ಗುರುವಾರ , ಮೇ 13, 2021
38 °C

ಕವನ ವಾಚನ ಗುಣವನ್ನೂ ರೂಢಿಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕವಿಗಳು ಕವನ ರಚನೆ ಮಾಡುವುದರ ಜೊತೆಗೆ ಕವನ ವಾಚನ ಮಾಡುವ ಗುಣವನ್ನು ರೂಢಿಸಿಕೊಳ್ಳಬೇಕು~ ಎಂದು ಹಿರಿಯ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಕಿವಿ ಮಾತು ಹೇಳಿದರು.ಬೆಂಗಳೂರು ವಿಶ್ವವಿದ್ಯಾಲಯವು `ಪುಸ್ತಕ ಪ್ರಪಂಚ- 2011~ ರ ಅಂಗವಾಗಿ ಇಂಡ್ಯಾ ಕಾಮಿಕ್ಸ್ ಸಹಯೋಗದೊಂದಿಗೆ ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.`ಕವಿಗಳು ಕವನಗಳನ್ನು ರಚಿಸುವ ಕಡೆ ಹೆಚ್ಚಿನ ಗಮನ ನೀಡುತ್ತಾರೆ. ಆದರೆ ಕವನ ವಾಚನ ಮಾಡುವತ್ತ ಚಿತ್ತ ಹರಿಸುವುದಿಲ್ಲ. ತಾವು ರಚಿಸಿದ ಕವನಗಳನ್ನು ಇತರರಿಗೆ ವಾಚನ ಮಾಡಬೇಕು. ಇದರಿಂದ ಕವನಗಳಲ್ಲಿನ ತಪ್ಪು- ಒಪ್ಪುಗಳನ್ನು ಕಂಡುಕೊಳ್ಳಲು ನೆರವಾಗುತ್ತದೆ~ ಎಂದು ಹೇಳಿದರು.`ಕನ್ನಡ ಸಾಹಿತ್ಯದಲ್ಲಿ ಬರವಣಿಗೆಗೆ ನಿಂತಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಈ ರೀತಿ ಹೇಳುವರರು ಕುರುಡರಾಗಿದ್ದಾರೆ. ಆಧುನಿಕ ಸಾಹಿತ್ಯದಲ್ಲಿ ಉತ್ತಮ ಕವನಗಳು ರಚನೆಯಾಗುತ್ತಿವೆ. ಇಂತಹ ಕವನಗಳು ಪ್ರಕಟವಾಗುತ್ತಿರುವದನ್ನು ಗಮನಿಸಿದರೆ ಕನ್ನಡ ಸಾಹಿತ್ಯದ ಬರವಣಿಗೆ ನಿಂತಿಲ್ಲ ಎಂಬುದಕ್ಕೆ ಸಾಕ್ಷಿ~ ಎಂದು ಅಭಿಪ್ರಾಯಪಟ್ಟರು.ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅವರು ಕೆಲ ತಿಂಗಳ ಹಿಂದೆ ಬಳ್ಳಾರಿಯ ಸಂಡೂರಿಗೆ ಕಾರ್ಯಕ್ರಮ ನಿಮಿತ್ತ ತೆರಳಿದ್ದರಂತೆ. ಗಣಿಗಾರಿಕೆಯಿಂದ ಅಲ್ಲಿನ ಸನ್ನಿವೇಶಗಳನ್ನು ತಮ್ಮ ಕವನದಲ್ಲಿ ವಾಚನ ಮಾಡಿದ್ದು ಹೀಗೆ;`ನಾವು ಬಂದಿಳಿದಾಗ ಸಂಡೂರಿಗೆ ಚುಮು ಚುಮು ಬೆಳಗು, ಬೆಳಗಾ ಬೆಳಿಗ್ಗೆ ಆವರಸಿತ್ತು ಕೆಂಧೂಳು, ಕಾರಿನ ಒಳಗೂ ಹೊರಗೂ, ಸಂಭವಿಸಿತ್ತು ಊರಿಗೂರೇ ಕೆಳಪಟ್ಟು, ಮಣ್ಣುಟ್ಟು~... ಈ ಕವನ ವಾಚನದ ಮೂಲಕ ಸಂಡೂರಿನಲ್ಲಿ ಗಣಿಗಾರಿಕೆಯಿಂದ ಆಗಿರುವ ಅಲ್ಲಿನ ಪರಿಸರದ ಚಿತ್ರಣವನ್ನು ವಾಚನ ಮಾಡಿದರು.ಕಾರ್ಯಕ್ರಮದಲ್ಲಿ ಕವಿಗಳಾದ ಬಿ.ಆರ್.ಲಕ್ಷ್ಮಣರಾವ್, ಜರಗನಹಳ್ಳಿ ಶಿವಶಂಕರ್, ಸುಬ್ಬು ಹೊಲೆಯಾರ್, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ವಸುಂಧರಾ ಭೂಪತಿ ತಮ್ಮ ಕವನಗಳನ್ನು ವಾಚನ ಮಾಡಿದರು.ಎಲ್ಲಾ ರಸ್ತೆಗಳಂತಲ್ಲ...

ಎಲ್ಲಾ ರಸ್ತೆಗಳಂತಲ್ಲ ಈ ಎಂ.ಜಿ.ರಸ್ತೆ, ಮಹಾತ್ಮಗಾಂಧಿ ರಸ್ತೆ, ನಮ್ಮ ಮಹಾತ್ಮನಂತೆ ಸದಾ ಬೆತ್ತಲಲ್ಲ. ಹಗಲು ಕತ್ತಲು, ರಾತ್ರಿ ಬೆತ್ತಲು, ಸುತ್ತಲು ಹಿತ್ತಲು... ಹೀಗೆ ತಾವು 35 ವರ್ಷಗಳಿಂದ ಕಂಡ ನಗರದ ಎಂ.ಜಿ.ರಸ್ತೆಯ ಬದಲಾವಣೆಗಳನ್ನು ಕವಿ ಡಾ.ಎಲ್.ಹನುಮಂತಯ್ಯ ತಮ್ಮ ಕವನದ ಮೂಲಕ ವಾಚನ ಮಾಡಿದ್ದು ಗೋಷ್ಠಿಯಲ್ಲಿ ವಿಶೇಷವಾಗಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.