ಶನಿವಾರ, ಮೇ 8, 2021
18 °C

ಕಳಪೆ ಚರಂಡಿ ನಿರ್ಮಾಣ- ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರಟಗಿ: ಇಲ್ಲಿಯ ಇಂದಿರಾನಗರದಲ್ಲಿ (8ನೇ ವಾರ್ಡ್) ನಿರ್ಮಿಸಲಾಗುತ್ತಿರುವ ಚರಂಡಿ ಕಾಮಗಾರಿ ತೀರಾ ಕಳಪೆಯಾಗಿದೆ. ಸಂಬಂಧಿಸಿದ ಎಂಜನೀಯರ್ ಪೋನ್ ಸ್ವೀಕರಿಸುತ್ತಿಲ್ಲ, ಕೈಗೆ ಸಿಗುತ್ತಿಲ್ಲ. ಶಾಸಕ ತಂಗಡಗಿ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಕಳಪೆ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಮಾಜ ಕಲ್ಯಾಣ ಇಲಾಖೆಯ 25 ಲಕ್ಷ ರೂ. ಅನುದಾನದಲ್ಲಿ ಪರಿಶಿಷ್ಟ ಜಾತಿಯವರ ವಸತಿ ಪ್ರದೇಶವಾದ ಇಂದಿರಾನಗರದಲ್ಲಿ 300 ಮೀಟರ್ ಸಿ.ಸಿ ರಸ್ತೆ, 216.3 ಮೀಟರ್ ಚರಂಡಿ ಹಾಗೂ ಶೌಚಾಲಯ ನಿರ್ಮಾಣದ ಕಾಮಗಾರಿಗೆ ಮಾರ್ಚ್ 5ರಂದು ಶಾಸಕ ಶಿವರಾಜ್ ತಂಗಡಗಿ ಚಾಲನೆ ನೀಡಿದ್ದರು.ಕ್ಷೇತ್ರಕ್ಕೆ 1. 5 ಕೋಟಿ ರೂ. ಮಂಜೂರಾಗಿದೆ. ಪರಿಶಿಷ್ಟ ಜಾತಿಯ 4, ಪರಿಶಿಷ್ಟ ಪಂಗಡದ 2 ಗ್ರಾಮಗಳಲ್ಲಿ ಕಾಮಗಾರಿ ನಡೆಯಲಿದೆ. ನಿರ್ಮಿತಿ ಕೇಂದ್ರ ಕಾಮಗಾರಿಯನ್ನು ಮಾಡಲಿದೆ ಎಂದು ಶಾಸಕರು ಅಂದು ಪ್ರಕಟಿಸಿದ್ದರು.ನಿರ್ಮಿತಿ ಕೇಂದ್ರದ ಬದಲು ಗುತ್ತಿಗೆದಾರರಲ್ಲದ ನಾಲ್ಕಾರು ಜನರು ಕಾಮಗಾರಿ ಮಾಡಿಸುತ್ತಿದ್ದಾರೆ. ಮರಳು, ಸಿಮೆಂಟ್, ಜಲ್ಲಿ ಕಲ್ಲುಗಳನ್ನು ಪ್ರಮಾಣಕ್ಕನುಗುಣವಾಗಿ ಬಳಸದೆ ಅತ್ಯಂತ ಕಳಪೆಯಾಗಿ ಕಾಮಗಾರಿ ಮಾಡಲಾಗುತ್ತಿದೆ. ಹಳೆಯ ಹಾಗೂ ತುಂಗಭದ್ರಾ ಕಾಲುವೆಯ ಕಲ್ಲುಗಳನ್ನು ಕಿತ್ತಿಕೊಂಡು ಬಳಸಲಾಗುತ್ತಿದೆ. ನಮ್ಮ ಭಾಗಕ್ಕೆ ಇಂಥಹ ಕಳಪೆ ಕಾಮಗಾರಿ ಬೇಡಾ. ಮುಂದುವರೆದರೆ ಪ್ರತಿಭಟನೆಗಿಳಿಯಬೇಕಾಗುತ್ತದೆ ಎಂದು ಇಂದಿರಾನಗರದ ಗಾಳೇಶ್ ಮ್ಯಾಗಡೆಮನಿ, ಯಮನೂರ ಚೌಡ್ಕಿ, ಆನಂದ, ನಾಗರಾಜ್, ದೇವಪ್ಪ, ದ್ಯಾವಣ್ಣ, ಹುಲ್ಲೇಶ್ ಮೊದಲಾದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸುದ್ದಿಗಾರರರೊಂದಿಗೆ ಮಾತನಾಡಿದ ಅವರು ಎಂಜಿನೀಯರ್ ನಮ್ಮ ದೂರವಾಣಿ ಸ್ವೀಕರಿಸದೆ, ಸ್ವಿಚ್ ಆಫ್ ಮಾಡುತ್ತಿದ್ದಾರೆ. ನಿರ್ವಹಣೆಯ ಜವಬ್ದಾರಿ ಹೊತ್ತ ನಿಮಿರ್ರ್ತಿ ಕೇಂದ್ರವರ ದರ್ಶನವೆ ಇಲ್ಲದಾಗಿದೆ. ಕೆಲವೇ ಅಡಿಯ ಅಂತರದಲ್ಲಿ ಶಾಸಕರ ನಿವಾಸ  ಇದ್ದರೂ ಅತ್ಯಂತ ಕಳಪೆ ಕಾಮಗಾರಿ ನಡೆದಿರುವುದು, ಅವರು ಹಾರಿಕೆ ಉತ್ತರ ನೀಡುತ್ತಿರುವುದು ಅನೇಕ ಸಂಶಯಗಳಿಗೆ ಕಾರಣವಾಗಿದೆ. ಎಲ್ಲರ ಪರ್ಸೆಂಟೇಜ್ ತಗೆದರೆ ಕಾಮಗಾರಿಯ ಗುಣಮಟ್ಟ ಅಯೋಮಯ ಎನ್ನುವಂತಾಗುತ್ತದೆ ಎಂದು ಆರೋಪಿಸಿದರು.ಕಾಮಗಾರಿಯನ್ನು ನಿರ್ಮಿತಿ ಕೇಂದ್ರದವರೆ ಗುಣಮಟ್ಟದಲ್ಲಿ ಮಾಡಬೇಕು. ಸಹ ಗುತ್ತಿಗೆಯ ಕೆಟ್ಟ ಸಂಪ್ರದಾಯಕ್ಕೆ ಶಾಸಕರು ತಿಲಾಂಜಲಿ ನೀಡಿ, ಗುಣಮಟ್ಟದ ಕಾಮಗಾರಿಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಮಹಿಳೆಯರೂ ಸೇರಿದಂತೆ ನೂರಾರು ಜನರೊಂದಿಗೆ ಪ್ರತಿಭಟನೆಗಿಳಿಯಲಾಗುವುದು ಎಂದವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.