ಬುಧವಾರ, ಜುಲೈ 15, 2020
22 °C

ಕರಿಪುಳಿ ಹುಣಸೆಗೆ ಬಂಪರ್ ಬೆಲೆ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

ಕರಿಪುಳಿ ಹುಣಸೆಗೆ ಬಂಪರ್ ಬೆಲೆ

ಹುಣಸೇಹಣ್ಣಿನಲ್ಲಿ ಮೂರು ವಿಧ. ಬೀಜ, ನಾರು, ಸಿಪ್ಪೆ ತೆಗೆದ, ದಪ್ಪವಾದ ತಿರುಳನ್ನು ‘ಕರಿಪುಳಿ’ ಎನ್ನುತ್ತಾರೆ. ಇದಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ. ಮಧ್ಯಮ ಗಾತ್ರ, ಬೀಜ, ನಾರು, ಸಿಪ್ಪೆ ತೆಗೆದ ಹಣ್ಣಿನ ತಿರುಳು ‘ಹೂವು’. ಮರದಿಂದ ನೇರವಾಗಿ ಮಾರಾಟಕ್ಕೆ ಬಂದ ಹಣ್ಣು ‘ಬೋಟು’. ತುಮಕೂರು ಮಾರುಕಟ್ಟೆಯಿಂದ ವರ್ಷಕ್ಕೆ 500 ಲೋಡು ಕರಿಪುಳಿ (ಒಂದು ಲೋಡಿಗೆ 10 ಟನ್ ಹಣ್ಣು), 300 ಲೋಡು ಹೂವು, 300 ಲೋಡು ಬೋಟಿನ ವಹಿವಾಟು ನಡೆಯುತ್ತದೆ.

ಹುಣಸೆ ಅಲ್ಪಕಾಲೀನ ವಾಣಿಜ್ಯ ಬೆಳೆ. ಧಾರಣೆಯಲ್ಲಿ ಯಾವಾಗಲೂ ಅನಿಶ್ಚಿತತೆ. ಬೆಳೆಗಾರನಿಗಿಂತ ಮಧ್ಯವರ್ತಿಗಳಿಗೆ ಅಧಿಕ ಲಾಭ. ಆದರೂ ನಷ್ಟಕ್ಕೆ ಅವಕಾಶವಿಲ್ಲ. ಕೆಲ ವರ್ಷಗಳಿಂದ ಹುಣಸೆ ಹಣ್ಣಿನ ಬೆಲೆ ಗಗನಕ್ಕೇರುತ್ತಿದೆ.ತುಮಕೂರು ಜಿಲ್ಲೆಯಲ್ಲಿ ಹುಣಸೆ ಕೃಷಿ ಸಮೃದ್ಧ. ತುಮಕೂರು, ಶಿರಾ ಎಪಿಎಂಸಿ ಮಾರುಕಟ್ಟೆಗಳು ಹುಣಸೆ ವಹಿವಾಟಿನ ಬೃಹತ್ ಮಾರುಕಟ್ಟೆಗಳು. ವಾರ್ಷಿಕ ರೂ 200 ಕೋಟಿಗಳಿಗೂ ಅಧಿಕ ಮೊತ್ತದ ವಹಿವಾಟು ಇಲ್ಲಿ ನಡೆಯುತ್ತದೆ ಎಂಬ ಅಂದಾಜು ವರ್ತಕರದ್ದು.ಅಗತ್ಯ ವಸ್ತುಗಳ ಗಗನಮುಖಿ ಬೆಲೆಯಿಂದ ಹೈರಾಣಾಗಿರುವ ಗ್ರಾಹಕನ ಪಾಲಿಗೆ ಇದೀಗ ‘ಹುಣಸೆಹಣ್ಣು’ ಸಹ ದುಬಾರಿ. ಮಾರುಕಟ್ಟೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕ್ವಿಂಟಲ್ ‘ಕರಿಪುಳಿ’ ಹುಣಸೆಹಣ್ಣಿಗೆ ಹದಿಮೂರರಿಂದ ಹದಿನೈದು ಸಾವಿರ ರೂಪಾಯಿ ದೊರಕಿದೆ.ಪ್ರಸಕ್ತ ಮಾರುಕಟ್ಟೆಯಲ್ಲಿ ಕರಿಪುಳಿ ಹುಣಸೆ ಕ್ವಿಂಟಲ್‌ಗೆ ಆರರಿಂದ-ಹತ್ತು ಸಾವಿರ ರೂಪಾಯಿ ಆಸುಪಾಸಿನಲ್ಲಿ ಬಿಕರಿಯಾಗುತ್ತಿದೆ. ಹೂವು ಹುಣಸೆ ಕ್ವಿಂಟಲ್‌ಗೆ ರೂ 2 ಸಾವಿರದಿಂದ ರೂ  4 ಸಾವಿರ, ಬೋಟು ರೂ  1.2 ಸಾವಿರದಿಂದ ರೂ 1,800 ರೂಪಾಯಿಗಳಿಗೆ ಮಾರಾಟವಾಗುತ್ತಿದೆ.ವಿದೇಶಕ್ಕೆ ರಫ್ತು

ರಾಜ್ಯದಲ್ಲಿ ಹುಣಸೇ ಹಣ್ಣಿನ ಮಾರುಕಟ್ಟೆಯಲ್ಲಿ ತುಮಕೂರು ಎಪಿಎಂಸಿ ಅಗ್ರಸ್ಥಾನ ಪಡೆದುಕೊಂಡಿದೆ. ಪ್ರತಿ ಸೋಮವಾರ, ಗುರುವಾರ ವಹಿವಾಟು ನಡೆಯುತ್ತದೆ. ಉಳಿದ ದಿನಗಳಲ್ಲಿಯೂ ವ್ಯಾಪಾರ ಇರುತ್ತದೆ. ಇನ್ನೂರಕ್ಕೂ ಅಧಿಕ ಮಂದಿ ವ್ಯಾಪಾರಸ್ಥರು, ದಲ್ಲಾಳಿಗಳು ಇಲ್ಲಿಂದ ವಹಿವಾಟು ನಡೆಸುತ್ತಾರೆ.ತುಮಕೂರಿನಲ್ಲಿ ಬಿಕರಿಯಾಗುವ ಹುಣಸೇಹಣ್ಣು ಶೇ 70ರಷ್ಟು ತಮಿಳುನಾಡು, ಆಂಧ್ರಪ್ರದೇಶಕ್ಕೆ, ಶೇ 10ರಷ್ಟು ಮಹಾರಾಷ್ಟ್ರ, ಕೇರಳಕ್ಕೆ, ಶೇ 10ರಷ್ಟು ವಿದೇಶಕ್ಕೆ ರವಾನೆಯಾಗುತ್ತದೆ. ಉಳಿದ ಶೇ 10ರಷ್ಟು ಸ್ಥಳೀಯವಾಗಿ ಬಳಕೆಯಾಗುತ್ತದೆ.ಕಳೆದ ಇಪ್ಪತ್ತು ವರ್ಷಗಳಿಂದ ತುಮಕೂರಿನ ‘ಸೀಡ್ಸ್ ಅಂಡ್ ಸ್ಪೈಸ್’ ಕಂಪೆನಿ ವರ್ಷಕ್ಕೆ ಮುನ್ನೂರು ಟನ್‌ಗೂ ಅಧಿಕ ಹುಣಸೇಹಣ್ಣನ್ನು ಸಂಸ್ಕರಿಸಿ ಪ್ಯಾಕಿಂಗ್ ಮಾಡಿ ಅರಬ್ ಮತ್ತು ಯೂರೋಪ್ ರಾಷ್ಟ್ರಗಳಿಗೆ ರವಾನೆ ಮಾಡುತ್ತದೆ. ವಿದೇಶಗಳಲ್ಲಿನ ಬೇಡಿಕೆಗೆ ತಕ್ಕಂತೆ ಅಗತ್ಯ ಬಿದ್ದಾಗಲೆಲ್ಲ 50, 100, 250, 500 ಗ್ರಾಂ ಪ್ಯಾಕೇಟ್‌ಗಳಲ್ಲಿ ಸಂಸ್ಕರಿಸಿದ ಹುಣಸೇಹಣ್ಣನ್ನು ಕಳುಹಿಸಿಕೊಡಲಾಗುತ್ತದೆ ಎನ್ನುತ್ತಾರೆ ಕಂಪೆನಿಯ ಮಾಲೀಕ ಜಾನ್ ಆಂಡ್ರಿಸ್.ರೈತರಲ್ಲಿ ನಿರಾಸೆ

ಹುಣಸೆ ಹಣ್ಣಿನ ಬೆಲೆ ಏರುಮುಖಿಯಾಗಿದ್ದು ಗ್ರಾಹಕರನ್ನು ಬೆಚ್ಚಿ ಬೀಳಿಸಿದೆ. ಆದರೆ ಈ ಏರಿಕೆ ರೈತರನ್ನು ದಂಗು ಬಡಿಸಿದೆ. ಮೂರು-ನಾಲ್ಕು ತಿಂಗಳ ಮೊದಲೇ ಮರಗಳ ಮೇಲಿದ್ದಾಗಲೇ ದಲ್ಲಾಳಿಗಳಿಗೆ ವ್ಯಾಪಾರ ಮಾಡಿದ್ದು, ಬೆಲೆಯ ಲಾಭ ರೈತರಿಗೆ ದಕ್ಕದಾಗಿದೆ. ದಲ್ಲಾಳಿಗಳು ನೇರವಾಗಿ ಮಾರುಕಟ್ಟೆಯಲ್ಲಿ ದುಪ್ಪಟ್ಟು ಲಾಭ ಗಳಿಸುತ್ತಿದ್ದಾರೆ. ರೈತರು ಕೈ ಖರ್ಚಿನ ಕಾಸು ಸಿಗದೆ ಯಥಾ ಪ್ರಕಾರ ಕೈಸುಟ್ಟುಕೊಂಡು ಹತಾಶರಾಗಿದ್ದಾರೆ.ಮಾರುಕಟ್ಟೆಯಲ್ಲಿ ಹುಣಸೇಹಣ್ಣು ಮಾರಾಟಕ್ಕೆ ಶೇ 2ರ ದರದಲ್ಲಿ ಮಾರಾಟ ತೆರಿಗೆ ಪಾವತಿಸಬೇಕು. ತೆರಿಗೆ ತಪ್ಪಿಸಲು ರೈತರು, ವ್ಯಾಪಾರಿಗಳು ಹಣ್ಣನ್ನು ಬೇರೆ ಮಾರುಕಟ್ಟೆಗೆ ಕೊಂಡೊಯ್ಯುತ್ತಿದ್ದಾರೆ. ಇದರಿಂದ ಸ್ಥಳೀಯ ಮಾರುಕಟ್ಟೆಗೆ ಹಣ್ಣಿನ ಆವಕ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಶ್ರೀ ಬ್ರಹ್ಮದೇವ ಟ್ರೇಡರ್ಸ್‌ನ ಮಾಲೀಕ ಎಚ್.ಪಿ.ದೇವೇಂದ್ರ.ಹುಣಸೆ ಕೃಷಿ

ಹುಣಸೆ ಕೃಷಿ ವ್ಯವಸ್ಥಿತವಾಗಿ ಎಲ್ಲಿಯೂ ನಡೆಯುತ್ತಿಲ್ಲ. ಅಲ್ಲಲ್ಲೇ ಬೆರಳೆಣಿಕೆ ಕೃಷಿಕರು ಹುಣಸೇ ಕೃಷಿಯನ್ನೇ ಪ್ರಧಾನ ಕಸುಬನ್ನಾಗಿಸಿಕೊಂಡಿದ್ದಾರೆ. ಯಶಸ್ಸು ಸಾಧಿಸಿದ್ದಾರೆ. ಇದನ್ನು ಬಿಟ್ಟರೆ ಮನೆ ಬಳಕೆಗೆ ಏನೂ ಬೆಳೆಯದ ಜಾಗದಲ್ಲಿ, ರಸ್ತೆ ಪಕ್ಕದಲ್ಲಿ ಹಿತ್ತಲುಗಳಲ್ಲಿ ಬೆಳೆಸಿದ ಹುಣಸೇ ಗಿಡಗಳೇ ಹಣ್ಣು ಒದಗಿಸುತ್ತವೆ.ಜಿಲ್ಲೆಯ ಕೊರಟಗೆರೆ, ಮಧುಗಿರಿ, ಶಿರಾ, ಪಾವಗಡ ತಾಲ್ಲೂಕಿನಲ್ಲಿ ಹುಣಸೆ ಕೃಷಿ ಸಮೃದ್ಧವಾಗಿದೆ. ಈಚಿನ ಕೆಲ ವರ್ಷಗಳಲ್ಲಿ ಎಕರೆಗಟ್ಟಲೇ ಭೂಮಿಯಲ್ಲಿ ಹುಣಸೆ ಕೃಷಿ ಕೈಗೊಂಡವರು ಕಾಣಸಿಗುತ್ತಾರೆ.      

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.