ಶನಿವಾರ, ಏಪ್ರಿಲ್ 17, 2021
32 °C

ಕರಗುತ್ತಿರುವ ಮಾನವೀಯ ಮೌಲ್ಯ: ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಒತ್ತಡದ ಇಂದಿನ ಬದುಕಿನಲ್ಲಿ ಮಾನವೀಯ ಮೌಲ್ಯಗಳು ಕರಗಿ ಹೋಗುತ್ತಿವೆ ಎಂದು ಗದಗ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು. ತಾಲ್ಲೂಕಿನ ಅಬ್ಬೆತುಮಕೂರಿನಲ್ಲಿ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ರಾತ್ರಿ ನಡೆದ ಮಾನವ ಧರ್ಮ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮಾನವೀಯ ಮೌಲ್ಯಗಳನ್ನು ಬಲಪಡಿಸುವ ಮೂಲಕ ಪರಸ್ಪರ ಸೌಹಾರ್ದ ಮೂಡಲು ಇಂತಹ ಮಾನವ ಧರ್ಮ ಸಮಾವೇಶಗಳು ಕಾರಣವಾಗುತ್ತವೆ ಎಂದ ಅವರು, ಜನಪದ ಸಾಹಿತ್ಯದ ತ್ರಿಪದಿಗಳ ಮೂಲಕ ಜನಪದ ಸಾಹಿತ್ಯದಲ್ಲಿನ ಮಾನವೀಯತೆ, ಅಂತಃಕರಣ, ಪ್ರೀತಿ, ವಿಶ್ವಾಸಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು.ಸಹಸ್ರಾರು ಬಡಮಕ್ಕಳಿಗೆ ಜ್ಞಾನ ದಾಸೋಹ ಮಾಡುವುದರ ಜೊತೆಗೆ ಅನ್ನದಾಸೋಹವನ್ನು ನಡೆಸುತ್ತಿರುವ ಸಿದ್ಧಗಂಗಾ ಮಠ ನಾಡಿನಲ್ಲೆಡೆ ಹೆಸರುವಾಸಿಯಾಗಿದೆ. ಅಂತೆಯೇ ಅಬ್ಬೆತುಮಕೂರಿನ ಶ್ರೀಗಳು ಈ ನಾಡಿನಲ್ಲಿಯೂ ವಿದ್ಯಾಸಂಸ್ಥೆಗಳನ್ನು ಕಟ್ಟಿ ಬೆಳೆಸಿ, ಅನ್ನದಾಸೋಹ ಮಾಡುವ ಮೂಲಕ ಅಬ್ಬೆತುಮಕೂರನ್ನು ಎಲ್ಲರೂ ಅಬ್ಬಾ! ತುಮಕೂರು ಎನ್ನುವಂತೆ  ಮಾಡಲಿ ಎಂದು ಹಾರೈಸಿದರು.ಶಿಕ್ಷಣ ರಂಗದಲ್ಲಿ ಮಠ ಮಾನ್ಯಗಳ ಕೊಡುಗೆ ಅನನ್ಯವಾದುದು. ಸಾಮಾಜಿಕ ಸೌಹಾರ್ದಕ್ಕೂ ಮಠಗಳು ಶ್ರಮಿಸುತ್ತಿವೆ. ಈ ಭಾಗದಲ್ಲಿ ಅವಧೂತರಾಗಿದ್ದ ವಿಶ್ವಾರಾಧ್ಯರ ಬಗ್ಗೆ ಭಕ್ತರಲ್ಲಿ ಭಕ್ತಿ ಭಾವಗಳು ತುಂಬಿ ತುಳುಕಾಡುತ್ತಿವೆ. ಭಕ್ತರ ಇರುವಿಗೆ ಬೆಂಬಲವಾಗಿ ವಿಶ್ವಾಧ್ಯರು ಸಾಂಬರಾಗಿದ್ದಾರೆ. ಸದ್ಯದ ಶ್ರೀಗಳು ಮಠದ ಉನ್ನತಿಗೆ ಕಾರಣೀಕರ್ತರಾಗಿದ್ದಾರೆ. ಶೈಕ್ಷಣಿಕ ರಂಗದಲ್ಲಿಯೂ ಇನ್ನೂ ಹೆಚ್ಚಿನ ಸಾಧನೆ ಮಾಡಿ, ಮಠದ ಇನ್ನೂ ಹೆಚ್ಚಿನ ಉನ್ನತಿಗೆ ಶ್ರಮಿಸಲಿ ಎಂದು ಸಲಹೆ ಮಾಡಿದರು.ನೇತೃತ್ವ ವಹಿಸಿದ್ದ ಕೊಪ್ಪಳ ಗವಿಸಿದ್ಧೇಶ್ವರ ಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಆಧುನಿಕ ಬದುಕಿನಲ್ಲಿ ಮನುಷ್ಯ ಮನಸ್ಸು ವಿಚಲಿತವಾಗಿದೆ. ಆಧುನಿಕ ಆವಿಷ್ಕಾರಗಳು ಮನುಷ್ಯನ ಮಾಲೀಕವಾಗುತ್ತಿರುವುದು ಇದಕ್ಕೆ ಕಾರಣ. ಮನುಷ್ಯ ಅವುಗಳ ಮಾಲೀಕನಾದಾಗ ಇಂತಹ ಆವಾಂತರಗಳಿಂದ ತಪ್ಪಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಒತ್ತಡದ ಮಧ್ಯೆಯೂ ಇಲ್ಲಿ ನೆರೆದಿರುವ ಭಕ್ತರ ಶ್ರದ್ಧೆ ಅಗಾಧವಾಗಿದೆ. ಇದಕ್ಕೆ ವಿಶ್ವಾರಾಧ್ಯರ ಕತೃತ್ವ ಶಕ್ತಿಯೇ ಕಾರಣ. ಮಹಾರಾಜ ಮಣ್ಣನ್ನು ಆಳಿದರೆ, ಮಹಾತ್ಮರು ಮನಸ್ಸನ್ನು ಆಳುತ್ತಾರೆ ಎಂಬಂತೆ ವಿಶ್ವಾರಾಧ್ಯರು ಈ ನಾಡಿನ ಜನತೆಯ ಮನಸ್ಸನ್ನು ಆಳಿ ಮಹಾತ್ಮ ಎಂದೆನಿಸಿಕೊಂಡಿದ್ದಾರೆ ಎಂದರು ಅಭಿಪ್ರಾಯಪಟ್ಟರು.ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ, ವಿಶ್ವಾರಾಧ್ಯರು ಈ ರೂಢದಿಂದ ಆರೂಢರಾದವರು. ಜಾತಿ, ಮತವನ್ನು ಎಣಿಸದೇ ಎಲ್ಲರೂ ಶಿವನ ಸಂಭೂತರೆಂದು ಭಾವಿಸಿದವರು. ಅಂತೆಯೇ ಈಗಲೂ ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವುದಕ್ಕೆ ನಾಡಿನ ಎಲ್ಲೆಡೆಯಿಂದ ಹರಿದು ಬರುತ್ತಿರುವ ಲಕ್ಷಾಂತರ ಭಕ್ತರೇ ಸಾಕ್ಷಿ ಎಂದರು. ಮಹಾರಾಷ್ಟ್ರದ ಮಾಜಿ ಸಚಿವ ಸಿದ್ಧರಾಮ ಮೈತ್ರೆ, ಶಾಸಕ ಡಾ. ಎ.ಬಿ.ಮಾಲಕರೆಡ್ಡಿ, ಮಾಜಿ ಶಾಸಕ ಡಾ. ವೀರಬಸವಂತರೆಡ್ಡಿ ಮುದ್ನಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ರೂಪಾ ಮಾತನಾಡಿದರು.ಶಿವಾನಂದ ಸ್ವಾಮೀಜಿ, ವೀರಮಹಾಂತ ಸ್ವಾಮೀಜಿ, ಸೋಮಶೇಖರ ಶಿವಾಚಾರ್ಯರು, ಗುರುನಾಥ ಸ್ವಾಮೀಜಿ, ರಮಾನಂದ ಅವಧೂತರು, ಹೈದರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಮರನಾಥ ಪಾಟೀಲ, ಲಿಂಗಣ್ಣ ಮಲ್ಹಾರ, ವಿಧಾನಪರಿಷತ್ ಮಾಜಿ ಸದಸ್ಯ ಚೆನ್ನಾರೆಡ್ಡಿ ಪಾಟೀಲ ತುನ್ನೂರ, ಸೇರಿದಂತೆ ಹಲವಾರು ಗಣ್ಯರು ವೇದಿಕೆಯಲ್ಲಿದ್ದರು.

ರಾಮಲಿಂಗ ಗೌಡಗಾಂವ ಪ್ರಾರ್ಥಿಸಿದರು. ನಾಗರೆಡ್ಡಿ ಪಾಟೀಲ ಕರದಾಳ ಸ್ವಾಗತಿಸಿದರು. ಡಾ. ಸುಭಾಷಚಂದ್ರ ಕೌಲಗಿ ನಿರೂಪಿಸಿದರು. ಎಸ್.ಎನ್. ಮಿಂಚಿನಾಳ ವಂದಿಸಿದರು. ನಂತರ ಬೆಂಗಳೂರಿನ ಸೂರ್ಯ ಕಲಾವಿದರಿಂದ ಆಕರ್ಷಕ ನೃತ್ಯ ರೂಪಕಗಳು ಮೂಡಿಬಂದವು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.