ಗುರುವಾರ , ಜನವರಿ 23, 2020
19 °C

ಕರ್ನಾಟಕ ಖಾಸಗಿ ವೈದ್ಯಕೀಯ ಕಾಯ್ದೆ-2007: ಅತಂತ್ರ ಸ್ಥಿತಿಯಲ್ಲಿ ನಾಟಿ ವೈದ್ಯರು

ಸುಚೇತನಾ ನಾಯ್ಕ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಗ್ರಾಮಾಂತರ ಪ್ರದೇಶಗಳಲ್ಲಿ ಚಿಕಿತ್ಸೆ ನೀಡುವ `ಹಕೀಮ್~ ಕೂಡ ಸರ್ಕಾರದ ದೃಷ್ಟಿಯಲ್ಲಿ ನುರಿತ ವೈದ್ಯ. ಮನೆಯಲ್ಲಿಯೇ ಹೆರಿಗೆ ಮಾಡಿಸುವ ಸೂಲಗಿತ್ತಿಯರಿಗೂ ಪ್ರಮಾಣ ಪತ್ರ, ಸಕಲ ಸೌಲಭ್ಯ. ಆದರೆ ದಶಕಗಳ ಕಾಲ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿ ಕಾಯಿಲೆ ವಾಸಿ ಮಾಡಿರುವ ನಮ್ಮನ್ನು ಮಾತ್ರ ಬೀದಿಪಾಲು ಮಾಡಲು ಸರ್ಕಾರ ಮುಂದಾಗಿದೆ. ಇದಾವ ನ್ಯಾಯ...?~- ಇದು ರಾಜ್ಯದಲ್ಲಿನ ಆರು ಸಾವಿರಕ್ಕೂ ಅಧಿಕ ನಾಟಿ ವೈದ್ಯರು ಕೇಳುತ್ತಿರುವ ಪ್ರಶ್ನೆ.ನಾಟಿ, ಫೋಕ್ ಮೆಡಿಸಿನ್, ಸಿದ್ಧಿ ಮುಂತಾದ ಹೆಸರುಗಳಿಂದ `ವೈದ್ಯಕೀಯ ವೃತ್ತಿ~ ನಡೆಸುತ್ತಿರುವ ಈ ನಾಟಿ ವೈದ್ಯರು ಈಗ ಉದ್ಯೋಗ ಕಳೆದುಕೊಳ್ಳುವ ಭಯದಲ್ಲಿ ಇದ್ದಾರೆ. ಗಿಡಮೂಲಿಕೆಗಳ ಮೂಲಕ ಕಾಯಿಲೆ ವಾಸಿ ಮಾಡುವ ವಂಶಪಾರಂಪರಿಕ ಪದ್ಧತಿಯನ್ನು ತಲೆತಲಾಂತರಗಳಿಂದ ಮುಂದುವರಿಸಿಕೊಂಡು ಬಂದಿರುವ ಇವರ ಭವಿಷ್ಯ ಈಗ ಡೋಲಾಯಮಾನವಾಗಿದೆ.ಇದಕ್ಕೆ ಕಾರಣ, `ಕರ್ನಾಟಕ ಖಾಸಗಿ ವೈದ್ಯಕೀಯ ಕಾಯ್ದೆ-2007~. ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಸರಿಸಲು ಸರ್ಕಾರ ತೆಗೆದುಕೊಂಡ ನಿರ್ಧಾರ. ವೃತ್ತಿ ಮುಂದುವರಿಸದಂತೆ ನೀಡಲಾದ ನೋಟಿಸ್.ಏನಿದು ನಿಯಮ?: ಈ ಕಾಯ್ದೆಯ 3ನೇ ಕಲಮಿನ ಅನ್ವಯ ವೈದ್ಯಕೀಯ ವೃತ್ತಿ ಮುಂದುವರಿಸುವಂಥವರು ನೋಂದಣಿ ಮಾಡುವುದು ಕಡ್ಡಾಯ. ಒಂದು ವೇಳೆ ನೋಂದಣಿಗೊಳ್ಳದೇ ಹೋದರೆ ಅಂಥವರಿಗೆ 19ನೇ ಕಲಮಿನ ಅನ್ವಯ ಕನಿಷ್ಠ ಮೂರು ವರ್ಷಗಳ ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು.ಇದು ನಾಟಿ ವೈದ್ಯರ ಆತಂಕಕ್ಕೆ ಕಾರಣವಾಗಿದೆ. ಕಾರಣ, ಇವರು ವೈದ್ಯಕೀಯ ವೃತ್ತಿಗೆ ಸಂಬಂಧಿಸಿದಂತೆ ಯಾವುದೇ ಪದವಿ ಪಡೆದಿಲ್ಲ. `ಭಾರತೀಯ ವೈದ್ಯಕೀಯ ಕಾಯ್ದೆ~ ಹಾಗೂ  `ಕರ್ನಾಟಕ ಆಯುರ್ವೇದ ಮತ್ತು ಯುನಾನಿ ಕಾಯ್ದೆ~ಗೆ ಇವರು ಒಳಪಡದ ಕಾರಣ ನೋಂದಣಿ ಅಸಾಧ್ಯ. ಪದವಿ ಇಲ್ಲದೇ ನೋಂದಣಿ ಇಲ್ಲ, ನೋಂದಣಿಗೊಳ್ಳದೆ ವೃತ್ತಿ ಮುಂದುವರಿಸುವಂತಿಲ್ಲ!ವೈದ್ಯರ ಅಳಲು: ಈ ಕುರಿತು `ಪ್ರಜಾವಾಣಿ~ಗೆ ಅಳಲು ತೋಡಿಕೊಂಡ ಮಂಗಳೂರಿನ `ಅನುಭವಿ ಮತ್ತು ವಂಶಪಾರಂಪರಿಕ ವೈದ್ಯರ ಸಂಘ~ದ ಮುಖ್ಯ ಸಂಚಾಲಕ ಬಿ.ಎಸ್.ಚಂದ್ರು ಅವರು, `ನಾವು ನೀಡುವ ಔಷಧದಲ್ಲಿ ಯಾವುದೇ ರಾಸಾಯನಿಕ ಇರುವುದಿಲ್ಲ. ನಮ್ಮದು ಗಿಡಮೂಲಿಕೆಗಳಿಂದ ಮಾಡಿದಂತಹ ಔಷಧ, ನೈಸರ್ಗಿಕವಾದುದು. ಹಲವು ಕಾಯಿಲೆಗಳನ್ನು ವಾಸಿ ಮಾಡಿದ ನಮ್ಮ ಸೇವೆಗೆ ಕೇಂದ್ರ ಸರ್ಕಾರ ಕೂಡ ಪ್ರಶಂಸೆ ವ್ಯಕ್ತಪಡಿಸಿದೆ. ಕೆಲವರು `ಆಯುರ್ವೇದ ರತ್ನ~ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಆದರೆ ಈಗ ಇದಾವುದಕ್ಕೂ ಬೆಲೆ ಇಲ್ಲದಂತಾಗಿದೆ~ ಎಂದರು.`ಸರ್ಪಹುಣ್ಣು, ಮೂಳೆ ಸವೆತ, ಸಂಧಿವಾತ ಹೀಗೆ ಹಲವಾರು ಕಾಯಿಲೆಗಳನ್ನು ಕೆಲವೇ ದಿನಗಳಲ್ಲಿ ವಾಸಿ ಮಾಡುವಲ್ಲಿ ನಾವು ನಿಸ್ಸೀಮರು. ನಮ್ಮ ಔಷಧಗಳಿಂದ ಅಡ್ಡ ಪರಿಣಾಮಗಳೂ ಇರುವುದಿಲ್ಲ. ಪದವಿ ಪಡೆದ ವೈದ್ಯರಿಗಾದರೆ ಸಾವಿರಾರು ರೂಪಾಯಿಗಳನ್ನು ನೀಡಬೇಕು. ಆದರೆ ಹತ್ತಾರು ರೂಪಾಯಿಗಳಿಗೆ ನಾವು ಸೇವೆಗೆ ಸಿದ್ಧ. ಈ ಕುರಿತು ಮುಖ್ಯಮಂತ್ರಿ, ಸಂಬಂಧಿತ ಇಲಾಖೆಗಳ ಮೊರೆ ಹೋದರೂ ಪ್ರಯೋಜನ ಆಗಲಿಲ್ಲ. ಈ ಉದ್ಯೋಗ ಬಿಟ್ಟು ಬದುಕುವ ಬೇರೆ ದಾರಿ ನಮಗೆ ಗೊತ್ತಿಲ್ಲ~ ಎಂದು ನೋವು ವ್ಯಕ್ತಪಡಿಸಿದರು.`ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಆದುದರಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ನ್ಯಾಯ ದೊರಕಿಸಿಕೊಳ್ಳುವುದೇ ನಮಗಿರುವ ದಾರಿ~ ಎಂದು ಅವರು ವಿವರಿಸಿದರು.`ನೆರೆಯ ಕೇರಳ, ಆಂಧ್ರ ಪ್ರದೇಶಗಳಲ್ಲಿ ಈ ವೈದ್ಯ ಪದ್ಧತಿ ಮುಂದುವರಿದಿದೆ. ಕೇರಳದಲ್ಲಿ ಇವರಿಗಾಗಿಯೇ ವಿಶೇಷ ಸೌಲಭ್ಯಗಳೂ ಇವೆ. ಅದನ್ನೇ ಇಲ್ಲಿಯೂ ಜಾರಿಗೊಳಿಸಲು ನ್ಯಾಯಮೂರ್ತಿಗಳನ್ನು ಕೋರಲಾಗುವುದು~ ಎಂದು ಇವರ ಪರವಾಗಿ ನಿಂತಿರುವ ವಕೀಲ ಕೆ.ಗೋವಿಂದರಾಜ ತಿಳಿಸಿದರು.ಇಲಾಖೆ ಹೇಳುವುದೇನು?: `ನಾಟಿ ವೈದ್ಯರಿಗೆ ವೃತ್ತಿ ಮುಂದುವರಿಸಲು ನೋಂದಣಿ ಮೂಲಕ ಅನುಮತಿ ನೀಡಿದರೆ ಅವರು ತಾವೇ ವೈದ್ಯರೆಂದು ಬೇರೆ ಎಲ್ಲ ಸೌಲಭ್ಯಗಳನ್ನು ಕೇಳುವ ಸಾಧ್ಯತೆಗಳು ಇವೆ. ಆದುದರಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ~ ಎಂದು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ `ಆಯುಷ್~ ವಿಭಾಗದ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.`ಈ ನಾಟಿ ವೈದ್ಯರಿಗೆ ಪ್ರಮಾಣ ಪತ್ರ ನೀಡುವ ಮೂಲಕ ನೋಂದಣಿಗೊಳಿಸುತ್ತಿರುವುದನ್ನು ವಿರೋಧಿಸಿ ಪದವಿ ಪಡೆದ ವೈದ್ಯರು 2007ರಿಂದ ಮುಷ್ಕರ ನಡೆಸುತ್ತಾ ಬಂದಿದ್ದಾರೆ. ಅವರ ಮನವಿಗೂ ಸರ್ಕಾರ ಸ್ಪಂದಿಸಿದೆ~ ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)