ಭಾನುವಾರ, ಜೂನ್ 20, 2021
25 °C
ಮುದ್ರಕರು, ಪ್ರಕಾಶಕರ ಜೊತೆಗೆ ಜಿಲ್ಲಾಡಳಿತದ ಸಭೆ

ಕರಪತ್ರ-, ಮುದ್ರಣಕ್ಕೆ ಅನುಮತಿ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಲೋಕಸಭಾ ಚುನಾವಣೆಗೆ ಅಭ್ಯರ್ಥಿ­ಗಳಿಂದ ನಾಮಪತ್ರ ಸಲ್ಲಿಕೆಯಾಗುತ್ತಿದ್ದು, ಅಭ್ಯರ್ಥಿ­ಗಳ ಮತ್ತು ರಾಜಕೀಯ ಪಕ್ಷಗಳ ಮೂಲಕ ಪ್ರಚಾರ ಕಾರ್ಯಕ್ಕಾಗಿ ಮುದ್ರಿಸ­ಲಾಗುವ ಕರಪತ್ರ, ಭಿತ್ತಿಪತ್ರ ಹಾಗೂ ಇತರೆ ಚುನಾವಣಾ ಸಾಮಗ್ರಿಗಳಲ್ಲಿ ಪ್ರಕಾಶಕರ ಹಾಗೂ ಮುದ್ರಕರ ಹೆಸರು, ವಿಳಾಸ ಮುದ್ರಿಸುವುದು ಕಡ್ಡಾಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್‌ ಹೇಳಿದರು.ಇಲ್ಲಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ­ದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಮುದ್ರಕರು, ಪ್ರಕಾಶಕರು, ಚಲನಚಿತ್ರ ಮಂದಿರಗಳ ಮಾಲೀ­ಕರು ಹಾಗೂ ಕೇಬಲ್ ಆಪರೇಟರ್‌ಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಲೋಕ­ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಮತ್ತು ರಾಜಕೀಯ ಪಕ್ಷಗಳ ಮೂಲಕ ನೀಡಲಾ­ಗುವ ಜಾಹೀರಾತು, ಕರಪತ್ರ, ಭಿತ್ತಿಪತ್ರ, ಪೋಸ್ಟರ್ ಮತ್ತು ಇತರೆ ಚುನಾವಣಾ ಸಾಮಗ್ರಿ­ಗಳನ್ನು ಮುದ್ರಿಸುವ ಮೊದಲು ಜಿಲ್ಲಾ ಎಂ.ಸಿ.­ಎಂ.ಸಿ ಸಮಿತಿಗೆ ನಿಗದಿತ ಅರ್ಜಿ ಸಲ್ಲಿಸಿ ಅನುಮತಿ ಪಡೆಯುವುದು ಕಡ್ಡಾಯ ಎಂದು ಹೇಳಿದರು.ಮುದ್ರಕರು ಹಾಗೂ ಪ್ರಕಾಶಕರು ಈ ಕುರಿತು ಘೋಷಣಾ ಪತ್ರ ಮತ್ತು ನಿಗದಿತ ಅರ್ಜಿ ಭರ್ತಿ ಮಾಡಿ ಮುದ್ರಿಸುವ ಸಾಮಗ್ರಿಗಳ ಸಂಖ್ಯೆ, ದರ, ವಿಷಯ, ಹೆಸರು, ವಿಳಾಸ, ಸೇರಿದಂತೆ ಸ್ಪಷ್ಟವಾದ ಮಾಹಿತಿಯನ್ನು ಸಲ್ಲಿಸಬೇಕು. ಯಾವುದೇ ತಪ್ಪು ಮಾಹಿತಿ ಸಲ್ಲಿಸಿ, ನಿಗದಿಪಡಿಸಿದ ಸಂಖ್ಯೆಗಿಂತ ಹೆಚ್ಚಿನ ಸಾಮಗ್ರಿಗಳನ್ನು ಮುದ್ರಿಸಿ ವಿತರಿಸುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಮುದ್ರಿಸಿದ ಸಾಮಗ್ರಿಗಳಲ್ಲಿ ಯಾವುದೇ ಧರ್ಮ, ಜಾತಿ ಮತ್ತು ವ್ಯಕ್ತಿ ನಿಂದನೆ ವಿಷಯಗಳಿಗೆ ಅವಕಾಶ ಇಲ್ಲ. ಇಂತಹ ವಿಷಯ­ದಲ್ಲಿ ತಪ್ಪು ಸಾಬೀತಾದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ ಅನ್ವಯ ಆರು ತಿಂಗಳ ಶಿಕ್ಷೆಗೆ ಗುರಿಪಡಿಸ­ಲಾ­ಗುತ್ತದೆ ಎಂದರು.ಚುನಾವಣಾ ಸಾಮಗ್ರಿಗಳ ಮೇಲೆ ಮುದ್ರಕರ ಹಾಗೂ ಪ್ರಕಾಶಕರ ವಿವರ ಇಲ್ಲದಿದ್ದಲ್ಲಿ, ಅಂತಹ ವಿವರಗಳನ್ನು ಚುನಾವಣಾ ಸಮಿತಿ ಕಳುಹಿಸ­ಲಾ­ಗುತ್ತದೆ. ಅಭ್ಯರ್ಥಿಯ ಗಮನಕ್ಕೆ ತರದೇ, ಬೇರೆ­ಯವರು ಅಭ್ಯರ್ಥಿಯ ಹೆಸರಿನಲ್ಲಿ ಜಾಹೀರಾತು ಹಾಗೂ ಚುನಾವಣಾ ಸಾಮಗ್ರಿ ಮುದ್ರಿಸು­ವಂತಿಲ್ಲ. ಇಂತಹ ಪ್ರಕರಣಗಳು ಕಂಡುಬಂದಲ್ಲಿ, ಈ ರೀತಿ ಪ್ರಕಟಿಸಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ. ಪತ್ರಿಕೆಗಳಲ್ಲಿ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿ ರೂಪದ ಜಾಹೀರಾತುಗಳ ಬಗ್ಗೆಯೂ ಸಮಿತಿ ಗಮನಹರಿಸಲಿದೆ. ಕಾಸಿಗಾಗಿ ಸುದ್ದಿ ಎಂದು ಪರಿಗಣಿಸಲಾಗುವ ಈ ಪ್ರಕರಣಗಳನ್ನು ವಾರ್ತಾ ಇಲಾಖೆ ಜಾಹೀರಾತು ದರ ಅನ್ವಯಿಸಿ, ಅಭ್ಯರ್ಥಿಗಳ ಲೆಕ್ಕಕ್ಕೆ ಸೇರಿಸಲಾಗುತ್ತದೆ ಎಂದು ತಿಳಿಸಿದರು.ದೂರದರ್ಶನ, ರೇಡಿಯೋ, ಕೇಬಲ್‌ ನೆಟ್‌ವರ್ಕ್‌ ಮುಂತಾದ ವಿದ್ಯುನ್ಮಾನ ಮಾಧ್ಯಮ­ಗಳಲ್ಲಿ ಜಾಹೀರಾತು ಪ್ರಸಾರ ಮಾಡುವ ಮೊದಲು ಜಿಲ್ಲಾ ಸಮಿತಿಯಿಂದ ಕಡ್ಡಾಯವಾಗಿ ಅನುಮೋದನೆ ಪಡೆಯಬೇಕು. ಅನುಮೋದನೆ ಪಡೆಯದೇ ಜಾಹಿರಾತು ಪ್ರಸಾರವಾದರೆ ಮಾಧ್ಯಮ ನಿಗಾ ಸಮಿತಿಯು ಈ ಬಗ್ಗೆ ಗಮನ­ಹರಿಸಲಿದ್ದು, ಅಗತ್ಯ ಕ್ರಮಕ್ಕಾಗಿ ಚುನಾವಣಾ­ಧಿಕಾರಿಗಳಿಗೆ ಕಳುಹಿಸಲಿದೆ ಎಂದು ವಿವರಿಸಿದರು.ಚುನಾವಣೆ ಘೋಷಣೆಯಾದ ಬಳಿಕ ರಾಜಕೀಯ ಪಕ್ಷಗಳ ಅಥವಾ ಅಭ್ಯರ್ಥಿಗಳ ಪರವಾಗಿ ಏಕಮುಖ ಸುದ್ದಿಗಳನ್ನು ಪ್ರಕಟಿ­ಸು­ವುದು ಅಥವಾ ಪ್ರಸಾರ ಮಾಡುವುದರ ಮೇಲೆಯೂ ಸಮಿತಿಯು ನಿಗಾ ವಹಿಸಲಿದೆ. ಸ್ಥಳೀಯ ಕೇಬಲ್‌ಗಳಲ್ಲಿ ಕಾಸಿಗಾಗಿ ಸುದ್ದಿ ಮೇಲೆ ನಿಗಾ ವಹಿಸಲು ತಾಲ್ಲೂಕು ಮಟ್ಟದಲ್ಲಿ ವೀಕ್ಷಣಾ ಸಮಿತಿಗಳನ್ನು ರಚಿಸಲಾಗಿದೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ರಾಜಕೀಯ ಸುದ್ದಿಗಳ ಮೇಲೆ ಸಹ ನಿಗಾ ವಹಿಸಲಾಗುವುದು. ಪತ್ರಿಕೆಗಳಲ್ಲಿ ಪ್ರಕಟ­ವಾ­ಗುವ ಪಕ್ಷಗಳ ಅಥವಾ ಅಭ್ಯರ್ಥಿಗಳ ಜಾಹೀರಾತು­ಗಳಿಗೆ ತಗಲುವ ವೆಚ್ಚವನ್ನು ನಿತ್ಯ ಪರಿಶೀಲಿಸ­ಲಾಗುವುದು ಎಂದು ತಿಳಿಸಿದರು.ಜಿಲ್ಲಾ ಎಂ.ಸಿ.ಎಂ.ಸಿ ಸಮಿತಿಯ ನೋಡಲ್ ಅಧಿಕಾರಿ ಬಂಡೆಪ್ಪ ಆಕಳ, ಸದಸ್ಯ ಕಾರ್ಯದರ್ಶಿ ಸುಲೇಮಾನ್ ನದಾಫ್, ನಗರಸಭೆ ಪೌರಾ­ಯುಕ್ತ ಖಾಜಾ ಮೈನೋದ್ದೀನ್‌, ಗುರುಮಠಕಲ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವಿಂದ್ರ ಲಂಬೂ, ಇಜಾಜ್ ಹುಸೇನ್, ಜಿಲ್ಲೆಯ ಮುದ್ರ­ಕರು, ಪ್ರಕಾಶಕರು, ಕೇಬಲ್ ಆಪರೇಟರ್‌ಗಳು, ಸಿನಿಮಾ ಮಂದಿರದ ಮಾಲೀಕರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.