ಭಾನುವಾರ, ಮಾರ್ಚ್ 26, 2023
31 °C

ಕಲೆಗಳ ಸಾಗರ

ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

ಕಲೆಗಳ ಸಾಗರ

ಉದ್ಯಾನ ನಗರಿಯಲ್ಲಿ ಕರಕುಶಲ ಮೇಳಗಳಿಗಳೇನು ಕೊರತೆ ಇಲ್ಲ. ಆದರೆ ಅಂಜತಾ ಹೋಟೆಲ್ ಸಮೀಪದ ಆಶ್ಲೆಯನ್ ರಸ್ತೆಯಲ್ಲಿ ಹಂಡ್ರೆಡ್ ಹ್ಯಾಂಡ್ಸ್ ನಡೆಸುತ್ತಿರುವ `ಕರಕುಶಲ ಮೇಳ~ ತುಸು ವಿಭಿನ್ನ. ಇಲ್ಲಿ  ಮಾರಾಟ ಅಷ್ಟೇ ಅಲ್ಲದೇ, ಆಸಕ್ತರಿಗೆ ತರಬೇತಿಯೂ ಇದೆ.ಒಂದು ಪುಸ್ತಕ. ಅದನ್ನು ಬಿಡಿಸಿದರೆ ಪ್ರತಿ ಹಾಳೆಯಲ್ಲೂ ಒಂದೊಂದು ಚಿತ್ರ. ಮಕ್ಕಳಿಗೆ ಕರಕುಶಲ ಕಲೆಯನ್ನು ಪರಿಚಯಿಸುವ ಆ ಪುಸ್ತಕದ ಕತೃ ಉದಯಪುರದ ಯುವತಿ ಅದಿತಿ. ಪುಸ್ತಕಕ್ಕೆ ವೈವಿಧ್ಯಮಯ ಬೈಂಡ್ ಮಾಡುವುದರಲ್ಲಿ ಈಕೆ ಪರಿಣಿತೆ.ಪುಸ್ತಕದಲ್ಲೇ ವೈವಿಧ್ಯಮಯ ಕಲಾಕೃತಿಗಳನ್ನು ಸೃಷ್ಟಿಸುವ ಚತುರೆ. ಮುಂಬೈನ ಐಐಟಿ ಯಿಂದ  `ದೃಶ್ಯ ಸಂವಹನ~ದಲ್ಲಿ ಪದವಿ ಪಡೆದು ಮಕ್ಕಳಿಗೆ ನೆರವಾಗುವ ಶೈಕ್ಷಣಿಕ ಪರಿಕರಗಳನ್ನು ತಯಾರಿಸುತ್ತಾರೆ. ಅವರು ಸಿದ್ಧಪಡಿಸುವ ವಸ್ತುಗಳು ಒಂದಕ್ಕಿಂತ ಒಂದು ವಿಭಿನ್ನ...!ಬೆಂಗಳೂರಿನ ಹಂಡ್ರೆಡ್ ಹ್ಯಾಂಡ್ಸ್ ಸ್ವಯಂ ಸೇವಾ ಸಂಸ್ಥೆ ಆಯೋಜಿಸಿರುವ `ಕರಕುಶಲ~ ಮೇಳದಲ್ಲಿ, ಅದಿತಿ ಮಾತ್ರವಲ್ಲದೆ ಮಧ್ಯಪ್ರದೇಶದ ಆದಿವಾಸಿ ಕಲಾವಿದ ವೆಂಕಟ್ ರಾಮನ್ ಸಿಂಗ್, ಬೆಂಗಳೂರಿನ ನೈಲ್ಸ್ ಮತ್ತು ಸ್ಟ್ರಿಂಗ್ ಆರ್ಟಿಸ್ಟ್ ಪ್ರಿಯಾಂಕ ಸಿಕ್ಕ, ಶಿವಮೊಗ್ಗ ಜಿಲ್ಲೆಯ ಬಂದಗದ್ದೆ ರಾಧಾಕೃಷ್ಣ, ತುಮಕೂರಿನ ಕಾಂತರಾಜು, ಕೇರಳದ ಕುಟ್ಟಿ, ನಾಯರ್... ಹೀಗೆ ಹತ್ತಾರು ಕಲಾವಿದರು ತಮ್ಮ ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ.ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಕಲ್ಪಿಸುವ ಹಾಗೂ ಗ್ರಾಹಕರು ಇಷ್ಟಪಡುವ ವಸ್ತುಗಳನ್ನು ಪೂರೈಸುವ ಸಲುವಾಗಿ ಈ ಮೇಳವನ್ನು ಆಯೋಜಿಸಲಾಗಿದೆ.ಒಂದು ವಿಭಿನ್ನ ಪ್ರಯತ್ನ :`ಇದು ಒಂದು ವಿಭಿನ್ನ ಪ್ರಯತ್ನ. ಕುಶಲಕರ್ಮಿಗಳು ಮತ್ತು ಗ್ರಾಹಕರ ನಡುವೆ ನೇರ ಸಂವಾದ ಏರ್ಪಡಿಸುವುದಕ್ಕಾಗಿ ಈ ಮೇಳ ಆಯೋಜಿಸಿದ್ದೇವೆ~ ಎನ್ನುತ್ತಾರೆ ಹಂಡ್ರೆಡ್ ಹ್ಯಾಂಡ್ ಸಂಸ್ಥೆಯ ಸಂಸ್ಥಾಪಕ ಟ್ರಸ್ಟ್ರೀ ಮಾಲಾ ಮಾಧವನ್.

 

ಮೇಳಕ್ಕೆ ಕೇವಲ ವಸ್ತುಗಳನ್ನು ಮಾರುವುದಕ್ಕಷ್ಟೇ ಸೀಮಿತವಾಗಿಲ್ಲ. ನಗರದ ಆಸಕ್ತ ನಾಗರಿಕರಿಗೆ ಕರಕುಶಲ ಕಲೆಯ ತರಬೇತಿ ನೀಡುವುದು, ಕರಕುಶಲ ಕರ್ಮಿಗಳಿಗೆ ಉದ್ಯೋಗ ಕಲ್ಪಿಸುವುದು, ಅವರ ವಸ್ತುಗಳಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶವಿದೆ.`ಮೂರು ದಿನಗಳಿಂದ ನಡೆಯುತ್ತಿರುವ ಈ ಮೇಳದಲ್ಲಿ ಆ ಉದ್ದೇಶ ಈಡೇರಿದೆ. ಬಹಳಷ್ಟು ಬೆಂಗಳೂರು ನಾಗರಿಕರಿಗೆ ನಮ್ಮ ಹಸೆ ಚಿತ್ತಾರಗಳು ಇಷ್ಟವಾಗಿವೆ~ ಎನ್ನುವ ಕಲಾವಿದ ಬಂದಗದ್ದೆ ರಾಧಾಕೃಷ್ಣ ಅವರು, ಬೇವು, ಮಲ್ಲಿಗೆ, ಮಣ್ಣು ಹಾಗೂ ಇನ್ನಿತರ ವಸ್ತುಗಳಿಂದ `ಸ್ವಾಭಾವಿಕ ಬಣ್ಣಗಳನ್ನು~ ತಯಾರಿಸಿ ಚಿತ್ರಗಳನ್ನು ಬಿಡಿಸಿದ್ದಾರೆ.

 

ತುಮಕೂರಿನ ಕಾಂತರಾಜು ಅವರು ಮನೆಯ ಮೂಲೆಯಲ್ಲಿರುವ ಕಬ್ಬಿಣದ ಪೆಟ್ಟಿಗೆಗಳಿಗ ಹಸೆ ಚಿತ್ತಾರಗಳನ್ನು ಬಿಡಿಸುವ ಮೂಲಕ ಗ್ರಾಮೀಣ ಕಲೆಗೆ ಜೀವ ತುಂಬಿದ್ದಾರೆ.

 

ಮೇಳದಲ್ಲಿ ವೈವಿಧ್ಯಮಯ ಹ್ಯಾಂಡ್‌ಮೇಡ್ ಪೇಪರ್‌ಗಳನ್ನು ಕೇರಳದ ಕಲಾವಿದರು ಪ್ರದರ್ಶಿಸಿದ್ದಾರೆ. ಬೋನ್ಸಾಯ್ ಗಿಡಗಳಿವೆ. ಓಡಿಶಾ, ಮಧ್ಯಪ್ರದೇಶ, ಗುಡ್ಡಗಾಡು ರಾಜ್ಯಗಳ ಬುಡಕಟ್ಟು ಜನಾಂಗದವರ ಕಲೆಯನ್ನು ಪ್ರದರ್ಶಿಸುವ ಪೇಂಟಿಂಗ್‌ಗಳಿವೆ.ಬೆಂಗಳೂರಿನ ಪ್ರಿಯಾಂಕ ಸಿಕ್ಕಾ ಅವರು `ಮೊಳೆ- ದಾರ~ದ ಚಿತ್ರಕಲೆಯನ್ನು ಈ ಮೇಳದಲ್ಲಿ ಸ್ಪರ್ಧೆ ರೀತಿಯಲ್ಲಿ ಬಳಸಿದ್ದಾರೆ. ಆಸಕ್ತರು, ಈ ಮೊಳೆ-ದಾರದ ಆಟದಲ್ಲಿ ಪಾಲ್ಗೊಂಡು ಚಿತ್ರಗಳನ್ನು ರಚಿಸಬಹುದು.ಹಂಡ್ರೆಡ್ ಹ್ಯಾಂಡ್ಸ್ ಸಂಸ್ಥೆಯಲ್ಲಿ 50ಕ್ಕೂ ಹೆಚ್ಚು ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ತರಬೇತಿ ನೀಡುತ್ತಾರೆ. ದೇಶದ ವಿವಿಧ ಕಡೆಯಿರುವ ಕಲಾವಿದರಿಗೆ ಪ್ರಸ್ತುತ ಮೇಳ ನಡೆಯುತ್ತಿರುವ ಅಂಗಳವೇ `ಉದ್ಯಾನ ನಗರಿಯ ಕಾಯಂ~ ವಿಳಾಸವಾಗಿದೆ.

 

`ಕಲಾವಿದ ಸಮುದಾಯಕ್ಕೆ ಉತ್ತಮ ವೇದಿಕೆ ಕಲ್ಪಿಸಿಕೊಡಬೇಕೆಂಬ ನಮ್ಮ ಸಂಸ್ಥೆಯ ಉದ್ದೇಶ ಈಡೇರಿದೆ. ಅದಕ್ಕೆ ಸಾಕ್ಷಿ ಈ ಮೇಳಕ್ಕೆ ಸಿಕ್ಕಿರುವ ಪ್ರತಿಕ್ರಿಯೆ~ ಎನ್ನುತ್ತಾರೆ ಮಾಲಾ ಮಾಧವನ್.ಸ್ಥಳ: ಎಂ.ಜಿ ರಸ್ತೆಯ ಹಿಂಬದಿಯಲ್ಲಿರುವ ಅಜಂತಾ ಹೋಟೆಲ್ ಪಕ್ಕದ ಆಶ್ಲೆಯನ್ ರಸ್ತೆ. ಮೇಳ ಭಾನುವಾರ ಮುಕ್ತಾಯ.ಮಾಹಿತಿಗೆ: 98450 08482.


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.