ಬುಧವಾರ, ಏಪ್ರಿಲ್ 21, 2021
33 °C

ಕರ್ನಾಟಕ ಏಕೀಕರಣ ಮತ್ತು ಆಲೂರು ವೆಂಕಟರಾಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾನು, ಕರ್ನಾಟಕ ರಾಜ್ಯೋತ್ಸವಕ್ಕೋಸುಗ `ಪ್ರಜಾವಾಣಿ~ ಪತ್ರಿಕೆಗೆ ಬರೆದ ನವೆಂಬರ್ 1, 2012ರ ಸಂಚಿಕೆಯಲ್ಲಿಯ ಲೇಖನದಲ್ಲಿ, ಕರ್ನಾಟಕ ಏಕೀಕರಣವನ್ನು 1903ರಲ್ಲಿ ಪ್ರತಿಪಾದಿಸಿದ ಪ್ರಾತಃಸ್ಮರಣೀಯರಾದ ಬೆನಗಲ್ ರಾಮರಾಯರ ಹಾಗೂ 1907ರಲ್ಲಿ `ವಾಗ್ಭೂಷಣ~ ಪತ್ರಿಕೆಯಲ್ಲಿ ಕರ್ನಾಟಕ ಏಕೀಕರಣ ಆಗಬೇಕೆಂದು ಲೇಖನ ಬರೆದ ಆಲೂರು ವೆಂಕಟರಾಯರ ಹೆಸರನ್ನು ಪ್ರಸ್ತಾಪಿಸಿಲ್ಲ ಎಂದು ಮಾಣಿಕರಾವ್ ಪಸಾರ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.ಅಪಘಾತಗಳು ಸುವ್ಯವಸ್ಥಿತವಾಗಿ ನಡೆದ ಕುಟುಂಬಗಳಲ್ಲಿ ಕೂಡ ಸಂಭವಿಸುತ್ತವೆ ಎಂದು ಹೇಳುತ್ತಾರೆ. ಈಗ ನನ್ನಿಂದ ಆಗಿರುವ ಪ್ರಮಾದ ಆ ಮಾದರಿಯದು. ಅದಕ್ಕೆ ಸಮರ್ಥನೆಯೇ ಇಲ್ಲ. ತಪ್ಪು, ತಪ್ಪೇ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ.ಸಮಯದ ಒತ್ತಡ ಇದ್ದಾಗ ಪತ್ರಿಕೆಗೆ ಬರೆಯುವ ಅವಸರದಲ್ಲಿ ಈ ಅನಾಹುತ ಸಂಭವಿಸಿದೆ. ಆ ಎರಡು ಹೆಸರುಗಳಲ್ಲದೆ, ಇನ್ನು ಬೇರೆ ಕೆಲವರ ಹೆಸರುಗಳೂ ಬಿಟ್ಟುಹೋಗಿವೆ. ನಾನು ಅವರಿಗೆ ನ್ಯಾಯ ಒದಗಿಸಲು ನನ್ನಿಂದ ಸಾಧ್ಯವಾಗಿಲ್ಲ.ದೊಡ್ಡಮೇಟಿ ಅಂದಾನಪ್ಪ ಅವರು ತಮ್ಮ ಸರ್ವಸ್ವವನ್ನು ಕರ್ನಾಟಕ ಏಕೀಕರಣಕ್ಕಾಗಿ, ರಾಜ್ಯಕ್ಕೆ ಮೈಸೂರು ಎಂಬ ಅಸಹಜ ಹೆಸರು ಹೋಗಿ, ಕರ್ನಾಟಕ ಎಂಬ ಸದರಿ ಹೆಸರು ಬರುವುದಕ್ಕಾಗಿ ಹೆಚ್ಚು ಹೋರಾಡಿದರು.ಅದರಗುಂಚಿ ಶಂಕರಗೌಡರು ಕರ್ನಾಟಕ ಏಕೀಕರಣ ಆಗಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು 1973 ರಲ್ಲಿ ಆಮರಣ ಉಪವಾಸ ಕೈಕೊಂಡಿದ್ದರು. ಅವರು ಏಪ್ರಿಲ್ ತಿಂಗಳಲ್ಲಿ 23 ದಿನಗಳ ಉಪವಾಸವನ್ನು ಕೊನೆಗೊಳಿಸಿದಾಗ ಹುಬ್ಬಳ್ಳಿಯಲ್ಲಿ ಪ್ರದೇಶ ಕಾಂಗ್ರೆಸ್ ಸೇರಿದ್ದಾಗ ಭಾರೀ ಜನಾಂದೋಲನ ಸಂಭವಿಸಿತು.  ಆ ಸಂಗತಿ, ಭಾರತದ ಪತ್ರಿಕೆಗಳಲ್ಲಿ ತಲೆಬರಹದ ಸುದ್ದಿ ಆಗಿದ್ದಿತು. ಆ ಸುದ್ದಿಯನ್ನು ಅಮೆರಿಕೆಯ `ನ್ಯೂಯಾರ್ಕ್ ಟೈಮ್ಸ~ ಪತ್ರಿಕೆ ಕೂಡ ಪ್ರಕಟಿಸಿತು. ಕರ್ನಾಟಕದ ಒಂದು ಸುದ್ದಿಗೆ, ವಿದೇಶದಲ್ಲಿ ಪ್ರಾಮುಖ್ಯತೆ ಲಭಿಸಿದ್ದುದು ಅದೇ ಮೊದಲಿನದೆಂದು ನನಗೆ ಅನಿಸುತ್ತದೆ. ತಮ್ಮ ರಾಜ್ಯದ ಬಗೆಗೆ ಕನ್ನಡ ಜನರು ಹೂಡಿದ ಹೋರಾಟಗಳಲ್ಲಿ ಅದೇ ದೊಡ್ಡದು.ಅದೇ ರೀತಿ ತಮ್ಮ ಭಾಷೆಗೋಸುಗ ಕನ್ನಡ ಜನರು ನಡೆಸಿದ ಹೋರಾಟಗಳಲ್ಲಿ ಗೋಕಾಕ ವರದಿಯನ್ನು ಅನುಷ್ಠಾನಗೊಳಿಸಬೇಕೆಂದು 1982 ರಲ್ಲಿ ಕೈಕೊಂಡ ಹೋರಾಟಕ್ಕೆ ಸರಿಸಮಾನವಾದ ಹೋರಾಟ ಎಲ್ಲಿಯೂ ನಡೆದಿಲ್ಲ. ನನ್ನ ತಲೆಯಲ್ಲಿ ತುಂಬಿಕೊಂಡಿರುವ ಕರ್ನಾಟಕ ಏಕೀಕರಣಕ್ಕೆ ಸಂಬಂಧಿಸಿದ, ಕನ್ನಡ ಭಾಷೆಯ ಸಾರ್ವಭೌಮತ್ವಕ್ಕೋಸುಗ ಸಂಬಂಧಿಸಿದ ಇತಿಹಾಸ ಗ್ರಂಥಸ್ಥವಾಗಬೇಕಾಗಿದೆ.

ಕರ್ನಾಟಕ ಏಕೀಕರಣದ ಬಗೆಗೆ ಅನೇಕ ಜನರು ಮಾತನಾಡಿದ್ದಾರೆ. ಆಲೂರು ವೆಂಕಟರಾಯರಿಂದ ಅವರೆಲ್ಲರೂ ಪ್ರಚೋದನೆ ಪಡೆದಿದ್ದಾರೆ.ಆದರೆ, ಕರ್ನಾಟಕದ ಎಲ್ಲ ಪ್ರದೇಶಗಳು (ಅವುಗಳ ಸಂಖ್ಯೆ 22 ಇದ್ದಿತು) ಹೇಗೆ ಒಂದುಗೂಡಬೇಕು ಎನ್ನುವುದನ್ನು ಖಚಿತವಾಗಿ ಹೇಳಿದವರು ಯಾರು ಇಲ್ಲ. ಕನ್ನಡ ಪ್ರದೇಶಗಳೆಲ್ಲವೂ ಒಂದೇ ಪ್ರಭುತ್ವದ ಅಡಿಯಲ್ಲಿ ಬಂದು ಕರ್ನಾಟಕವೆನಿಸಬೇಕಾದರೆ, ಕನ್ನಡ ಪ್ರದೇಶಗಳನ್ನು ಆಳುತ್ತಿದ್ದ ಎಲ್ಲ ಪ್ರಭುತ್ವಗಳೂ ಹೋಗಿ ನಿಜಾಮ ಪ್ರಭುತ್ವದಂತೆ, ಮೈಸೂರು ಮಹಾರಾಜರ ಪ್ರಭುತ್ವವು, ಮಿಕ್ಕುಳಿದ ಚಿಕ್ಕಪುಟ್ಟ ಆಳರಸರು ಹೋಗದೆ ಅವೆಲ್ಲವೂ ಅಳಿದುಹೋಗದೆ ಕರ್ನಾಟಕ ರಾಜ್ಯ ನಿರ್ಮಾಣಗೊಳ್ಳಲಾರದು. ಕನ್ನಡ ಮಾತನಾಡುವ ಎಲ್ಲ ಪ್ರದೇಶಗಳಲ್ಲಿದ್ದ ಪ್ರಭುತ್ವಗಳು ಅಳಿದುಹೋದರೂ ಮೈಸೂರು ಪ್ರಭುತ್ವವು ಉಳಿದುಕೊಂಡಿದ್ದಿತು.ಮೈಸೂರು ಸಂಸ್ಥಾನದ ಮಹಾರಾಜರು ಹೋಗದೆ ಕರ್ನಾಟಕ ರಚನೆಗೊಳ್ಳಲಾರದೆನ್ನುವುದು ಎಲ್ಲರಿಗೂ ಗೊತ್ತಿದ್ದಿತು. ಕರ್ನಾಟಕ ಕುಲಪುರೋಹಿತರೆನಿಸಿದ ಆಲೂರು ವೆಂಕಟರಾಯರು ಹೇಳಿದ್ದರೆನ್ನುವುದು ನನಗೆ ತಿಳಿಯದು. ಆಲೂರು ವೆಂಕಟರಾವ್ ಟ್ರಸ್ಟಿನ ಅಧ್ಯಕ್ಷರಾದ ಪ್ರೊ. ಡಾ. ಶ್ರೀನಿವಾಸ ರಿತ್ತಿಯವರನ್ನು ಕೇಳಿದ್ದೆ. ತಿಂಗಳುಗಳು ಗತಿಸಿದರೂ ಈ ವಿಚಾರವಾಗಿ ಅವರಿಂದ ಏನೂ ತಿಳಿದಿಲ್ಲ.ವೆಂಕಟರಾಯರ ಯಾವ ಬರೆಹದಲ್ಲಿಯಾದರೂ, ಮೈಸೂರು ಮಹಾರಾಜರು ಹೋಗಿ ಕರ್ನಾಟಕ ರಾಜ್ಯ ರಚನೆಗೊಳ್ಳಬೇಕೆಂದು ಅವರು ಎಂದಾದರೂ ಹೇಳಿದ್ದರೆ ಅದನ್ನು ಯಾರಾದರೂ ತೋರಿಸಿಕೊಡಬೇಕು. ಸತ್ಯ ಏನೆನ್ನುವುದು ಜನರಿಗೆ ತಿಳಿಯಬೇಕು. ನನ್ನ ಅಜ್ಞಾನವನ್ನು ಅವರು ನಿವಾರಣೆ ಮಾಡಬೇಕು.1949 ರಲ್ಲಿ ಕರ್ನಾಟಕ ಏಕೀಕರಣ ಸಮ್ಮೇಳನ ಗುಲ್ಬರ್ಗಾ ನಗರದಲ್ಲಿ ಸೇರಿದ್ದಿತು. ಆಗ ಆ ಸಮ್ಮೇಳನದಲ್ಲಿ, ಎಲ್ಲ ಕನ್ನಡ ಪ್ರದೇಶಗಳನ್ನು ಒಳಗೊಂಡ ಕರ್ನಾಟಕ ರಾಜ್ಯ ನಿರ್ಮಾಣಗೊಳ್ಳಬೇಕು ಎಂಬ ಒಂದು ಅಸ್ಪಷ್ಟ ಗೊತ್ತುವಳಿ ಮಂಡಿತವಾಗಿದ್ದಿತು. ಆಗ ನಾನು `ಮೈಸೂರನ್ನು ವಿಲೀನಗೊಳಿಸಿ, ಎಲ್ಲ ಕನ್ನಡ ಪ್ರದೇಶಗಳನ್ನು ಒಳಗೊಂಡ ಕರ್ನಾಟಕ ರಾಜ್ಯ ನಿರ್ಮಾಣಗೊಳ್ಳಬೇಕು~ ಎನ್ನುವ ತಿದ್ದುಪಡಿಯನ್ನು ಮಾಡಿಸಿದೆ. ಕೋ. ಚನ್ನಬಸಪ್ಪ ಅವರು ಅದನ್ನು ಅನುಮೋದಿಸಿದರು.ಆಗ ಸಭೆಯಲ್ಲಿದ್ದ ತುಮಕೂರಿನ ತಾಳಕೆರೆ ಸುಬ್ರಹ್ಮಣ್ಯಂರು, ಒಮ್ಮೆಲೇ ಸಿಡಿದೆದ್ದು, “ಅಯ್ಯೋ ಪುಟ್ಟಪ್ಪನವರೇ ಬೆಂಕಿ ಹಚ್ಚಿದ್ದಾರೆ. ಮೈಸೂರು, ಕರ್ನಾಟಕದೊಂದಿಗೆ ಸೇರಿಕೊಳ್ಳದಂತೆ ಮಾಡಿದಿರಿ. ನಿಮ್ಮ ತಿದ್ದುಪಡಿ ಹಿಂತೆಗೆದುಕೊಳ್ಳಿ” ಎಂದರು. ಆಗ ನಾನು, `ಹಿಂತೆಗೆದುಕೊಳ್ಳುವುದಿಲ್ಲ~ ಎಂದು ಹೇಳಿದೆ.ನನ್ನ ತಿದ್ದುಪಡಿಯನ್ನು ಮತಕ್ಕೆ ಹಾಕಲಾಯಿತು. ಅದು, ಭಾರೀ ಬಹುಮತದಿಂದ ಸ್ವೀಕೃತವಾಯಿತು. 1947 ರಲ್ಲಿ ಬ್ರಿಟಿಷರು ಅಧಿಕಾರ ಬಿಟ್ಟು ತೆರಳಿದ್ದರೂ, ಮೈಸೂರಿನವರು, ತಮ್ಮ ಮಹಾರಾಜರ ಅಸ್ತಿತ್ವವೂ ಉಳಿಯಲಾರದು ಎನ್ನುವುದನ್ನು ಅರಿಯದವರಾಗಿದ್ದರು. ಮೈಸೂರು ಮಹಾರಾಜರು ಹೋಗಬೇಕೆಂದು ಆಲೂರು ವೆಂಕಟರಾಯರು ಎಂದು ಹೇಳಿದ್ದರು?  ಬಲ್ಲವರು ಯಾರಾದರೂ ಇದ್ದರೆ ಹೇಳಿರಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.