ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಯಲ್ಲಿ ಕರಗಿದ ವೈಮನಸ್ಸು

ಒಂದಾದ ಚಿಟ್ಟಾಣಿ– ನೆಬ್ಬೂರ ಜೋಡಿ, ಸಂತಸದ ಅಲೆ
Last Updated 20 ಏಪ್ರಿಲ್ 2016, 8:09 IST
ಅಕ್ಷರ ಗಾತ್ರ

ಶಿರಸಿ: ಹಿರಿಯ ಯಕ್ಷಗಾನ ಭಾಗವತರ ಹಾಡಿಗೆ ಹಿರಿಯ ಕಲಾವಿದ ಚಿಟ್ಟಾಣಿ ರಾಮ­ಚಂದ್ರ ಹೆಗಡೆ ಹೆಜ್ಜೆ ಹಾಕುವ ಮೂಲಕ ಅರ್ಧ ಶತಮಾನದ ತಣ್ಣನೆಯ ದ್ವೇಷ ಕಲೆಯಲ್ಲಿ ಲೀನವಾಗಿ ಹೋಯಿತು. ಇದಕ್ಕೆ ಸಾಕ್ಷಿಯಾಗಿದ್ದು ಮಂಗಳವಾರ ತಾಲ್ಲೂಕಿನ ಸಂಪಖಂಡದಲ್ಲಿ ನಡೆದ ನಾರಾಯಣ ಭಾಗವತ ಪ್ರತಿಷ್ಠಾನದ ವಾರ್ಷಿಕೋತ್ಸವ.

ನೆಬ್ಬೂರರ ಭಾಗವತಿಕೆಗೆ ಇಳಿವಯಸ್ಸಿನ ಚಿಟ್ಟಾಣಿ ಅವರು ವೇದಿಕೆಯಲ್ಲೇ ಹೆಜ್ಜೆ ಹಾಕಿ ಕುಣಿದರು. ಈ ಸಂದರ್ಭದಲ್ಲಿ ಮಾತನಾಡಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಹಳೆಯ ನೆನಪು ಮೆಲಕು ಹಾಕಿದರು.  ‘ಅಮೃತೇಶ್ವರಿ ಮೇಳದಲ್ಲಿ ನಾನು ಮತ್ತು ನೆಬ್ಬೂರು ಭಾಗವತರು ಒಟ್ಟಾಗಿ ಕೆಲಸ ಮಾಡಿದ್ದೆವು. ನಮ್ಮಿಬ್ಬರ ನಡುವೆ ಬೇಸರವಿರಲಿಲ್ಲ. ಆದರೆ ಜನರೇ ಅಂತರ ಸೃಷ್ಟಿಸಿದ್ದರು. ಈಗಲೂ ಅವರ ಹಾಡಿಗೆ ಕುಣಿಯಬೇಕು ಎಂಬ ಇಚ್ಛೆ ಇದೆ. ಆದರೆ ದೇವರೇ ಅದಕ್ಕೆ ಅವಕಾಶ ಮಾಡಿಕೊಡಬೇಕು’ ಎಂದರು.

ಬಳಿಕ ಮಾತನಾಡಿದ ನೆಬ್ಬೂರು ಭಾಗವತರು ಮಾತನಾಡುವಾಗ ಚಿಟ್ಟಾಣಿ ಅವರ ಸನಿಹಕ್ಕೆ ಬಂದು ’ಕಂಡನು ಮೋಹಿನಿಯ ಭಸ್ಮಾಸುರನು...’ ಹಾಡು­ವಂತೆ ಒತ್ತಾಯಿಸಿದರು. ನಾರಾಯಣ ಭಾಗವತರು ಹಾಡು ಆರಂಭಿಸು­ತ್ತಿದ್ದಂತೆಯೇ ವೇದಿಕೆ­ಯಲ್ಲಿಯೇ ಚಿಟ್ಟಾಣಿ ಹಾಡಿಗೆ ಹೆಜ್ಜೆಹಾಕಿದರು.

ಯಕ್ಷಋಷಿಗೆ ಸನ್ಮಾನ ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ನೆಬ್ಬೂರು ನಾರಾಯಣ ಭಾಗವತರು ಮಾತನಾಡಿ ‘ನಾನು ಮತ್ತು ಹೊಸ್ತೋಟ ಮಂಜುನಾಥ ಭಾಗವತರು ಬಾಲ್ಯದ ಸ್ನೇಹಿತರು. ನಮ್ಮ ಮಧ್ಯೆ ಯಾರಿಗೂ ಬಿರುಕು ಮೂಡಿಸಲು ಸಾಧ್ಯವಿಲ್ಲ’ ಎಂದರು.

ಯಕ್ಷಗಾನ ಕ್ಷೇತ್ರದ ಕಲಾವಿದರಾದ ಭರತೋಟ ಗಣಪತಿ ಭಟ್ಟ, ನರೇಂದ್ರ ಹೆಗಡೆ ಅತ್ತಿಮುರುಡು, ಪ್ರತಿಷ್ಠಾನದ ವತಿಯಿಂದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ನೆಬ್ಬೂರು ನಾರಾಯಣ ಭಾಗವತರ ಹಾಡಿನ ಧ್ವನಿ ಸುರುಳಿ ಬಿಡುಗಡೆ­ಗೊಳಿಸಲಾಯಿತು. ಮಂಚಿಕೇರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಎನ್.­ಹೆಗಡೆ ಗೋರ್ಸಗದ್ದೆ ಮಾತನಾಡಿದರು.

ಯಕ್ಷಗಾನ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಸಲುವಾಗಿ ನೆಬ್ಬೂರು ನಾರಾ­ಯಣ ಭಾಗವತ ಪ್ರತಿಷ್ಠಾನ ಆರಂಭಿಸಿದ ‘ಯಕ್ಷ ಸೌರಭ’ವನ್ನು ಚಿಟ್ಟಾಣಿ ರಾಮಚಂದ್ರ ಹೆಗಡೆ ಉದ್ಘಾಟಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ.ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅರ್ಥದಾರಿ ವಿದ್ವಾನ್ ಉಮಾಕಾಂತ ಭಟ್ಟ ಮೇಲುಕೋಟೆ, ಜಿ.ಎನ್.ಹೆಗಡೆ ಹಾವಳಿಮನೆ ಇದ್ದರು. ಆರ್.ಡಿ. ಹೆಗಡೆ ಜಾನ್ಮನೆ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT