ಶುಕ್ರವಾರ, ಏಪ್ರಿಲ್ 16, 2021
31 °C

ಕಲಾವಿದರ ಕೈಯಲ್ಲಿ ಅರಳಿದ ಚಿತ್ರಾಂಕನ

ಸುಭಾಸ.ಎಸ್.ಮಂಗಳೂರ Updated:

ಅಕ್ಷರ ಗಾತ್ರ : | |

ಮೈಸೂರು: ‘ನಾನು ರಚಿಸಿರುವ ಕಲಾಕೃತಿಗಳು ಅಮೆರಿಕಾ, ಲಂಡನ್‌ಗಳಲ್ಲಿ ಮಾರಾಟವಾಗಿವೆ. ಇಲ್ನೋಡಿ, ಇಂಗ್ಲಿಷ್ ಪುಸ್ತಕದಲ್ಲಿ ನನ್ನ ಹೆಸರಿದೆ’ -ಹೀಗೆಂದು ‘ಆತ್ಮ’ವಿಶ್ವಾಸದಿಂದ ಹೇಳಿದವರು ಕಲಾವಿದ  ಆತ್ಮದಾಸ್ ಮಾಣಿಕ್‌ಪುರಿ. ನಗರದ ಕಾವಾದಲ್ಲಿ ನಾಗಪುರದ ಸೌತ್ ಜೋನ್ ಕಲ್ಚರ್ ಸೆಂಟರ್, ಸಂಸ್ಕೃತಿ ಮಂತ್ರಾಲಯ ಮತ್ತು  ಭಾರತ ಸರ್ಕಾರದ ಸಹಯೋಗದಲ್ಲಿ ಆಯೋಜಿಸಿರುವ 10 ದಿನಗಳ ಕಲಾ ಶಿಬಿರದಲ್ಲಿ ಭಾಗವಹಿಸಿರುವ  ‘ಆತ್ಮ’ದಾಸ್ ಮೊಗದಲ್ಲಿ ಮಂದಹಾಸ ಮೂಡಿತ್ತು.ಛತ್ತೀಸ್‌ಗಡ್ ರಾಜ್ಯದ ಉದಯಪುರದ ಮೂಲದ ಆತ್ಮದಾಸ್ ‘ಭಿತ್ತಿಚಿತ್ರ’ದಲ್ಲಿ ಎತ್ತಿದ ಕೈ. ಇವರು ರಚಿಸಿರುವ ಕಲಾಕೃತಿಗಳು ಈಗಾಗಲೇ ಅಮೆರಿಕಾ, ಲಂಡನ್ ತಲುಪಿ ಭರ್ಜರಿ ಮಾರಾಟ ಕಂಡಿವೆ. ಕಳೆದ   25 ವರ್ಷಗಳಿಂದ ಛತ್ತೀಸ್‌ಗಡ್‌ದ ಪಾರಂಪರಿಕ ಭಿತ್ತಿಚಿತ್ರ ಕಲೆಯನ್ನು ಇತರರಿಗೆ ಪರಿಚಯಿಸುವ ಕೆಲಸದಲ್ಲಿ ‘ಆತ್ಮ’ದಾಸ್ ತೊಡಗಿಸಿಕೊಂಡಿದ್ದಾರೆ. ಮಿಟ್ಟಿ (ಮಣ್ಣು), ಸೆಣಬು ಮತ್ತು ಬಣ್ಣಗಳನ್ನು ಬಳಸಿ ದೇಸಿ ಸೊಗಡನ್ನು ಫಲಕಗಳ ಮೇಲೆ ಬಿಡಿಸಿದ್ದಾರೆ.

 

ಕಲಾಕೃತಿಯೊಂದು ಛತ್ತೀಸ್‌ಗಡ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರೂ. 5 ರಿಂದ 10 ಸಾವಿರವರೆಗೆ  ಮಾರಾಟವಾಗುತ್ತವೆ. ಅಮೆರಿಕಾದಲ್ಲಿ ಮಾತ್ರ ರೂ.15 ರಿಂದ 20 ಸಾವಿರ’ ಎಂದು ಮುಗುಳ್ನಗುತ್ತಾರೆ. ಇನ್ನು, ಹತ್ತನೇ ತರಗತಿ ಓದಿರುವ ಆಂಧ್ರಪ್ರದೇಶದ ಲಕ್ಷ್ಮಣ ಮತ್ತು ಮುನಿಬಾಬು ಅವರ ‘ಕಲಂಕಾರಿ’ ಕಲೆಯನ್ನು ನೋಡುವುದೇ ಕಣ್ಣಿಗೆ ಹಬ್ಬ. ಪಾರಂಪರಿಕ ಶೈಲಿಯಲ್ಲಿ ಕಳೆದ ಹತ್ತು ವರ್ಷಗಳಿಂದ  ಚಿತ್ರ ಬಿಡಿಸುತ್ತಿರುವ ಕಲಾವಿದರಲ್ಲಿ ಸಂತೃಪ್ತಿಯ ಭಾವ.ಹೊಯ್ಸಳ ಕಲೆಯಲ್ಲಿ ತಲ್ಲೆನರಾಗಿದ್ದ ಬೆಳಗಾವಿ ಮೂಲದ ರಾಘವೇಂದ್ರ ಚಿತ್ರಗಾರ, ‘ಕಳೆದ ಹಲ ವಾರು ವರ್ಷಗಳಿಂದ ಹೊಯ್ಸಳ ಕಲೆಯ ಚಿತ್ರಗಳನ್ನು ಬಿಡಿಸುತ್ತಿದ್ದೇನೆ. ಮೂಲತಃ ನಮ್ಮದು ಕಲಾವಿದರ  ಕುಟುಂಬ. ಶಿಲಾಬಾಲಿಕೆಯರ ಚಿತ್ರಗಳನ್ನು ಮೊದಲು ಕಾರ್ಡ್‌ಶೀಟ್ ಮೇಲೆ ಬಿಡಿಸಿ, ಅದನ್ನೇ ಕಲ್ಲು  ಮತ್ತು ಮರದಲ್ಲಿ ಕೆತ್ತನೆ ಮಾಡುತ್ತೇನೆ’ ಎಂದು ತಿಳಿಸಿದರು. ಪಶ್ಚಿಮ ಬಂಗಾಳದ ಇಂದ್ರಾಣಿ ಗೋಸ್ವಾಮಿ, ಮೈಸೂರಿನ ಮೀರಾದೇವಿ, ಲಕ್ನೋದ ವಿಶಾಲ್ ಯಾದವ್, ರವಿಕುಮಾರ್, ಮನಾಕಿ ಬಾಪು ಸೇರಿದಂತೆ 20ಕ್ಕೂ ಹೆಚ್ಚು ಕಲಾವಿದರು ತಮ್ಮ ತಮ್ಮ ರಾಜ್ಯಗಳ ಪಾರಂಪರಿಕ ಕಲೆಗೆ ‘ಕುಂಚ ಸ್ಪರ್ಶ’ ನೀಡುವಲ್ಲಿ ನಿರತರಾಗಿದ್ದಾರೆ.10 ದಿನಗಳ ಕಾರ್ಯಾಗಾರ

ನಾಗಪುರದ ಸೌತ್ ಜೋನ್ ಕಲ್ಚರ್ ಸೆಂಟರ್, ಸಂಸ್ಕೃತಿ ಮಂತ್ರಾಲಯ ಮತ್ತು ಭಾರತ ಸರ್ಕಾರ ಹಾಗೂ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿ (ಕಾವಾ) ಸಹಯೋಗದಲ್ಲಿ ಆಯೋಜಿಸಿರುವ ಚಿತ್ರಾಂಕನ ಕಾರ್ಯಾಗಾರವು ಮಾ.12 ರಿಂದ 21ರ ವರೆಗೆ ಜರುಗಲಿದೆ. ರಾಜ್ಯದ ವಿವಿಧ ಭಾಗಗಳ ವಿಭಿನ್ನ ಶೈಲಿ, ಪರಂಪರೆ, ಬುಡಕಟ್ಟು ಶೈಲಿಯ ಚಿತ್ರಕಲೆಯನ್ನು, ಕಲಾವಿದರನ್ನು ಪರಿಚಯಿಸುವ ಹಾಗೂ ಕಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಮಾ. 21ರಂದು ಕಲಾವಿದರು ಬಿಡಿಸಿರುವ ಚಿತ್ರಗಳ ಪ್ರದರ್ಶನ ಹಮ್ಮಿಕೊಳ್ಳಲು ಸಂಘಟಕರು ನಿರ್ಧರಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.