ಸೋಮವಾರ, ಏಪ್ರಿಲ್ 19, 2021
23 °C

ಕಲಾವಿದ ಕಂಡ ಹಳ್ಳಿ ಸೊಗಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಇಂದು ಐಟಿಬಿಟಿಗಳ ಹಾವಳಿಯಿಂದ ಹಳ್ಳಿಯ ಸೊಗಡು ಕಾಣೆಯಾಗಿದೆ. ಸರ್ಕಸ್‌ನಲ್ಲಿ ಪ್ರಾಣಿಗಳನ್ನು ನೋಡಿದ ಹಾಗೇ ಇಂದು ಜಾನಪದ ಕಲಾವಿದರನ್ನು ನೋಡುತ್ತಾರೆ. ನನ್ನ ಕಲಾಕೃತಿಗಳು ಹಳ್ಳಿಜೀವನ, ಅಲ್ಲಿಯ ಕಲೆ, ಸಂಸ್ಕೃತಿಗಳ ಮೇಲೆ ಬೆಳಕು ಚೆಲ್ಲುತ್ತವೆ. ಹಳ್ಳಿಗರು ಮುಗ್ಧರಾದರೂ ಅದಮ್ಯವಾದ ಜೀವನಪ್ರೀತಿ ಇರುತ್ತದೆ. ಸ್ವಾರ್ಥದ ಪರದೆ ಅಲ್ಲಿ ಕಡಿಮೆ~ ಎಂದರು ಚಿತ್ರಕಲಾವಿದ ಕೆ.ವಿ. ಶಂಕರ್.

ಗ್ರಾಮೀಣ ಭಾರತವನ್ನೇ ಕುಂಚದಲ್ಲಿ ಅಭಿವ್ಯಕ್ತಿಗೊಳಿಸುತ್ತಾ ಅದರಲ್ಲೇ ತನ್ನ ಸೃಜನಶೀಲತೆಯನ್ನು ಅನಾವರಣ ಮಾಡುವ ಶಂಕರ್ ತವರು ಹುಬ್ಬಳ್ಳಿ. ಅವರ ಕಲಾಕೃತಿಗಳಲ್ಲಿ ಹುಬ್ಬಳ್ಳಿಯ ಪರಿಸರ, ಜನಜೀವನದ ನಾನಾ ಮುಖಗಳು ಜೀವಪಡೆದಿವೆ. ಅವರೇ ಹೇಳುವಂತೆ, ಒಂದೊಂದು ಕಲಾಕೃತಿಯಲ್ಲೂ, ಅದರ ಬಣ್ಣಗಳಲ್ಲೂ ತಮ್ಮ ಬದುಕಿನ ಚಿತ್ರಣವನ್ನೇ ಪಡಿಮೂಡಿಸುವ ಪ್ರಯತ್ನ ಕಾಣುತ್ತದೆ.

`ಬಾಲ್ಯದಿಂದಲೂ ಕಲೆಯ ಕಡೆಗೆ ಒಲವಿತ್ತು. ಆದರೆ ಅದಕ್ಕೆ ಪ್ರೋತ್ಸಾಹ ನೀಡಿದ್ದು ನನ್ನ ಶಿಕ್ಷಕರು. ಕಲೆ ಎಂದರೆ ಕೇವಲ ಮನರಂಜನೆ ಅಲ್ಲ. ಜನರನ್ನು ಆಕರ್ಷಿಸುವ ತಂತ್ರವಷ್ಟೇ ಅಲ್ಲ. ಕಲೆಯ ಮೂಲಕ ಒಂದು ಸಂದೇಶ ನೀಡಬೇಕು. ಆ ಸಂದೇಶ ಜನರಿಗೆ ತಲುಪಿದಾಗ ಮಾತ್ರ ಕಲೆಗೆ, ಕಲಾವಿದನಿಗೆ ತೃಪ್ತಿ. ಸುಮ್ಮನೆ ಏನೋ ಒಂದು ಗೆರೆ ಎಳೆದು ನೋಡುಗರಿಗೆ ಗೊಂದಲ ಮೂಡಿಸುವುದಕ್ಕಿಂತ ಆ ಕಲೆ ಏನು? ಅದು ಏನು ಹೇಳಹೊರಟಿದೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳುವಂತಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ತನ್ನ ರಚನೆ ಸ್ವತಃ ಕಲಾವಿದನಿಗೆ ತೃಪ್ತಿ ನೀಡಬೇಕು~ ಎಂಬುದು ಅವರ ವಿವರಣೆ.

ಶಂಕರ್ ಅವರ ಕಲಾಕೃತಿಗಳು ನೋಡುಗರಿಗೆ ಸುಲಭವಾಗಿ, ಸರಳವಾಗಿ ಅರ್ಥೈಸಿಕೊಳ್ಳುವಂತಿವೆ. ಹೂ ಮಾರುವ ಹುಡುಗಿಯ ಮುಗ್ಧತೆ ಒಂದು ಕಡೆಯಾದರೆ, ಎಳನೀರು ಮಾರುತ್ತಾ ಕುಳಿತಿರುವ ವ್ಯಕ್ತಿ ಇನ್ನೊಂದೆಡೆ, ಟೊಂಕದಲ್ಲಿ ಮಗುವನ್ನು ಎತ್ತಿಕೊಂಡಿರುವ ತಾಯಿ ತನ್ನ ಮಗುವಿಗೆ ಪ್ರೀತಿಯ ಧಾರೆ ಎರೆದಿರುವ ಕಲಾಕೃತಿ... ಹೀಗೆ ಬದುಕಿನ ಚಿತ್ರಣಗಳನ್ನೇ ಕ್ಯಾನ್ವಾಸ್‌ನೊಳಗೆ ಹಿಡಿದಿಟ್ಟಿರುವ ಶಂಕರ್ ಪ್ರಯತ್ನಗಳು ಒಂದಕ್ಕಿಂತ ಒಂದು ಪೈಪೋಟಿಗಿಳಿಯುವಂತಿವೆ.

ಶಂಕರ್ ಕಲಾಕೃತಿಗಳ ಪ್ರದರ್ಶನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಇಂದಿನಿಂದ ಒಂದು ವಾರ (ಜುಲೈ 10ರಿಂದ 16) ನಡೆಯಲಿದೆ. ಸಮಯ: ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.