ಶನಿವಾರ, ಮೇ 15, 2021
24 °C

ಕರಾಳ ದಿನ: ಬೆದರಿಕೆ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹಾಗೂ ಜಾಲಹಳ್ಳಿಯ ತಾಜ್ ವಿವಾಂತ ಹೋಟೆಲ್‌ನ ಆವರಣದಲ್ಲಿ ಪತ್ತೆಯಾದ ಬೆದರಿಕೆ ಪತ್ರಗಳಲ್ಲಿ `2103ರ ಜೂ.20 ಮತ್ತು 21 ಬೆಂಗಳೂರಿಗೆ ಕರಾಳ ದಿನವಾಗಲಿದೆ' ಎಂಬ ಉಲ್ಲೇಖವಿದೆ.ಒಟ್ಟು ನಾಲ್ಕು ಪುಟಗಳ ಆ ಪತ್ರ `ಪ್ರಜಾವಾಣಿ'ಗೆ ಲಭ್ಯವಾಗಿದೆ. ಮೊದಲ ಮೂರು ಪುಟಗಳು ಉರ್ದು ಭಾಷೆಯಲ್ಲಿದ್ದು, ಉಳಿದ ಒಂದು ಪುಟವನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗಿದೆ. ಇಂಗ್ಲಿಷ್ ಪುಟದಲ್ಲಿರುವ ಸಂದೇಶಕ್ಕೂ, ಉರ್ದು ಭಾಷೆಯಲ್ಲಿರುವ ಸಂದೇಶಕ್ಕೂ ಸಾಮ್ಯತೆ ಇಲ್ಲ. ಇದೊಂದು `ಹುಸಿ ಬೆದರಿಕೆ ಪತ್ರ' ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಇಂಗ್ಲಿಷ್ ಪುಟದ ಸಾರಾಂಶ: ಅಲ್-ಅಮಿನ್-ಅಲ್‌ಖೈದಾ ಎಂಬ ಸಂಘಟನೆ ಹೆಸರಿನಲ್ಲಿ ಬರೆದಿರುವ ಈ ಪತ್ರದಲ್ಲಿ `ಉಮರ್ ಅಲ್ಲಾ ಭಕ್ಷ್ ಅವರ ಮುಂದಾಳತ್ವದಲ್ಲಿ ಸಂಘಟನೆಯನ್ನು ಮರು ಸ್ಥಾಪಿಸಿದ್ದೇವೆ. ತಂಡದಲ್ಲಿ ಒಟ್ಟು 40 ಮಂದಿ ಸದಸ್ಯರಿದ್ದು, ಮಾನವ ಬಾಂಬ್‌ಗಳು, ಸ್ಫೋಟಕಗಳು ಹಾಗೂ ಶಸ್ತ್ರಾಸ್ತ್ರಗಳೊಂದಿಗೆ ಈಗಾಗಲೇ ನಗರಕ್ಕೆ ಬಂದಿದ್ದೇವೆ. 2103ರ ಜೂನ್ 20 ಮತ್ತು 21 ಬೆಂಗಳೂರಿಗೆ ಕರಾಳ ದಿನವಾಗಲಿದ್ದು, ರಕ್ತಪಾತಕ್ಕೆ ಸಿದ್ಧರಾಗಿ' ಎಂದು ಹೇಳಿದ್ದಾರೆ. ಆದರೆ, ಉರ್ದು ಭಾಷೆಯಲ್ಲಿರುವ ಮೂರು ಪುಟಗಳು ಭಯೋತ್ಪಾದನಾ ಕೃತ್ಯಕ್ಕೆ ಸಂಬಂಧಿಸಿಲ್ಲ.ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ), ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್), ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರಿ (ಎನ್‌ಎಎಲ್), ತಾಜ್ ವಿವಾಂತ, ಲೀಲಾ ಪ್ಯಾಲೆಸ್, ರಾಜ್ಯ ಗೃಹ ಮಂಡಳಿ, ಬಿಎಚ್‌ಇಎಲ್, ಬಿಇಎಲ್, ಶಿವಾಜಿನಗರದ ಚರ್ಚ್, ಹಳೆವಿಮಾನ ನಿಲ್ದಾಣ ರಸ್ತೆಯಲ್ಲಿರುವ ಶಿವನ ದೇವಸ್ಥಾನದಲ್ಲಿ ವಿಧ್ವಂಸಕ ಕೃತ್ಯ ಎಸಗಲಿದ್ದೇವೆ ಎಂದು ಬರೆದಿದ್ದಾರೆ.ಉರ್ದು ಪುಟಗಳಲ್ಲೇನಿದೆ: ಉರ್ದು ಭಾಷೆಯ ಮೊದಲ ಪುಟದಲ್ಲಿ ಲಷ್ಕರ್-ಎ-ಜಂಗ್ವಿ ಎಂಬ ಪಾಕಿಸ್ತಾನದ ಭಯೋತ್ಪಾದನಾ ಸಂಘಟನೆಯ ಬಲುಚಿಸ್ತಾನದ ಘಟಕವು ದೇಶದಲ್ಲಿನ ಶಿಯಾ ಮುಸ್ಲೀಂರ ವಿರುದ್ಧ ಪ್ರಕಟಿಸಿರುವ ಕರಪತ್ರ.

ಎರಡನೇ ಪುಟದಲ್ಲಿ ಉರ್ದು ಪತ್ರಿಕೆಯೊಂದರ ಲೇಖನದ ಸಾರಾಂಶವಿದೆ. ಮೂರು ವರ್ಷಗಳ ಹಿಂದೆ ಉರ್ದು ಪತ್ರಿಕೆಯೊಂದರಲ್ಲಿ ಪ್ರಕಟವಾದ `ಯಹಾ ಕೊಯಿ ಬಿ ಇನ್‌ಕಿಲಾಬಿ ನಹಿ' (ಇಲ್ಲಿ ಯಾರೂ ಕ್ರಾಂತಿಕಾರಿಗಳಲ್ಲ) ಎಂಬ ಶೀರ್ಷಿಕೆಯಡಿ ಪ್ರಕಟವಾದ ಲೇಖನವನ್ನು ಅಂತರ್ಜಾಲದಿಂದ ಪಡೆದುಕೊಂಡಿದ್ದಾರೆ. ಆ ಅಂಕಣದಲ್ಲಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಮತ್ತು ಪಂಜಾಬ್ ಪ್ರಾಂತ್ಯದ ಆಂತರಿಕ ರಾಜಕೀಯ ಸ್ಥಿತಿಗತಿ ಬಗ್ಗೆ ಚರ್ಚಿಸಲಾಗಿದೆ. ಮೂರನೇ ಪುಟವು ಪಾಕಿಸ್ತಾನ `ಜಂಗ್' ಎಂಬ ಪತ್ರಿಕೆಯಲ್ಲಿ ಏಪ್ರಿಲ್ 2010ರಲ್ಲಿ ಹಮೀದ್ ಮೀರ್ ಎಂಬುವರು ಬರೆದಿರುವ ಅಂಕರಣದ ಪ್ರತಿ. ಇದರಲ್ಲಿ ಏ.2010ರಲ್ಲಿ ಪಾಕಿಸ್ತಾನದ ಸಂವಿಧಾನಕ್ಕೆ ತರಲಾದ 18ನೇ ತಿದ್ದುಪಡಿಯ ಬಗ್ಗೆ ವಿವರಿಸಲಾಗಿದೆ.ಸಾಮ್ಯತೆ ಇಲ್ಲ

`ಉರ್ದು ಭಾಷೆಯಲ್ಲಿರುವ ಮೂರು ಪುಟಗಳನ್ನು ಭಾಷಾಂತರ ಮಾಡಲಾಗುತ್ತಿದೆ. ಈವರೆಗಿನ ಭಾಷಾಂತರ ಪ್ರಕ್ರಿಯೆಯಿಂದ ಇಂಗ್ಲೀಷ್ ಪುಟದಲ್ಲಿರುವ ಸಂದೇಶಕ್ಕೂ, ಉರ್ದು ಭಾಷೆಯಲ್ಲಿರುವ ಸಂದೇಶಕ್ಕೂ ಒಂದಕ್ಕೊಂದು ಸಂಬಂಧವಿಲ್ಲ ಎನಿಸುತ್ತಿದೆ' ಎಂದು ನಗರದ ಹೆಚ್ಚುವರಿ ಪೊಲೀಸ್ ಕಮಿಷನರ್ ಕಮಲ್‌ಪಂತ್ `ಪ್ರಜಾವಾಣಿ'ಗೆ ತಿಳಿಸಿದರು.`ಪೀಣ್ಯದ ಇಸ್ರೊ ಸಂಸ್ಥೆ ಹಾಗೂ ಜಾಲಹಳ್ಳಿಯಲ್ಲಿನ ತಾಜ್ ವಿವಾಂತ ಹೋಟೆಲ್ ಆವರಣಕ್ಕೆ ಗುರುವಾರ ಭೇಟಿ ನೀಡಿದ ಪೊಲೀಸರು, ಪತ್ರಗಳು ಪತ್ತೆಯಾದ ಸ್ಥಳವನ್ನು ಹಾಗೂ ಸಮೀಪದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಮಾಹಿತಿ ಕಲೆಹಾಕಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.