ಶನಿವಾರ, ಮೇ 8, 2021
20 °C

ಕವಿ ಕಂಬಾರರ ಸಿರಿ ಸಂಪಿಗೆಯಲ್ಲಿ ಸಂತಸದ ಹೊಳೆ

ವಿಜಯ್ ಜೋಷಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕವಿ ಕಂಬಾರರ ಸಿರಿ ಸಂಪಿಗೆಯಲ್ಲಿ ಸಂತಸದ ಹೊಳೆ

ಬೆಂಗಳೂರು: `ಜ್ಞಾನಪೀಠ ಪ್ರಶಸ್ತಿ ಬಂದಿದೆ ಎಂಬ ಸುದ್ದಿ ಬಂದಾಗ ಅವರು ನಂಬಲೇ ಇಲ್ಲ... ಜನ ತಮಾಷೆ ಮಾಡುತ್ತಾರೆ ಮಗಾ, ಸುದ್ದಿಯನ್ನು ನಂಬಬೇಡ ಎಂದು ಮುಗುಳ್ನಗುತ್ತಲೇ ಹೇಳಿದರು... ಆದರೆ ನವದೆಹಲಿ ಮತ್ತು ಬೆಂಗಳೂರಿನ ಅವರ ಕೆಲವು ಶಿಷ್ಯರು ಜ್ಞಾನಪೀಠ ಪ್ರಶಸ್ತಿ ಬಂದಿರುವ ವಿಚಾರವನ್ನು ದೂರವಾಣಿ ಮೂಲಕ ತಿಳಿಸಿದಾಗ ನಂಬಿದರು... ತುಂಬ ಖುಷಿಪಟ್ಟರು...~ಕನ್ನಡಕ್ಕೆ ಎಂಟನೆಯ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕವಿ, ನಾಟಕಕಾರ, ಕಾದಂಬರಿಕಾರ ಡಾ. ಚಂದ್ರಶೇಖರ ಕಂಬಾರ ಅವರ ಬೆಂಗಳೂರಿನ ನಿವಾಸ `ಸಿರಿಸಂಪಿಗೆ~ಗೆ ಭೇಟಿ ನೀಡಿದಾಗ ಅವರ ಪುತ್ರ ರಾಜಶೇಖರ ಅವರು ತಿಳಿಸಿದ ಮಾತು ಇದು! `ಪ್ರಜಾವಾಣಿ~ಯ ಪ್ರತಿನಿಧಿ ಅವರ ನಿವಾಸಕ್ಕೆ ಭೇಟಿ ನೀಡಿದ ವೇಳೆಗಾಗಲೇ ಅವರ ಅಭಿಮಾನಿಗಳು, ಹಿತೈಷಿಗಳು ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.ಪ್ರತಿಯೊಬ್ಬರೂ ಕಂಬಾರರ ಕೈಕುಲುಕಿ ಅವರಿಗೆ ಶುಭಾಶಯ ಕೋರುತ್ತಿದ್ದರು. ಅವರೆಲ್ಲರ ಶುಭಾಶಯ, ದೂರದೂರಿನಿಂದ ಹಿತೈಷಿಗಳು ದೂರವಾಣಿ ಮೂಲಕ ಹೇಳುತ್ತಿದ್ದ ಸಂತಸದ ಮಾತುಗಳು ಮತ್ತು ಮನೆಮಂದಿಯ ಸಂಭ್ರಮದ ನಡುವೆಯೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಿಗಿಳಿದರು.`ನನಗೆ ಸಂತಸವಾಗಿದೆ, ನನ್ನ ಓದುಗರಿಗೂ ಸಂತಸವಾಗಿದೆ. ಎಷ್ಟು ಸಂತಸವಾಗಿದೆ ಎನ್ನಲು ಆಗಲ್ಲ. ಜ್ಞಾನಪೀಠ ಪ್ರಶಸ್ತಿ ಬರಬಹುದು ಎಂಬ ನಿರೀಕ್ಷೆ ಖಂಡಿತ ಇತ್ತು~ ಎಂದರು.`ಕನ್ನಡಕ್ಕೆ ಎಂಟನೆಯ ಜ್ಞಾನಪೀಠ ಪ್ರಶಸ್ತಿ ನಿಮ್ಮ ಮೂಲಕ ಬಂದಿದೆ. ಈ ಸಂದರ್ಭದಲ್ಲಿ ಕನ್ನಡದ ಬಗ್ಗೆ ನಿಮ್ಮ ಮಾತುಗಳೇನು?~ ಎಂದಾಗ , `ಕನ್ನಡ ಭಾಷೆಗೆ ಇನ್ನಷ್ಟು ಜ್ಞಾನಪೀಠ ಪ್ರಶಸ್ತಿ ಬರಬೇಕು. ಕನ್ನಡದಲ್ಲಿ ಬರೆಯಲು ವಿಷಯದ ಕೊರತೆ ಇಲ್ಲ. ಕನ್ನಡ ಭಾಷೆಯ ಸೌಭಾಗ್ಯ ಅದು. ನೀವೇ ನೋಡಿ, ಕನ್ನಡದಲ್ಲಿ ಉತ್ತಮ ಬರಹಗಳು ಸಾಕಷ್ಟು ಬರುತ್ತಲೇ ಇವೆ. ಅದು ಎಂದಿಗೂ ಬತ್ತುವುದಿಲ್ಲ, ಅದು ನಿತ್ಯ ನೂತನ~ ಎಂದು ತುಂಬು ವಿಶ್ವಾಸದಿಂದ ನುಡಿದರು.ಹೊಸ ಕಾಲದ ಸವಾಲುಗಳ ಬಗ್ಗೆ ಹೇಳಿ ಎಂದಾಗ, `ಬರವಣಿಗೆಯಲ್ಲಿ ಹೊಸತನ ಕಾಲದ ಅಗತ್ಯ. ನಾನು ಯಾವತ್ತಿಗೂ ಹೊಸದರ ಬಗ್ಗೆ, ಹೊಸ ಹುಡುಗರ ಬಗ್ಗೆ ಯೋಚಿಸುತ್ತೇನೆ. ಅದಲ್ಲದೆ, ಗ್ರಾಮೀಣ ಪ್ರದೇಶಗಳ ಜನಸಾಮಾನ್ಯರ ಬಗ್ಗೆ, ನಿರಕ್ಷರರ ಬಗ್ಗೆಯೂ ಯೋಚಿಸುತ್ತೇನೆ. ಅವರೆಲ್ಲರ ಬಗ್ಗೆ ಯೋಚಿಸಿದಾಗ ಬರಹ ಒಸರುತ್ತಲೇ ಇರುತ್ತದೆ~ ಎಂದರು.ಥಟ್ಟನೆ ಮತ್ತೊಂದು ಪ್ರಶ್ನೆ ತೂರಿಬಂತು. `ಕಂಬಾರರೆ, ನೀವು ಇಲ್ಲಿಯವರೆಗೆ ಬರೆದ ಕೃತಿಗಳ ಪೈಕಿ ಯಾವುದು ಅತಿ ಹೆಚ್ಚು ಖುಷಿ ತಂದುಕೊಟ್ಟಿದೆ?~ಎಡೆಬಿಡದೆ ಬರುತ್ತಿದ್ದ ದೂರವಾಣಿ ಕರೆಗಳನ್ನು ಸಂಭಾಳಿಸುತ್ತಲೇ ತಮ್ಮ ಎಂದಿನ ಶೈಲಿಯಲ್ಲಿ ಉತ್ತರಿಸಿದ ಅವರು, `ತಮ್ಮಾ, ಸಾಹಿತಿಗೆ ತಾನು ಬರೆದ ಯಾವುದಾದರೂ ಕೃತಿ ಅತ್ಯಂತ ಖುಷಿ ತಂದುಕೊಟ್ಟರೆ ಆತ ಮತ್ತೆ ಬರೆಯುವುದೇ ಇಲ್ಲ. ಬರವಣಿಗೆಯಲ್ಲಿ ತೃಪ್ತಿ ಬಂದುಬಿಟ್ಟರೆ ಮತ್ತೆ ಬರವಣಿಗೆ ಒಸರುವುದಿಲ್ಲ ತಮ್ಮಾ! ಇದೊಂಥರಾ ಸ್ವಾರ್ಥ ಅನಿಸಬಹುದು, ನಾನು ಬರೆದ ಯಾವ ಕೃತಿಯೂ ನನಗೆ ಇದುವರೆಗೆ ಸಂಪೂರ್ಣ ತೃಪ್ತಿ ತಂದುಕೊಟ್ಟಿಲ್ಲ. ಹಾಗಾಗಿ ನಾನು ಬರೆಯುತ್ತಲೇ ಇದ್ದೇನೆ!~ ಎಂದುತ್ತರಿಸಿದರು.ಈ ವೇಳೆಗಾಗಲೇ ಅವರ ಮನೆಗೆ ಶುಭಾಶಯ ಕೋರಲು ಬರುವವರ ಸಂಖ್ಯೆ ಹೆಚ್ಚಿತ್ತು. ಶಾಸಕ ರವಿ ಸುಬ್ರಹ್ಮಣ್ಯ ಮತ್ತಿತರರು `ಸಿರಿಸಂಪಿಗೆ~ಗೆ ಬಂದರು. ಅವರೆಲ್ಲರ ಶುಭಾಶಯ, ಅವರು ತಂದ ಸಿಹಿ ಸ್ವೀಕರಿಸುತ್ತಲೆ ಕಂಬಾರರು ಮತ್ತೆ ತಮ್ಮ ಮಾತು ಮುಂದುವರಿಸಿದರು.ನಲವತ್ತು ವರ್ಷಗಳಿಂದ ಬರೆಯುತ್ತಲೇ ಇದ್ದೀರಲ್ಲಾ, ನಿಮ್ಮ ಬರವಣಿಗೆಗೆ ವಸ್ತು ಎಲ್ಲಿಂದ ದೊರೆಯುತ್ತದೆ ಎಂದು ಕೇಳಿದಾಗ, `ಬರವಣಿಗೆ ನನ್ನ ಅಭಿವ್ಯಕ್ತಿಯ ಮಾಧ್ಯಮ ತಮ್ಮಾ. ಬರವಣಿಗೆ ಬಿಟ್ಟರೆ ನನಗೆ ಬೇರೆ ಏನೂ ಇಲ್ಲ~ ಎಂದ ಅವರು, `ಜಗತ್ತಿನ ಆಗುಹೋಗುಗಳನ್ನು ನಾನೂ ಗಮನಿಸುತ್ತೇನೆ. ಅವಕ್ಕೆ ಪ್ರತಿಕ್ರಿಯಿಸಲು ನಿಮಗೆ ನಿಮ್ಮದೇ ಆದ ಮಾಧ್ಯಮ ಇದೆ. ನನ್ನ ಮಾಧ್ಯಮ ಬರವಣಿಗೆ. ಒಂದೊಂದು ಕೃತಿಗೂ 5-6 ವರ್ಷ ಪೂರ್ವಸಿದ್ಧತೆ ನಡೆಸುತ್ತೇನೆ~ ಎಂದರು.`ನಮ್ರನಾದೆ!~: `ಪ್ರಶಸ್ತಿ ದೊರೆತಿದೆ ಎಂಬ ಸುದ್ದಿ ಕೇಳಿದಾಕ್ಷಣ ನಾನು ಮತ್ತಷ್ಟು ನಮ್ರನಾದೆ. ನಮ್ರತೆ ನನ್ನಲ್ಲಿ ಮತ್ತಷ್ಟು ಬರಹಗಳು ಹುಟ್ಟುವಂತೆ ಮಾಡುತ್ತದೆ. ನಾನು ಈ ಪ್ರಶಸ್ತಿಗೆ ಅರ್ಹನೇ ಎಂಬ ಭಾವವೂ ನನ್ನಲ್ಲಿ ಮೂಡಿದ್ದು ಸುಳ್ಳಲ್ಲ~ ಎಂದು ತುಸು ಭಾವುಕರಾಗಿ ನುಡಿದ ಕಂಬಾರರು, `ನನ್ನ ಬರಹ ಯಾವತ್ತೂ ಸಮುದಾಯದ ಪರ~ ಎಂದು ಖಡಕ್ ಶೈಲಿಯಲ್ಲಿ ಸ್ಪಷ್ಟಪಡಿಸಿದರು.ಈ ವೇಳೆಗೆ ಅವರ ಮಗ, ಸೊಸೆ, ಮೊಮ್ಮಕ್ಕಳು ನೀಡಿದ ಸಿಹಿ ತಿಂದರು. ತಮ್ಮ ಪತ್ನಿ ಸತ್ಯಭಾಮಾ ಕೈಯಾರೆ ಸಿಹಿ ತಿನ್ನಿಸಿದರು. ಪತ್ನಿಯಿಂದಲೂ ಸಿಹಿ ತೆಗೆದುಕೊಂಡರು.`ವೀರಪ್ಪನ್ ಬಗ್ಗೆ ನಾಟಕ~: `ಜ್ಞಾನಪೀಠ ಬಂದಿದೆ. ಮುಂದಿನ ನಿಮ್ಮ ಬರವಣಿಗೆ ವಸ್ತು ಏನು?~ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, `ನನಗೆ ವೀರಪ್ಪನ್ ಬಗ್ಗೆ ನಾಟಕ ಬರೆಯುವ ಆಸೆ ಇದೆ~ ಎಂದು ಅರೆ ಕ್ಷಣ  ಅಚ್ಚರಿಗೊಳಿಸಿದರು. `ಯಾಕೆ ಆ ವಿಷಯ~ ಎಂದು ಕೇಳಿದಾಗ, `ಇವತ್ತಿನ ಸಂದರ್ಭ ನೋಡಿದರೆ ವೀರಪ್ಪನ್ ಕಾಡಿನಲ್ಲಿ ಇದ್ದಾನೋ ಅಥವಾ ನಾಡಿನಲ್ಲಿ, ವಿಧಾನಸೌಧದಲ್ಲಿ ಇದ್ದಾನೊ ಎಂಬ ಅನುಮಾನ ಮೂಡುತ್ತಿದೆ. ಹಾಗಾಗಿ ಅವನನ್ನು ನನ್ನ ಮುಂದಿನ ಬರವಣಿಗೆಗೆ ವಸ್ತುವನ್ನಾಗಿಸಿಕೊಳ್ಳುವ ಬಯಕೆ~ ಎಂದು ನವಿರಾಗಿ ಚಟಾಕಿ ಹಾರಿಸಿದರು.`ನನ್ನಾಸೆ ಇದು~: ಒಂದರಿಂದ ಹತ್ತನೆಯ ತರಗತಿವರೆಗೆ ಸರ್ಕಾರವೇ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು. ಅಲ್ಲದೆ, ಅಂಗನವಾಡಿಯಿಂದ ಸ್ನಾತಕೋತ್ತರ ವಿಜ್ಞಾನ, ಕಲೆ ಪದವಿಗಳನ್ನು ಕನ್ನಡದಲ್ಲೇ ಕಲಿಸುವ ಮಹಾವಿದ್ಯಾಲಯವೊಂದು ಕನ್ನಡದ ನೆಲದಲ್ಲಿ ತಲೆಯೆತ್ತಬೇಕು ಎಂದು ತಮ್ಮ ಆಸೆ ಹಂಚಿಕೊಂಡರು.

 

`ಅಜ್ಜ (ಕಂಬಾರರು) ಯಾವತ್ತಿಗೂ ನಾನು ಕೇಳಿದ ಪುಸ್ತಕ ಕೊಡಿಸುತ್ತಾರೆ. ಅವರು ಕೊಡಿಸುವ ಪುಸ್ತಕಗಳೆಲ್ಲ ನನಗೆ ಇಷ್ಟ. ನನ್ನ ಶಾಲೆಯ ಓದು ಮುಗಿಸಿ ಬಿಡುವಾದಾಗ ಪುಸ್ತಕ ಓದುತ್ತೇನೆ. ನಾನು ಕೇಳಿದ ಪುಸ್ತಕಗಳನ್ನೆಲ್ಲಾ ಕೊಡಿಸುವ ಅಜ್ಜನಿಗೆ ಇಷ್ಟು ದೊಡ್ಡ ಪ್ರಶಸ್ತಿ ಬಂದಿರುವುದು ತುಂಬಾ ಖುಷಿಯ ವಿಷಯ.~

- ಶ್ರೀಕೃಷ್ಣ ಕಂಬಾರ, ಚಂದ್ರಶೇಖರ ಕಂಬಾರರ ಮೊಮ್ಮಗ
`ಪ್ರಶಸ್ತಿ ಬಂದಿದ್ದು ಖಚಿತವಾಗುವ ಮೊದಲು ಅವರು ಏನೂ ಹೇಳಿರಲಿಲ್ಲ. ಆದರೆ ಪ್ರಶಸ್ತಿ ಬರಬಹುದೆಂಬ ನಿರೀಕ್ಷೆ ನಮಗೂ ಇತ್ತು! ಅವರ ಬರಹಗಳನ್ನು ನಾನೂ ಓದುತ್ತೇನೆ. ಖುಷಿ ಎಷ್ಟಾಗಿದೆ ಎಂಬುದನ್ನು ವರ್ಣಿಸಲು ಸಾಧ್ಯವಿಲ್ಲ.~

- ಸತ್ಯಭಾಮಾ ಕಂಬಾರ(ಕಂಬಾರರ ಪತ್ನಿ)

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.