ಬುಧವಾರ, ಜೂನ್ 23, 2021
24 °C
ಗಂಗಯ್ಯನ ತಾಕತ್ತಿಗೆ ಸಾಕ್ಷಿಯಾದ ಬೆನಕನಕಟ್ಟೆ

ಕಲ್ಲು, ಚಕ್ಕಡಿಗಾಡಿ ಎತ್ತಿ ಬಲಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಕಾಲವೊಂದಿತ್ತು... ನಮ್ಮ ಪೂರ್ವಜರು ರೊಟ್ಟಿ ತಿಂದು ಗಟ್ಟಿಮುಟ್ಟಾಗಿ ಹೊಲದಲ್ಲಿ ಕೆಲಸ ನಿಭಾಯಿಸುವುದಲ್ಲದೇ ಕಾಳು ಕಡಿಗಳ ಚಿಲಗಳನ್ನು ದಾದಿಲ್ಲದೇ ಹೊರುತ್ತಿದ್ದರು. ಆದರೆ, ಇಂದು ಫಾಸ್ಟ್‌ಫುಡ್‌ ಹಾವಳಿ ಹೆಚ್ಚಾಗಿರುವುದರಿಂದ ನಮ್ಮ ಯುವಕರು ಅದಕ್ಕೆ ಮರುಳಾಗಿದ್ದಾರೆ. ಇದರಿಂದ ಚೀಲ ಎತ್ತುವುದು ಒತ್ತೊಟ್ಟಿಗಿರಲಿ ತುಸು ಜಾಸ್ತಿ ಹೊತ್ತು ಕೈಚೀಲ ಕೂಡ ಹಿಡಿದುಕೊಂಡು ನಿಲ್ಲಲು ಆಗುವುದಿಲ್ಲ. ಆದರೆ, ಇಂದಿಗೂ ‘ರೊಟ್ಟಿಯಿಂದಲೇ ರಟ್ಟೆ ಗಟ್ಟಿ’ ಎಂದು ನಂಬಿರುವ ಹಳ್ಳಿಗಾಡಿನ ಜನತೆ ಸಾಂಪ್ರದಾಯಿಕ ಆಹಾರ ಸೇವಿಸಿಯೇ ತಮ್ಮ ತಾಕತ್ತು ಮೆರೆಯುತ್ತಾರೆ.ಇದಕ್ಕೆ ಸಾಕ್ಷಿ ಎಂಬಂತೆ ತಾಲ್ಲೂಕಿನ ಬೆನಕನಕಟ್ಟಿ (ನಿಗದಿ) ಗ್ರಾಮದ ಗಂಗಯ್ಯ ಯರಗಂಬಳಿಮಠ ಎಂಬ ಯುವಕ ಸೋಮವಾರ ವಿವಿಧ ರೀತಿಯಲ್ಲಿ ತಮ್ಮ ತಾಕತ್ತು ಪ್ರದರ್ಶಿಸಿ ಗ್ರಾಮದ ಜನತೆಯಿಂದ ಭಲೇ ಎನಿಸಿಕೊಂಡರು. ಗ್ರಾಮದ ಗಜಾನನ ದೇವಸ್ಥಾನದ ಎದುರಿಗೆ ಗಂಗಯ್ಯ ಅವರಿಂದ  ಶಕ್ತಿ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಕ್ತಿ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ ಎಂಬುದನ್ನು ಅರಿತಿದ್ದ ಗ್ರಾಮದ ಜನತೆ, ಹಾಗೂ ಸುತ್ತಮುತ್ತಲಿನ ಗ್ರಾಮದ ನಿವಾಸಿಗಳು ಮೊದಲೇ ಸ್ಥಳ ಕಾಯ್ದಿರಿಸಿದ್ದರು.ಗಂಗಯ್ಯ ಅವರು, ಬಲಗೈಯಿಂದ 35 ರಿಂದ 38 ಕಿಲೋ ಕಲ್ಲುಗಳನ್ನು ಎತ್ತುವುದು, ಕಲ್ಲಿನ ನಿಟ್ಟಿನ ಮೇಲೆ ನಿಂತು ಒಂದೇ ಕೈಯಿಂದ ಬಹುಗಾತ್ರದ ಕಲ್ಲುಗಳನ್ನು ಎತ್ತುವುದು, ಒಂದು ಕ್ವಿಂಟಲ್‌ 10 ಕಿಲೋ ಭಾರದ ತುಂಬಿದ ಚೀಲವನ್ನು ಕಾಲಮೇಲೆ ಇಟ್ಟುಕೊಂಡು ಅದರ ಮೇಲೆ ಸಾಂಗ್ರಾಣಿ ಕಲ್ಲುಗಳನ್ನು ಇಟ್ಟುಕೊಳ್ಳುವುದು, ಕಿರುಬೆರಳುಗಳಿಂದ ಸಾಂಗ್ರಾಣಿ ಕಲ್ಲುಗಳನ್ನು ಎತ್ತುವುದು, ಚಕ್ಕಡಿ ಗಾಡಿ ಎತ್ತುವುದು ಸೇರಿದಂತೆ ವಿವಿಧ ಸಾಹಸವನ್ನು  ಪ್ರದರ್ಶಿಸಿ ಗ್ರಾಮಸ್ಥರಿಂದ ಭೇಷ್ ಎನಿಸಿಕೊಂಡರು.‘ಈ ಸ್ಪರ್ಧೆಗೆ ಗಂಗಯ್ಯ ಅವರ ವಿರುದ್ಧ ಸೆಣಸಲು ಬೇರೆ ಸ್ಪರ್ಧಾಳುಗಳನ್ನು ಮುಕ್ತವಾಗಿ ಆಹ್ವಾನಿಸಲಾಗಿತ್ತು. ಆದರೆ, ಇವರ ವಿರುದ್ಧ ಯಾವ ಸ್ಪರ್ಧಾಳುಗಳು ಸೆಣಸಲು ಮುಂದಾಗದ ಕಾರಣ ಗಂಗಯ್ಯ ಅವರೊಬ್ಬರೇ ವಿವಿಧ ರೀತಿಯ ಸಾಹಸಯಮಯ ಶಕ್ತಿ ಪ್ರದರ್ಶನ ಮಾಡಿದರು. ನಂತರ ಅವರಿಗೆ ಸಿದ್ಧಲಿಂಗೇಶ್ವರ ಸ್ವಾಮೀಜಿಗಳಿಂದ ಬೆಳ್ಳಿ ಕಪ್ಪು ಒಳಗೊಂಡ ಬಹುಮಾನ ವಿತರಿಸಲಾಯಿತು’ ಎಂದು ಕಾರ್ಯಕ್ರಮ ಆಯೋಜಕ ಮಂಜುನಾಥ ಬಡಿಗೇರ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.