ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ

7

ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ

Published:
Updated:

ಬೆಂಗಳೂರು: ಅಶ್ಲೀಲ ಚಿತ್ರ ವೀಕ್ಷಿಸಿದ ತಪ್ಪಿಗಾಗಿ ಮೂವರು ಸಚಿವರ ರಾಜೀನಾಮೆ. ಇಡೀ ಪ್ರಕರಣ ಕುರಿತು ತನಿಖೆಗೆ ಆರು ಮಂದಿ ಸದಸ್ಯರ ವಿಚಾರಣಾ ಸಮಿತಿ ರಚಿಸಿರುವುದಾಗಿ ಸ್ಪೀಕರ್ ಘೋಷಣೆ. ಮಾರ್ಚ್ 12ರೊಳಗೆ ವರದಿ ನೀಡಲು ಸಮಿತಿಗೆ ಆದೇಶ. ಅಲ್ಲಿಯವರೆಗೆ ಮೂವರಿಗೂ ಸದನ ಪ್ರವೇಶಕ್ಕೆ ನಿರ್ಬಂಧ. ಪ್ರತಿಪಕ್ಷಗಳ ಅಸಮಾಧಾನ. ಉಭಯ ಸದನ ಗಳಲ್ಲಿ ಕೋಲಾಹಲ. ಸದನ ಮುಂದಕ್ಕೆ..ಸದನದೊಳಗೆ ಬ್ಲೂಫಿಲಂ ವೀಕ್ಷಿಸಿದ ಮೂವರು ಸಚಿವರ ರಾಜೀನಾಮೆ ನಂತರ ವಿಧಾನಮಂಡಲದೊಳಗೆ ಬುಧವಾರ ಜರುಗಿದ ಬೆಳವಣಿಗೆ ಇದು.ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮೂವರು ಶಾಸಕರನ್ನು ಅನರ್ಹಗೊಳಿಸಬೇಕು ಎಂಬ ಬೇಡಿಕೆ ಉಭಯ ಸದನಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಕೋಲಾಹಲ, ಮಾತಿನ ಚಕಮಕಿಗೆ ಕಾರಣವಾಯಿತು. ಪ್ರತಿಪಕ್ಷ ಗಳ ತೀವ್ರ ವಿರೋಧದ ನಡುವೆಯೇ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ವಿಧಾನಸಭೆ ಕಲಾಪ ವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದರು. ವಿಧಾನ ಪರಿಷತ್ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಗಿದೆ.ಇಡೀ ದಿನ ಎರಡೂ ಸದನಗಳಲ್ಲಿ ಬ್ಲೂಫಿಲಂ ವಿಷಯ ಪ್ರಸ್ತಾಪವಾಗಿ ಕಲಾಪವನ್ನು ನುಂಗಿ ಹಾಕಿತು. `ಅಶ್ಲೀಲ ಚಿತ್ರ ವೀಕ್ಷಿಸಿದ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ ಮತ್ತು ಇದಕ್ಕೆ ಕಾರಣರೆಂದು ಬಿಂಬಿತವಾಗಿರುವ ಕೃಷ್ಣ ಪಾಲೆಮಾರ್ ಅವರಿಗೆ ನೋಟಿಸ್ ನೀಡಲಾಗಿದೆ. ಇದೇ 13ರಂದು ಬೆಳಿಗ್ಗೆ 10.30ರೊಳಗೆ ವಿವರಣೆ ನೀಡುವಂತೆ ಸೂಚಿಸಲಾಗಿದೆ~ ಎಂದು ಪ್ರತಿಪಕ್ಷಗಳ ಧರಣಿ ನಡುವೆಯೇ ಬೋಪಯ್ಯ ಪ್ರಕಟಿಸಿದರು.ಆದರೆ, ಮೂವರು ಸದಸ್ಯರನ್ನು ಅನರ್ಹಗೊಳಿಸುವ ಸಂಬಂಧ ನಿರ್ಣಯ ಮಂಡಿಸಲು ಅವಕಾಶ ನೀಡದ ಸ್ಪೀಕರ್ ಮತ್ತು ಆಡಳಿತ ಪಕ್ಷದ ಸದಸ್ಯರ ನಡವಳಿಕೆಯಿಂದ ಬೇಸತ್ತ ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರು ಸಿದ್ದರಾಮಯ್ಯ ನೇತೃತ್ವದಲ್ಲಿ ಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ತೆರಳಿ ಧರಣಿ ನಡೆಸಿದರು. `ಸದನದಲ್ಲಿ ಬ್ಲೂ ಫಿಲಂ ನೋಡಿದವರನ್ನು ರಕ್ಷಿಸುತ್ತಿರುವ ಸರ್ಕಾರಕ್ಕೆ ಶೇಮ್....ಶೇಮ್~ ಎಂದು ಘೋಷಣೆಗಳನ್ನು ಕೂಗಿದರು.ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ ಸಿದ್ದರಾಮಯ್ಯ ವಿಷಯ ಪ್ರಸ್ತಾಪಿಸಲು ಮುಂದಾದರು. ಈ ಹಂತದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಸ್ವಯಂ ಪ್ರೇರಣೆಯಿಂದ ಹೇಳಿಕೆ ನೀಡಲು ಮುಂದಾಗಿದ್ದರಿಂದ ಅವರಿಗೆ ಸ್ಪೀಕರ್ ಅವಕಾಶ ನೀಡಿದರು. ಸಚಿವರಾಗಿದ್ದ ಸಿ.ಸಿ.ಪಾಟೀಲ, ಲಕ್ಷ್ಮಣ ಸವದಿ ಮತ್ತು ಕೃಷ್ಣ ಪಾಲೆಮಾರ್ ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದು, ಅದನ್ನು ರಾಜ್ಯಪಾಲರು ಈಗಾಗಲೇ ಅಂಗೀಕರಿಸಿದ್ದಾರೆ ಎಂದು ಮುಖ್ಯಮಂತ್ರಿ ಪ್ರಕಟಿಸಿದರು.ನಂತರ ಎದ್ದು ನಿಂತ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದ ಮೂವರು ಸಚಿವರು `ಬ್ಲೂ ಫಿಲಂ~ ವೀಕ್ಷಿಸಿರುವುದು ತಲೆತಗ್ಗಿಸುವ ವಿಚಾರ. ಸದನದ ಘನತೆ, ಗೌರವಕ್ಕೆ ಚ್ಯುತಿಯಾಗಿದೆ. ಸದನದ ಇತಿಹಾಸದಲ್ಲಿ ಈ ರೀತಿಯ ಘಟನೆ ಎಂದೂ ನಡೆದಿಲ್ಲ ಎನ್ನುತ್ತಾ ನಿಯಮ 146 ಮತ್ತು 363ರ ಪ್ರಕಾರ ಮೂವರು ಶಾಸಕರನ್ನು ಅನರ್ಹಗೊಳಿಸುವ ಕುರಿತ ನಿರ್ಣಯದ ಅಂಶಗಳನ್ನು ಪ್ರಸ್ತಾಪಿಸಲು ಮುಂದಾದರು.ಆದರೆ ಆಡಳಿತ ಪಕ್ಷದ ಬಹುಪಾಲು ಸದಸ್ಯರು ಒಟ್ಟಾಗಿ ಎದ್ದುನಿಂತು ಇದಕ್ಕೆ ಅಡ್ಡಿಪಡಿಸಿದರು. ಅಷ್ಟರಲ್ಲಿ ವಿರೋಧ ಪಕ್ಷಗಳ ಸದಸ್ಯರೂ ಎದ್ದುನಿಂತು ಜೋರು ದನಿಯಲ್ಲಿ ಕೂಗಿದರು. ಇದರಿಂದ ಗದ್ದಲದ ವಾತಾವರಣ ಉಂಟಾಯಿತು. `ಅದು ಬ್ಲೂ ಫಿಲಂ ಹೌದೊ, ಅಲ್ಲವೊ ಎಂಬುದರ ಬಗ್ಗೆ ತನಿಖೆ ಆಗಬೇಕು. ತನಿಖೆಗೆ ಮೊದಲೇ ಬ್ಲೂಫಿಲಂ ವೀಕ್ಷಣೆ ಎನ್ನುವುದು ಸರಿಯಲ್ಲ~ ಎಂದು ಕೆ.ಎಸ್.ಈಶ್ವರಪ್ಪ ಆಕ್ಷೇಪಿಸಿದರು.ಇದಕ್ಕೆ ಪ್ರತಿಪಕ್ಷಗಳ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ನಾಚಿಕೆಗೇಡು ಎಂದು ಅವರು ಘೋಷಣೆಗಳನ್ನು ಕೂಗಿದರು.ಆಗ ಉಪನಾಯಕ ಟಿ.ಬಿ.ಜಯಚಂದ್ರ ಮಧ್ಯಪ್ರವೇಶಿಸಿ, `ಬ್ಲೂ ಫಿಲಂ~ ಅಂತ ಇಂಗ್ಲಿಷ್‌ನಲ್ಲಿ ಹೇಳುವುದು ಬೇಡ ಬಿಡಿ. ಅಚ್ಚ ಕನ್ನಡದಲ್ಲಿ `ನೀಲಿ ಚಿತ್ರ~ ಅನ್ನೋಣ ಎಂದು ರೇಗಿಸಿದರು. ಅದಕ್ಕೆ ದನಿಗೂಡಿಸಿದ ಸಿದ್ದರಾಮಯ್ಯ, `ಅಶ್ಲೀಲ~, `ನೀಲಿ~, `ನಗ್ನ ಚಿತ್ರ~ ಎಂದು ಕೆಣಕಿದರು.ಅತ್ತ ಆಡಳಿತ ಪಕ್ಷದ ಸದಸ್ಯರು ಈಶ್ವರಪ್ಪ ಅವರ ಬೆಂಬಲಕ್ಕೆ ನಿಂತರೆ, ಇತ್ತ ಪ್ರತಿಪಕ್ಷಗಳ ಸದಸ್ಯರು ಸಿದ್ದರಾಮಯ್ಯ ಅವರಿಗೆ ನಿರ್ಣಯ ಮಂಡಿಸಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು. ಇದರ ಮಧ್ಯೆ ಕ್ರಿಯಾಲೋಪ ಎತ್ತಿದ ಕಾನೂನು ಸಚಿವ ಎಸ್.ಸುರೇಶ್‌ಕುಮಾರ್,  ನಿಯಮ 164ರ ಅಡಿ ಪ್ರಸ್ತಾಪ ಮಾಡಬೇಕಾದರೆ ಏಳು ದಿನಗಳ ಮೊದಲೇ ನೋಟಿಸ್ ನೀಡಬೇಕು. ಹೀಗಾಗಿ ನಿರ್ಣಯ ಮಂಡಿಸಲು ಬರುವುದಿಲ್ಲ ಎಂದರು. 

 

ಇಲ್ಲಿ ಕ್ರಿಯಾಲೋಪದ ಪ್ರಶ್ನೆ ಬರುವುದಿಲ್ಲ. ನಿಯಮ 164ರ ಜೊತೆಗೆ 363ರ ಅಡಿಯಲ್ಲೂ ಪ್ರಸ್ತಾಪ ಮಾಡಲಾಗಿದೆ. ಸ್ಪೀಕರ್ ತಮ್ಮ ವಿವೇಚನೆ ಅನುಸಾರ ಸದಸ್ಯರನ್ನು ಅನರ್ಹಗೊಳಿಸಲು ಅಧಿಕಾರ ಇದೆ. ಅದರಂತೆ ನಡೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ವಾದಿಸಿದರು.ಸದನದ ಇತಿಹಾಸದಲ್ಲಿ ಇಂತಹ ಪ್ರಕರಣ ಎಂದೂ ನಡೆದಿರಲಿಲ್ಲ. ಇದು ನಾಚಿಕೆಗೇಡಿನ ಸಂಗತಿ. ತಾಂತ್ರಿಕ ಅಂಶಗಳನ್ನು ಮುಂದಿಟ್ಟುಕೊಂಡು ಬ್ಲೂ ಫಿಲಂ ಪ್ರಕರಣವನ್ನು ಸಮರ್ಥಿಸಿಕೊಳ್ಳುವುದು  ಸರಿಯಲ್ಲ. ಇದು `ಬ್ಲೂ ಫಿಲಂ ಸರ್ಕಾರ~ ಎಂದು ಏರುದನಿಯಲ್ಲಿ ವಾಗ್ದಾಳಿ ನಡೆಸಿದರು.ನಿಯಮಗಳಿಗೆ ಗಂಟು ಬೀಳದೆ ಸದನದ ಗೌರವವನ್ನು ಎತ್ತಿಹಿಡಿಯಬೇಕು. ಸರ್ಕಾರ ಸಮರ್ಥನೆ ಮಾಡಿಕೊಳ್ಳುವುದಾದರೆ ಸದನದ ಪಾವಿತ್ರ್ಯ ಉಳಿಯುತ್ತದೆಯೇ? ಹಿಂದೆ 16 ಜನ ಶಾಸಕರನ್ನು ಅನರ್ಹಗೊಳಿಸಲು ಯಾವ ನಿಯಮ ಅನುಸರಿಸಲಾಗಿತ್ತು. ಹಾಗಾದರೆ ನಿಯಮಾವಳಿ ಪ್ರಕಾರ ಬ್ಲೂ ಫಿಲಂ ನೋಡಿದ್ದಾರಾ ಎಂದು ಪ್ರಶ್ನಿಸಿದರು. ಇದನ್ನು ಬ್ಲೂ ಫಿಲಂ ಎಂದು ಕರೆಯದೆ ಯಕ್ಷಗಾನ ಎನ್ನಲು ಸಾಧ್ಯವೇ ಎಂದು ಕಾಂಗ್ರೆಸ್‌ನ ಬಿ.ಸಿ.ಪಾಟೀಲ ವ್ಯಂಗ್ಯವಾಡಿದರು.ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಮುಂದುವರಿದಿದ್ದರಿಂದ ಸಭಾಧ್ಯಕ್ಷ ಬೋಪಯ್ಯ ಅರ್ಧ ಗಂಟೆ ಕಾಲ ಸದನ  ಮುಂದೂಡಿದರು.ಮಧ್ಯಾಹ್ನ 1.47ಕ್ಕೆ ಮತ್ತೆ ಕಲಾಪ ಆರಂಭವಾದಾಗಲೂ ನಿಯಮಾವಳಿ ಪ್ರಕಾರವೇ ಸದನದಲ್ಲಿ ಚರ್ಚೆಗಳು ನಡೆಯಬೇಕು. ನಿಯಮಗಳನ್ನು ಪಾಲಿಸದೆ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವುದು ಬೇಡ ಎಂದು ಸದಾನಂದಗೌಡ ಹೇಳಿದರು. ಸಿದ್ದರಾಮಯ್ಯ ಮತ್ತೆ ನಿರ್ಣಯ ಮಂಡಿಸಲು ಮುಂದಾದಾಗ, ಆಡಳಿತ ಪಕ್ಷದ ಸದಸ್ಯರು ಎದ್ದುನಿಂತು ಅಡ್ಡಿಪಡಿಸಿದರು. ಕೈಯಲ್ಲಿ ಸದನದ ನಿಯಮಾವಳಿ ಪುಸ್ತಕ ಹಿಡಿದಿದ್ದ ಬಿಜೆಪಿ ಶಾಸಕರು ಸ್ಪೀಕರ್ ಮಾತಿಗೂ ಕಿವಿಗೊಡದೆ, ಸಿದ್ದರಾಮಯ್ಯ ನಿರ್ಣಯ ಮಂಡಿಸಲು ಅವಕಾಶ ಇಲ್ಲ ಎಂದು ಘೋಷಣೆ ಕೂಗಿದರು. ನೋಟ್‌ಬುಕ್ ಹರಿದು ಹಾಕಿ ತೂರಿದರು.`ಅವರು (ಆಡಳಿತ ಪಕ್ಷದವರು) ಕುಳಿತುಕೊಳ್ಳುವುದಿಲ್ಲ. ನಾನೇನು ಮಾಡಲಿ~ ಎಂದು ಸ್ಪೀಕರ್ ಅಸಹಾಯಕತೆ ವ್ಯಕ್ತಪಡಿಸಿದರು. `ಸ್ಪೀಕರ್ ಎದ್ದರೂ ಸದಸ್ಯರು ಕುಳಿತುಕೊಳ್ಳುವುದಿಲ್ಲ ಎಂದರೆ ಏನು ಅರ್ಥ? ನಿಮ್ಮ ಸದಸ್ಯರಿಗೆ ನೀವಾದರೂ ಎಚ್ಚರಿಕೆ ನೀಡಿ~ ಎಂದು ಸಿದ್ದರಾಮಯ್ಯ ಅವರು ಸದಾನಂದಗೌಡ, ಸುರೇಶ್‌ಕುಮಾರ್ ಅವರಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ.`ನಿಯಮಾವಳಿ ಪ್ರಕಾರ ಇದೆಯೊ, ಇಲ್ಲವೊ ಎಂಬುದನ್ನು ನಾನು ನೋಡುತ್ತೇನೆ. ನೀವು ಕುಳಿತುಕೊಳ್ಳಿ~ ಎಂದು ಸ್ಪೀಕರ್ ಮನವಿ ಮಾಡಿದರೂ ಆಡಳಿತ ಪಕ್ಷದ ಸದಸ್ಯರು ಕೇಳಲಿಲ್ಲ. ಅರವಿಂದ ಲಿಂಬಾವಳಿ, ಸಾರ್ವಭೌಮ ಬಗಲಿ, ಬಿ.ಪಿ.ಹರೀಶ್, ಡಿ.ಎನ್.ಜೀವರಾಜ್ ಮೊದಲಾದವರು ಯಾರ ಮಾತನ್ನು ಕೇಳದೆ ಕೂಗಾಡುತ್ತಿದ್ದರಿಂದ ಕೆರಳಿದ ಜಯಚಂದ್ರ, ಸಂಪುಟದಲ್ಲಿ ಮೂರು ಸ್ಥಾನ ಖಾಲಿಯಾಗಿರುವುದರಿಂದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಚುಚ್ಚಿದರು.`ಇದು ನಿಮ್ಮ (ಸ್ಪೀಕರ್) ಕಣ್ಣೆದುರಿಗೆ ನಡೆದ ಘಟನೆ. ನಿಯಮ 363ರ ಅಡಿಯಲ್ಲೂ ಪ್ರಸ್ತಾವ ಮಾಡಿದ್ದೇವೆ. ನಮ್ಮ ಪರಂಪರೆಗೆ ಕಳಂಕ ತಂದಿರುವ ಸದಸ್ಯರನ್ನು ಅನರ್ಹಗೊಳಿಸಬೇಕು~ ಎಂದು ಜಯಚಂದ್ರ ಮನವಿ ಮಾಡಿದರೂ ಪ್ರಯೋಜನ ಆಗಲಿಲ್ಲ. ಗದ್ದಲದ ನಡುವೆ ಮಧ್ಯಾಹ್ನ 3.30ಕ್ಕೆ ಸದನ  ಮುಂದೂಡಿದರು.ಸರಣಿ ಸಂಧಾನ ಸಭೆಗಳ ನಂತರ ಮತ್ತೆ ಸದನ ಸೇರಿದ್ದು ಸಂಜೆ 4.51ಕ್ಕೆ. ಆಗಲೂ ಇದೇ ಪರಿಸ್ಥಿತಿ ಮುಂದುವರಿಯಿತು. `ಚರ್ಚೆಗೆ ಅವಕಾಶ ನೀಡಕೂಡದು. ಬೇಕಾದರೆ ಸದನ ಸಮಿತಿ ರಚಿಸಲಿ. ವರದಿ ಬಂದ ನಂತರ ಚರ್ಚೆಗೆ ಅವಕಾಶ ನೀಡಿ~ ಎಂದು ಮುಖ್ಯಮಂತ್ರಿ ಮನವಿ ಮಾಡಿದರು.ಲೋಕಸಭೆಯಲ್ಲಿ 2005ರಲ್ಲಿ ನಡೆದ `ಓಟಿಗಾಗಿ ನೋಟು~ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭಾಧ್ಯಕ್ಷರು ಕೊಟ್ಟಿದ್ದ ರೂಲಿಂಗ್ ಅನ್ನು ಬೋಪಯ್ಯ ಓದಿದರು. ಈ ಪ್ರಕಾರ ಚರ್ಚೆಗೆ ಅವಕಾಶ ನಿರಾಕರಿಸಿ, ವಿಚಾರಣಾ ಸಮಿತಿ ರಚಿಸುವ ತಮ್ಮ ನಿರ್ಧಾರ ಪ್ರಕಟಿಸಿದರು.

3ಸಚಿವರ ರಾಜೀನಾಮೆ

ಬೆಂಗಳೂರು:
ಅಶ್ಲೀಲ ಚಲನಚಿತ್ರ ವೀಕ್ಷಿಸುವಾಗ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದ ಸಚಿವರಾದ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ ಹಾಗೂ ಆ ವಿಡಿಯೊ ತುಣುಕಿದ್ದ ತಮ್ಮ ಮೊಬೈಲ್ ಫೋನ್ ಕೊಟ್ಟಿದ್ದರು ಎನ್ನಲಾದ ಬಂದರು ಖಾತೆ ಸಚಿವ ಕೃಷ್ಣ ಪಾಲೆಮಾರ್ ಅವರ ತಲೆದಂಡವನ್ನು ಆಡಳಿತಾರೂಢ ಬಿಜೆಪಿ ಪಡೆದಿದೆ. ಈ ಮೂಲಕ ಹತ್ತು ಸಚಿವ ಸ್ಥಾನಗಳು ಖಾಲಿಯಾದಂತೆ ಆಗಿವೆ.ಈ ಮೂವರೂ ಬುಧವಾರ ಬೆಳಿಗ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇವರ ರಾಜೀನಾಮೆಯನ್ನು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅಂಗೀಕರಿಸಿದ್ದಾರೆ. ತಾವು `ಸ್ವಇಚ್ಛೆ~ಯಿಂದ ಪದತ್ಯಾಗ ಮಾಡಿರು ವುದಾಗಿ ಇವರು ಹೇಳಿಕೊಂಡರೂ ಇವರ ರಾಜೀನಾಮೆಗೆ ಹೈಕಮಾಂಡ್ ನಿರ್ದೇಶನವೇ ಕಾರಣ ಎನ್ನಲಾಗಿದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry