ಸೋಮವಾರ, ಮೇ 17, 2021
26 °C

ಕಲಿಯಬೇಕಾದ ಪಾಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದ ವಿವಿಧ ರಾಜ್ಯಗಳ ನಾಲ್ಕು ಲೋಕಸಭೆ ಹಾಗೂ ಆರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣಾ ಫಲಿತಾಂಶ ಕಾಂಗ್ರೆಸ್‌ಗೆ ಕಷ್ಟಕಾಲದಲ್ಲಿ ಇನ್ನಷ್ಟು ಕಹಿ ಉಣಿಸಿದೆ.ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಸಿದ್ಧತೆಗಳು ಆರಂಭವಾಗಿರುವ ಹೊತ್ತಲ್ಲಿ ಹೀನಾಯ ಸೋಲು ಕಂಡಿರುವುದು ಆ ಪಕ್ಷದ ಭವಿಷ್ಯದ ಬೆಳಕನ್ನು ಮತ್ತಷ್ಟು ಮಸುಕಾಗಿಸಿದೆ. ನಾಲ್ಕೂ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮಣ್ಣು ಮುಕ್ಕಿದ್ದು, ಮಹಾರಾಷ್ಟ್ರದ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಜಯ ಗಳಿಸಿದೆ.ಗುಜರಾತ್‌ನಲ್ಲಿ ಎರಡು ಲೋಕಸಭಾ ಕ್ಷೇತ್ರ ಹಾಗೂ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪ್ರಾತಿನಿಧ್ಯವನ್ನು ಕಾಂಗ್ರೆಸ್ ಕೈಯಿಂದ ಬಿಜೆಪಿ ಕಸಿದುಕೊಂಡಿದೆ. ಹತ್ತಾರು ಹಗರಣಗಳ ಸುಳಿಗೆ ಸಿಲುಕಿ ಮಂಕಾಗಿರುವ ಕೇಂದ್ರದ ಯು.ಪಿ.ಎ ಸರ್ಕಾರಕ್ಕೆ ಈ ಫಲಿತಾಂಶ ಆಘಾತ ನೀಡಿದೆ.ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನೂರಕ್ಕೆ ನೂರರಷ್ಟು ಗೆಲುವು ದಾಖಲಿಸಿ ಬಂಪರ್ ಬೆಳೆ ಪಡೆದ ಖುಷಿಯಲ್ಲಿದ್ದಾರೆ. ಗೋವಾದಲ್ಲಿ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮೋದಿ ಅವರಿಗೆ ಮಹತ್ವದ ಸ್ಥಾನ ದೊರೆಯಲಿದೆ ಎಂಬ ನಿರೀಕ್ಷೆಗಳ ನಡುವೆ ಹೊರಬಿದ್ದ ಈ ಉಪಚುನಾವಣೆ ಫಲಿತಾಂಶ ಅವರ ವರ್ಚಸ್ಸು ಹೆಚ್ಚಿಸಿದೆ.ರಾಷ್ಟ್ರ ರಾಜಕಾರಣದಲ್ಲಿ ಅವರ ಪಾತ್ರದ ಕುರಿತು ಕಾರ್ಯಕಾರಿಣಿಯಲ್ಲಿ ಚರ್ಚಿಸಲು ಈ ಗೆಲುವು ಮತ್ತಷ್ಟು ಇಂಬು ನೀಡಲಿದೆ. ಆದರೆ, ಬಿಹಾರದ ಮಹಾರಾಜಗಂಜ್ ಲೋಕಸಭಾ ಕ್ಷೇತ್ರದಲ್ಲಿ ಮಿತ್ರಪಕ್ಷ ಜೆಡಿ(ಯು) ಅಭ್ಯರ್ಥಿ 1.37 ಲಕ್ಷ ಮತಗಳ ಭಾರಿ ಅಂತರದಿಂದ ಸೋತಿರುವುದು ಜೆಡಿ(ಯು) ಜತೆಗೆ ಬಿಜೆಪಿಗೂ ಎಚ್ಚರಿಕೆಯ ಗಂಟೆ. ಮೋದಿ ನೆರಳು ಸೋಕಿದರೂ ಸಿಡಿಮಿಡಿಗೊಳ್ಳುವ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರಿಗೆ ಈ ಸೋಲು ಮುಜುಗರ ತಂದಿದೆ.ನಿತೀಶ್ ಮತ್ತು ಮೋದಿ ಜಗಳ ಲೋಕಸಭಾ ಚುನಾವಣೆ ವೇಳೆಗೆ ಯಾವ ತಿರುವು ಪಡೆಯುವುದೋ ಎಂಬ ಆತಂಕ ಉಭಯ ಪಕ್ಷಗಳ ಮುಖಂಡರನ್ನೂ ಕಾಡುತ್ತಿದೆ. ನಿತೀಶ್‌ರನ್ನು ಒಲಿಸಿಕೊಳ್ಳಲು ಕಾಂಗ್ರೆಸ್ ಒಳಗೊಳಗೇ ಪ್ರಯತ್ನ ನಡೆಸಿರುವುದು ಬಿಜೆಪಿಗೆ ಚಿಂತೆಯ ಸಂಗತಿಯೇ. ನೆಲೆ ಕಳೆದುಕೊಂಡು ಕಂಗೆಟ್ಟಿದ್ದ ಆರ್‌ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಅವರಿಗೆ ಮಹಾರಾಜಗಂಜ್ ಕ್ಷೇತ್ರದ ಗೆಲುವು ವಿಶ್ವಾಸ ಚಿಗುರಲು ಸಹಕಾರಿ ಆಗಬಹುದು.ಯಾವುದೇ ಉಪಚುನಾವಣೆ ಫಲಿತಾಂಶವನ್ನು ಮತದಾರರ ಒಲವುನಿಲುವುಗಳ ದ್ಯೋತಕ, ದಿಕ್ಸೂಚಿ ಎಂದು ಹೇಳಲಾಗದು. ಆದರೆ, ಗೆಲುವು ಗೆಲುವೇ. ಅದರಿಂದ ಪಕ್ಷದ ಕಾರ್ಯಕರ್ತರ ಆತ್ಮಸ್ಥೈರ್ಯ ಹೆಚ್ಚುವುದಂತೂ ದಿಟ. ಜನಸಾಮಾನ್ಯರ ಮನಸ್ಸಿನ ಮೇಲೂ ಸಣ್ಣ ಮಟ್ಟದಲ್ಲಿ ಪರಿಣಾಮ ಬೀರುವುದನ್ನು ಅಲ್ಲಗಳೆಯಲಾಗದು. ಪ್ರತಿ ಚುನಾವಣೆಯೂ ಪಕ್ಷಗಳಿಗೆ ಒಂದು ಪಾಠ. ಅದರಿಂದ ಕಲಿಯಬೇಕಾದುದು ಇದ್ದೇ ಇರುತ್ತದೆ. ಈ ಚುನಾವಣೆ ಕೂಡ ಅದಕ್ಕೆ ಹೊರತಲ್ಲ. ಮುಖ್ಯವಾಗಿ ಕಾಂಗ್ರೆಸ್ ಮತ್ತು ಜೆಡಿ (ಯು) ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.