ಭಾನುವಾರ, ಮೇ 22, 2022
24 °C

ಕಲಾನಿಧಿ ಮಾರನ್ ಅತ್ತೆಗೆ ಸೇರಿದ:ಚಿನ್ನಾಭರಣ ಲಾಕರ್‌ನಿಂದ ನಾಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸನ್ ನೆಟ್‌ವರ್ಕ್ ಮಾಲೀಕ ಕಲಾನಿಧಿ ಮಾರನ್ ಅವರ ಅತ್ತೆ ಬ್ಯಾಂಕ್ ಲಾಕರ್‌ನಲ್ಲಿ ಇರಿಸಿದ್ದ ರೂ 10 ಲಕ್ಷ ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿದ್ದು, ಈ ಸಂಬಂಧ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ನಗರದ ಜಯಲಕ್ಷ್ಮಿಪುರಂ 4ನೇ ಬ್ಲಾಕ್, 1ನೇ ಮುಖ್ಯರಸ್ತೆಯ ಶಿವಶಕ್ತಿ ಮ್ಯಾನ್ಷನ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಲೇಟ್ ಜಮ್ಮಡ ಬೆಳ್ಳಿಯಪ್ಪ  ಅವರ ಪತ್ನಿ ಜೆ.ನೀನಾ ಬೆಳ್ಳಿಯಪ್ಪ ಜಯಲಕ್ಷ್ಮಿಪುರಂನ ಕೆನರಾ ಬ್ಯಾಂಕ್ ಶಾಖೆಯ ಲಾಕರ್‌ನಲ್ಲಿ   ಮಾರ್ಚ್ 13 ರಂದು ಚಿನ್ನಾಭರಣಗಳನ್ನು ಇರಿಸಿದ್ದರು.ಮೊದಲ ಮಗಳನ್ನು ಕಲಾನಿಧಿ ಮಾರನ್‌ರಿಗೆ ಮದುವೆ ಮಾಡಿಕೊಟ್ಟಿದ್ದು, ಎರಡನೇ ಪುತ್ರಿಯೊಂದಿಗೆ ವಾಸವಿದ್ದಾರೆ. ಸಂಬಂಧಿಕರ ಮದುವೆ ಇದ್ದ ಕಾರಣ ಜೂ.1 ರಂದು ಚಿನ್ನಾಭರಣಗಳನ್ನು ತೆಗೆದುಕೊಳ್ಳಲು ಬ್ಯಾಂಕ್‌ಗೆ ಹೋದಾಗ ಲಾಕರ್‌ನಲ್ಲಿ ಚಿನ್ನಾಭರಣ ಕಾಣಲಿಲ್ಲ. ಗಾಬರಿಗೊಂಡ ನೀನಾ ಬ್ಯಾಂಕ್‌ನ ವ್ಯವಸ್ಥಾಪಕರ ಗಮನಕ್ಕೆ ತಂದರು. ಮಂಗಳವಾರ ಜಯಲಕ್ಷ್ಮಿಪುರಂ ಠಾಣೆಗೆ ತೆರಳಿ ದೂರು ನೀಡಿದ್ದಾರೆ.ಬಿಳಿ ವಜ್ರದ ಹರಳುಗಳಿಂದ ಕೂಡಿದ 4 ಬಳೆಗಳು, ಮೂರು ಎಳೆಯ ಉದ್ದದ ಚಿನ್ನದ ಸರ, ಒಂದು ಜೊತೆ ವಜ್ರದ ಓಲೆ ಮತ್ತು ಜುಮುಕಿ ಲಾಕರ್‌ನಿಂದ ಕಾಣೆಯಾಗಿವೆ. ಇವುಗಳ ಮೌಲ್ಯ ರೂ 10 ಲಕ್ಷ. ತಮ್ಮ ಅತ್ತೆ ಮತ್ತು ತಾಯಿ ನೀಡಿದ ಚಿನ್ನಾಭರಣಗಳಾಗಿದ್ದು, ಹುಡುಕಿಕೊಡುವಂತೆ ನೀನಾ ಬೆಳ್ಳಿಯಪ್ಪ  ದೂರಿನಲ್ಲಿ ಕೋರಿದ್ದಾರೆ.ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ ಮತ್ತು ಶ್ವಾನದಳ ಭೇಟಿ ನೀಡಿ ಪರಿಶೀಲಿಸಿತು. ನಗರ ಪೊಲೀಸ್ ಕಮಿಷನರ್ ಕೆ.ಎಲ್.ಸುಧೀರ್, ಡಿಸಿಪಿ ಬಸವರಾಜ ಮಾಲಗತ್ತಿ, ಎಸಿಪಿ ಸಿ.ಡಿ.ಜಗದೀಶ್ ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲಿಸಿದರು.ಬ್ಯಾಂಕ್ ಲಾಕರ್ ಸೌಲಭ್ಯ ಪಡೆದ ಗ್ರಾಹಕರ ಬಳಿ ಒಂದು ಕೀಲಿ ಮತ್ತು ಬ್ಯಾಂಕ್‌ನವರ ಬಳಿ ಮಾಸ್ಟರ್ ಕೀಲಿ ಇರುತ್ತದೆ. ಎರಡೂ ಕೀಲಿಗಳನ್ನು ಒಟ್ಟಿಗೆ ಬಳಸಿದರೆ ಮಾತ್ರ ಲಾಕರ್ ತೆರೆಯಲು ಸಾಧ್ಯ. ಮಾಸ್ಟರ್ ಕೀಲಿ ಒಂದನ್ನೇ ಬಳಸಿ ಲಾಕರ್ ತೆಗೆಯಲು ಸಾಧ್ಯವಿಲ್ಲ. ಚಿನ್ನಾಭರಣ ನಾಪತ್ತೆಯಾಗಲು ಸಾಧ್ಯವಿಲ್ಲ. ಗ್ರಾಹಕರು ಲಾಕರ್‌ನಲ್ಲಿ ವಸ್ತುಗಳನ್ನು ಇಡುವ ಸಂದರ್ಭದಲ್ಲಿ ಬ್ಯಾಂಕ್‌ನ ಸಿಬ್ಬಂದಿ ಇರುವುದಿಲ್ಲ. ಚಿನ್ನಾಭರಣ ಹೇಗೆ ನಾಪತ್ತೆ ಆಯಿತು ಎಂಬುದು ತನಿಖೆಯಿಂದ ಗೊತ್ತಾಗಲಿದೆ ಎಂದು ಬ್ಯಾಂಕ್‌ನ ಹಿರಿಯ ಅಧಿಕಾರಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.