ಸೋಮವಾರ, ಜನವರಿ 20, 2020
21 °C

ಕಲಾಪ್ರೇಮಿ ಎ.ಎಸ್.ಮೂರ್ತಿ ಅಲಿಯಾಸ್ ಈರಣ್ಣ

–ಅ.ರಾ. ಮಿತ್ರ. Updated:

ಅಕ್ಷರ ಗಾತ್ರ : | |

ಗೆಳೆಯ ಎ.ಎಸ್.ಮೂರ್ತಿ ನನಗೆ ಬಹಳ ವರ್ಷಗಳಿಂದ ಪರಿಚಿತರು. ಸುಮಾರು ೧೯-೫೫--–೫೬ರ ಸಮಯ. ಮೈಸೂರಿನ ಶಾರದಾ ವಿಲಾಸ್ ಕಾಲೇಜಿನಲ್ಲಿ ಎ.ಎಸ್. ಮೂರ್ತಿ ಅವರ ‘ಹುಚ್ಚ?’ ನಾಟಕ ಪ್ರದರ್ಶನ ನಡೆಯುತ್ತಿತ್ತು. ಗೊರೂರು ರಾಮಸ್ವಾಮಿ ಅಯ್ಯಂಗಾರರ ಮಗ ಸೀತಾರಾಂ ನನ್ನ ಕೋಣೆಗೆ ಬಂದು ಅಲ್ಲಿಗೆ ಎಳೆದುಕೊಂಡು ಹೋಗಿದ್ದ.

ನಾಟಕ ನೋಡಿದೆವು. ಮೂರ್ತಿಯವರು ಅಲ್ಲಿಗೆ ಬಂದದ್ದು ಒಂದು ಸೋಜಿಗವೇ. ನಾಟಕಕಾರರು ಎಂದರೆ ತುಂಬಾ ಗಂಭೀರನಾದ, ಸ್ನೇಹ ಹಸ್ತ ಚಾಚದ, ಬಿಗು ಮೋರೆಯ ಸಾಹಿತಿ ಎಂದುಕೊಂಡಿದ್ದೆ. ಆದರೆ ಹುಡುಗನಾಗಿದ್ದ ನನ್ನ ಎಲ್ಲಾ ಅನಿಸಿಕೆಗಳನ್ನು ದೂರ ಮಾಡುವಷ್ಟು ಸಜ್ಜನಿಕೆ, ಆಪ್ತತೆ ಮತ್ತು ಸದರವನ್ನು ತೋರಿಸುವ ವ್ಯಕ್ತಿ ಮೂರ್ತಿ.ನಾನು ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿಗೆ ಬಂದಾಗ ಆಗಾಗ ಅ.ನ. ಸುಬ್ಬರಾಯರನ್ನು  ನೋಡಲು ಹೋಗುತ್ತಿದ್ದೆ. ಒಂದೆರಡು ಸಲ ಅಲ್ಲೇ ಮೂರ್ತಿಯ ಭೇಟಿಯೂ ಆಯಿತು. ಮುಂದೆ ಆಕಾಶವಾಣಿಯಲ್ಲಿ ನನಗೆ ಮಾತನಾಡುವ ಅವಕಾಶ ಇದ್ದಾಗ ಅಲ್ಲಿ ತಪ್ಪದೆ ನನ್ನ ಜತೆಗೆ ಇರುತ್ತಿದ್ದವರೆಂದರೆ ಎ.ಎಸ್. ಮೂರ್ತಿ ಮತ್ತು ಪುರುಷೋತ್ತಮ ಇಬ್ಬರೆ. ಮುಂದೆ ನಮ್ಮ ಸ್ನೇಹ ಆಪ್ತತೆಗೆ ತಿರುಗಿ ಭೇಟಿಯ ಸಂಖ್ಯೆಗಳು ಹೆಚ್ಚಾದವು.ಅವರ ಕಾರ್ಯಕ್ರಮಗಳಲ್ಲಿ ಎಷ್ಟು ಸಲ ಭಾಗವಹಿಸಿದ್ದೆನೋ ಲೆಕ್ಕಕ್ಕೆ ಸಿಗುವಂಥದಲ್ಲ. ನಾನು ಮೂರ್ತಿಯಲ್ಲಿ ನಯಗಾರಿಕೆಯನ್ನು ಕಾಣದಿದ್ದರೂ ಚೇಷ್ಟೆಯ ಬುದ್ದಿ, ಎಲ್ಲರನ್ನು ಆಪ್ತರವಲಯಕ್ಕೆ ಸೇರಿಸಿಕೊಳ್ಳುವ ಹಂಬಲ ಮತ್ತು ಮಾತುಕತೆಯನ್ನು ಚುರುಕುಗುಟ್ಟಿಸುವಂತೆ ನಗೆಲಹರಿ. ನಾಟ್ಯ ಸಾಮರ್ಥ್ಯ, ಆಡಿದ ಮಾತಿಗೆ ಅನುಗುಣವಾದ ಭಾವಪ್ರವಹಣ ಇವೆಲ್ಲಾ ನನಗೆ ತುಂಬಾ ಮೆಚ್ಚುಗೆ ಆದವು.ಮೂರ್ತಿಯಲ್ಲಿ ನಾನು ಕಂಡ ಒಂದು ಅದ್ಭುತ ಗುಣದ ಬಗೆಗೆ ನಾನಿಲ್ಲಿ ಹೇಳಲೇಬೇಕಾಗಿದೆ. ಮೂರ್ತಿ ದೊಡ್ಡವರೊಂದಿಗೆ ದೊಡ್ಡವರಾಗಿ, ಸಾಮಾನ್ಯರೊಂದಿಗೆ ಸಾಮಾನ್ಯರಾಗಿ, ಠೇಂಕಾರಿಗಳೊಂದಿಗೆ ಅಷ್ಟೇ ಗರ್ವಮಯವಾಗಿ ನಡೆದುಕೊಳ್ಳುತ್ತಿದ್ದರು. ಆದರೆ ಅವರ ಮುಖ್ಯ ಗಮನವೆಲ್ಲಾ ಸಾಮಾನ್ಯರ ಕಡೆಗೆ, ಹೆಚ್ಚು ತಿಳಿಯದವರ ಕಡೆಗೆ ಮತ್ತು ತುಂಬಾ ತಿಳಿಯಬೇಕೆಂಬ ಆಕಾಂಕ್ಷೆ ಇದ್ದವರ ಕಡೆಗೆ ಹರಿಯುತ್ತಿತ್ತು.

ಬರಗೂರು ರಾಮಚಂದ್ರಪ್ಪ, ಎಚ್.ಜಿ. ಸೋಮಶೇಖರರಾವ್ ಮತ್ತು ಆ ಕಾಲದ ನಟನಾರಂಗದ ಜನರೆಲ್ಲಾ ಅವರನ್ನು ಮೆಚ್ಚುತ್ತಿದ್ದದ್ದು ಈ ಕಾರಣಕ್ಕೆ. ಅಂದರೆ ದೊಡ್ಡವರನ್ನು ಮರೆತರೂ ಚಿಂತಿಲ್ಲ, ಎಳೆಯ ಪ್ರತಿಭೆಗಳನ್ನು ಗುರುತಿಸಿ ಅವರ ಬೆಳವಣಿಗೆಗೆ ವೇದಿಕೆ ನಿರ್ಮಾಣ ಮಾಡಿ ಸಾಮಾನ್ಯ ಜನರಲ್ಲಿ ಉತ್ಸಾಹ ಚಿಮ್ಮುವಂತೆ ಮಾಡುವುದು ಮೂರ್ತಿಯವರ ಸ್ವಭಾವಗಳಲ್ಲಿ ಒಂದು.ಬಲಿತವರನ್ನು ಮುಂದೆ ತರುವುದು ಕಷ್ಟವಲ್ಲ ಆದರೆ ಅಪರಿಚಿತ ಲೋಕಕ್ಕೆ ಕಾಲಿಡಲು ಬಯಸುವ ಎಳೆಯರ ಮಧ್ಯೆ ಅವರು ವಾಸ ಮಾಡಿದ್ದರಿಂದ ಎರಡು ಪ್ರಯೋಜನಗಳಾಗಿವೆ. ಮೊದಲೆನೆಯದು ಸಾಮಾನ್ಯ ಜನ ’ಸೊಕ್ಕಿನಲಿ ತಲೆ ಎತ್ತಿ ಜತೆಯವರ ಕೂಟದಲಿ ನಾನೂ ಸಮ ನಿಮಗೆ’ ಎಂದು ಬೀಗುವ ಉತ್ಸಾಹವನ್ನು ತುಂಬುವುದು. ನಾನು ಎಷ್ಟೊ ಹುಡುಗರ ಬಾಯಿಂದ ಈ ಮಾತು ಕೇಳಿದ್ದೇನೆ.ಎದುರಿಗೆ ಇದ್ದಾಗ ಇರಲಿ ಇಲ್ಲದಿದ್ದಾಗ ಕೂಡ ಈ ಹುಡುಗ ಹುಡುಗಿಯರು ಮೂರ್ತಿಯನ್ನು ತಮ್ಮವನು ಎಂದು ಭಾವಿಸುವಂತೆ ಮೂರ್ತಿ ಮೋಡಿ ಮಾಡಿದ್ದರು. ಎರಡನೆಯದಾಗಿ ಮೂರ್ತಿಗೆ ಇದರಿಂದ ಹುಡುಗರ ಮತ್ತು ಹುಡುಗಿಯರ ಸಹವಾಸದ ಶಾಖದಲ್ಲಿ ಅವರ ವಯಸ್ಸಿನ ಜ್ಞಾನ ಕರಗಿ ಹೋಯಿತು. ೭೦ರಲ್ಲಿ ಕೂಡ ೨೦ರ ತರುಣನಂತೆ ನಡೆದುಕೊಳ್ಳುತ್ತಿದ್ದರು.ಕಲಾಮಂದಿರಕ್ಕೆ ನನ್ನಂಥವನನ್ನು ಅಧ್ಯಕ್ಷನನ್ನಾಗಿ ಮಾಡಿ ನನಗೆ ಸ್ವಲ್ಪವೂ ತೊಂದರೆ ಕೊಡದೆ ಮೂರ್ತಿ ತಾವೇ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದರು. ಒಂದು ಸಲವಂತು ಅವರು ಏರ್ಪಡಿಸಿದ್ದ ಭಾವಗೀತ ಪರಿಚಯದ ಸಮಯ ಚಿ. ಪಲ್ಲವಿ ಕನ್ನಡದ ಅನೇಕ ಪದ್ಯಗಳನ್ನು ಆರಿಸಿಕೊಂಡು ತುಂಬಾ ಸುಶ್ರಾವ್ಯವಾಗಿ ಭಾವಪೂರ್ಣವಾಗಿ ಹಾಡಿ ಸಭಾಸದರ ರಸಾನುಭವಕ್ಕೆ ಕಾರಣಳಾದಳು. ಮೂರ್ತಿಯ ಸಲಹೆಯಂತೆ ಒಂದೊಂದು ಹಾಡು ಮುಗಿದಾಗಲೂ ನಾನು ಆ ಭಾವಗೀತೆಯ ಹಿನ್ನೆಲೆ, ಅರ್ಥ ಮತ್ತು ಪರಿಣಾಮಗಳನ್ನು ವಿವರಿಸುತ್ತಿದ್ದೆ.ಆ ಸಭೆಯಲ್ಲಿ ಒಂದು ಘಟನೆ ನಡೆಯಿತು. ಲಂಡನ್ನಿನಲ್ಲಿರುವ ನನ್ನ ಗೆಳೆಯ ಡಾ. ಅಪ್ಪಾಜಿಗೌಡ ಮತ್ತು ಅವರ ಪತ್ನಿ ಭಾನುಮತಿ ಇಬ್ಬರು ಅಲ್ಲಿಗೆ ಬಂದಿದ್ದರು. ಕಾರ್ಯಕ್ರಮ ನಡೆಯುತ್ತಿದ್ದಂತೆ ಮಧ್ಯದಲ್ಲಿ ಭಾನುಮತಿಯವರು ಎದ್ದು ಬಂದು ತಾವು ಮೂರ್ತಿಯವರ ಶಿಷ್ಯಳಾಗಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದಾಗಿ ತಿಳಿಸಿ ಮೂರ್ತಿಯವರನ್ನೇ ಬೆಚ್ಚಿ ಬೀಳಿಸಿದ್ದರು. ಅಷ್ಟೇ ಸಾಲದೆಂದು ಭಾನುಮತಿ ಅಪ್ಪಾಜಿಗೌಡರು ನಮ್ಮ ಕಲಾಮಂದಿರಕ್ಕೆ ಕಾಣಿಕೆಯನ್ನು ನೀಡಿದರು.ಇದರಿಂದ ಅಜ್ಞಾತ ಪ್ರತಿಭೆಗಳ ಮೆರೆತಕ್ಕೆ ಕಲಾಮಂದಿರದ ಮೂರ್ತಿ ಎಂಥಾ ಶೋಭೆಯನ್ನು ತಂದಿದ್ದರು ಎನ್ನುವುದು ಗೊತ್ತಾಗುತ್ತದೆ.

ನಾನಂತೂ ಆತನನ್ನು ಮರೆಯುವಂತೆಯೇ ಇಲ್ಲ. ಈರಣ್ಣ, ಚೊಕ್ಕ ಕೈ ಬರಹದ ಪಟು, ಪುಸ್ತಕ ಪ್ರೇಮಿ, ಗೆಳೆಯರ ಬಂಧು, ಹುಡುಗರ ಸ್ಫೂರ್ತಿಯ ಚಿಲುಮೆ ಇನ್ನೂ ಹತ್ತಾರು ವಿಶೇಷಣಗಳನ್ನು ಸೇರಿಸಿ ಪ್ರಕಟಿಸಿದರೂ ಅವೆಲ್ಲಾ ಮೂರ್ತಿಯ ಚೈತನ್ಯದ ಚಟುವಟಿಕೆಗಳ ಒಂದು ಭಾಗವಾಗಿ ಮಾತ್ರ ನಿಲ್ಲುತ್ತದೆ.

ಅಂಥಾ ಕಲಾಜೀವಕ್ಕೆ, ಸ್ನೇಹಜೀವಕ್ಕೆ, ಕಾಯಕಪ್ರೇಮಿ ಚೇತನಕ್ಕೆ ನಾವು ಮಾಡುವ ಪ್ರಶಂಸೆಗಳೆಲ್ಲಾ ಒಂದು ಹೂ ಅಷ್ಟೇ. ಅಂಥಾ ಹೂವುಗಳನ್ನು ಸಾವಿರಾರು ಶಿಷ್ಯರು ರಾಜೀವ್ ತಾರಾನಾಥರಂತಹ ಸಂಗೀತಗಾರರು, ವೆಂಕಟಾಚಲಪತಿ, ಬಿ.ಕೆ. ಶ್ರೀನಿವಾಸ ವರ್ಮ, ನಾಗರಿಕರು ಮತ್ತು ಚಿತ್ರಲೋಕದ, ಪತ್ರಲೋಕದ, ಬಾನುಲಿ, ಟಿವಿ ಲೋಕದ ಅಸಂಖ್ಯಾತರು ಎಂದಿಗೂ ಸ್ಮರಿಸುತ್ತಿದ್ದಾರೆ.

–ಅ.ರಾ. ಮಿತ್ರ.

ಪ್ರತಿಕ್ರಿಯಿಸಿ (+)