ಬುಧವಾರ, ಮೇ 12, 2021
18 °C

ಕರುಣಾ, ರಾಮುಲು ಮೇಲೂ ತೂಗುಗತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಅಕ್ರಮ ಗಣಿಗಾರಿಕೆ ಮತ್ತಿತರ ಆರೋಪಗಳಿಗೆ ಸಂಬಂಧಿಸಿದಂತೆ ಬಂಧಿತರಾಗಿರುವ `ಓಬಳಾಪುರಂ ಮೈನಿಂಗ್ ಕಂಪೆನಿ~  ನಿರ್ದೇಶಕ ಗಾಲಿ ಜನಾರ್ದನರೆಡ್ಡಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಶ್ರೀನಿವಾಸರೆಡ್ಡಿ ಅವರ ವಿಚಾರಣೆ ಆಧರಿಸಿ ಕಂಪೆನಿಯ ಉಳಿದ ನಿರ್ದೇಶಕರಾದ ಜಿ. ಕರುಣಾಕರರೆಡ್ಡಿ ಮತ್ತು ಬಿ. ಶ್ರೀರಾಮುಲು ಅವರನ್ನು ಬಂಧಿಸುವ ಬಗ್ಗೆ ಸಿಬಿಐ ನಿರ್ಧರಿಸಲಿದೆ.ರಾಜ್ಯದ ಮಾಜಿ ಸಚಿವರಾದ ಕರುಣಾಕರರೆಡ್ಡಿ ಮತ್ತು ಶ್ರೀರಾಮುಲು ಅವರನ್ನು ಬಂಧಿಸುವ ವಿಚಾರ ಜನಾರ್ದನರೆಡ್ಡಿ ಮತ್ತು ಶ್ರೀನಿವಾಸರೆಡ್ಡಿ ವಿಚಾರಣೆಯಿಂದ ದೊರೆಯುವ ಮಾಹಿತಿ ಹಾಗೂ ದಾಳಿ ಸಮಯದಲ್ಲಿ ವಶಪಡಿಸಿಕೊಳ್ಳಲಾಗಿರುವ ದಾಖಲೆಗಳನ್ನು  ಅವಲಂಬಿಸಿದೆ ಎಂದು ಸಿಬಿಐ ಮೂಲಗಳು ಸ್ಪಷ್ಟಪಡಿಸಿವೆ.ಆಂಧ್ರ ಸರ್ಕಾರದ ಮನವಿ ಮೇಲೆ ಸಿಬಿಐ ಡಿಸೆಂಬರ್ 7, 2009ರಲ್ಲಿ ಜನಾರ್ದನರೆಡ್ಡಿ, ಕರುಣಾಕರರೆಡ್ಡಿ ಮತ್ತಿತರರು ನಿರ್ದೇಶಕರಾದ ಕರ್ನಾಟಕ ಮೂಲದ `ಓಬಳಾಪುರಂ ಮೈನಿಂಗ್ ಕಂಪೆನಿ~ ವಿರುದ್ಧ ಮೊಕದ್ದಮೆ ದಾಖಲಿಸಿತು. ಕ್ರಿಮಿನಲ್ ಪಿತೂರಿ, ವಂಚನೆ, ಕಳವು, ಕಳವು ಮಾಡಿದ ವಸ್ತುವಿನ ದಾಸ್ತಾನು, ಅತಿಕ್ರಮಣ ಪ್ರವೇಶ, ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿಕೆ ಮೊದಲಾದ ಆರೋಪ ಮಾಡಲಾಯಿತು. ಅರಣ್ಯ ಸಂರಕ್ಷಣೆ ಕಾಯ್ದೆ, ಖನಿಜ ಸಂಪತ್ತು ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆ ಉಲ್ಲಂಘನೆಯೂ ಮೊಕದ್ದಮೆ ಭಾಗವಾಯಿತು.

ಆದರೆ, ಆಂಧ್ರ ಹೈಕೋರ್ಟ್ ಸಿಬಿಐ ತನಿಖೆಗೆ ಡಿಸೆಂಬರ್ 14, 2009ರಂದು ಮಧ್ಯಂತರ ತಡೆಯಾಜ್ಞೆ ನೀಡಿತು.ವಿಭಾಗೀಯ ಪೀಠದ ಮುಂದೆ ಸಿಬಿಐ ರಿಟ್ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಡಿಸೆಂಬರ್ 16, 2010ರಂದು ಈ ತಡೆಯಾಜ್ಞೆ ತೆರವುಗೊಂಡಿತು. ತನಿಖಾ ಸಂಸ್ಥೆ ಅಕ್ರಮ ಗಣಿಗಾರಿಕೆಗೆ ಮಾತ್ರವೇ ವ್ಯಾಪ್ತಿ ಸೀಮಿತಗೊಳಿಸಬೇಕು. ಗಣಿಗಾರಿಕೆ ಕಂಪೆನಿಯ ಗಡಿ ತಂಟೆಯಲ್ಲಿ ಹಸ್ತಕ್ಷೇಪ ಮಾಡಬಾರದೆಂದು ಷರತ್ತು ಹಾಕಿತು. ಗಡಿ ಗುರುತಿಗೆ ಸುಪ್ರೀಂ ಕೋರ್ಟ್ ಸಮಿತಿಯೊಂದನ್ನು ರಚಿಸಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಷರತ್ತು ವಿಧಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.