಕೈಯಲ್ಲಿ ತಂಬಾಕು ತೀಡಿ ಬಾಯಿಗೆ ಸುರಿದುಕೊಂಡರು.ಸಂಭಾಷಣೆ ಆರಂಭವಾಯಿತು. ಬಲು ಮಾತುಗಾರರಾದ ಅನಂತಪುರದ ಗೌಡಪ್ಪ ಪಾಟೀಲರು, ‘ರಮೇಶ್ ಕತ್ತಿಗೆ (ಹಾಲಿ ಸಂಸದ) ಹುಡುಗಿ ಜೋಡಿ ಮಾಡಿದ್ದೇ ನಾನು. ರಮೇಶ್‌ ಕತ್ತಿ ಹೆಂಡತಿ ಮನೆ, ನಮ್ಮ ಮನೆಗೂ ಒಂದೇ ಗೋಡೆ’ ಎಂದು ತಮ್ಮ ಕೈಯಲ್ಲಿದ್ದ ಊರುಗೋಲನ್ನೇ ಪೆನ್ಸಿಲ್‌ ಮಾಡಿಕೊಂಡು ನೆಲದ ಮೇಲೆ ಗೆರೆ ಎಳೆದು ತೋರಿಸಿದವರು ‘ನನಗೂ ಪ್ರಕಾಶ್ ಹುಕ್ಕೇರಿಗೂ ವಹಿವಾಟು ಇದೆ’ ಎಂದೂ ಹೇಳಿ ಇಬ್ಬರಿಗೂ ‘ಜೈ’ ಎಂದರು.ಹೊಸ ಲೆಕ್ಕಾಚಾರ: ಪ್ರಕಾಶ್‌ ಹುಕ್ಕೇರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೋ, ಇಲ್ಲವೋ ಎನ್ನುವುದು ಐದಾರು ದಿನಗಳಿಂದ ಇಲ್ಲಿನ ಚರ್ಚೆಯ ಪ್ರಮುಖ ವಿಷಯವಾಗಿತ್ತು. ಯಾವಾಗ ಪ್ರಕಾಶ್‌ ಹುಕ್ಕೇರಿ ಒಲ್ಲದ ಮನಸ್ಸಿನಿಂದ ಸ್ಪರ್ಧಿಸಲು ಒಪ್ಪಿಗೆ ಸೂಚಿಸಿದರೋ ಆಗ ಹಳೆಯ ಲೆಕ್ಕವನ್ನು ಅಳಿಸಿ ಹೊಸದಾಗಿ ಕೂಡಿ ಕಳೆಯುವ ಕೆಲಸವನ್ನು ವಿವಿಧ ಪಕ್ಷ ಕಾರ್ಯಕರ್ತರು ಮಾಡುತ್ತಿದ್ದಾರೆ.

ಈಗ ಕ್ಷೇತ್ರದ ಚುನಾವಣಾ ಕಣದಲ್ಲಿ ಯಾರು, ಯಾರಿಗೆ ಎದುರಾಳಿ ಎನ್ನುವುದು ಸ್ಪಷ್ಟವಾಗಿದೆ. ಹಾಲಿ ಸಂಸದ ರಮೇಶ್ ಕತ್ತಿಯವರು ಬಿಜೆಪಿ ಸರ್ಕಾರದಲ್ಲಿ ಸಕ್ಕರೆ ಸಚಿವರಾಗಿದ್ದ ಉಮೇಶ್‌ ಕತ್ತಿಯವರ ಸಹೋದರ. ಪ್ರಕಾಶ್‌ ಹುಕ್ಕೇರಿ ಈಗಿನ ಕಾಂಗ್ರೆಸ್‌ ಸರ್ಕಾರದಲ್ಲಿ ಸಕ್ಕರೆ ಸಚಿವರಾಗಿದ್ದವರು. ಶ್ರೀಮಂತ ಪಾಟೀಲರು ಸಕ್ಕರೆ ಕಾರ್ಖಾನೆ ಮಾಲೀಕರು. ಇಲ್ಲಿನ ಬಹುತೇಕ ಮತದಾರರು ಕಬ್ಬು ಬೆಳೆಗಾರರು.ಇದು ಲೋಕಸಭೆ ಚುನಾವಣೆ­ಯಾದರೂ, ಸ್ಥಳೀಯ ವಿಷಯವಾದ ಕಬ್ಬಿನ ಬೆಲೆ ಪ್ರಮುಖವಾಗಲಿದೆ. ಕಬ್ಬು ಬೆಳೆದು ಕಹಿವುಂಡ ರೈತರ ಸಿಟ್ಟು ನೆತ್ತಿಗೇರಿದೆ. ರಮೇಶ್‌ ಕತ್ತಿ (ಬಿಜೆಪಿ), ಪ್ರಕಾಶ್‌ ಹುಕ್ಕೇರಿ (ಕಾಂಗ್ರೆಸ್‌), ಶ್ರೀಮಂತ ಪಾಟೀಲ (ಜೆಡಿಎಸ್‌) ಈ ಮೂವರು ಅಳಿಯ ಅಲ್ಲ, ಮಗಳ ಗಂಡ ಎನ್ನುವಂತೆ ಒಂದಿಲ್ಲೊಂದು ರೀತಿಯಲ್ಲಿ ಸಕ್ಕರೆಯೊಳಗೆ ಸೇರಿಕೊಂಡಿರುವವರು. ಹೀಗಾಗಿ ರೈತರ ಸಿಟ್ಟು ಯಾರ ಮೇಲೆ ತಿರುಗುತ್ತದೆಯೋ ಎನ್ನುವುದು ಮತ್ತೊಂದು ಒಗಟಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.