ಭಾನುವಾರ, ಮೇ 29, 2022
31 °C
ವಿಶ್ವವಿದ್ಯಾಲಯಕ್ಕೆ ಇಂದು ಅಧಿಕಾರಿ ಭೇಟಿ

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸಿಬ್ಬಂದಿ ನೇಮಕಾತಿ ವಿವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ /ಹುಬ್ಬಳ್ಳಿ: ಕರ್ನಾಟಕ ಜಾನಪದ ವಿಶ್ವವಿದ್ಯಾಲ­ಯದಲ್ಲಿ ಖಾಲಿ ಇರುವ 56 ಬೋಧಕ, ಬೋಧಕೇತರ ಹುದ್ದೆಗಳ  ನೇಮಕಾತಿ ಪ್ರಕ್ರಿಯೆ ಬಗ್ಗೆ ಅಪಸ್ವರ ಕೇಳಿಬಂದಿದೆ. ಈ ಕುರಿತು ಪರಿಶೀಲನೆ ನಡೆಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಜಂಟಿ ನಿರ್ದೇಶಕ ಲೋಕನಾಥ್‌ ನೇತೃತ್ವದ ಅಧಿಕಾರಿಗಳ ತಂಡ ಗುರುವಾರ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದೆ.‘ಮೀಸಲಾತಿ ನಿಗದಿಗೆ ಸಂಬಂಧಿಸಿ­ದಂತೆ ಸಮಾಜ ಕಲ್ಯಾಣ ಇಲಾಖೆಯ ಅನುಮತಿ ಪಡೆದಿಲ್ಲ. ಸುಪ್ರೀಂ ಕೋರ್ಟ್‌ ನಿರ್ದೇಶನದ ಅನ್ವಯ ಸಂದರ್ಶನಕ್ಕೆ 12.5 ಅಂಕ ನಿಗದಿ ಪಡಿಸಬೇಕಿತ್ತು. ಆದರೆ ಅದಕ್ಕಿಂತ ಹೆಚ್ಚು ಅಂಕ ನಿಗದಿಪಡಿಸಲಾಗಿದೆ. 2014 ಜನವರಿ 7ರ ರಾಜ್ಯ ಸರ್ಕಾರದ ಆದೇಶದ ಅನ್ವಯ ಹೈದರಾಬಾದ್‌ ಕರ್ನಾಟಕದ ಅಭ್ಯರ್ಥಿಗಳಿಗೆ (371 ಜೆ ಕಲಂ) ನೀಡಬೇಕಾದ ಮೀಸಲಾತಿಯ ಮಾನ­ದಂಡವನ್ನು ಪಾಲಿಸಿಲ್ಲ’ ಎಂಬ ದೂರುಗಳು ಕೇಳಿ ಬಂದಿವೆ.ಈ ದೂರುಗಳ ಆಧಾರದಲ್ಲಿ ನೇಮಕಾತಿಗೆ ಸರ್ಕಾರವು ನೀಡಿರುವ ಆದೇಶವನ್ನು ಹಿಂದಕ್ಕೆ ಪಡೆದು­ಕೊಂಡಿದ್ದು, ಮರುಪರಿಶೀಲಿ­ಸಲಾಗು­ವುದು ಎಂದು ಉನ್ನತ ಶಿಕ್ಷಣ ಇಲಾಖೆಯು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಅವರಿಗೆ ಡಿಸೆಂಬರ್‌ 31ರಂದು ಫ್ಯಾಕ್ಸ್‌ ಮೂಲಕ ಆದೇಶ ರವಾನಿಸಿದೆ. ಹೀಗಾಗಿ ಜನವರಿ 1, 2 ಮತ್ತು 3ರಂದು ನಡೆಯಬೇಕಿದ್ದ ಸಂದರ್ಶನವನ್ನು ವಿಶ್ವವಿದ್ಯಾಲಯವು ಹಿಂದಕ್ಕೆ ಪಡೆದುಕೊಂಡಿದೆ.ಇದಕ್ಕೂ ಮೊದಲು ಡಿಸೆಂಬರ್‌ 8ರಂದು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದ ಉನ್ನತ ಶಿಕ್ಷಣ ಇಲಾಖೆಯು ‘ಅರ್ಜಿ ಸಲ್ಲಿಸದೇ ಇರುವವರನ್ನೂ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ ಎಂಬ ಆರೋಪ­ಗಳಿವೆ. ಈ ಕುರಿತು ಸ್ಪಷ್ಟನೆ ನೀಡುವಂತೆ’ ಸೂಚಿಸಿತ್ತು.ವಿಶ್ವವಿದ್ಯಾಲಯವು ದಾಖಲೆ­ಗಳನ್ನು ನೀಡಿದ್ದು, ಡಿಸೆಂಬರ್‌ 14ರಿಂದ ಸಂದರ್ಶನಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

ಆರೋಪಗಳು: ‘ವಿಶ್ವವಿದ್ಯಾಲ­ಯದಲ್ಲಿ ಹಾಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವ­ಹಿಸುತ್ತಿರುವ ಕೆಲವು ಸಿಬ್ಬಂದಿಗೆ ಅನುಕೂಲಕರವಾದ ರೀತಿಯಲ್ಲಿ ನಿಯಮಗಳನ್ನು ರೂಪಿಸಲಾಗಿದೆ. ಇದರಿಂದ ಉತ್ತರ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಹಿನ್ನಡೆಯಾಗಿದೆ.ಕೋರ್ಸ್‌ ವರ್ಕ್‌ನ ನೆಪವೊಡ್ಡಿ 2009ರ ನಂತರದ ಪಿಎಚ್‌.ಡಿ ಪದವೀಧರರನ್ನು ಕಡೆಗಣಿಸಲಾಗಿದೆ. ಐಎಸ್‌ಬಿಎನ್‌ ಹೊಂದಿದ ಪುಸ್ತಕ ಹಾಗೂ ಐಎಸ್‌ಎಸ್‌ಎನ್‌ ಪ್ರಬಂಧ ಮಾನ­ದಂಡಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪಿಎಚ್‌.ಡಿ, ಎನ್‌ಇಟಿ/ಕೆಸೆಟ್‌ ತೇರ್ಗಡೆ ಹೊಂದಿದವರನ್ನು ನಿರ್ಲಕ್ಷಿಸ­ಲಾಗಿದೆ. ಅಂಗವಿಕಲರಿಗೆ ಮೀಸಲಾತಿ ಕಲ್ಪಿಸಿಲ್ಲ. ಲಿಖಿತ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಅಥವಾ ಉತ್ತರದ ಒಎಂಆರ್‌ ಪ್ರತಿಯನ್ನು ಕೊಂಡೊಯ್ಯಲು ಅಭ್ಯ­ರ್ಥಿಗೆ ಬಿಡಲಿಲ್ಲ’ ಎಂಬ ಆರೋಪಗಳು ಅಭ್ಯರ್ಥಿಗಳಿಂದ ಕೇಳಿ ಬಂದಿತ್ತು.  ಸಂದರ್ಶನಕ್ಕೆ ಆಹ್ವಾನ ಬಂದಿಲ್ಲ ಎಂದು ಅಭ್ಯರ್ಥಿಯೊಬ್ಬರು ನ್ಯಾಯಾಲ­ಯದ ಮೆಟ್ಟಿಲೇರಿದ್ದರು. ಬಳಿಕ ಸಂದರ್ಶನಕ್ಕೆ ಅರ್ಹತೆ ಪಡೆದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕುಲಪತಿ ಅಂಬಳಿಕೆ ಹಿರಿಯಣ್ಣ, ‘2009ರ ನಂತರ ಪಿಎಚ್‌.ಡಿ ಮಾಡಿದವರಿಗೆ ಕೋರ್ಸ್‌ ವರ್ಕ್‌ ಕಡ್ಡಾಯ ಎಂಬ ಯುಜಿಸಿ ನಿರ್ದೇಶನ ಇದೆ. ಹಾಗಾಗಿ  ಸಂದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಆದರೆ, ಸಂದರ್ಶನಕ್ಕೆ ಅವಕಾಶ ಕಲ್ಪಿಸಿರುವ ನ್ಯಾಯಾಲಯವು, ವಿಚಾ­ರಣೆ ಪೂರ್ಣಗೊಂಡ ಬಳಿಕ ತೀರ್ಪು ನೀಡಲಿದೆ. ವಿಚಾರಣೆ ವೇಳೆ ವಿ.ವಿ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಲಿದ್ದಾರೆ’ ಎಂದು ಹೇಳಿದರು.ನಿಯಮಾನುಸಾರ ನೇಮಕಾತಿ: ‘ಇತರ ವಿಶ್ವವಿದ್ಯಾಲಯ ಹಾಗೂ ತಜ್ಞರಿಂದ ಮಾಹಿತಿ ಪಡೆದು ಮೀಸಲಾತಿ ಪಟ್ಟಿ ರೂಪಿಸಲಾಗಿದೆ. ಪುಸ್ತಕ ಮತ್ತು ಪುಸ್ತಕ ಪ್ರಕಟಣೆ, ಪಿಎಚ್‌.ಡಿ, ಎನ್‌ಇಟಿ... ಹೀಗೆ ಪ್ರತಿಯೊಂದಕ್ಕೂ ಯುಜಿಸಿ ಅಂಕ ನಿಗದಿ ಪಡಿಸಿದೆ. ಅದನ್ನೇ ನೀಡಿದ್ದೇವೆ.  ಸಂದರ್ಶನಕ್ಕೆ 12.5ಕ್ಕಿಂತ ಹೆಚ್ಚು ಅಂಕ ನಿಗದಿ ಪಡಿಸಿಲ್ಲ. 40 ಹುದ್ದೆಗಳ ಸಂದರ್ಶನವನ್ನು ಸಿ.ಸಿ ಟಿವಿ ಮೂಲಕ ಚಿತ್ರೀಕರಿಸಲಾಗಿದೆ. ಪರೀಕ್ಷೆ ಉತ್ತರ ಪತ್ರಿಕೆಗಳೂ ಇವೆ.ಎಲ್ಲ ಪ್ರಕ್ರಿಯೆಗಳೂ ನಿಯಮಾನುಸಾರ ನಡೆದಿದ್ದು, ದಾಖಲೆಗಳಿವೆ. ಚಾಲಕರ ಹುದ್ದೆಯ ನೇಮಕಾತಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳೇ ಪರಿಶೀಲನೆ ನಡೆಸಿದ್ದಾರೆ. ಕೇಳಿಬಂದಿರುವ ಆರೋಪಗಳಲ್ಲಿ ಹುರುಳಿಲ್ಲ. ದೂರುಗಳ ಕಾರಣಕ್ಕೆ ಮಾಹಿತಿ ಕೇಳಿದ್ದಾರೆ. ಇಲಾಖೆಗೆ ಮಾಹಿತಿ ಸಲ್ಲಿಸಿದ್ದೇವೆ. ಸರ್ಕಾರದ  ನಿರ್ದೇಶನದಂತೆ ನಡೆದುಕೊಳ್ಳುತ್ತೇವೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.