ಸೋಮವಾರ, ಜೂನ್ 14, 2021
22 °C

ಕಲಾಪ ನುಂಗಿದ ಲಂಕಾ ತಮಿಳರ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಎಲ್‌ಟಿಟಿಇ ವಿರುದ್ಧ ನಿರ್ಣಾಯಕ ಯುದ್ಧ ನಡೆಸಿದ ಸಂದರ್ಭದಲ್ಲಿ ಶ್ರೀಲಂಕಾ ಸೇನೆಯು ತಮಿಳರ ವಿರುದ್ಧ ನಡೆಸಿದ ಅಪರಾಧಗಳನ್ನು ಖಂಡಿಸಿ ವಿಶ್ವಸಂಸ್ಥೆಯು ಅಂಗೀಕರಿಸಿರುವ ಗೊತ್ತುವಳಿಗೆ ಭಾರತ ಬೆಂಬಲ ನೀಡಬೇಕು ಎಂಬ ವಿಚಾರ ಮಂಗಳವಾರ ಸಂಸತ್ತಿನ ಉಭಯ ಸದನಗಳಲ್ಲೂ ಪ್ರಸ್ತಾಪವಾಗಿ ಕೋಲಾಹಲ ಉಂಟು ಮಾಡಿತಲ್ಲದೆ ರಾಜ್ಯಸಭೆಯ ಕಲಾಪ ಮುಂದೂಡಲು ಕಾರಣವಾಯಿತು.

ರಾಜ್ಯ ಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಡಿಎಂಕೆ ಮತ್ತು ಎಐಎಡಿಎಂಕೆ ಸದಸ್ಯರು ಎಡಪಕ್ಷಗಳ ಬೆಂಬಲದೊಂದಿಗೆ ವಿಷಯವನ್ನು ಪ್ರಸ್ತಾಪಿಸಿ ಪದೆಪದೇ ಕಲಾಪಕ್ಕೆ ಅಡ್ಡಿ ಉಂಟು ಮಾಡಿದ್ದರಿಂದ ಇಡೀ ದಿನದ ಕಲಾಪ ವ್ಯರ್ಥವಾಯಿತು.

ಗೊತ್ತುವಳಿಗೆ ಬೆಂಬಲ ಸೂಚಿಸುವುದರ ಬಗ್ಗೆ ಸರ್ಕಾರ ಎರಡೂ ಸದನಗಳಲ್ಲಿ ಯಾವುದೇ ಸ್ಪಷ್ಟ ಭರವಸೆ ನೀಡಲಿಲ್ಲ.

ಶ್ರೀಲಂಕಾ ಸೇನೆಯು ಎಲ್‌ಟಿಟಿಇ ವಿರುದ್ಧ ಅಂತಿಮವಾಗಿ ಯುದ್ಧ ಮಾಡಿದಾಗ ತಮಿಳರ ಮೇಲೆ ಭಾರಿ ದೌರ್ಜನ್ಯ ನಡೆಸಿದ್ದನ್ನು ಖಂಡಿಸಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗವು ನಿರ್ಣಯ ಅಂಗೀಕರಿಸಿದೆ. ಈ ನಿರ್ಣಯಕ್ಕೆ ಫ್ರಾನ್ಸ್, ಅಮೆರಿಕ ಮತ್ತು ನಾರ್ವೆ ಬೆಂಬಲ ನೀಡಿವೆ. ಇದಕ್ಕೆ ಭಾರತವೂ ಬೆಂಬಲ ನೀಡಬೇಕು ಎಂದು ವಿಷಯ ಪ್ರಸ್ತಾಪಿಸಿದ ಡಿಎಂಕೆ ಸದಸ್ಯರು ಆಗ್ರಹಪಡಿಸಿದರು.

ಡಿಎಂಕೆ ಸದಸ್ಯರ ಬೇಡಿಕೆಗೆ ಧ್ವನಿಗೂಡಿಸಿದ ಎಐಎಡಿಎಂಕೆ ಮತ್ತು ಎಡ ಪಕ್ಷಗಳ ಸದಸ್ಯರು ಈ ವಿಚಾರದಲ್ಲಿ ಸರ್ಕಾರದ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಸದನದಲ್ಲಿ ಭಾರಿ ಗದ್ದಲ ಉಂಟಾಗಿದ್ದರಿಂದ ಕಲಾಪವನ್ನು  ಮುಂದೂಡಲಾಯಿತು.

ಸದನ ಪುನಃ ಸೇರಿದಾಗ ಸದಸ್ಯರು ಸಭಾಪತಿ ಅವರ ಮುಂಭಾಗಕ್ಕೆ ತೆರಳಿ ಘೋಷಣೆ ಕೂಗಿ ಗದ್ದಲವೆಬ್ಬಿಸಿದ್ದರಿಂದ ಉಪಸಭಾಪತಿ ಕೆ. ರೆಹಮಾನ್ ಖಾನ್ ಅವರು ಮೊದಲಿಗೆ 15 ನಿಮಿಷಗಳ ಕಾಲ ನಂತರ ಮಧ್ಯಾಹ್ನ ಎರಡು ಗಂಟೆಯವರೆಗೆ ಕಲಾಪವನ್ನು ಮುಂದೂಡಿದರು.

ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ ಅವರು ಬುಧವಾರ ಸದನದಲ್ಲಿ ಈ ಬಗ್ಗೆ ಹೇಳಿಕೆ ನೀಡಲಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪವನ್ ಕುಮಾರ್ ಬನ್ಸಲ್  ತಿಳಿಸಿದರೂ ಪಟ್ಟು ಬಿಡದ ಸದಸ್ಯರು, ಮಂಗಳವಾರವೇ ಸರ್ಕಾರ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದರು.

ಡಿಎಂಕೆ ಸದಸ್ಯರಾದ ಟಿ. ಶಿವಾ, ಕನಿಮೊಳಿ, ಎಐಎಡಿಎಂಕೆ ಸದಸ್ಯರಾದ ವಿ. ಮೈತ್ರೇಯನ್, ಎ. ಇಳವರಸನ್ ಅವರು ಸಭಾಪತಿಗಳ ಪೀಠದೆದುರು ನಿಂತು ಘೋಷಣೆ ಕೂಗಿದರು. ಉಪಸಭಾಪತಿ ಅವರು ಎಷ್ಟೇ ಮನವಿ ಮಾಡಿದರೂ ಸದಸ್ಯರು ಗದ್ದಲ ಮುಂದುವರಿಸಿದ್ದರಿಂದ ಕಲಾಪವನ್ನು ಬುಧವಾರಕ್ಕೆ ಮುಂದೂಡಲಾಯಿತು. ಲೋಕಸಭೆಯಲ್ಲೂ ಈ ವಿಷಯ ಪ್ರಸ್ತಾಪವಾಗಿ ಗದ್ದಲಕ್ಕೆ ಕಾರಣವಾಯಿತು. ಡಿಎಂಕೆ ಮತ್ತು ಎಐಎಡಿಎಂಕೆ ಸದಸ್ಯರು ತುದಿಗಾಲಲ್ಲಿ ನಿಂತು ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತ ಬೆಂಬಲ ವ್ಯಕ್ತಪಡಿಸಬೇಕು ಎಂದು ಆಗ್ರಹಪಡಿಸಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು, `ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗವು ಯಾವುದೇ ನಿರ್ದಿಷ್ಟ ದೇಶದ ಕುರಿತು ನಿರ್ಣಯ ಅಂಗೀಕರಿಸಿದಾಗ ಭಾರತ ಬೆಂಬಲ ವ್ಯಕ್ತಪಡಿಸಿದ ಉದಾಹರಣೆಗಳಿಲ್ಲ~ ಎಂದು ತಿಳಿಸಿದರು.

ಇದರಿಂದ ಕುಪಿತಗೊಂಡ ಡಿಎಂಕೆ,  ಎಐಎಡಿಎಂಕೆ ಮತ್ತು ಸಿಪಿಐ ಸದಸ್ಯರು ಸಭಾಧ್ಯಕ್ಷರ ಪೀಠದೆದುರು ತೆರಳಿ ಕೂಗಾಡಿದರು.

ಚೆನ್ನೈ ವರದಿ: ಸಂಘರ್ಷ ಮತ್ತು ಅಪನಂಬಿಕೆ ಹೋಗಲಾಡಿಸಲು ಶ್ರೀಲಂಕಾ ಜತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಪ್ರಧಾನಿ ಸಿಂಗ್ ಅವರು ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರಿಗೆ ತಿಳಿಸಿದ್ದಾರೆ.

ಸೈನಿಕರು ತಮಿಳರ ಮೇಲೆ ನಡೆಸಿರುವ ದೌರ್ಜನ್ಯದ ಬಗ್ಗೆ ಸಂಬಂಧಪಟ್ಟವರ ಜತೆ ಮಾತುಕತೆ ನಡೆಸಲಾಗುತ್ತದೆ ಎಂದು ಪ್ರಧಾನಿ ಅವರು ಕರುಣಾನಿಧಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.