ಬುಧವಾರ, ಮೇ 18, 2022
28 °C

ಕಳಪೆ ಕಾಮಗಾರಿ: ಅಧಿಕಾರಿಗಳಿಗೆ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಸ: ವಿವಿಧ ಯೋಜನೆಗಳು ಸಮರ್ಪಕ ಅನುಷ್ಠಾನ ಆಗದಿರುವುದು ಹಾಗೂ ಕಾಮಗಾರಿ ಕಳಪೆಯಾ ಗಿರುವುದಕ್ಕೆ ಗ್ರಾಮಸ್ಥರು ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡರು.ಪಟ್ಟಣದ ಅನ್ನಪೂಣೇಶ್ವರಿ ಮಹಿಳಾ ಮಂಡಳಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ವಿವಿಧ ಇಲಾಖೆಯ ಅಧಿಕಾರಿಗಳಿಗೆ ದೂರಿನ ಸುರಿಮಳೆಗೈದರು. ಆರಂಭದಲ್ಲಿ ಅಬ್ದುಲ್ ಶುಕೂರ್ ಅವರು ಶಿಕ್ಷಣ ಇಲಾಖೆಯ ಸಂಯೋಜಕ ತಿಮ್ಮಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು. ಖಾಸಗಿ ಶಾಲೆಗೆ ಈವರೆಗೂ ಪಠ್ಯಪುಸ್ತಕ ಪೂರೈಕೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮೀಣ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವ ಬಗ್ಗೆ ಸಿಪಿಐ ಮುಖಂಡ ಗೋಪಾಲ ಶೆಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಆರೋಗ್ಯ ಇಲಾಖೆಯ ಕಾರ್ಯ ಕ್ರಮಗಳ ಬಗ್ಗೆ ವೈದ್ಯಾಧಿಕಾರಿ ಮಾನಸ ಮಾಹಿತಿ ನೀಡಿ ಕಳಸ ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ವಿವರ ನೀಡಿದರು. ಆಗ ಮಾತನಾಡಿದ ತಾ.ಪಂ. ಮಾಜಿ ಸದಸ್ಯ ಕೆ.ಸಿ.ಧರಣೇಂದ್ರ `ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಜಿ.ಪಂ.ನ ಗಮನ ಸೆಳೆದಿಲ್ಲ. ನೀವು ಏನು ಕೆಲ್ಸ ಮಾಡ್ತೀರಿ~ ಎಂದು ಜಿ.ಪಂ. ಸದಸ್ಯೆ ಕವಿತಾಚಂದ್ರು ಅವರನ್ನು ತರಾಟೆಗೆ ತೆಗೆದುಕೊಂಡರು.ಸೌದೆ ಡಿಪೋದಲ್ಲಿ ಸೌದೆ ಇಲ್ಲದಿದ್ದರೂ ಹೊರಗಿನಿಂದ ಸೌದೆ ತರಲು ಬಿಡುತ್ತಿಲ್ಲ ಎಂದು ಗ್ರಾಮಸ್ಥರು ಉಪ ವಲಯ ಅರಣ್ಯಾಧಿಕಾರಿ ಸೀನ ಬೋವಿ ಅವರಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಕೆಲವು ಬಡವರ ಮನೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ಗ್ರಾ.ಪಂ. ಸದಸ್ಯರಾದ ಪ್ರಕಾಶ್ ಹಾಗೂ ರಂಗನಾಥ್ ಅವರು ಮೆಸ್ಕಾಂ ಎಂಜಿನಿಯರ್ ದಿವಾಕರ್ ಅವರಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.ಹೊನ್ನೇಕಾಡು ಕುಡಿಯುವ ನೀರು ಯೋಜನೆಯ ಬಗ್ಗೆ ಚರ್ಚೆ ಆರಂಭ ಗೊಂಡಾಗ ಗ್ರಾಮಸ್ಥರು ಜಿ.ಪಂ. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರೇ ಮಾಹಿತಿ ನೀಡಬೇಕು ಎಂದು ಪಟ್ಟು ಹಿಡಿದರು. ಅವರು ವರ್ಗಾವಣೆ ಆಗಿರುವ ಹಿನ್ನೆಲೆಯಲ್ಲಿ ಕಿರಿಯ ಎಂಜಿನಿಯರ್ ವೀರಪ್ಪ ವಿವರ ನೀಡಲು ಪ್ರಯತ್ನಿಸಿ ವಿಫಲರಾದರು.ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಕಾಮಗಾರಿ ಆರಂಭಿಸಿ 2 ಕೋಟಿ ರೂಪಾಯಿ ವೆಚ್ಚ ಮಾಡಿರುವ ಬಗ್ಗೆ ಕಾಂಗ್ರೆಸ್‌ನ ಹರ್ಷ, ಕೆ.ಸಿ. ಧರಣೇಂದ್ರ ಎಂಜಿನಿಯರ್‌ರನ್ನು ತರಾಟೆಗೆ ತೆಗೆದುಕೊಂಡರು. ಯೋಜ ನೆಯ ಬಗ್ಗೆ ನ್ಯಾಯಾಲಯಕ್ಕೂ ಹೋಗುವ ಬೆದರಿಕೆಯನ್ನು ಅವರು ಹಾಕಿದರು. ಈ ಯೋಜನೆಯ ಬಗ್ಗೆ ಪ್ರತ್ಯೆಕ ಸಭೆ ಕರೆಯಲು ನಿರ್ಣಯ ಮಾಡಲಾಯಿತು.ಜಿ.ಪಂ. ರಸ್ತೆಗಳ ಕಳಪೆ ಕಾಮಗಾರಿಗಳ ಬಗ್ಗೆ ಸದಸ್ಯ ಅನಿಲ್ ಡಿಸೋಜ, ಸಿಪಿಐನ ಲಕ್ಷ್ಮಣಾಚಾರ್ ಮತ್ತಿತರರು ಗಮನ ಸೆಳೆದರು.  ರಿಜ್ವಾನ್, ರಾಘವೇಂದ್ರ ಶೆಣೈ ತಾ.ಪಂ. ಸದಸ್ಯ ಹಿತ್ಲುಮಕ್ಕಿ ರಾಜೇಂದ್ರ  ತಾ.ಪಂ. ಸದಸ್ಯೆ ಅನ್ನಪೂರ್ಣ , ಗ್ರಾ.ಪಂ. ಉಪಾಧ್ಯಕ್ಷೆ ಉಷಾ ಮತ್ತಿತರರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.