ಭಾನುವಾರ, ಜೂನ್ 20, 2021
29 °C
ಸುತ್ತಾಣ

ಕವಲೇದುರ್ಗದ ಕೋಟೆಯ ಮೇಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕವಲೇದುರ್ಗದ ಕೋಟೆಯ ಮೇಲೆ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಕವಲೇದುರ್ಗ ಕೋಟೆ ಶಿಸ್ತಿಗೆ ಹೆಸರುವಾಸಿಯಾಗಿದ್ದ ಶಿವಪ್ಪ ನಾಯಕನ ಕಾಲದ್ದು. ಐತಿಹಾಸಿಕ ಮಹತ್ವದ ಈ ಕೋಟೆ ಈಗಲೂ ತನ್ನ ಆಕರ್ಷಣೆ ಉಳಿಸಿಕೊಂಡಿದೆ. ಪ್ರತಿದಿನ ನೂರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಕೋಟೆಯ ಅಂದವನ್ನು ಕಣ್ತುಂಬಿಕೊಳ್ಳುತ್ತಾರೆ.

ಕವಲೇದುರ್ಗಕ್ಕೆ ಹೋಗಬೇಕು ಎಂಬುದು ಬಹುದಿನಗಳ ಆಲೋಚನೆಯಾಗಿತ್ತು. ಆದರೆ ಅದಕ್ಕೆ  ಕಾಲ ಕೂಡಿ ಬಂದಿರಲಿಲ್ಲ. ಶಿವಮೊಗ್ಗದ ಖಾಸಗಿ ಬಸ್‌ ನಿಲ್ದಾಣದಲ್ಲಿ  ಗೋಡೆಯ ಮೇಲೆ ಕವಲೇದುರ್ಗದ ದೊಡ್ಡಚಿತ್ರ ನೋಡಿದಾಗಲೆಲ್ಲ ‘ಅಲ್ಲಿಗೆ ಹೋಗಬೇಕು’ ಎಂದು ಮನಸು ಹೇಳುತಿತ್ತು.ಕಡೆಗೂ ಅಂಥ ಕಾಲ ಕೂಡಿ ಬಂತು. ಕವಲೇದುರ್ಗಕ್ಕೆ ಹೋಗಲು ವಾಹನವೇರಿದಾಗ ಹಲವರು ನಮ್ಮೊಂದಿಗೆ ಸೇರಿಕೊಂಡರು.

ನಮ್ಮ ವಾಹನ ಕೋಟೆಯ ಸಮೀಪ ನಿಂತಾಗ ಬಿಳಿ ಅಂಗಿ ಧರಿಸಿದ ವ್ಯಕ್ತಿಯೊಬ್ಬರು ನಮ್ಮ ಬಳಿ ಬಂದು ನಿಂತರು. ಅವರ ಕೈಲಿ ರಸೀದಿ ಪುಸ್ತಕ ಇತ್ತು.

ಅವರು ಸಾಲೂರು ಗ್ರಾಮ ಪಂಚಾಯಿತಿ ಪ್ರತಿನಿಧಿ  ಡಾಕಪ್ಪ. ಕೋಟೆ ವೀಕ್ಷಣೆಗೆ ಹೋಗುವ ವರಿಂದ ಶುಲ್ಕ ಸಂಗ್ರಹಿಸಿಕೊಳ್ಳುತ್ತಾರೆ. ನಮ್ಮ ತಂಡದ ಎಲ್ಲ ಸದಸ್ಯರಿಗೆ ಅವರು ತಲಾ ₹10 ಪಡೆದೇ ಕೋಟೆಗೆ ಹೋಗಲು ಅವಕಾಶ ನೀಡಿದರು.ಅಲ್ಲೇ ಪಕ್ಕದಲ್ಲಿ ನಿಂತಿದ್ದ ಮಹಿಳೆಯೊಬ್ಬರು ನಮ್ಮತ್ತ ನೋಡಿದರು. ಅವರ ಹೆಸರು ಶಕೀರಾ. ಅಲ್ಲೊಂದು ಸಣ್ಣ ಪೆಟ್ಟಿಗೆ ಅಂಗಡಿ ಇಟ್ಟುಕೊಂಡಿದ್ದಾರೆ.  ‘ನೀವು ಕೋಟೆಗೆ ಹೋಗುವವರಾದರೆ  ಅಲ್ಲಿ ಕುಡಿಯಲು ಏನೂ ಸಿಗಲ್ಲ. ಏನಿದ್ದರೂ ಇಲ್ಲಿಂದಲೇ ತೆಗೆದುಕೊಂಡು ಹೋಗಬೇಕು’ ಎಂದು ಸಲಹೆ ನೀಡಿದರು.  ಕೋಟೆ ವೀಕ್ಷಣೆಗೆ ಬರುವವರು ಖರೀದಿಸುವ ತಂಪು ಪಾನೀಯ ಹಾಗೂ ಇತರ ತಿಂಡಿಗಳೇ ಅವರಿಗೆ ವ್ಯಾಪಾರ. ನಮ್ಮ ತಂಡದ ಕೆಲವು ಸದಸ್ಯರು ಕೂಲ್‌ಡ್ರಿಂಕ್ಸ್‌  ಖರೀದಿಸಿದರು.ಸ್ಥಳನಾಮ

ಕವಲೇದುರ್ಗ ಎಂಬ ಪದ ‘ಕಾವಲು ದುರ್ಗ’, ‘ಕೌಲೇದುರ್ಗ’ ಎಂಬುದರಿಂದ ನಿಷ್ಪತ್ತಿಗೊಂಡಿದೆ ಎನ್ನಲಾಗುತ್ತಿದೆ. ಮಲ್ಲವ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಇದು  80 ಎಕರೆಗೂ ಹೆಚ್ಚು ವಿಸ್ತಾರದಲ್ಲಿದೆ.ಮಲ್ಲವರು ಕವಲೇದುರ್ಗ ಕೋಟೆಯನ್ನು ವಶಕ್ಕೆ ಪಡೆದು ಭುವನಗಿರಿ ದುರ್ಗ ಎಂಬ ಹೆಸರಿಟ್ಟು ಆಳ್ವಿಕೆ ನಡೆಸಿದರು. ಮಲ್ಲವ ವಂಶದಲ್ಲಿ ಪ್ರಖ್ಯಾತರಾದವರು ಶಿವಪ್ಪ ನಾಯಕ, ರಾಣಿ ಚೆನ್ನಮ್ಮಾಜಿ ಮತ್ತು ರಾಣಿ ವೀರಮ್ಮಾಜಿ.ಛತ್ರಪತಿ ಶಿವಾಜಿ ಮಹಾರಾಜನ ಮಗನಾದ ರಾಜಾರಾಮನಿಗೆ ಆಶ್ರಯ ನೀಡಿದ್ದು ಕವಲೇದುರ್ಗ ಸಂಸ್ಥಾನ ಎಂಬುದು ಇತಿಹಾಸ ಪುಟದಲ್ಲಿ ದಾಖಲಾಗಿದೆ.  18 ನೇ ಶತಮಾನದಲ್ಲಿ  ಹೈದರಾಲಿ ಹಾಗೂ ಟಿಪ್ಪೂ ಸುಲ್ತಾನರ ದಾಳಿಯಿಂದ ಕವಲೇದುರ್ಗ ಕೋಟೆಯ ಸ್ವರೂಪ ಹಾಳಾಗಿದೆ. ಕವಲೇದುರ್ಗ ಆಳುತ್ತಿದ್ದವ ಕೆಳದಿ ನಾಯಕರು ಆರಂಭದಲ್ಲಿ ವಿಜಯನಗರ ಅರಸರ ಸಾಮಂತರಾಗಿದ್ದರು. ನಂತರ  ಸ್ವಾತಂತ್ರ್ಯ ಘೋಷಿಸಿಕೊಂಡರು.ವೆಂಕಟಕಪ್ಪ ನಾಯಕ ಈ ಕೋಟೆಯ ನಿರ್ಮಾತೃ. ಕೋಟೆಯ ಆವರಣದಲ್ಲಿ ಅರಮನೆ, ಮಹತ್ತಿನ ಮಠ, ಶೃಂಗೇರಿಮಠ, ಟಂಕಶಾಲೆ, ಕಣಜಗಳು, ಆನೆ ಮತ್ತು ಕುದುರೆ ಲಾಯಗಳಿದ್ದವು.ಕೊಳ  ಮತ್ತು ನೀರಿನ ವ್ಯವಸ್ಥೆ ಮಾಡಿ ಇದನ್ನು ಸುಸಜ್ಜಿತ ಅಗ್ರಹಾರವನ್ನಾಗಿ ರೂಪಿಸಲಾಗಿತ್ತು.  ಈಗಲೂ ಇವುಗಳು ಕಾಣಸಿಗುತ್ತವೆ. ಆದರೆ ಅದರ ಹಾಳುಬಿದ್ದ ಸ್ಥಿತಿ ಖೇದ ಉಂಟುಮಾಡುತ್ತದೆ. ಗುಡ್ಡದ ರೂಪರೇಷೆ ಅನುಸರಿಸಿ ಬೃಹತ್ ಕಲ್ಲುಗಳನ್ನು ಬಳಸಿ ಮೂರು ಸುತ್ತನ ಕೋಟೆಯನ್ನು ಕಟ್ಟಲಾಗಿದೆ.

ಕೋಟೆಯ ಇಕ್ಕೆಲಗಳಲ್ಲಿ ಪ್ರತಿ ಸುತ್ತಿನಲ್ಲಿ ಕಾವಲುಗಾರರ ಕೋಠಿ ಸಹಿತ ಪ್ರವೇಶದ್ವಾರವಿದೆ. ಕೋಟೆಯ ತುದಿಯಲ್ಲಿ ಶ್ರೀಕಂಠೇಶ್ವರ ಎಂಬ ಸಣ್ಣ ದೇವಸ್ಥಾನವಿದೆ.   ಶ್ರೀಕಂಠೇಶ್ವರ ದೇವಾಲಯವು ತಳ ವಿನ್ಯಾಸದಲ್ಲಿ ಗರ್ಭಗೃಹ, ನಂದಿ ಮಂಟಪ  ಹಾಗೂ ಮುಖಮಂಟಪವನ್ನು ಒಳಗೊಂಡಿದೆ.ಇತ್ತೀಚೆಗೆ ನಡೆಸಿದ ಉತ್ಖನನದಿಂದ  ಪರಸ್ಪರ ಹೊಂದಿಕೊಂಡ ಕೊಠಡಿಗಳು, ವಿಶಾಲವಾದ ಕಂಬದ ಜಗುಲಿ, ಪೂಜಾಗೃಹ, ಅಡುಗೆ ಕೋಣೆ ಮತ್ತು ಅದರಲ್ಲಿರುವ ಕಲ್ಲಿನ ಐದು ಉರಿಕದ (ಬರ್ನರ್) ಒಲೆ, ಕಲ್ಲಿನ ವೇದಿಕೆಯಿರುವ ಸ್ನಾನದ ಕೋಣೆ, ಉತ್ತಮ ನೀರು ಸರಬರಾಜು ವ್ಯವಸ್ಥೆ, ಒಂದು ವಿಶಾಲವಾದ ಒಳ ಪ್ರಾಂಗಣ ನಂತರ ಮೆಟ್ಟಿಲಿನಿಂದ ಕೂಡಿದ ಒಂದು ಕೊಳ ಇವುಗಳಿಂದ ಕೂಡಿದ ಅರಮನೆಯ ವಾಸ್ತುಶಿಲ್ಪದ ಒಳನೋಟ ಬೆಳಕಿಗೆ ಬಂದಿದೆ.ಅಂದಿನ ಕಾಲದಲ್ಲೇ ಐದು ಕಡೆ ಜ್ವಾಲೆಗಳನ್ನು ಹೊರಸೂಸುವ ಕಲ್ಲಿನ ಒಲೆಯ ಪಾಕಶಾಲೆ ಕೆಳದಿ ಅರಸರ ಕಾಲದ ತಾಂತ್ರಿಕ ಕುಶಲತೆಗೆ ಬೆಳಕು ಚೆಲ್ಲುತ್ತದೆ.ಕೋಟೆಯಲ್ಲಿ ಶಿಥಿಲಗೊಂಡ ಅರಮನೆ ನಿವೇಶನಗಳು ಮತ್ತು ಕಟ್ಟಡಗಳ ಅವಶೇಷಗಳಿವೆ.  ಸಾಕಷ್ಟು ಮಾಹಿತಿಯನ್ನು ಪುರಾತತ್ವ ಸರ್ವೇಕ್ಷಣೆ ಇಲಾಖೆಯು ಕೋಟೆ ಪ್ರವೇಶದ್ವಾರದ ಫಲಕದಲ್ಲಿ ತಿಳಿಸಿದೆ.ಕವಲೇದುರ್ಗದಲ್ಲಿ ವಿಶ್ವನಾಥೇಶ್ವರ ದೇವಾಲಯವಿದೆ. ಈ ದೇವಾಲಯದ ಹೊರಭಾಗದಲ್ಲಿ ಅನೇಕ ಕಲಾಕೃತಿಗಳನ್ನು ಕಾಣಬಹುದು. ಕಾಶಿಯಿಂದ ತಂದ ಅಮೃತಶಿಲೆಯ ವಿಶ್ವನಾಥೇಶ್ವರನ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ.ಸುತ್ತಲಿನ ಪ್ರೇಕ್ಷಣೀಯ ಸ್ಥಳಗಳು

ಕವಲೇದುರ್ಗದಿಂದ ಸುಮಾರು 60 ಕಿ.ಮೀ. ದೂರದಲ್ಲಿ ಅರುಣಗಿರಿ ಎಂಬ ಸ್ಥಳವಿದೆ. 900 ಕ್ಕೂ ಹೆಚ್ಚು ಮೆಟ್ಟಿಲುಗಳಿರುವ ಬೆಟ್ಟದ ಮೇಲೆ ವೆಂಕಟರಮಣ ಸ್ವಾಮಿ ದೇವಾಲಯವಿದೆ.  ಅದು ಬಿಟ್ಟರೆ ಸಿಬ್ಬಲು ಗುಡ್ಡೆ ಇದೆ. ಕುವೆಂಪು ಅವರ ಸಾಹಿತ್ಯದಲ್ಲಿ ಪ್ರಸ್ತಾಪವಾಗುವ ಸಿಬ್ಬಲುಗುಡ್ಡೆ ಸಹ ಕವಲೇದುರ್ಗಕ್ಕೆ ಸಮೀಪವಿದೆ.ಸೂರ್ಯಾಸ್ತ ವೀಕ್ಷಣೆ

ಕವಲೇದುರ್ಗ ಕೋಟೆಯಲ್ಲಿ ಸೂರ್ಯಸ್ತ ವೀಕ್ಷಣೆಗೆ ಸುಂದರ ಸ್ಥಳವಿದೆ. ಆಗುಂಬೆಯಲ್ಲಿ ಕಾಣಿಸುವಂತೆ ಸೂರ್ಯ ಕೆಂಬಣ್ಣದಲ್ಲಿ ಮುಳುಗುವುದನ್ನು ಸವಿಯಬಹುದು. ಆದರೆ ಶುಭ್ರ ಆಕಾಶ ಇರಬೇಕಷ್ಟೇ.ಕವಲೇದುರ್ಗ ಎಲ್ಲಿದೆ? ಬೆಂಗಳೂರಿನಿಂದ 340 ಕಿ.ಮೀ, ತೀರ್ಥಹಳ್ಳಿಯಿಂದ 24 ಕಿ.ಮೀ ಹಾಗೂ ಶಿವಮೊಗ್ಗದಿಂದ 75 ಕಿ.ಮೀ ದೂರದಲ್ಲಿದೆ. ತೀರ್ಥಹಳ್ಳಿ - ಸಾಲೂರು ಮಾರ್ಗವಾಗಿ ಕವಲೇದುರ್ಗ ತಲುಪಬೇಕು. ಕೋಟೆ ನೋಡಿ ಇಳಿದು ಬಂದ ಎಲ್ಲರೂ ಮತ್ತೆ ಶಕೀರಾ ಅವರ ಅಂಗಡಿಯ ಕಡೆ ನೋಡುತ್ತಿದ್ದರು.ಎಲ್ಲರ ಹೊಟ್ಟೆ ತಾಳ ಹಾಕುತ್ತಿತ್ತು. ಮುಖದ ಮೇಲಿನಿಂದ ಬೆವರು ಇಳಿಯುತ್ತಿತ್ತು. ವಿಶ್ರಾಂತಿಗೆ ಎಲ್ಲಿ ಕುಳಿತುಕೊಳ್ಳುವುದು ಎಂದು ಕೆಲವರು ಹವಣಿಸುತ್ತಿದ್ದರೆ ಇನ್ನೂ ಕೆಲವರು ಅಂಗಡಿಯ ತಂಪು ಪಾನೀಯಗಳ ಕಡೆ ಕಣ್ಣು ಹಾಯಿಸುತ್ತಿದ್ದರು.‘ಕೋಟೆ ನೋಡಿ ಬಂದಿರಾ? ಹೇಗಿತ್ತು?  ಅಲ್ಲಿ ಕೆಲವು ಕಡೆ ಮಣ್ಣು ಅಗೆದು ಹಾಕಿದ್ದು ನೋಡಿದ್ದೀರಾ’ ಎಂದು ಶಕೀರಾ ನಮ್ಮನ್ನು ಕೇಳಿದರು.ಬೆಟ್ಟದಲ್ಲಿದ್ದಾಗ ಯಾಕೆ ಮಣ್ಣು ಅಗೆದಿದ್ದಾರೆ ಎಂಬುದು ನಮಗಾರಿಗೂ ತಿಳಿದಿರಲಿಲ್ಲ.ಅದು ನಿಧಿ ಆಸೆಗೆ ದುಷ್ಕರ್ಮಿಗಳು ಮಾಡಿದ ಗುಂಡಿಗಳು ಎಂದು ನಂತರ ತಿಳಿಯಿತು.

‘ಕೋಟೆಯಲ್ಲಿ ನಿಧಿ ಇದೆ. ಶಿವಪ್ಪ ನಾಯಕ ಹಣ ಇಟ್ಟಿದ್ದಾರೆ ಅಂತ ಹಲವು ಕಡೆ ಕಳ್ಳರು ಹುಡುಕಿದ್ದಾರೆ’ ಎಂದು ವಿವರ ನೀಡಿದರು. ಇದಕ್ಕೆ ಡಾಕಪ್ಪ ಹೌದು ಎಂದು ದನಿಗೂಡಿಸಿದರು.‘ಈವತ್ತು ನೀವು ಬಂದಿರೋವಾಗ ಹೆಚ್ಚು ಜನ ಇಲ್ಲ. ಬೆಂಗಳೂರು, ಮಂಗಳೂರು ಕಡೆಯಿಂದ ಈ ಕೋಟೆ ನೋಡಲು ಜನ ಬರ್ತಾರೆ. ಬೇಸಿಗೆ ರಜೆಯಲ್ಲಿ ಹೆಚ್ಚು ಟೂರಿಸ್ಟ್‌’ ಎಂದು ಶಕೀರಾ ಹೇಳಿದರು. ಮಳೆ ಬರುವ ಸಾಧ್ಯತೆ ಇದ್ದ ಕಾರಣ ಎಲ್ಲರೂ ವಾಹನ ಹತ್ತಿ ಹೊರಟೆವು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.