ಬುಧವಾರ, ಮೇ 12, 2021
20 °C

ಕವಿತೆ

-ಮಹಾದೇವ ಶಂಕನಪುರ Updated:

ಅಕ್ಷರ ಗಾತ್ರ : | |

ಅಗ್ರಹಾರದ ಹುಡುಗಿ ಬಟ್ಟಲು ಪೂಜೆ

 

ಕಣ್ಣಿಗೆ ಕಣ್ಣ ಬೆಸೆದರೆ ಸಾಕು

ಬೊಗಸೆ ಬೊಗಸೆ ಮೊಗೆದು ಮೊಗೆದು

ಸುರತ ಕಡಲನೆ ಕುಡಿಸುವಳು

ನೋಡು ನೋಡುತ

ಮೆಲ್ಲ ಮೆಲ್ಲಗೆ ಕಿಸಿದು ಕಿಸಿದು

ಮುಲ್ಲೆಯರಳಿಸಿ

ತುಟಿ ತುಂಬಿ ಸವರುವಳು ಅಂಗಾತು

ಹುಡುಕುತ್ತಾನೆ ಅಮಲಲಿ

ಬಟಾ ಬಯಲ ತುಂಬ ಅವಳ ಅಂಡಲೆಗಳ

ತುಂಬು ಹೊಳೆ ನೀರ ಬಿಂದಿಗೆಗಳ

ಬಾಯಾರಿ ಬಾಯಾರಿ ಬಂದು ಹೋಗಿ

ಮುಗಿಲಿಗೆ ಮುಖ ಮಾಡಿದ

ಹುಲ್ಲು ಎಸಳುಗಳ ಮೇಲೆ ಸುರಿವ ಯೋನಿ ಪರಿಮಳ

ಇನ್ನೂ ಇಬ್ಬನಿಯ ಮಬ್ಬು ಮಬ್ಬು

ತೊಡೆ ಕಣಿವೆ ನುಣುಪಲಿ ತೆವಳುತ ಅಲೆಯುತ್ತಾನೆ

ಮೇವಿಗೆ ಹಸಿದಸಿದು

ಆಕಾಶ ಅಂತರಿಕ್ಷದಲಿ ನಿಗುರಿ ನಿಂತು

ನೆಗೆದೂ ನೆಗೆದೂ ಹಿಂಬಾಲಿಸುತ್ತಾನೆ

ಹಾದಿ ಬೀದಿಯಲಿ ಜೋಗಿ ಜಂಗಮ

ಪಾದ ಊರಿದ್ದ ಕಡೆ ಮಣ್ಣ ಹೂಗಳ ಆಯುತ್ತ

ಮಗ್ಗಲು ತುಂಬ ಹೊದ್ದು ಮಲಗುತ್ತಾನೆ

ಅವಳದೆ ಚಿತ್ರಗಳ ಹರಡಿಕೊಂಡು

ನಗ್ನ ಮೊಣಕಾಲ ರೋಮ ಪ್ರೇಮದಲಿ ವಾಲಾಡಿ

ಉತ್ಮತ್ತ ಬೆರಳುಗಳು ತಾಗಿ ತಾಗಿ

ಗಂಧ ಗಾಳಿಗೆ ತೋಳು ತೆನೆ ತೂಗಿ ಬಾಗಿ

ಜಡಿ ಮಳೆ ಧ್ಯಾನದಲಿ ಮೋಡಗಟ್ಟಿತು ತೀಡಿ

ತಣಿಯಲಾರದ ಅವಳು

ಸಾಕ್ಷಾತ್ ಸುರತ ಕಡಲ ಹಾಯಲು ಕಯ್ಯ ನಿಡಿದು

ಹುಲ್ಲು ಎಸಳುಗಳ ತೋರುತ ಕೂಗಿ ಕರೆದಳು

ಇಷ್ಟಲಿಂಗವ ಧರಿಸಿ ಬಟ್ಟಲು ಪೂಜೆಯ ಕೊಟ್ಟು

ಕಣಿವೆಯಲಿ ಮೇವಿಗಲೆವ ದೇವರ ಬಸವನ

ಕೂಡಿ ಹಾಡುವಳು

ಅಗ್ರಹಾರದೊಳು ಬೆಳಗಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.