ಸೋಮವಾರ, ಮೇ 10, 2021
21 °C

ಕರಾವಳಿ ತೀರದಲ್ಲಿ ನಾಲ್ಕು ಹೊಸ ಪೊಲೀಸ್ ಠಾಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರಪೇಟೆ: ಸಮುದ್ರ ತೀರದ ಮುಖಾಂತರ ಭಯೋತ್ಪಾದಕರು ಬರದಂತೆ ತಡೆಯಲು ರಾಜ್ಯದ 300 ಕಿ.ಮೀ. ಉದ್ದದ ಕರಾವಳಿ ತೀರದಲ್ಲಿ ಕಾವಲು ಪಡೆ ರಚಿಸಲಾಗುತ್ತಿದ್ದು, ಈ ಭಾಗದಲ್ಲಿ 4 ಹೊಸ ಪೊಲೀಸ್ ಠಾಣೆಗಳನ್ನು ಸದ್ಯದಲ್ಲಿಯೇ ತೆರೆಯಲಾಗುವುದು ಎಂದು ರಾಜ್ಯ ಗೃಹ ಮತ್ತು ಸಾರಿಗೆ ಸಚಿವ ಆರ್.ಅಶೋಕ್ ಹೇಳಿದರು.ನಗರದಲ್ಲಿ ರೂ. 36 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಪೊಲೀಸ್ ಠಾಣೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.ಪೊಲೀಸ್ ಇಲಾಖೆಯ ಕಾರ್ಯದಕ್ಷತೆಯಿಂದಾಗಿ ರಾಜ್ಯದಲ್ಲಿ ಕಳೆದ ಮೂರ‌್ನಾಲ್ಕು ವರ್ಷಗಳಲ್ಲಿ ಕೋಮು ಗಲಭೆ ಮತ್ತು ಭಯೋತ್ಪಾದಕ ಚಟುವಟಿಕೆಗಳ ಪ್ರಮಾಣ ಕಡಿಮೆಯಾಗಿದೆ. ಪ್ರತಿವರ್ಷ 30 ರಿಂದ 40 ರ ಪ್ರಮಾಣದಲ್ಲಿರುತ್ತಿದ್ದ ಗಲಭೆಯ ಪ್ರಕರಣಗಳು ಈಗ 8 ಕ್ಕೆ ಇಳಿದಿರುವುದೇ ಇದಕ್ಕೆ ಸಾಕ್ಷಿ. ಈ ಉದ್ದೇಶಕ್ಕಾಗಿ ಕಮ್ಯೋಂಡೋ ಪಡೆಯನ್ನು ರಚಿಸಲಾಗಿದೆ ಎಂದರು. ಮುಂದಿನ 3 ವರ್ಷಗಳಲ್ಲಿ ರಾಜ್ಯದಲ್ಲಿ ಆಧುನಿಕ ತಂತ್ರಜ್ಞಾನ ಹೊಂದಿದ ಒಟ್ಟು 30 ಹೊಸ ಅಗ್ನಿಶಾಮಕ ಠಾಣೆಗಳನ್ನು ತೆರೆಯಲಾಗುತ್ತಿದ್ದು, ಈ ಬಾರಿ 10 ಹೊಸ ಅಗ್ನಿಶಾಮಕ ಠಾಣೆಗಳನ್ನು ಆರಂಭಿಸಲಾಗುತ್ತದೆ. ಪೊಲೀಸು ಇಲಾಖೆಯೊಂದಿಗೆ ಗೃಹರಕ್ಷಕ ದಳವನ್ನೂ ಬಲಪಡಿಸಲಾಗುತ್ತಿದ್ದು, ಅವರ ವೇತನವನ್ನು ಹೆಚ್ಚು ಮಾಡಲಾಗುತ್ತಿದೆ. ಪೊಲೀಸ್ ಕಾನ್‌ಸ್ಟೆಬಲ್‌ಗಳಿಗೆ ಒಂದು ಜೊತೆ ಹೆಚ್ಚುವರಿ ಸಮವಸ್ತ್ರ ನೀಡಲಾಗುತ್ತಿದೆ ಎಂದು ಹೇಳಿದರು.ಸರ್ಕಾರಿ ನೌಕರರ ವರ್ಗಾವಣೆಯನ್ನು ಪಾರದರ್ಶಕವಾಗಿ ಮಾಡಬೇಕೆಂಬುದು ಸರ್ಕಾರದ ಕಾಳಜಿ ಎಂದ ಅವರು ಪೊಲೀಸ್ ಇಲಾಖೆಯನ್ನು ಆಧುನಿಕಗೊಳಿಸಲು ಸರ್ಕಾರ ಬದ್ಧವಾಗಿದ್ದು, ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿದೆ. ಪೊಲೀಸರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಜನರೊಂದಿಗೆ ಉತ್ತಮವಾಗಿ ಸ್ಪಂದಿಸಬೇಕು. ವಾಸ್ತವಿಕ ಅಂಶಗಳ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ ಕೊಡಗಿನಲ್ಲಿ ಮೊದಲಿನಿಂದಲೂ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದ್ದು ಅಪರಾಧಗಳ ಸಂಖ್ಯೆ ಅತಿ ಕಡಿಮೆ ಎಂದರು. ಸೋಮವಾರಪೇಟೆ ಹಾಗೂ ಕುಶಾಲನಗರಕ್ಕೆ ಆಧುನಿಕ ರೀತಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳನ್ನು ರಚಿಸಲು ಸಚಿವರು ಹಣ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಎಚ್.ಎಂ.ಕಾವೇರಿ, ತಾಲೂಕು ಪಂಚಾಯಿತಿ ಅಧ್ಯಕ್ಷ ವಿ.ಕೆ.ಲೋಕೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಎನ್. ಎಸ್.ಮೂರ್ತಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಮೈಸೂರು ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಎ.ಎಸ್.ಎನ್. ಮೂರ್ತಿ ಇತರರು ಉಪಸ್ಥಿತರಿದ್ದರು.

 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಅಣ್ಣಿಗೇರಿ ಸ್ವಾಗತಿಸಿ, ಕವನ್ ಕಾರ್ಯಪ್ಪ ನಿರೂಪಿಸಿದರು.  ಡಿವೈಎಸ್ಪಿ ಪೌಲ್‌ವರ್ಮಾ ವಂದಿಸಿದರು.  ಪೊಲೀಸ್ ಸಿಬ್ಬಂದಿಗೆ ವಸತಿಗೃಹ

ಹೊಸದಾಗಿ ಅಗ್ನಿಶಾಮಕ ಠಾಣೆಗಳನ್ನು ನಿರ್ಮಿಸುವಾಗ ಜೊತೆಯಲ್ಲಿ ಸಿಬ್ಬಂದಿಗಾಗಿ ವಸತಿಗೃಹಗಳನ್ನೂ ಕಟ್ಟಲಾಗುತ್ತಿದೆ. ಆಸ್ಟ್ರೇಲಿಯಾ ಮಾದರಿಯಲ್ಲಿ ರೂ. 50 ಕೋಟಿ ವೆಚ್ಚದಲ್ಲಿ ಪೊಲೀಸ್ ಸಿಬ್ಬಂದಿಗೆ ವಸತಿಗೃಹ ಕಟ್ಟಲು ಈ ಬಾರಿ ಹಣ ಕಾಯ್ದಿರಿಸಲಾಗಿದೆ.

 

ರಾಜ್ಯದಲ್ಲಿ ಹೊಸದಾಗಿ 10 ಟ್ರಾಫಿಕ್ ಪೊಲೀಸ್ ಠಾಣೆ ನಿರ್ಮಿಸಲು ಈ ಬಾರಿ ಯೋಜಿಸಲಾಗಿದೆ. ಅವಶ್ಯಕತೆ ಇರುವ ಸ್ಥಳಗಳಲ್ಲಿ ಹೊಸದಾಗಿ ಗ್ರಾಮಾಂತರ ಪೊಲೀಸ್ ಠಾಣೆಗಳನ್ನೂ ತೆರೆಯಲಾಗುವುದು ಎಂದು ಸಚಿವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.