ಶುಕ್ರವಾರ, ಮೇ 7, 2021
24 °C

ಕಸಾಪ ನಿಯಮಾವಳಿ: ಬದಲಾವಣೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಕನ್ನಡ ಸಾಹಿತ್ಯ ಪರಿಷತ್‌ಗೆ ಒಮ್ಮೆ ಅಧ್ಯಕ್ಷರಾಗಿ ಆಯ್ಕೆಯಾದವರು ಮತ್ತೆ ಆ ಸ್ಥಾನಕ್ಕಾಗಿ ಸ್ಪರ್ಧಿಸಲು ಅವಕಾಶವಾಗದಂತೆ ಪರಿಷತ್‌ನ ನಿಯಮಾವಳಿ (ಬೈಲಾ)ಗೆ ತಿದ್ದುಪಡಿ ತರಲು ಕ್ರಮ ಕೈಗೊಳ್ಳಬೇಕಿದೆ ಎಂದು ಪರಿಷತ್‌ನ ಕೇಂದ್ರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸಿರುವ ಪುಂಡಲೀಕ ಹಾಲಂಬಿ ತಿಳಿಸಿದರು.ಚುನಾವಣಾ ಪ್ರಚಾರಾರ್ಥ ನಗರಕ್ಕೆ ಆಗಮಿಸಿದ ಸಂದರ್ಭ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, `ಒಂದೊಮ್ಮೆ ನಾನು ಅಧ್ಯಕ್ಷನಾಗಿ ಆಯ್ಕೆಯಾದಲ್ಲಿ ಈ ಕುರಿತ ತಿದ್ದುಪಡಿಗೆ ಎಲ್ಲ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ಬದ್ಧ~ ಎಂದರು.ಪರಿಷತ್ತನ್ನು ಆರ್ಥಿಕವಾಗಿ ಸದೃಢಗೊಳಿಸಲು ಸ್ವಯಂ ಆರ್ಥಿಕ ಶಿಸ್ತು ರೂಪಿಸಿಕೊಳ್ಳುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ, ಪ್ರಯಾಣ ವೆಚ್ಚ ಹೊರತುಪಡಿಸಿ ಗೌರವ ಧನ, ದೂರವಾಣಿ ವೆಚ್ಚ ಸೇರಿದಂತೆ ಯಾವುದನ್ನೂ ತೆಗೆದುಕೊಳ್ಳದಿರಲು ನಿರ್ಧಾರಿಸಿರುವೆ~ ಎಂದು ಅವರು ತಿಳಿಸಿದರು.ಕಳೆದ 10 ವರ್ಷಗಳಿಂದ ಬಳ್ಳಾರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಇಲ್ಲಿನ ಸಾಹಿತ್ಯಾಭಿಮಾನಿಗಳು ಶ್ರಮಿಸುತ್ತಲೇ ಇದ್ದಾರೆ.  ಅಖಿಲ ಭಾರತ ಮಟ್ಟದ ಸಮ್ಮೇಳನ ನಡೆಸುವ ಎಲ್ಲ ಸಂಪನ್ಮೂಲಗಳು ಹಾಗೂ ಪೂರಕ ಪರಿಸರ ಇಲ್ಲಿ ಇರುವುದರಿಂದ ಮುಂದಿನ ಅವಧಿಯಲ್ಲಿ ಇಲ್ಲೇ ಸಮ್ಮೇಳನ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.ಸರ್ಕಾರದ ಜತೆ ಸಾಹಿತ್ಯ ಪರಿಷತ್ತು ಸಂಘರ್ಷಕ್ಕೆ ಇಳಿಯುವ ಅಗತ್ಯವಿಲ್ಲ. ಬದಲಿಗೆ, ಸಾಮರಸ್ಯದೊಂದಿಗೆ ಕನ್ನಡದ ಕೆಲಸವನ್ನು ಮಾಡಬೇಕಿದೆ. ಸಾಹಿತ್ಯ ಪರಿಷತ್ತು ಹಮ್ಮಿಕೊಳ್ಳುವ ಸಮ್ಮೇಳನಗಳಿಗೆ ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತದೆ. ಕನ್ನಡ ಭಾಷೆ ಬೆಳವಣಿಗೆಯ ಪೂರಕ ಕೆಲಸದಲ್ಲಿ ಸರ್ಕಾರದ ಪ್ರೋತ್ಸಾಹ, ನೆರವು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.ಸಾಹಿತ್ಯ ಪರಿಷತ್‌ನ ಕೇಂದ್ರ ಘಟಕವೂ ಒಳಗೊಂಡಂತೆ ತಾಲ್ಲೂಕು ಮಟ್ಟದವರೆಗೆ ಕಾರ್ಯದರ್ಶಿಗಳ ಎರಡು ಸ್ಥಾನಗಳಲ್ಲಿ ಒಂದನ್ನು ಮಹಿಳೆಯರಿಗೆ ಮೀಸಲಿಡಲೂ ಕ್ರಮ ಕೈಗೊಂಡು, ಮಹಿಳೆಯರನ್ನು ಪರಿಷತ್ ಹಾಗೂ ಕನ್ನಡ ಕಾರ್ಯದಲ್ಲಿ ತೊಡಗಿಸಲಾಗುವುದು ಎಂದ ಅವರು, ಎಲ್ಲ ಜಿಲ್ಲೆಗಳಲ್ಲಿ ಒಬ್ಬ ಮಹಿಳಾ ಕಾರ್ಯದರ್ಶಿಗಳಿದ್ದರೆ, ರಾಜ್ಯದಲ್ಲಿ ಮಹಿಳಾ ಸಮುದಾಯವನ್ನು ಪರಿಷತ್‌ನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಪರಿಷತ್‌ನ ಸದಸ್ಯರ ಸಂಖ್ಯೆ ಬಹಳ ಕಡಿಮೆ ಇದ್ದು, ವಿದ್ಯಾರ್ಥಿಗಳು, ಯುವಜನರಿಗೆ ಸದಸ್ಯತ್ವ ನೀಡುವ ಅಭಿಯಾನ ಆರಂಭಿಸಸಲಾಗುವುದು. ಕನ್ನಡ ಸಾಹಿತ್ಯ ಪರಿಷತ್ ಅನ್ನು ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ ಹಾಗೂ ಪ್ರತಿಭಾ ನ್ಯಾಯದ ಅಡಿ ಕಟ್ಟುವ ಕೆಲಸಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಪರಿಷತ್ತನ್ನು ಆರ್ಥಿಕವಾಗಿ ಸ್ವಾವಲಂಬಿ ಸಂಸ್ಥೆಯಾಗಿ ರೂಪಿಸಲು ಸ್ಥಾಯಿ ನಿಧಿ ಸಂಗ್ರಹಕ್ಕೂ ಕ್ರಮ ಕೈಗೊಳ್ಳಲಾಗುವುದು.

ಸಂಶೋಧನೆ ಹಾಗೂ ಪ್ರಕಟಣೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.ಕ.ಸಾ.ಪ. ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಹಂಪನಗೌಡ, ಉಪನ್ಯಾಸಕ ವಿಶ್ವೇಶ್ವರಪ್ಪ, ಸಂಗಮೇಶ ಬಾದವಾಡಗಿ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಚಾನಾಳ್ ಶೇಖರ್ ಉಪಸ್ಥಿತರಿದ್ದರು.ಡಿಸೈನಿಂಗ್ ತರಬೇತಿಗೆ ಆಹ್ವಾನಬಳ್ಳಾರಿ: ಸಿಂಡ್ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯು ಜಿಲ್ಲೆಯ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ/ ಯುವತಿಯರಿಗೆ 21 ದಿನಗಳ ಡ್ರೆಸ್ ಡಿಸೈನಿಂಗ್ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ. ತರಬೇತಿಯು ಏಪ್ರಿಲ್ 16 ರಿಂದ ಮೇ 6ರವರೆಗೆ ನಡೆಯಲಿದೆ. ತರಬೇತಿ ಅವಧಿಯಲ್ಲಿ ಉಚಿತ ಊಟ, ವಸತಿ ಸೌಲಭ್ಯ ನೀಡಲಾಗುವುದು. ಆಸಕ್ತರು 16ರಂದು ನಗರದ ಹೊಸಪೇಟೆ ರಸ್ತೆಯ ಡಿಐಸಿ ಕಾಂಪೌಂಡ್‌ನಲ್ಲಿರುವ ಸಿಂಡ್ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಬೆಳಿಗ್ಗೆ 9.30ಕ್ಕೆ ನಡೆಯುವ ಸಂದರ್ಶನಕ್ಕೆ ನೇರವಾಗಿ ಹಾಜರಾಗಬಹುದು.   ಮಾಹಿತಿಗಾಗಿ ದೂ. (08392) 244117 ಸಂಪರ್ಕಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.