ಶುಕ್ರವಾರ, ಮೇ 27, 2022
27 °C

ಕಳಂಕಿತರ ವಿರುದ್ಧ ಕ್ರಮಕ್ಕೆ ಬಿಜೆಪಿ ಹಿಂದೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿಸ್ತಿನ ಪಕ್ಷ ಎಂದೇ ಹೆಸರಾಗಿದ್ದ ಬಿಜೆಪಿ ಈಗ `ಕಳಂಕಿತ~ ಶಾಸಕರ ವಿರುದ್ಧ ಷೋಕಾಸ್ ನೋಟಿಸ್ ನೀಡಲಾಗದಷ್ಟು ಅಸಹಾಯಕ ಸ್ಥಿತಿಯಲ್ಲಿದೆ. ಪಕ್ಷದ ನಾಲ್ವರು ಶಾಸಕರು ಬಂಧನದಲ್ಲಿದ್ದರೆ, ಇಬ್ಬರು ಜಾಮೀನಿನ ಮೇಲೆ ಇದ್ದಾರೆ. ಈ ಆರು ಜನರ ವಿರುದ್ಧ ಯಾವುದೇ ಕ್ರಮ ಜರುಗಿಸದ ಪಕ್ಷ, `ಅವರು ಇನ್ನೂ ಆರೋಪಿಗಳು~ ಎಂಬ ಕಾರಣ ನೀಡುತ್ತಿದೆ.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಮತ್ತು ಜಿ.ಜನಾರ್ದನ ರೆಡ್ಡಿ ಜೈಲಿನಲ್ಲಿದ್ದಾರೆ. ಮಾಜಿ ಸಚಿವ ಎಚ್.ಹಾಲಪ್ಪ ಮತ್ತು ಶಾಸಕ ವೈ.ಸಂಪಂಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.ಈ ಆರು ಜನರಿಗೂ ಅವರ ವಿರುದ್ಧದ ಆರೋಪಗಳ ಬಗ್ಗೆ ಸಣ್ಣ ಪ್ರಶ್ನೆಯನ್ನೂ ಬಿಜೆಪಿ ವರಿಷ್ಠರು ಕೇಳಿಲ್ಲ. ಷೋಕಾಸ್ ನೋಟಿಸ್ ಕೂಡ ಜಾರಿ ಮಾಡಿಲ್ಲ. `ಈ ಎಲ್ಲರ ವಿರುದ್ಧವೂ ಕೇವಲ ಆರೋಪಗಳಿದ್ದು, ಅವು ಸಾಬೀತಾದಲ್ಲಿ ಮಾತ್ರವೇ ಕ್ರಮ ಜರುಗಿಸುತ್ತೇವೆ~ ಎನ್ನುತ್ತಾರೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ.ಈ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, `ಯಡಿಯೂರಪ್ಪ ಮತ್ತು ಇತರೆ ಶಾಸಕರು ಕೇವಲ ಆರೋಪಗಳನ್ನು ಎದುರಿಸುತ್ತಿದ್ದಾರೆ. ವಿಚಾರಣೆ ಪೂರ್ಣಗೊಳ್ಳಲಿ. ಅವರು ತಪ್ಪಿತಸ್ಥರೆಂದು ಸಾಬೀತಾಗುವವರೆಗೂ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಇಲ್ಲ.ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅಥವಾ ಗೋವಾ ಮುಖ್ಯಮಂತ್ರಿ ದಿಗಂಬರ ಕಾಮತ್ ವಿರುದ್ಧ ಕಾಂಗ್ರೆಸ್ ಕ್ರಮ ಜರುಗಿಸಿದೆಯೇ~ ಎಂದು ಪ್ರಶ್ನಿಸಿದರು.ಯಡಿಯೂರಪ್ಪ ಮತ್ತು ರೆಡ್ಡಿ ಬಂಧನದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿಲ್ಲವೇ ಎಂಬ ಪ್ರಶ್ನೆಗೆ, `ಅವರಿಗೆ ಕಾನೂನು ಹೋರಾಟ ಎದುರಿಸುವ ವಿಶ್ವಾಸವಿದೆ.ಆದರೆ, ಇದೇ ವೇಳೆ ನಾನು ಅವರನ್ನು ಸಮರ್ಥಿಸಿಕೊಳ್ಳುವುದಿಲ್ಲ. ಅಕ್ರಮ ಗಣಿಗಾರಿಕೆ ಮತ್ತು ರೆಡ್ಡಿ ಸಹೋದರರಿಂದ ಪಕ್ಷ ಸಾಕಷ್ಟು ಸಮಸ್ಯೆ ಎದುರಿಸಿದೆ~ ಎಂದರು.ಯಡಿಯೂರಪ್ಪ ಅವರನ್ನು ಟೀಕಿಸಲು ಪಕ್ಷ ಹೆದರುತ್ತಿದೆಯೇ? ಎಂದಾಗ, `ಯಡಿಯೂರಪ್ಪ ಲಿಂಗಾಯತರು ಇರಬಹುದು. ಆದರೆ, ಅವರೊಬ್ಬರೇ ಆ ಸಮುದಾಯದ ನಾಯಕರಲ್ಲ. ಲಿಂಗಾಯತರು ಮಾತ್ರ ಬಿಜೆಪಿಗೆ ಮತ ಹಾಕುವವರಲ್ಲ. ಎಲ್ಲ ಜಾತಿಯವರೂ ಮತ ನೀಡುತ್ತಾರೆ~ ಎಂದು ಉತ್ತರಿಸಿದರು.ಮುಂದಿನ ಚುನಾವಣೆ ಒಳಗಾಗಿ ಯಡಿಯೂರಪ್ಪ ಆರೋಪ ಮುಕ್ತರಾಗುತ್ತಾರೆ ಎಂಬ ಭರವಸೆ ಇದೆಯೇ ಎಂದು ಪ್ರಶ್ನಿಸಿದಾಗ, `ಶೇಕಡ 99ರಷ್ಟು ವಿಶ್ವಾಸವಿದೆ. ಅವರು ಮುಂದಿನ ಚುನಾವಣೆ ಪ್ರಚಾರದಲ್ಲಿ ನಮ್ಮೊಂದಿಗೆ ಭಾಗವಹಿಸುತ್ತಾರೆ ಎಂಬ ವಿಶ್ವಾಸವಿದೆ. ಆದರೆ, ಚುನಾವಣೆ ಪ್ರಚಾರ ವೈಯಕ್ತಿಕ ನೆಲೆಗಟ್ಟಿನಲ್ಲಿ ನಡೆಯುವುದಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತದೆ~ ಎಂದು ಪ್ರತಿಕ್ರಿಯಿಸಿದರು.ಯಾತ್ರೆಯಲ್ಲಿ ಬದಲಾವಣೆ ಇಲ್ಲ:ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ಭ್ರಷ್ಟಾಚಾರದ ವಿರುದ್ಧ ಆರಂಭಿಸಿರುವ ರಥಯಾತ್ರೆಯ ಮಾರ್ಗದಲ್ಲಿ ಯಾವುದೇ ಬದಲಾವಣೆಯೂ ಇಲ್ಲ ಎಂದು ಬಿಜೆಪಿ ಮೂಲಗಳು ಹೇಳಿವೆ. ಯಡಿಯೂರಪ್ಪ ಅವರ ಬಂಧನದ ಕಾರಣದಿಂದ ಯಾತ್ರೆಯ ಮಾರ್ಗದಲ್ಲಿ ಬದಲಾವಣೆ ಆಗಲಿದೆ ಎಂಬುದನ್ನು ಬಿಜೆಪಿ ಮೂಲಗಳು ಅಲ್ಲಗಳೆದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.