ಸೋಮವಾರ, ಮಾರ್ಚ್ 1, 2021
31 °C
‘ಕಾಂಗ್ರೆಸ್ ಸಾಮರಸ್ಯ ಸಮಾವೇಶದ ಮೇಲೆ ಕಲ್ಲು ತೂರಾಟ

ಕಲ್ಲಡ್ಕ: ಗುಂಪು ಘರ್ಷಣೆ– ವಾಹನಗಳಿಗೆ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲ್ಲಡ್ಕ: ಗುಂಪು ಘರ್ಷಣೆ– ವಾಹನಗಳಿಗೆ ಬೆಂಕಿ

ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಬಳಿ ಶನಿವಾರ ಸಂಜೆ ನಡೆದ ಕಾಂಗ್ರೆಸ್ ಸಾಮರಸ್ಯ ಸಮಾವೇಶಕ್ಕೆ ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿದ ಬಳಿಕ ಗುಂಪು ಘರ್ಷಣೆ ನಡೆದಿದೆ. ಘಟನೆಯಲ್ಲಿ ಸಬ್‌ ಇನ್‌್ಸಪೆಕ್ಟರ್ ಸಹಿತ 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.ಈ ಹಠಾತ್‌ ಬೆಳವಣಿಗೆಯಿಂದಾಗಿ ಸಮಾವೇಶ ಅರ್ಧದಲ್ಲೇ ಸ್ಥಗಿತಗೊಂಡಿದೆ. ಗುಂಪು ಘರ್ಷಣೆ ವೇಳೆ ಕ್ವಾಲಿಸ್ ವಾಹನ, ಒಂದು ಬೈಕ್, ಹೋಂಡ ಆಕ್ಟಿವಾ ಸಹಿತ ಮೂರು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.ಸಬ್ ಇನ್‌ಸ್ಪೆಕ್ಟರ್‌ ಗಂಭೀರ: ಘರ್ಷಣೆಯ ನಿಯಂತ್ರಿಸಲು ಪ್ರಯತ್ನಿ ಸಿದ ಬಂಟ್ವಾಳ ನಗರ ಠಾಣಾಧಿಕಾರಿ ಸಂಜಯ ಕುಮಾರ್ ಕಲ್ಲೂರ ಅವರ ಹೊಟ್ಟೆಗೆ ಕಲ್ಲು ತಗುಲಿ ಗಂಭೀರ ಗಾಯಗೊಂಡಿದ್ದಾರೆ.ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಇನ್ನೊಬ್ಬ ಯುವಕ ಕಲ್ಲೇಟಿನಿಂದ ಗಾಯಗೊಂಡಿದ್ದಾರೆ.  ಇದೇ ವೇಳೆ ಸುಮಾರು 10ಕ್ಕೂ ಮಿಕ್ಕಿ ಮಂದಿಗೆ ಕಲ್ಲೇಟು ತಗುಲಿದೆ ಎನ್ನಲಾಗಿದೆ.ಸಮಾವೇಶದ ಆರಂಭದಲ್ಲಿ  ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ  ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧ ವಾಗ್ದಾಳಿ ನಡೆಸಿದರು. ಈ ಬಗ್ಗೆ ಸ್ಥಳೀಯ ಕೆಲವು ಯುವಕರು ಪೊಲೀಸರಲ್ಲಿ ತೆರಳಿ ಆಕ್ಷೇಪ ವ್ಯಕ್ತಪಡಿಸಿದರು.ಕೆಲವು ದುಷ್ಕರ್ಮಿಗಳು ಸಭೆಯತ್ತ ಕಲ್ಲು ತೂರಾಟ ನಡೆಸಿದರು.  ಹೆದ್ದಾರಿಯಲ್ಲಿ ಉದ್ರಿಕ್ತ ಯುವಕರ ಎರಡು ಗುಂಪುಗಳು ಪರಸ್ಪರ ಕಲ್ಲು  ಹಾಗೂ ಸೋಡಾ ಬಾಟಲಿ ಎಸೆಯಲು ಆರಂಭಿಸಿತು. ಇದೇ ವೇಳೆ ಸ್ಥಳದಲ್ಲಿದ್ದ ಬೆರಳೆಣಿಕೆಯ ಪೊಲೀಸರು ಘರ್ಷಣೆ ನಿಯಂತ್ರಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ವೇದಿಕೆಯಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸಹಿತ ಪಕ್ಷದ ಮುಖಂಡರು ಶಾಂತಿ ಕಾಪಾಡುವಂತೆ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿಕೊಂಡರು.ಬಳಿಕ ಹೆಚ್ಚುವರಿ ಪೊಲೀಸ್‌ ಪಡೆಯನ್ನು ಸ್ಥಳಕ್ಕೆ ಕರೆಸಿ ಪರಿಸ್ಥಿತಿ ನಿಯಂತ್ರಿಸಲಾಯಿತು.ಕಾಂಗ್ರೆಸ್ ಸಾಮರಸ್ಯ ಸಮಾವೇಶಕ್ಕೆ ನಡೆದ ಕಲ್ಲು ತೂರಾಟ ಪೂರ್ವ ಯೋಜಿತ ಕೃತ್ಯ ಎಂದು ಕೆಪಿಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಮತ್ತಿತರರು ಆರೋಪಿಸಿದ್ದಾರೆ.ಘರ್ಷಣೆ ಹಿನ್ನೆಲೆಯಲ್ಲಿ ಬಂಟ್ವಾಳ ತಾಲ್ಲೂಕಿನಾದ್ಯಂತ 3 ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.