ಗುರುವಾರ , ಮೇ 13, 2021
38 °C

ಕರೆನ್ಸಿ ಸಮರ: ಪ್ರಣವ್ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ವಿಶ್ವದಾದ್ಯಂತ ಸದ್ಯಕ್ಕೆ ಕಂಡು ಬಂದಿರುವ ಹಣಕಾಸು ಬಿಕ್ಕಟ್ಟು ಇನ್ನಷ್ಟು ತೀವ್ರಗೊಂಡರೆ ಅದರಿಂದ `ಕರೆನ್ಸಿ ಸಮರ~ ನಡೆಯುವ ಸಾಧ್ಯತೆ  ಇದೆ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಅಂತರರಾಷ್ಟ್ರೀಯ ಸಮುದಾಯಕ್ಕೆ ಎಚ್ಚರಿಕೆ ನೀಡಿದ್ದಾರೆ.ಇಂತಹ ಸಂಭವನೀಯ ಸಮರವನ್ನು ಸಂಧಾನ ಮಾತುಕತೆಗಳ ಮೂಲಕ ತಪ್ಪಿಸಬಹುದೇ ಹೊರತು, ಕರೆನ್ಸಿಗಳ ಸ್ಪರ್ಧಾತ್ಮಕ ಅಪಮೌಲ್ಯದ ಮೂಲಕಅಲ್ಲ ಎಂದು ಅವರು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.ಆರ್ಥಿಕ ಬಿಕ್ಕಟ್ಟು ಇನ್ನಷ್ಟು ತೀವ್ರಗೊಂಡರೆ ಮತ್ತು ಕರೆನ್ಸಿಗಳ ಹರಿವಿನಲ್ಲಿ ಗಮನಾರ್ಹ ಏರಿಳಿತ ಕಂಡು ಬಂದರೆ, `ಕರೆನ್ಸಿ ಸಮರ~ ನಡೆಯುವ ಸಾಧ್ಯತೆಗಳು ಖಂಡಿತವಾಗಿಯೂ ಹೆಚ್ಚಿಗೆ ಇದೆ ಎಂದು ಪ್ರಣವ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.`ಬ್ರಿಕ್ಸ್~ ದೇಶಗಳು ಜಾಗತಿಕ ಉತ್ಪಾದನೆಗೆ ಮತ್ತು ಆರ್ಥಿಕತೆಗೆ ನೀಡುತ್ತಿರುವ ಕೊಡುಗೆ ಗಮನಾರ್ಹವಾಗಿ ಏರಿಕೆಯಾಗುತ್ತಿದೆ. ಹೀಗಾಗಿ ಈ ದೇಶಗಳ ಕರೆನ್ಸಿಗಳಿಗೆ ಎಲ್ಲೆಡೆ ಮಾನ್ಯತೆ ದೊರೆಯುತ್ತಿದೆ. ಈ ಕರೆನ್ಸಿಗಳ ಮಹತ್ವವೂ ಹೆಚ್ಚುತ್ತಿದೆ ಎಂದೂ ಪ್ರಣವ್ ಮುಖರ್ಜಿ ಅಭಿಪ್ರಾಯಪಟ್ಟರು.ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ (ಐಎಂಎಫ್) ಪ್ರಧಾನ ಕಚೇರಿಯಲ್ಲಿ ನಡೆದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದ  (ಬ್ರಿಕ್ಸ್ ದೇಶಗಳ) ಹಣಕಾಸು ಸಚಿವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ರೂಪಾಯಿ ಅಪಮೌಲ್ಯ: ಮಿಶ್ರ ಫಲ
ಪ್ರಜಾವಾಣಿ ವಾರ್ತೆ

ಬೆಂಗಳೂರು: ದೇಶಿ ಕರೆನ್ಸಿ ರೂಪಾಯಿ ಅಮೆರಿಕದ ಡಾಲರ್ ಎದುರು ಅಪಮೌಲ್ಯಗೊಳ್ಳುತ್ತಿರುವುದರಿಂದ  ಮಿಶ್ರ ಪ್ರತಿಫಲ ಕಂಡು ಬರುತ್ತಿದೆ.ಈ ತಿಂಗಳ ಆರಂಭದಲ್ಲಿ ಪ್ರತಿ ಡಾಲರ್‌ಗೆ ರೂ 46.11ರಷ್ಟಿದ್ದ  ಮೌಲ್ಯವು ಶುಕ್ರವಾರ ರೂ 50ರ ಗಡಿ ತಲುಪಿತ್ತು. ಹೀಗಾಗಿ ವಿದೇಶಿ ವಿನಿಮಯ ದರ ನಿಯಂತ್ರಣವು ಸರ್ಕಾರಕ್ಕೆ ಮತ್ತು ಆರ್‌ಬಿಐಗೆ ತಲೆನೋವಾಗಿ ಪರಿಣಮಿಸಿದೆ.ವಿದೇಶಗಳಲ್ಲಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಪಾಲಕರು ಮಾಡುವ ವೆಚ್ಚ ಹೆಚ್ಚಳಗೊಳ್ಳುತ್ತಿದೆ. ಕಾಲೇಜ್ ಶುಲ್ಕ ಮತ್ತು ಇತರ ವೆಚ್ಚಗಳಿಗಾಗಿ ವಿದ್ಯಾರ್ಥಿಗಳು ಮಾಡುವ ವೆಚ್ಚ ಏರತೊಡಗಿದೆ. ಇನ್ನೊಂದೆಡೆ ಹೊರರಾಷ್ಟ್ರಗಳಲ್ಲಿ ದುಡಿಯುತ್ತಿರುವವರು ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ. ವಿದೇಶಗಳಿಗೆ ಪ್ರವಾಸ ತೆರಳುವವರು ಕೂಡ ಹೆಚ್ಚುವರಿ ವೆಚ್ಚ ಮಾಡಬೇಕಾದ ಪರಿಸ್ಥಿತಿ ಉದ್ಭವಿಸಿದೆ.ಸ್ವದೇಶಕ್ಕೆ ಹಣ ರವಾನಿಸುವ ಮೊತ್ತದಲ್ಲಿ ಭಾರತ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿ ಇದೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು2010 ರಲ್ಲಿ  55 ಶತಕೋಟಿ ಡಾಲರ್‌ಗಳಷ್ಟು (ರೂ 2,69,500 ಕೋಟಿ) ಮೊತ್ತ ವನ್ನು ಸ್ವದೇಶಕ್ಕೆ ರವಾನಿಸಿದ್ದರು. ಡಾಲರ್ ಮತ್ತಿತರ ಕರೆನ್ಸಿಗಳಿಗೆ ಹೆಚ್ಚು ರೂಪಾಯಿ ದೊರೆಯುತ್ತಿರುವುದರಿಂದ  ಸ್ವದೇಶಕ್ಕೆ ಹಣ ಕಳಿಸುವವರೂ ಈ ಅವಕಾಶ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ.ಆರ್‌ಬಿಐ ನಿಲುವು:

ಕಳೆದ 28 ತಿಂಗಳಲ್ಲಿ ರೂಪಾಯಿ ಮೌಲ್ಯವು ಡಾಲರ್ ಎದುರು ಗರಿಷ್ಠ ಮಟ್ಟದಲ್ಲಿ ದುರ್ಬಲಗೊಂಡಿದ್ದರೂ, ಈ ಹಂತದಲ್ಲಿ ಮಧ್ಯಪ್ರವೇಶಿಸಬೇಕಾದ ತುರ್ತು ಉದ್ಭವಿಸಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಭಿಪ್ರಾಯಪಟ್ಟಿದೆ.ಡಾಲರ್ ಎದುರು ರೂಪಾಯಿ ತೀಕ್ಷ್ಣ ಸ್ವರೂಪದಲ್ಲಿ ಅಪಮೌಲ್ಯಗೊಳ್ಳುತ್ತಿರುವಾಗ ಕೇಂದ್ರೀಯ ಬ್ಯಾಂಕ್ ಮಧ್ಯಪ್ರವೇಶಿಸಬೇಕು ಎಂದು ಆರ್ಥಿಕ ತಜ್ಞರು ಮತ್ತು ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಆರ್‌ಬಿಐ ಡೆಪ್ಯುಟಿ ಗವರ್ನರ್ ಸುಬೀರ್ ಗೋಕರ್ಣ ಅವರು, ಸದ್ಯಕ್ಕೆ ಅಂತಹ ಪರಿಸ್ಥಿತಿ ಉದ್ಭವಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.ರೂಪಾಯಿ  ಸತತವಾಗಿ ಅಪಮೌಲ್ಯಗೊಳ್ಳುತ್ತಿರುವುದರಿಂದ ಹಣದುಬ್ಬರ  ಇನ್ನಷ್ಟು ಹೆಚ್ಚಬಹುದು ಎನ್ನುವ ಆತಂಕವೂ ವ್ಯಕ್ತವಾಗುತ್ತಿದೆ. ರೂಪಾಯಿ ಅಪಮೌಲ್ಯ: ಐರೋಪ್ಯ ಒಕ್ಕೂಟದ ಬಿಕ್ಕಟ್ಟಿನ ಕಾರಣಕ್ಕೆ ವಿಶ್ವದಾದ್ಯಂತ ಡಾಲರ್‌ಗೆ ಬೇಡಿಕೆ ಹೆಚ್ಚಿರುವುದರಿಂದ ಭಾರತದಲ್ಲಿ ಡಾಲರ್ ಎದುರು  ರೂಪಾಯಿ ಅಪಮೌಲ್ಯ ಹೆಚ್ಚುತ್ತಲೇ ಸಾಗಿದೆ. ಶುಕ್ರವಾರದ ವಹಿವಾಟಿನ ಒಂದು ಹಂತದಲ್ಲಿ ರೂ 49.50ಕ್ಕೆ ಒಂದು ಡಾಲರ್‌ನಂತೆ ವಿನಿಮಯ ದರ ನಿಗದಿಯಾಗಿದೆ. 2009ರ ಮೇ 14ರ ನಂತರದ ಅತಿ ಕಡಿಮೆ ದರ ಇದಾಗಿದೆ.ಕೃಷಿ ಉತ್ಪಾದನೆ ಹೆಚ್ಚಿಸಲು ಸಲಹೆ: ವಿಶ್ವದಾದ್ಯಂತ ಅವಶ್ಯಕ ಸರಕುಗಳ ಬೆಲೆಗಳು ದುಬಾರಿ ಆಗಿರುವುದರಿಂದ ಅಭಿವೃದ್ಧಿಶೀಲ ದೇಶಗಳು ಕೃಷಿ ವಲಯದಲ್ಲಿ ಹೆಚ್ಚು ಬಂಡವಾಳ ತೊಡಗಿಸಿ ಉತ್ಪಾದನೆ ಹೆಚ್ಚಳಕ್ಕೆ ಮುಂದಾಗಬೇಕು ಎಂದು ಪ್ರಣವ್ ಮುಖರ್ಜಿ  ಅಭಿವೃದ್ಧಿಶೀಲ ದೇಶಗಳಿಗೆ ಸಲಹೆ ನೀಡಿದ್ದಾರೆ.ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳು ಮತ್ತು ಇತರ ಸರಕುಗಳ ಗರಿಷ್ಠ ಬೆಲೆ ಮಟ್ಟ ಮತ್ತು ಏರಿಳಿತವು ಆರ್ಥಿಕ ಬೆಳವಣಿಗೆಗೆ ಮತ್ತು `ಆಹಾರ ಭದ್ರತೆ~ಗೆ ಬೆದರಿಕೆ ಒಡ್ಡಿವೆ. ಆರ್ಥಿಕ ಬೆಳವಣಿಗೆ ಮತ್ತು ಬಡತನ ನಿರ್ಮೂಲನೆಯು ಹೊಸ ಸವಾಲಾಗಿದ್ದು, ಜಾಗತಿಕ ಅರ್ಥ ವ್ಯವಸ್ಥೆಗೆ ಮುಂಬರುವ ದಿನಗಳು ತುಂಬ ಮಹತ್ವದ್ದಾಗಿವೆ. ಜನರಿಗೆ ಆಹಾರ ಭದ್ರತೆ ಒದಗಿಸುವುದು ಮತ್ತು ಬೆಲೆ ಏರಿಕೆಗೆ ಕಡಿವಾಣ ವಿಧಿಸುವುದು `ಜಿ-24~ ದೇಶಗಳ ಸದ್ಯದ ಆದ್ಯತೆ ಆಗಿದೆ. ಸರಕುಗಳ ಮಾರುಕಟ್ಟೆಯಲ್ಲಿ ಪಾರದರ್ಶಕತೆ ಇರುವಂತೆ ನೋಡಿಕೊಳ್ಳುವ ಅಗತ್ಯವೂ ಉದ್ಭವಿಸಿದೆ. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರಲು `ಜಿ-24~ ಗುಂಪಿನ ದೇಶಗಳು ಹೆಚ್ಚು ಒತ್ತು ನೀಡಬೇಕಾಗಿದೆ ಎಂದೂ ಪ್ರಣವ್ ನುಡಿದರು. `ಜಿ-24~ದೇಶಗಳ ಹಣಕಾಸು ಸಚಿವರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.`ಜಿ-24~ ಗುಂಪಿನ ಅಧ್ಯಕ್ಷತೆ: ಸಭೆಯ ಅಂತ್ಯದಲ್ಲಿ ಪ್ರಣವ್ ಅವರು ದಕ್ಷಿಣ ಆಫ್ರಿಕಾದ ಹಣಕಾಸು ಸಚಿವರಿಂದ  `ಜಿ-24~ ಗುಂಪಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.