ಶುಕ್ರವಾರ, ಮೇ 20, 2022
27 °C

ಕಲಾವಿದರ ಕುಂಚದಲ್ಲಿ ಅರಳಿದ ಗರ್ವಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರಪೇಟೆ: ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ 25ಕ್ಕೂ ಅಧಿಕ ಮಂದಿ ಖ್ಯಾತ ಚಿತ್ರ ಕಲಾವಿದರು ಸೋಮವಾರಪೇಟೆ ಸಮೀಪದ ಪಶ್ಚಿಮಘಟ್ಟದ ಸೆರಗಿನಲ್ಲಿರುವ ಕುಗ್ರಾಮವಾದ ಗರ್ವಾಲೆ ಗ್ರಾಮದ ಸುತ್ತಮುತ್ತಲಿನ ಪ್ರಕೃತಿಯ ಸೊಬಗನ್ನು ಬಣ್ಣದಲ್ಲಿ ಅರಳಿಸ ತೊಡಗಿರುವ ಅಪೂರ್ವ ಸಂಗತಿ ಶುಕ್ರವಾರದಿಂದ ಆರಂಭಗೊಂಡಿದೆ.ಭಾರತೀಯ ವಿದ್ಯಾಭವನದ ಬೆಂಗಳೂರು, ಮೈಸೂರು ಮತ್ತು ಮಡಿಕೇರಿ ಕೇಂದ್ರಗಳು ಗರ್ವಾಲೆ ವಿದ್ಯಾಭವನ ಕೇಂದ್ರದ ಭವನೋತ್ಸವದ ಅಂಗವಾಗಿ ಮಾ. 18 ರಿಂದ 20ರ ತನಕ ಮೂರು ದಿನಗಳ ಕಾಲದ ಗರ್ವಾಲೆ ಗ್ರಾಮದಲ್ಲಿ ಚಿತ್ರ ಕಲಾವಿದರ ಶಿಬಿರವನ್ನು ಏರ್ಪಡಿಸಿದ್ದು, ಈ ಕುಗ್ರಾಮದ ಬೆಟ್ಟ-ಗುಡ್ಡಗಳ ಸೌಂದರ್ಯ ಚಿತ್ರಕಲಾವಿದರ ಕಲಾಕೃತಿಗಳಲ್ಲಿ ಸೆರೆಯಾಗುವ ಮೂಲಕ ದೇಶ ವಿದೇಶಗಳ ವೀಕ್ಷಕರನ್ನು ಮುಂಬರುವ ದಿನಗಳಲ್ಲಿ ಸೆಳೆಯಲಿವೆ.ಬೆಂಗಳೂರಿನ ಎಂ.ಎಂ.ಜಿನೇಂದ್ರ, ಜಿ.ಸೋಮಶೇಖರ್, ಎಚ್.ಪಿ.ಬ್ರಹ್ಮಾನಂದಮೂರ್ತಿ, ಅಪ್ಪಾಸಾಹೇಬ್ ಗಾಣೀಗರ್, ಯು.ಅಶೋಕ್, ಆರ್.ಲೋಕೇಶ್, ಯೋಗೇಶ್, ಎಸ್.ಸಂದೀಪ್, ಶ್ರೀನಿವಾಸ್, ಸಿ.ಕಿರಣ್, ಮೈಸೂರಿನ ವಿಠಲ್‌ರೆಡ್ಡಿ ಎಫ್.ಛಳಕಿ, ದಕ್ಷಣ ಕನ್ನಡ ಜಿಲ್ಲೆಯ ಗಣೇಶ ಸೋಮಯಾಜಿ, ಜಿ.ಕಂದನ್, ಪೆರುಮುಡೆ ಮತ್ತು ಮೋಹನ್‌ಕುಮಾರ್, ಹಾಸನದ ಎಚ್.ಎಸ್.ಮಂಜುನಾಥ್, ತುಮಕೂರಿನ ಮಲ್ಲಪ್ಪ ಎಸ್.ಹಳ್ಳಿ, ಕೊಡಗಿನ ಬಿ.ಆರ್.ಸತೀಶ್ ಮತ್ತು ಪ್ರಸನ್ನಕುಮಾರ್, ಉಡುಪಿಯ ಬಸವರಾಜು ಕುತ್ತನಿ, ಭೀಮಣ್ಣ ಬೀರಾದಾರ್, ಚಿಕ್ಕಬಳ್ಳಾಪುರದ ಮೊಹಮ್ಮದ್, ತಮಿಳುನಾಡಿನ ಎಸ್.ರವಿರಾಜ್ ಹಾಗೂ ಎಸ್.ಮುರುಗೇಶನ್ ಮೊದಲಾದ ಕಲಾವಿದರು ಇಲ್ಲಿ ಪಾಲ್ಗೊಂಡಿದ್ದಾರೆ. ನಾಡಿನ ಖ್ಯಾತ ಚಿತ್ರಕಲಾವಿದರಾದ ಎಚ್.ಎನ್. ಸುರೇಶ್ ಶಿಬಿರದ ಮಾರ್ಗದರ್ಶಕರಾಗಿದ್ದಾರೆ.ಇದು ಕೇವಲ ಮೂರು ದಿನಗಳ ಶಿಬಿರವಾದ್ದರಿಂದ ಬಹುತೇಕ ಕಲಾವಿದರು ಜಲವರ್ಣ ಮತ್ತು ಅಕ್ರಿಲಿಕ್ ಬಣ್ಣವನ್ನು ಉಪಯೋಗಿಸಿ ಚಿತ್ರ ರಚಿಸುತ್ತಿದ್ದಾರೆ. ಸುತ್ತಲಿನ ನದಿ, ಜಲಪಾತಗಳ ತಾಣವನ್ನು ಅರಸಿಕೊಂಡು ಹೋಗಿ ಅಲ್ಲಿಯೇ ಕುಳಿತು ಕಲಾಕೃತಿಯನ್ನು ಮೂಡಿಸುತ್ತಿರುವುದು ಕಂಡು ಬಂದಿತು.ಸುತ್ತಲೂ ಹರಡಿರುವ ಪ್ರಕೃತಿಯ ರಮಣೀಯತೆಯು ಇವರ ಕುಂಚಗಳಲ್ಲಿ ಅದ್ಭುತವಾಗಿ ಮೂಡಿ ಬರುವ ದೃಶ್ಯವನ್ನು ವೀಕ್ಷಿಸುವುದು ಆನಂದ ನೀಡುತ್ತದೆ. ವಿವಿಧ ಬಣ್ಣಗಳನ್ನು ನೀರಿನೊಂದಿಗೆ ಹದವಾಗಿ ಬೆರೆಸಿ ಪ್ರತಿಯೊಬ್ಬರೂ ತಮ್ಮದೇ ಆದ ವಿಧಾನ ಬಳಸಿ ಕಾಗದದ ಮೇಲೆ ನಿಸರ್ಗದ ಮಾಯೆಯನ್ನು ಮೂಡಿಸುವ ಕಲೆ ವಿಸ್ಮಯ ಹುಟ್ಟಿಸುತ್ತದೆ. ಬಯಲು ಪ್ರದೇಶದಿಂದ ಬಂದಿರುವ ಕಲಾವಿದರಿಗೆ ಇಲ್ಲಿನ ನಿಸರ್ಗ ಮೋಡಿ ಮಾಡಿಬಿಟ್ಟಿದೆ. ಇಂತಹ ಪ್ರಕೃತಿಯ ಸೊಬಗಿನ ನಡುವೆ ಚಿತ್ರ ರಚಿಸುವುದು ಬಹಳ ಚೇತೋಹಾರಿಯಾದ ಅನುಭವ ಎಂದು ಶಿಬಿರದಲ್ಲಿ ಪಾಲ್ಗೊಂಡ ಕಲಾವಿದರು ಹೇಳುತ್ತಾರೆ.ಪಟ್ಟಣದಿಂದ ಬಹುದೂರ ಇರುವ ಈ ಕುಗ್ರಾಮದಲ್ಲಿ ಯಾವುದೇ ಹೆಚ್ಚಿನ ಸೌಲಭ್ಯಗಳು ಇಲ್ಲವಾದರೂ ಇಲ್ಲಿನ ಗಿಡಮರಗಳು ಮತ್ತು ನದಿ ತೊರೆಗಳು ಇವರನ್ನು ಕಲಾಕೃತಿಯ ರಚನೆಯಲ್ಲಿ ತೊಡಗಿಸಿವೆ. ಶೆಡ್ ಒಂದರ ಕೆಳಗಡೆ ಹಾಕಿದ ಟೆಂಟ್‌ಗಳಲ್ಲಿ ವಾಸಿಸುವ ಕಲಾವಿದರು, ಹೊಸ ಸ್ಫೂರ್ತಿಯಿಂದ ಹಾಗೂ ತನ್ಮಯತೆಯಿಂದ ಚಿತ್ರಕಲೆಯಲ್ಲಿ ತಲ್ಲೆನರಾಗಿದ್ದಾರೆ. ಈಗಾಗಲೇ ಹಲವು ಕಲಾವಿದರು 2-3 ಕಲಾಕೃತಿಗಳನ್ನು ರಚಿಸಿ ಬಿಟ್ಟಿದ್ದಾರೆ. ಮೂರು ದಿನಗಳ ಪರಿಶ್ರಮದಿಂದ ಅರಳಿ ಬರುವ ಚಿತ್ರಗಳು ಸಹೃದಯರಿಗೆ ಆನಂದ ನೀಡುವುದರಲ್ಲಿ ಸಂಶಯವಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.